ಶೆಟ್ಟರ್ ಬಜೆಟ್ ನಲ್ಲಿ ಕುಂದಾಪುರ ತಾಲೂಕಿಗೆ ಮೂರು ಬಂಪರ್ ಕೊಡುಗೆ

ಕುಂದಾಪುರ: ಚುನಾವಣೆಯ ದೃಷ್ಠಿಕೋನವನ್ನಿಟ್ಟುಕೊಂಡು ಕರ್ನಾಟಕದ ಬಿಜೆಪಿ ಸರಕಾರ ಮಂಡಿಸಿದ ಬಜೆಟ್ ಮತದಾರನನ್ನು ತನ್ನತ್ತ ಸೆಳೆದು ಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ನ್ನು ಮಂಡಿಸಿ ಎಲ್ಲಾ ವರ್ಗದ ಜನರ ವಿಶ್ವಾಸ ತೆಗೆದುಕೊಳ್ಳುವ, ಬಜೆಟ್ ನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳವ ಪ್ರಯತ್ನ ಮಾಡಿರುವುದು ಸ್ವಷ್ಟವಾಗಿ ತಿಳಿಯುತ್ತದೆ. 
      ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೊಷಣೆ, ಗಂಗೊಳ್ಳಿಯ ಕೊಡೇರಿ ಬಂದರು ಪ್ರದೇಶದಲ್ಲಿ ಶಾಶ್ವತ ತಡೆಗೋಡೆ(ಜಟ್ಟಿ) ನಿರ್ಮಾಣ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳ ಜೋಡಣೆಯ ಸೌಭಾಗ್ಯ ಸಂಜೀವಿನಿ ಯೋಜನೆಯ ಬಗ್ಗೆ ಪ್ರಸ್ತಾಪವಾಗಿರುವುದು ಕುಂದಾಪುರ ತಾಲೂಕಿನ ಜನರಲ್ಲಿ ಹರ್ಷವನ್ನುಂಟುಮಾಡಿದೆ.

ಬೈಂದೂರು ತಾಲೂಕು ರಚನೆಯ ಹೋರಾಟಕ್ಕೆ ದಕ್ಕಿದ ಜಯ

       ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ನಲ್ಲಿ ಹೊಸ ತಾಲೂಕು ರಚನೆಗೆ ಪ್ರಸ್ತಾಪಿಸಿದ 43 ತಾಲೂಕುಗಳ ಪೈಕಿ ಬೈಂದೂರು ಒಂದಾಗಿತ್ತು. ಹುಂಡೇಕರ್ ಗದ್ದೀಕರ್ ವರದಿಯಲ್ಲಿ ಬೈಂದೂರು ತಾಲೂಕು ರಚನೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ ತಾಲೂಕನ್ನಾಗಿ ಫೋಷಿಸಲು 30 ವರ್ಷಗಳೇ ಬೇಕಾಯಿತು. ತಾಲೂಕು ರಚನೆಯ ಕೂಗು ಬಹುಕಾಲದಿಂದ ಇದ್ದರೂ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರಕಾರ ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲು ನಿಗದಿಗೊಳಿಸಿದ ಬಳಿಕ ಹೋರಾಟ ಇನ್ನಷ್ಟು ತೀವ್ರಗೊಂಡಿತ್ತು. ಇಲ್ಲಿನ ಸಂಘ ಸಂಸ್ಥೆಗಳು, ಸಾರ್ವಜನಿಕರು, ರಾಜಕೀಯ ಪಕ್ಷದ ಧುರೀಣರು ಪಕ್ಷಭೇದ ಮರೆತು ಹೋರಾಟದಲ್ಲಿ ಭಾಗಿಯಾಗಿದ್ದರು. ಹಲವು ಪ್ರತಿಭಟನೆಗಳು ನಡೆದಿದ್ದವು, ಆಗ್ರಹಗಳನ್ನು ಮಾಡಲಾಗಿತ್ತು. ತಾಲೂಕು ರಚನೆಯಾಗದಿದ್ದಲ್ಲಿ ಮುಂಬರುವ ಎಲ್ಲ ಸ್ತರದ ಚುನಾವಣೆ ಬಹಿಷ್ಕರಿಸುವ ಬೆದರಿಕೆಯನ್ನು ನಾಗರೀಕರು ಒಡ್ಡಿದ್ದರು.
       1997ರಲ್ಲಿ ಉಡುಪಿ ಜಿಲ್ಲೆ ರಚನೆಯಾದಾಗ ಆಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಈ ಬೈಂದೂರು ತಾಲೂಕಿನ ಕುರಿತು ಪ್ರಸ್ತಾಪಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2012ರ ಜನಗಣತಿಯ ಬಳಿಕ ಬೈಂದೂರು ತಾಲೂಕನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದ್ದರು. ಕೊನೆಗೂ ಅದು ಜಗದೀಶ್ ಶೆಟ್ಟರ್ ಮೂಲಕ ಸಾಕಾರಗೊಂಡಿದೆ, 56 ಗ್ರಾಮಗಳೊಂದಿಗೆ ಬೈಂದೂರು ಹೊಸದಾಗಿ ರೂಪುಗೊಂಡಿದೆ. ಬೈಂದೂರಿನ ಜನತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮುವನ್ನಾಚರಿಸಿಕೊಳ್ಳುತ್ತಾರೆ.


ಸೌಭಾಗ್ಯ ಸಂಜೀವಿನಿಗೆ 200 ಕೋಟಿ.

      ಪಶ್ಚಿಮ ಘಟ್ಟ ವ್ಯಾಪ್ತಿಯ ಬೈಂದೂರಿನ ಸೌಪರ್ಣಿಕಾ ನದಿಯಿಂದ ಪಯಸ್ವಿನಿ ನದಿ ಸೇರಿದಂತೆ 14 ನದಿಗಳನ್ನು ಜೋಡಿಸುವ ಮಹತ್ವದ ಯೋಜನೆ ಸೌಭಾಗ್ಯ ಸಂಜೀವಿನಿಗೆ 200 ಕೋಟಿ ಮೀಸಲಿರಿಸಿದ್ದು ತಾಲೂಕಿನ ಜನರಲ್ಲಿ ಸಂತಸವನ್ನುಂಟುಮಾಡಿದೆ.
        ಉತ್ತರದ ಸೌಪರ್ಣಿಕಾ ನದಿಯಿಂದ ದಕ್ಷಿಣದ ಪಯಸ್ವಿನಿ ನದಿವರೆಗಿನ ನದಿ ಜೋಡಿಸುವುದು, ಸಮುದ್ರಮಟ್ಟದಿಂದ 80 ಮೀ. ಎತ್ತರದ ಸಮಪಾತಳಿಯ ಸ್ಥಳ ಗುರುತಿಸುವುದು, ತಳದಲ್ಲಿ 30 ಅಡಿ ಮತ್ತು ಮೇಲ್ಭಾಗದಲ್ಲಿ 50 ಅಡಿ ಅಗಲವಿರುವ 25 ಅಡಿ ಆಳದ ಕಾಲುವೆ ಅಗೆದು ಎಲ್ಲ ನದಿಗಳನ್ನು ಜೋಡಿಸಿ ಸುಮಾರು 300 ಕಿ.ಮೀ. ಉದ್ದದ ಕಾಲುವೆ ನಿರ್ಮಿಸುವುದು, ಕಾಲುವೆಯನ್ನು ಅಗೆದು ತೆಗೆದ ಮಣ್ಣನ್ನು ಕಾಲುವೆಯ ಪಶ್ಚಿಮ ದಂಡೆಯಲ್ಲಿ ಹರಡಿ 30 ಅಡಿ ಅಗಲದ ಪಕ್ಕಾ ಸರ್ವಋತು ರಸ್ತೆ ನಿರ್ಮಾಣ ಮಾಡುವುದು, ಮುಖ್ಯ ಕಾಲುವೆಯಿಂದ ನೀರಾವರಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಅನುವು ಮಾಡಿಕೊಡುವುದು, ಪ್ರವಾಸೋದ್ಯಮ, ಒಳನಾಡು ಮೀನುಗಾರಿಕೆಗೆ ಆಸ್ಪದ ಮಾಡಿಕೊಡುವುದು ಸೌಭಾಗ್ಯ ಸಂಜೀವಿನಿ ಯೋಜನೆಯ ಉದ್ದೇಶವಾಗಿದೆ. 5 ಸಾವಿರ ಕೋಟಿಯ ಈ ಬೃಹತ್ ಯೋಜನೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
     ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಈ ಯೋಜನೆಯ ಸರ್ವೇಕ್ಷಣಾ ಕಾರ್ಯಕ್ಕೆ 1 ಕೋಟಿ ರೂ. ಮೀಸಲಿಟ್ಟಿದ್ದರು. ಶೆಟ್ಟರ್ ಬಜೆಟ್‌ನಲ್ಲಿ 200 ಕೋಟಿ ಮೀಸಲಿರಿಸಿದ್ದಾರೆ,
       ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ 29,561 ಸಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಕೇವಲ 759 ಸಿಎಂಸಿಯಷ್ಟು ನೀರು ಬಳಕೆಯಾಗುತ್ತಿದೆ. ಬೇಸಿಗೆಯಲ್ಲಿ ಜಲಕ್ಷಾಮ ಮಾಮೂಲಿ ಎಂಬಂತಾಗಿದೆ. ಇದನ್ನು ಮನಗಂಡ ರಾಜ್ಯ ಮೂರನೇ ಹಣಕಾಸು ಆಯೋಗ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ ದೂರದೃಷ್ಟಿಯನ್ನಿಟ್ಟುಕೊಂಡು ಯೋಜನೆ ರೂಪಿಸಿದ್ದರು.