ಬಾನಂಗಳದಿ ಹಾರಾಡಿದ ವೈವಿಧ್ಯಮಯ ಗಾಳಿಪಟಗಳು


ಕುಂದಾಪುರ: ಇಲ್ಲಿನ ಕೋಟೇಶ್ವರ ಕಿನಾರ ಬೀಚ್‌ನಲ್ಲಿ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಟೀಂ ಮಂಗಳೂರು ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ 'ಗಾಳಿಪಟ ಉತ್ಸವ' ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ 'ಗಾಳಿಪಟ ಸ್ಪರ್ಧೆ'ಯನ್ನು ಆಯೋಜಿಸಲಾಗಿತ್ತು.
      ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷ, ಕಥಕಳಿ, ಭರತನಾಟ್ಯ, ಗರುಡ, ಗಣಪತಿ, ಬಾವಲಿ, ಚಿಟ್ಟೆ, ಗೂಡು ದೀಪ, ಮಿಕ್ಕಿಮೌಸ್, ತ್ರಿವರ್ಣ ಧ್ವಜ ಹೀಗೆ ಕರಾವಳಿಯ ಸೊಬಗನ್ನು ಸಾರುವ ವೈವಿಧ್ಯಮಯ ಗಾಳಿಪಟಗಳು ಆಗಸದಲ್ಲಿ ಹಾರಾಡಿ ಜಿಲ್ಲಾದ್ಯಂತ ಆಗಮಿಸಿದ್ದ ಸಹಸ್ರಾರು ಜನರ ಮನ ತಣಿಸಿತು.
    ವಿಶೇಷವಾಗಿ ಶೃಂಗಾರಗೊಂಡಿದ್ದ ಕೋಡಿ ಬೀಚ್ ನಲ್ಲಿ ಗಾಳಿಪಟ ಹಾರಾಟವನ್ನು ಕಂಡ ಹಿರಿಯರು ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ವಿಶ್ವ ಖ್ಯಾತಿಯ ಟೀಂ ಮಂಗಳೂರು ತಂಡ ಹಾರಿಸುವ ಗಾಳಿಪಟವನ್ನು ನೋಡಲೆಂದೇ ಹಲವರು ಭಾಗಿಯಾಗಿದ್ದರು.
     ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಗಾಳಿಪಟ ಉತ್ಸವ ಮತ್ತು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಬಾಲ್ಯದಲ್ಲಿ ಆಡುತ್ತಿದ್ದ ಆಟಗಳು ಇಂದು ಮರೆಯಾಗಿ ವಿದ್ಯುನ್ಮಾನ ವಸ್ತುಗಳೇ ಆಟದ ಸಾಮಾನುಗಳಾಗಿವೆ. ಈ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ನಮ್ಮ ಪ್ರವಾಸಿ ತಾಣಗಳನ್ನು ಗುರುತಿಸಿ ನಾಡಿಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ ಎಂದ ಅವರು, ಗ್ರಾಮೀಣ ಮಟ್ಟದಿಂದ ಬೆಳೆದು ಬಂದ ಈ ಗಾಳಿಪಟ ಹಾರಿಸುವ ಆಟ ಬಹಳ ಮನಸ್ಸಿಗೆ ಮುದ ನೀಡುವುದಲ್ಲದೇ ಮಕ್ಕಳಲ್ಲಿನ ಕ್ರಿಯಾಶಿಲತೆಯನ್ನು ಸಾದರಪಡಿಸಲು ನೆರವಾಗುತ್ತದೆ ಎಂದರು.
     ಗುರುಕುಲ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಟ್ರಸ್ಟಿ ಬಾಂಡ್ಯಾ ಸುಭಾಶ್‌ಚಂದ್ರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್, ತಾ.ಪಂ. ಸದಸ್ಯ ಮಂಜು ಬಿಲ್ಲವ, ತಾ.ಪಂ. ಮಾಜಿ ಸದಸ್ಯೆ ಜಾನಕಿ ಬಿಲ್ಲವ, ಶಾಲಾ ಆಡಳಿತಾಧಿಕಾರಿ ಡಾ. ಜಿ.ಎಚ್. ಪ್ರಭಾಕರ ಶೆಟ್ಟಿ, ಪ್ರಿನ್ಸಿಪಾಲ್ ರೂಪಾ ಶೆಣೈ, ಗಾಳಿಪಟ ಉತ್ಸವ ಮತ್ತು ಸ್ಪರ್ಧೆಯ ಸಂಚಾಲಕ ಹರೀಶ್ ಸಾಗಾ ಉಪಸ್ಥಿತರಿದ್ದರು. ಶಶಿಕಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಶಿವಪ್ರಸಾದ್ ವಂದಿಸಿದರು. 
    ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಮರುಳು ಶಿಲ್ಪ ರಚನೆ ಹಾಗೂ ವಿದ್ಯಾರ್ಥಿಗಳಿಗೆ ಕಲಾ ಶಿಬಿರವನ್ನು ಆಯೋಜಿಸಲಾಗಿತ್ತು.

ಗಾಳಿಪಟ ಸ್ಪರ್ಧೆ ಫಲಿತಾಂಶ:
     ಪ್ರಾಥಮಿಕ ಶಾಲೆ ವಿಭಾಗ: ಪ್ರಥಮ- ಸುಶ್ರೀತ್ (ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್), ದ್ವಿತೀಯ-ಮಹಿಮಾ ರಶ್ಮಿ (ಬ್ರಹ್ಮಾವರ ಲಿಟ್ಲ್ ರಾಕ್), ತೃತೀಯ-ದಿತ್ತನ್ ಬಾಬು (ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್), ಪ್ರೌಢಶಾಲೆ ವಿಭಾಗ: ಪ್ರಥಮ- ಸತ್ಕಾರ್ ಯು. ಶೆಟ್ಟಿ (ತೊಕ್ಕೂರು ಡಾ. ಎಂ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್), ದ್ವಿತೀಯ-ಮೇಘನಾ (ತೊಕ್ಕೂರು ಡಾ. ಎಂ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್), ತೃತೀಯ-ನವ್ಯ (ತೊಕ್ಕೂರು ಡಾ. ಎಂ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್). ಮರಳುಶಿಲ್ಪ ರಚನೆ: ಪ್ರಥಮ-ಸುನಿಲ್ ಮತ್ತು ಬಳಗ, ದ್ವಿತೀಯ-ಸತೀಶ್ ಹೇರೂರು ಮತ್ತು ಬಳಗ, ತೃತೀಯ-ಶಿವರಾಜ್ ಉಡುಪಿ.
ಟೀಂ ಮಂಗಳೂರು ತಂಡದ ಸದಸ್ಯರು  ಸ್ಪರ್ಧೆಯ ತೀರ್ಪುಗಾರರಾಗಿದ್ದರು.



ಚಿತ್ರಗಳು: ಜಯಶೇಕರ್ ಮಡಪ್ಪಾಡಿ