ಪತ್ರಕರ್ತ ಶ್ರೀಪತಿ ಹೆಗಡೆ ಮೇಲೆ ಹಲ್ಲೆ. ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಖಂಡನೆ.


 ಹೆಮ್ಮಾಡಿ: ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿಯವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಶನಿವಾರ ರಾತ್ರಿ  ಇಲ್ಲಿನ ಸರ್ಕಲ್ ಬಳಿ ಸಂಭವಿಸಿದೆ.
     ಉಡುಪಿಯಿಂದ ಕೆಲಸ ನಿರ್ವಹಿಸಿ ಹಕ್ಲಾಡಿ ಮನೆಗೆ ತೆರಳುವ  ಸಂದರ್ಭದಲ್ಲಿ ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಗ್ರಾಮ ಪಂಚಾಯತ್ ಬಗೆಗಿನ ಅವ್ಯವಹಾರದ ಬಗೆಗಿನ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಖಂಡನೆ:
      ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಕೆಲವು ದುಷ್ಕರ್ಮಿಗಳು ಶ್ರೀಪತಿ ಹೆಗಡೆ ಹಕ್ಲಾಡಿ ಮೇಲೆ ಹಲ್ಲೆ ಮಾಡಿರುವುದನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸಿದೆ. ಕಳೆದ ಕೆಲವು ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವಿ ಪತ್ರಕರ್ತ ಶ್ರೀಪತಿ ಹೆಗಡೆ ಜನಪರ ಕಾಳಜಿ ಇರುವ ಪತ್ರಕರ್ತರಾಗಿದ್ದು ಇವರ ಮೇಲೆ ನಡೆದ ಈ ಹಲ್ಲೆ ಅತ್ಯಂತ ನಿಂದನೀಯವಾಗಿದೆ. ಯಾವುದೇ ಪತ್ರಿಕಾ ವರದಿಗಳ ಬಗ್ಗೆ ಯಾರಿಗಾದರೂ ಅಸಮಾಧಾನವಿದ್ದಲ್ಲಿ ಅದನ್ನು ಕಾನೂನುಬದ್ದ ಕ್ರಮಗಳಲ್ಲಿಯೇ ಬಗೆಹರಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಈ ರೀತಿಯ ದೈಹಿಕ ಹಲ್ಲೆಗಳನ್ನು ಪತ್ರಕರ್ತರ ಸಮುದಾಯವು ಎಂದಿಗೂ ಸಹಿಸದು ಎಂದು ಸಂಘವು ಎಚ್ಚರಿಸಿದೆ.
ಪೋಲಿಸರಿಗೆ ಅಭಿನಂದನೆ:
            ಹಲ್ಲೆ ನಡೆದ ತಕ್ಷಣ ನಮ್ಮ ಕರೆಗೆ ಸ್ಪಂದಿಸಿದ ಪೊಲೀಸ್ ಇಲಾಖೆ, ಡಿವೈಎಸ್ಪಿ ಯಶೋದಾ ಒಂಟಗೋಡಿಯವರ ಸೂಚನೆ ಮೇರೆಗೆ ರಾತ್ರಿಯೇ ಹೆಗಡೆಯವರ ಮನೆಗೆ ತೆರಳಿ ಮಾತನಾಡಿಸಿ ಅವರಿಂದ ಹೇಳಿಕೆ ಪಡೆದು ಆರೋಪಿಗಳನ್ನು ರಾತ್ರಿಯೇ ಬಂಧಿಸಲು ಪ್ರಯತ್ನಿಸಿದ್ದಾರೆ. ಕುದಾಪುರ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಈ ತಕ್ಷಣದ ಸ್ಪಂದನವನ್ನು ಮತ್ತು ಸಹಕಾರವನ್ನು ಕುಂದಾಪುರ ತಾಲೂಕು ಪತ್ರಕರ್ತರ ಸಂಘವು ಶ್ಲಾಘಿಸುತ್ತದೆ ಎಂದು ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.