ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬೈಂದೂರಿನ ಬೆಡಗಿ


      ಕುಂದಾಪುರ ತಾಲೂಕಿನ ಹಲವರು ಚಿತ್ರರಂಗದಲ್ಲಿ ನಟ-ನಟಿಯರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಮಾಡುತ್ತಿದ್ದಾರೆ ಕೂಡ. ಆ ಪೈಕಿ ಒರ್ವಳು ಬೈಂದೂರು ಮೂಲದ ಬೆಡಗಿ ಅನಿತಾ ಭಟ್.
       ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನಿತಾ ಸೈಕೋ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟರು. ಈ ನಾಯಕಿ ಪಟ್ಟ ಅನಿತಾಗೆ ಕಾಕತಾಳಿಯ ಎಂಬಂತೆ ಒದಗಿಬಂದಿತ್ತು. 
       ಅಂದು ಚಿತ್ರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಅವಕಾಶ ಪಡೆಯಲು ನಿರ್ದೇಶಕ ದೇವದತ್ತರನ್ನು ಭೇಟಿಯಾದ ಅನಿತಾಗೆ ನಾಯಕಿ ಪಟ್ಟ ಕಾದು ಕುಳಿತ್ತಿತ್ತು. ಸೈಕೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಮುಂಬೈ ನಟಿ ಕೈಕೊಟ್ಟಿದ್ದಳು. ನಿರ್ದೇಶಕ ದೇವದತ್ತ ಮೊದಲು ಸ್ಕ್ರೀನ್ ಟೆಸ್ಟ್ ಮಾಡಿಸೋಣ ಆಮೇಲೆ ಕಾಸ್ಟ್ಯೂಮ್ ಡಿಸೈನ್ ಬಗ್ಗೆ ಮಾತನಾಡೋಣ ಎಂದು ಸ್ಕ್ರೀನ್ ಟೆಸ್ಟ್ ಮಾಡಿಸಿದರು. ಅಲ್ಲಿ ಗೆದ್ದರು. ಇಡೀ ಚಿತ್ರತಂಡ ಒಮ್ಮತದಿಂದ ಅನಿತಾಳನ್ನು ನಾಯಕಿ ಎಂದು ಘೋಷಿಸಿಬಿಟ್ಟಿಟ್ಟು.         
        ಆ ಬಳಿಕ ಹಲವಾರು ಪಾತ್ರಗಳು ಅವರನ್ನು ಅರಸಿ ಬರುತ್ತಿವೆ. 8 ತಾಸುಗಳಲ್ಲಿ ಚಿತ್ರೀಕರಣ ಮುಗಿಸಿ ದಾಖಲೆ ಬರೆದ ಸುಗ್ರೀವದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿಶೂಲ್ ನಿರ್ದೇಶನದ, ಅಕ್ಷಯ್- ವೀಣಾ ಮಲ್ಲಿಕ್ ಜೋಡಿಯ ಸಿಲ್ಕ್‌ನಲ್ಲಿ ಮಹತ್ವದ ಪಾತ್ರ. ಸಂಕಲನಕಾರ ನಾಗೇಂದ್ರ ಅರಸ್ ನಿರ್ದೇಶನದ ನಗೆಬಾಂಬ್‌ನಲ್ಲಿ ನಾಯಕಿ. ತಮಿಳಿನಿಂದ ನಾಲ್ಕೈದು ಆಫರ್‌ಗಳು ಬಂದಿದ್ದು, ಒಂದು ಮಾತುಕತೆಯ ಅಂತಿಮ ಹಂತದಲ್ಲಿದೆ.
      ಅನಿತಾ ತಂದೆ ಸರ್ಕಾರಿ ನೌಕರಿಯಲ್ಲಿದ್ದರು. ನಿವೃತ್ತಿ ಬಳಿಕ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಹೆತ್ತವರ ಬಯಕೆಯಂತೆ ಫ್ಯಾಷನ್ ಡಿಸೈನಿಂಗ್ ಅಂಡ್ ಫ್ಯಾಬ್ರಿಕೇಶನ್ ಕೋರ್ಸ್ ಮುಗಿಸಿದ್ದಾರೆ. ಎರಡು ವರ್ಷ ಎರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. 
         ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಹಿರಿಯ ನಟ, ನಟಿಯರ ಸಿನಿಮಾ ವೀಕ್ಷಿಸುತ್ತ ನನ್ನ ಅಭಿನಯದಲ್ಲಿ ಸುಧಾರಣೆ ಮಾಡಿಕೊಳ್ಳುವೆ ಎನ್ನುವ ಅನಿತಾ, ಹಿಂದೂಸ್ತಾನಿ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಲಿಯುತ್ತಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸವಿದೆ.
ನಟಿಯೇ ಆಗಬೇಕು ಎನ್ನುವ ಸ್ಪಷ್ಟ ಗುರಿಯೇನೂ ಇರಲಿಲ್ಲ. ಸಣ್ಣವಳಿದ್ದಾಗಿನಿಂದಲೂ ಕ್ಯಾಮೆರಾ ಎಂದರೆ ಭಾರಿ ಪ್ರೀತಿ. ಫೋಸ್ ಕೊಡುವುದು ಎಂದರಂತೂ ಬಹಳ ಇಷ್ಟವಾಗಿತ್ತು. ಬಾಲ್ಯದ ಸಾವಿರಾರು ಫೋಟೋಗಳಿವೆ. ಎಲ್ಲದರಲ್ಲೂ ಬೇರೆಬೇರೆ ಫೋಸ್ ಕೊಟ್ಟಿದ್ದೀನಿ ಗೊತ್ತಾ!! ಬಹುಶಃ ಆಗಿನಿಂದಲೇ ಮನಸ್ಸಿನಲ್ಲಿ ನಟಿ ಆಗಬೇಕೆಂಬ ಆಸೆ ಸುಪ್ತವಾಗಿತ್ತು ಎಂದು ತೋರುತ್ತದೆ. ಸೈಕೋ ನಂತರ ದಾರಿ ಸ್ಪಷ್ಟವಾಯಿತು. ಈಗಿನ ಗುರಿ ಏನಿದ್ದರೂ ಉತ್ತಮ ನಟಿಯಾಗಿ ರೂಪುಗೊಳ್ಳಬೇಕು. ಜನ ನೆನಪಿನಲ್ಲಿಟ್ಟುಕೊಳ್ಳುವಂಥ ಅಭಿನೇತ್ರಿಯಾಗಿ ಬೆಳೆಯಬೇಕು.
                                                                                                                      -ಆನಿತಾ ಭಟ್


ಸಂದರ್ಶನ: ರಾಜೇಶ ಮುಂಡಿಗೇಸರ
ವರದಿ: ಮಂಜುನಾಥ