ನಿಸರ್ಗ ಸೌಂದರ್ಯ-ದೈವಿ ವೈಶಿಷ್ಟ್ಯಗಳ ಐತಿಹಾಸಿಕ ತಾಣ ಮೆಟ್ಕಲ್ ಗುಡ್ಡೆ

 ಕುಂದಾಪುರ ತಾಲೂಕಿನ ಹೊಸಂಗಡಿ ಬಳಿ ಇರುವ  ಮೆಟ್ಕಲ್ ಗುಡ್ಡೆ, ಶ್ರೀ ಮಹಾಗಣಪತಿ ಮತ್ತು ನಾಗದೇವರ ದಿವ್ಯ ತಾಣ. ಐತಿಹಾಸಿಕ ಹಿನ್ನೆಲೆಯುಳ್ಳ, ಅಪಾರ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಈ ಪ್ರದೇಶವು ತಾಲೂಕಿನ ಧಾರ್ಮಿಕ-ಪ್ರೇಕ್ಷಣಿಯ ಸ್ಥಳವಾಗಿದೆ.

  ಕುಂದಾಪುರದಿಂದ ಪೂರ್ವಾಭಿಮುಖವಾಗಿ 25 ಕಿ.ಮೀ ದೂರ ಹಾಗೂ ಹೊಸಂಗಡಿಯಿಂದ ಕೇವಲ ೪ ಕಿ.ಮೀ. ದೂರ ಸಾಗಿದರೆ ಹಚ್ಚ -ಹಸುರಿನ ಪ್ರಕ್ರತಿ ಸೌಂದರ್ಯದ ಸೊಬಗಿನ ಶತಮಾನಗಳ ಇತಿಹಾಸವನ್ನು ಹೊಂದಿರುವ 'ಮೆಟ್ಕಲ್ ಗುಡ್ಡೆ' ಎಂಬ ಪ್ರದೇಶದ ದಿಗ್ದರ್ಶನವಾಗುತ್ತದೆ.  ಸುಮಾರು ಎರಡು ಸಾವಿರ ಅಡಿಗೂ ಎತ್ತರ ದಲ್ಲಿರುವ ಈ ಪ್ರದೇಶಕ್ಕೆ ಸಾಗಲು ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ಕಡಿದಾದ ಮೆಟ್ಟಿಲು ಗಳಿಂದ ಆವೃತವಾಗಿದ್ದರಿಂದ ಆಡು ಭಾಷೆಯಲ್ಲಿ ಮೆಟ್ಕಲ್ ಗುಡ್ಡೆ ಎಂದು ಹೆಸರು ಬಂತು ಎನ್ನವುದು ವಾಡಿಕೆ. ಗೆರ್ಸಿಕಲ್ಲು ಎಂಬ ಪುಟ್ಟ ಗ್ರಾಮದಿಂದ ಈ ಬೆಟ್ಟ ಏರಲು ಕಡಿದಾದ ರಸ್ತೆಯಲ್ಲಿ ಮೆಟ್ಟಿಲುಗಳಿದ್ದರೆ, ಬಾಗಿಮನೆ ಎಂಬಲ್ಲಿ ಲಘು ವಾಹನಗಳು ಸಂಚರಿಸಲು ಕಚ್ಚಾ ರಸ್ತೆ ಇದೆ.
   ಪಶ್ಚಿಮ ದಿಕ್ಕಿನಲ್ಲಿ ಶ್ರೀ ಮಹಾಗಣಪತಿ ಉದ್ಬವ ಮೂರ್ತಿ ಇದ್ದರೆ ಕೊಂಚ ಉತ್ತರಭಿಮುಖವಾಗಿ ಶ್ರಿ ನಾಗ ದೇವರ ಉದ್ಬವ ಮೂರ್ತಿ ಇದೆ. ಎತ್ತರ ಪ್ರದೇಶದಲ್ಲಿ ನೆಲೆನಿಂತಿರುವ ಈ ಶಕ್ತಿ ದೇವರುಗಳು ಹೊಸಂಗಡಿ, ಭಾಗಿಮನೆ, ಎಡಮೊಗ್ಗೆ, ಗೆರ್ಸಿಕಲ್ಲು, ಮುತ್ತಿನಕಟ್ಟೆ, ಅರೆಮನೆ, ತೊಂಬಟ್ಟು  ಮುಂತಾದ ಗ್ರಾಮೀಣ ಭಾಗಗಳನ್ನು ಸಲಹುತ್ತಾರೆ ಎನ್ನುದು ಸ್ಥಳಿಯರ ಅಂಬೋಣ . ಪ್ರತಿ ಮಂಗಳವಾರ ಸಂಕಷ್ಟಿ ಮತ್ತು ಸಂಕ್ರಮದ ದಿನದಂದು ವಿಶೇಷ ಪೂಜಾ ಕಾರ್ಯ ಇಲ್ಲಿ ನಡೆಯುತ್ತವೆ. ವಾರ್ಷಿಕ ಧಾರ್ಮಿಕ ಉತ್ಸವಕ್ಕೆ ಊರ -ಪರ ಊರ ಸಹಸ್ರಾರು ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಬಲರಿಂದ ವೃದ್ಧರ ವರೆಗೆ ದೈವ ನಿಷ್ಠರಾಗಿ ಉತ್ತಮ ಮನಸ್ಸು ಹಾಗೂ ಪಾದಯಾತ್ರೆ ಮೂಲಕ ಸ್ಥಳಕ್ಕೆ ಆಗಮಿಸಿದರೆ ದೇವರು ಪ್ರಸನ್ನತೆಯನ್ನು ತೋರಿ ತಮ್ಮ ಸಕಲ ಇಷ್ಟಾರ್ಥವನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಇದೆ.


ಮೆಟ್ಕಲ್ ಗುಡ್ಡೆಯ ವಿಶೇಷ:
     ದೇವಳದ ದಕ್ಷಿಣ ಭಾಗದಲ್ಲಿ ಪುಟ್ಟ ಬಾವಿ ಇದ್ದು ಕೈಗೆ ನಿಲುಕುವಷ್ಟು ಎತ್ತರದಲ್ಲಿ ನೀರಿದೆ. ವಿಶೇಷವೆಂದರೆ ಇಲ್ಲಿಂದ ಎಷ್ಟೇ ನೀರು ಎತ್ತಿದರೂ ಖಾಲಿಯಾಗದು. ಇಂತಹ ಎರು ಗುಡ್ಡ ಪ್ರದೇಶದಲ್ಲಿ ಬೇಸಿಗೆಯ ಉರಿ ತಾಪದಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ನೀರು ಸಿಗುವುದು ಇಲ್ಲಿನ ವೈಶಿಷ್ಟ್ಯ. ವಿವಿಧ ಆಕಾರದ ಬಂಡೆಗಳು, ಹಾವಿನ ಹುತ್ತ, ಕಾಡು ಪ್ರಾಣಿಗಳ ವಾಸ ಸ್ಥಾನವಾಗಿರುವ ಗವಿ, ಮಟ್ಟುಗಳು, ವಿವಿಧ ಪ್ರಬೇದದದ ಅಪೂರೂಪದ ಸಸ್ಯ ಸಂಪತ್ತಿನಿಂದ ಮೆಟ್ಕಲ್ ಗುಡ್ಡೆ ಸುತ್ತಲಿನ ಪ್ರಕೃತಿ ಸೌಂದರ್ಯ ವರ್ಣಾನಾತಿತ.

ಬ್ರಿಟಿಷರ ಅಡಗುದಾಣವಾಗಿತ್ತು ಈ ಮೆಟ್ಕಲ್ ಗುಡ್ಡೆ:
      ವಾಸ್ತವಕ್ಕೆ ಮೆಟ್ಕಲ್ ಗುಡ್ಡೆ ಎಂಬ ಈ ದೈವ ನಿಷ್ಠ ಪ್ರದೇಶವನ್ನು ಅರಸಿ ಕೊಟ್ಟದ್ದು ಬ್ರಿಟಿಷರೆಂದರೂ ತಪ್ಪಲ್ಲ. ಬ್ರಿಟೀಷ ಆಳ್ವಿಕೆಯ ಕಾಲ ದಲ್ಲಿ ಬ್ರಿಟಿಷರು ಇದನ್ನು ತಮ್ಮ ವಿವ್ ಪಾಯಿಂಟ್ ಆಗಿ ಬಳಕೆ ಮಾಡುತ್ತಿದ್ದರು. ತಮ್ಮ ವಿರೋಧಿಗಳನ್ನೂ ಮಟ್ಟ ಹಾಕಲು ಇದರ ಮೇಲೆ ನಿಂತು ಶತ್ರುಗಳನ್ನು ವೀಕ್ಷಿಸಿ ಅಲ್ಲಿಂದಲೇ ಪಿರಂಗಿ ಮೂಲಕ ಶತ್ರು ಸೈನ್ಯವನ್ನು ಸದೆ ಬಡಿಯುತ್ತಿದ್ದರಂತೆ. ಕುರುಹುಗಳು ಇಂದಿಗೂ ಸಹಾ ಇಂದಿಗೂ ಇವೆ. ಕೆಳದಿಯ ದೊರೆ ಶಿವಪ್ಪನ ನಾಯಕನು ನಗರದಲ್ಲಿ ಕೋಟೆಯನ್ನು ನಿರ್ಮಿಸಿ ಅಲ್ಲಿಂದ ಸಂಪರ್ಕ ಕಲ್ಪಿಸಲು ಈಗಿನ ಹೊಸಂಗಡಿ ಹೃದಯ ಭಾಗದಲ್ಲಿ ಇನ್ನೊಂದು ಕೋಟೆಯನ್ನು ಕಟ್ಟಿಸಿದ್ದನು. ಬ್ರಿಟಿಷರು ಮತ್ತು ಶಿವಪ್ಪನಾಯಕ ನಡುವೆ ಯುದ್ದ ಸಂಭವಿಸಿದಾಗ ಬ್ರಿಟಿಷರು ಹೊಸಂಗಡಿಯಲ್ಲಿದ್ದ ಕೋಟೆಯನ್ನು ಇಲ್ಲಿಂದಲೇ ಪಿರಂಗಿ ಮೂಲಕ ಉಡಾಯಿಸಿದರು ಎಂಬ ಉಲ್ಲೇಖವಿದೆ. ಬ್ರಿಟಿಷರಿಂದಾಗಿ ನೆಲ ಸಮವಾದ ಹೊಸಂಗಡಿ ಕೋಟೆಯ ಅವಶೇಷಗಳು ಇಂದಿಗೂ ಸಹಾ ಕಾಣ ಸಿಗುತ್ತಿದೆ. ಪ್ರಸ್ತುತ ಇದರ ಅಲ್ಪ ಭಾಗ ಅಂದರೆ ಸುಮಾರು ೧೮ ಎಕರೆ ಭೂಭಾಗ ಸಂಪೂರ್ಣ ಕಂದಕ ವಾಗಿ ರೂಪುಗೊಂಡಿದೆ. ಇದಕ್ಕೆ 'ಕೋಟೆ ಕೆರೆ ' ಎಂಬ ಹೆಸರು ಜನಜನಿತವಾಗಿದೆ.


ಮಾರ್ಗ:
ಕುಂದಾಪುರ-ಶಿವಮೊಗ್ಗ ನಡುವೆ ಸಂಚರಿಸುವ ಬಸ್ಸಿನ ಮೂಲಕ ಹೊಸಂಗಡಿ ತಲುಪಿ ಅಲ್ಲಿನ 4 ಕಿ.ಮೀ. ಸಾಗಿದರೆ ಮೆಟ್ಕಲ್ ಗುಡ್ಡವನ್ನು ತಲುಪಬದುದಾಗಿದೆ. ಹೊಸಂಗಡಿಗೆ ಸಾಕಷ್ಟು ಬಸ್ಸುಗಳ ಸಂಚಾರವಿದ್ದು ಅಲ್ಲಿಂದ ಮೆಟ್ಕಲ್ ಗುಡ್ಡಕ್ಕೆ ಸಾಗಲು  ಆಟೋ ಯಾ ಬೆರೆ ವಾಹನವಿದೆ. ಪ್ರಾಣಿಗಳಿರುವುದರಿಂದ ಒಬ್ಬಂಟಿ ಯಾಗಿ ಭೇಟಿ ನೀಡುವುದು ಕೊಂಚ ಅಪಾಯಕಾರಿ.

ಚಿತ್ರ-ಲೇಖನ: ಶಿವಕುಮಾರ್ ಹೊಸಂಗಡಿ