ಕೋಟೇಶ್ವರದ ಕಿನಾರಾ ರಸ್ತೆ ಬಳಿಯ ತೆಂಗಿನ ತೋಪಿನಲ್ಲಿ ಗುರುವಾರ ಮುಂಜಾನೆ ನಡೆದ ಭೀಕರ ಸರ್ಪ ಸಮರ ಪರಿಸರದ ನಿವಾಸಿಗಳಲ್ಲಿ ಭಯ ಮೂಡಿಸಿದೆ. ಗಣೇಶ ಉಡುಪ ಎಂಬವರ ತೆಂಗಿನ ತೋಟದಲ್ಲಿ ನಸುಕಿನ 5 ಗಂಟೆಗೆ ಸುಮಾರು ಐದಾರು ಅಡಿ ಉದ್ದದ ಎರಡು ದೊಡ್ಡ ನಾಗರಹಾವುಗಳು ಭಯಂಕರ ದ್ವೇಷದಿಂದ ಪರಸ್ಪರ ಕಚ್ಚಾಡುತ್ತಿದ್ದವು. ಮನೆಯ ಸಾಕುನಾಯಿ ಬೊಗಳವುದನ್ನನುಸರಿಸಿ ಗಣೇಶ ಉಡುಪರು ಹುಡುಕಾಡುತ್ತಾ ಈ ಸರ್ಪ ಸಮರವನ್ನು ನೋಡಿ ಸ್ಥಂಭೀಭೂತರಾದರು. ಹತ್ತಿರ ಹೋಗುವ ಧೈರ್ಯ ಬರಲಿಲ್ಲ. ಅವುಗಳ ಭುಸುಗುಟ್ಟುವಿಕೆ ಮತ್ತು ಕಚ್ಚಾಟ ಎಂತಹವರಲ್ಲೂ ಭಯ ಹುಟ್ಟಿಸುವಂತಿತ್ತು.
ತಕ್ಷಣ ಉಡುಪರಿಗೆ ನೆನಪಾದದ್ದೇ ಕೋಟೇಶ್ವರದ ಖ್ಯಾತ ಉರಗ ತಜ್ಞ, ಹಾವು ಹಿಡಿಯುವದರಲ್ಲಿ ಸಿದ್ಧ ಹಸ್ತರಾಗಿ 'ಹಾವ್ಐತಾಳ' ಎಂದೇ ಖ್ಯಾತಿ ಪಡೆದ ಶ್ರೀಧರ ಐತಾಳರದು. ಸ್ಥಳಕ್ಕಾಗಮಿಸಿದ ಐತಾಳರು, ಸರ್ಪಗಳು ಪರಸ್ಪರ ಲಾಕ್ ಮಾಡಿದಂತೆ ಸುತ್ತಿಕೊಂಡು ಹೆಡೆಯ ಮೇಲ್ಭಾಗ ಕಚ್ಚುತ್ತಿದ್ದವುಗಳನ್ನು ಹರಸಾಹಸದಿಂದ ಬೇರ್ಪಡಿಸಿದರು. ಇವೆರಡೂ ದೊಡ್ಡ ಹಾವುಗಳೇ ಆಗಿದ್ದರೂ, ಒಂದು ಗಾಯಗೊಂಡು ಸ್ವಲ್ಪ ದುರ್ಬಲವಾಗಿತ್ತು. ಸಾಕಷ್ಟು ಗಾಯಗೊಂಡಿದ್ದ ಆ ಹಾವನ್ನು ಇನ್ನೊಂದು ಪ್ರಬಲ ನಾಗರಹಾವು ನುಂಗುವ ಉದ್ದೇಶದಿಂದ ಹೆಡೆಯ ಮೇಲ್ಭಾಗ, ತಲೆಯ ಬಳಿ ಭುಸುಗುಡುತ್ತಾ ಕಚ್ಚುತ್ತಿತ್ತು.
ರಕ್ತ ಒಸರುತ್ತಿದ್ದರೂ ಇನ್ನೊಂದು ಹಾವು ಜೀವ ರಕ್ಷಣೆ ಮತ್ತು ದ್ವೇಷ ಸಾಧನೆಗಾಗಿ ಹೋರಾಡುತ್ತಿತ್ತು. ಬೇರ್ಪಡಿಸಿ ದೂರ ದೂರ ಮಾಡಿದಂತೆಲ್ಲಾ ಮತ್ತೆ ಜಂಟಿಯಾಗಿ ಯುದ್ಧ ಶುರುಮಾಡುತ್ತಿದ್ದ ಇವುಗಳಿಂದ ಸ್ವತಃ ಶ್ರೀಧರ ಐತಾಳರೇ ಗಾಬರಿಗೊಂಡರು. ಅಂತೂ ಶ್ರಮಪಟ್ಟು ಅವುಗಳಿಗೆ ಏಟಾಗದಂತೆ ಬೇರ್ಪಡಿಸಿ ಕದನವಿರಾಮಗೊಳಿಸಿದ ಅವರು ಎರಡನ್ನೂ ಸುಮಾರು ಇನ್ನೂರು ಮೀಟರ್ ದೂರ ಮಾಡಿ ಓಡಿಸಿದರು.

ಶ್ರೀಧರ ಐತಾಳರು ಹೇಳುವ ಪ್ರಕಾರ ಇದೇನೂ ಹಾವುಗಳ ಬೆದೆಋತು (ಮೇಟಿಂಗ್ ಸೀಸನ್) ಅಲ್ಲ. ಸರ್ಪಗಳಲ್ಲೂ ಗಂಡು, ಹೆಣ್ಣು ಪ್ರಬೇಧಗಳಿದ್ದರೂ ಇದು ಮಾತ್ರ ಅವುಗಳ ಪ್ರೇಮ ಕಲಹ ಅಲ್ಲ. ಇದು ದ್ವೇಶದ ಸಮರ. ಈ ಸಮರ ಮುಂದುವರೆದರೆ, ದುರ್ಬಲ ಹಾವನ್ನು ಪ್ರಬಲ ಹಾವು ಕಚ್ಚಿ ನುಂಗುತ್ತದೆ. ಇದರಿಂದ ಎರಡರ ಜೀವಕ್ಕೂ ಅಪಾಯವಿದೆ ಎನ್ನಲಾಗುತ್ತದೆ. ಈ ಸರ್ಪ ಸಮರ ಬೆಳಗಿನ ಜಾವ ಸುಮಾರು ಮೂರು ಗಂಟೆಗೇ ಆರಂಭಗೊಂಡಿರಬಹುದು ಎಂದು ಶ್ರೀಧರ ಐತಾಳರು ಹೇಏಳುತ್ತಾರೆ.
ಮೂರುವರೆ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದ, ಚಿಕಿತ್ಸೆ ಮಾಡಿದ ಅನುಭವೀ ಐತಾಳರಿಗೆ ಹಾವುಗಳ ಚಲನವಲನ, ಅಹಾರ, ಜೀವನ ಕ್ರಮಗಳ ಬಗ್ಗೆ ಅಪಾರ ಜ್ಞಾನವಿದೆ. ಅವರ ಯಶಸ್ವೀ ಕಾರ್ಯಾಚರಣೆಯಿಂದಾಗಿ ಗಣೇಶ ಉಡುಪರ ಮನೆಯವರು ಹಾಗೂ ಪರಿಸರದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ಸರ್ಪಗಳಿಗೂ ಜೀವ ಲಾಭವಾಗಿದೆ.
ವರದಿ: ಸುಧಾಕರ್
ಚಿತ್ರಗಳು: ಶಾಂತಾರಾಮ ಭಟ್
ಶಿಲ್ಪಾ ಸ್ಟುಡಿಯೋ ಕೋಟೇಶ್ವರ.