ಮತ್ತೆ ಮತ್ತೆ ಕಾಡುವ ಆ ಕಾಲೇಜು ದಿನಗಳು....ಮನಸ್ಸೆಂಬ ಆಟೋಗ್ರಾಫ್‍ನಲ್ಲಿ ಅವಿಸ್ಮರಣೀಯ.

          ಹೌದು ಕಣ್ರೀ ಇಂಗ್ಲಿಷ್, ಜರ್ನ್‍ಲಿಸಂ, ಸೈಕಾಲಜಿ, ವಿಷಯ ತೆಗೆದುಕೊಂಡ ವಿದ್ಯಾರ್ಥಿಗಳ ಸ್ಪೆಷಾಲಿಟಿಯೇ ಬೇರೆ. ಯಾವಾಗಲೂ ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಇರುವ ನಾವು ಕಾಲೇಜಿನ ಎಲ್ಲಾ ಡಿಪಾರ್ಟ್‍ಮೆಂಟ್‍ನಿಂದ ಗುರುತಿಸಿಕೊಂಡಿದ್ದೆವು. ಕಾಲೇಜ್‍ನಲ್ಲಿ ಯಾವುದೇ ಕಾರ್ಯಾಗಾರ, ಸೆಮಿನಾರ್, ಚರ್ಚಾಕೂಟವಿರಲಿ ವೇದಿಕೆಯ ಮುಂದಿರುವ ಸೀಟುಗಳನ್ನು ಇ.ಜೆ.ಪಿ ವಿದ್ಯಾರ್ಥಿಗಳೇ ಅಲಂಕರಿಸುತ್ತಿದ್ದುದು. ಕಾಲೇಜು ಸೇರುವ ಸಮಯದಲ್ಲಿ ಹದಿನಾರು ಮಂದಿ ವಿದ್ಯಾರ್ಥಿಗಳಿದ್ದ ನಮ್ಮ ಕ್ಲಾಸ್‍ನಲ್ಲಿ ನಾಲ್ಕು ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ದೂರಾದರು. ಅದರಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಚಿನ್ಮ್‍ಯ್‍ನನ್ನು ಮರೆಯಲಸಾಧ್ಯ, ಆತ ನಮ್ಮೆಲ್ಲರಿಂದ ಶಾಶ್ವತವಾಗಿ ದೂರಾಗಿದ್ದಾನೆಂಬುದು ನಮ್ಮ 
ತರಗತಿಯ ವಿಷಾದದ ಸಂಗತಿ.
       ನಾವು ಮಾಡಿದ ಕ್ಷಣ ಕ್ಷಣದ ಹರಟೆ, ಗಲಾಟೆ, ತುಂಟಾಟ ಪಕ್ಕದ ಕ್ಲಾಸಿನವರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿತ್ತು. ಈ ಮಧುರ ಕ್ಷಣದ ನೆನಪು ನಮ್ಮಲ್ಲಿ ಹಚ್ಚಹಸುರಾಗಿದೆ. ಆ ಹಚ್ಚಹಸುರಿನ ನೆನಪಿಗೆ ಹೊಚ್ಚಹೊಸತನದ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾರಣ. ನಮ್ಮದು ಕೇವಲ ಕೆಲವೇ ವಿದ್ಯಾರ್ಥಿಗಳ ತರಗತಿ ಆಗಿರಲಿಲ್ಲ, ಅದು ಒಂದು ಡಜನ್ ಕೋತಿಗಳಿರುವ ತಂಡವಾಗಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.

    ಅನುಭವಿ ಉಪನ್ಯಾಸಕರ ತರಗತಿಯಲ್ಲೂ ನಮ್ಮ ಉಪಟಳ ಅಷ್ಟಿಸ್ಟಿರಲಿಲ್ಲ. ತರಗತಿಯಲ್ಲಿ ಪಾಠ ನಡೆಯುತ್ತಿದ್ದರೆ ಇತ್ತ ಕಡೆ ಒಂದು ಬೆಂಚಿನಿಂದ ಇನ್ನೊಂದು ಬೆಂಚಿಗೆ ಕಾಗದದ ಚೂರಿನಿಂದ ಸಂದೇಶ ರವಾನೆ, ಮದ್ಯಾಹ್ನದ ಹೊತ್ತಲ್ಲಿ ಆಕಳಿಕೆ, ನಿದ್ದೆಯ ತೂಕಡಿಕೆ, ಉಪ್ಪು ಖಾರ ಅದ್ದಿ ಹುಳಿ ಮಾವಿನ ಕಾಯಿ ತಿನ್ನುವುದು ಸಾಮಾನ್ಯವಾಗಿ ಸಾಮೂಹಿಕವಾಗಿತ್ತು. ಐವತ್ತು ಪೈಸೆಯ ಚಾಕಲೇಟನ್ನು ಹನ್ನೆರಡು ಮಂದಿ ಹಂಚಿ ತಿನ್ನುತ್ತಿದ್ದೆವು. ಇದರಲ್ಲಿ ಒಂದು ದಿನ ಮೆಹಂದಿಯ ರಂಗು ಮೆದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಆಯ್ತು. ಅತ್ತ ಕ್ಲಾಸ್ ಕೇಳುತ್ತ, ಇತ್ತ ಮೆಸೇಜ್ ಮಾಡುತ್ತ ಎರಡೆರಡು ಕೆಲಸ ಚಾಕಚಕ್ಯತೆಯಿಂದ ನಡೆಯುತಿತ್ತು. ಎಲ್ಲದಕ್ಕೂ ಕಿಸಿ ಕಿಸಿ ನಗುತ್ತಿದ್ದ ನಾವು ಡಿಪಾರ್ಟ್‍ಮೆಂಟ್‍ಗೆ ಹೋಗಿ `ಸಾರಿ' ಎಂದು ಅತ್ತಿದ್ದು ಉಂಟು. ಹಿಂದಿನ ಬೆಂಚಿನಲ್ಲಿ ಕುಳಿತ ನಮ್ಮ ಕ್ಲಾಸಿನ ಒಬ್ಬನೇ ಒಬ್ಬ ಅಮಾಯಕ ಬಾಲಕ ವಿವಿಧ ರೀತಿಯ ಕಾರ್ಟೂನ್ ಬಿಡಿಸಿ ನಮ್ಮನ್ನು ನಗಿಸಿ ಆತ ಬಚಾವಾಗುತ್ತಿದ್ದ. ಇದೆಲ್ಲದರ ನಡುವೆಯೂ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮದೇ ಆದ ವಿಶೇಷ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಒಡಹುಟ್ಟಿದವರಂತೆ ಇದ್ದಿದ್ದ ನಾವು ಈಗ ಪದವಿ ಮುಗಿದು ನಮ್ಮ ಆಸಕ್ತಿಯ ಕ್ಷೇತ್ರಗಳನ್ನು ಅರಸಿ ಒಬ್ಬರನ್ನೊಬ್ಬರು ಅಗಲುವ ಸಮಯ. ಆದರೆ ಆ ಎಲ್ಲಾ ನೆನಪುಗಳು ಮನಸೆಂಬ ಆಟೋಗ್ರಾಫ್ ನಲ್ಲಿ ಅವಿಸ್ಮರಣೀಯ.
ಚೈತ್ರಾ ಚಂದನ್ 
   ಅವಿಭಜಿತ ದ.ಕ ಜಿಲ್ಲೆಯ ಅಚ್ಚ ಕನ್ನಡದೂರು ಕುಂದಾಪುರ. ಇದಕ್ಕೆ ಹೆಮ್ಮೆಯಾಗಿ ನಮ್ಮ ಭಂಡಾರ್ಕಾರ್ಸ್ ಕಾಲೇಜು. ಒಂದು ಶಿಕ್ಷಣ ಸಂಸ್ಥೆಯ ಬೆನ್ನೆಲುಬು ಅದರ ಅದ್ಯಾಪಕ ವೃಂದ, ಈ ವಿಚಾರದಲ್ಲಿ ನಾವೆಲ್ಲ ಅದೃಷ್ಟ ಮಾಡಿದವರೆಂದೇ ಹೇಳಬೇಕು. ಅನೇಕ ಮಂದಿ ಪ್ರತಿಭಾನ್ವಿತ ಹಾಗೂ ಬೋಧನಾ ನೈಪುಣ್ಯ ಹೊಂದಿದ ಕಾಲೇಜು ಇದು. ಗುಣ ಗಾತ್ರಗಳೆರಡರಲ್ಲೂ ಬೃಹತ್ತಾದ 'ವೆಂಕಟ್ರಾಯ ಭಂಡರ್ಕಾರ್' ಸ್ಮಾರಕ ಗ್ರಂಥಾಲಯವಂತೂ ಕಾಲೇಜಿನ ಕೀರ್ತಿ ಕಿರೀಟಕ್ಕೆ ಸೇರಿದ ಮತ್ತೊಂದು ಗರಿ. ಇನ್ನೊಂದು ಪ್ರಶಂಸೆಯ ಮಾತೆಂದರೆ ನ್ಯಾಕ್ ತಂಡದಿಂದ ನಮ್ಮ ಕಾಲೇಜಿಗೆ "ಎ" ಗ್ರೇಡ್ ಬಂದಿರುವಂತಹುದು. ಹಾಗಾಗಿ ಭಂಡರ್ಕಾರ್ಸ್ ವಿದ್ಯಾರ್ಥಿಯೆಂದು ಹೇಳಿಕೊಳ್ಳಲು ಹೆಮ್ಮೆ ಪಡಲೇಬೇಕು. ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೊಸತೊಂದನ್ನು ಸಾಧಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತಿ ಹಾರಿಸಬೇಕೆಂಬುದು ನನ್ನ ಆಶಯ.