ಪಕ್ಷೇತರ ಅಭ್ಯರ್ಥಿಯಾಗಿ ಹಾಲಾಡಿ ಸ್ವರ್ಧೆ


ಕುಂದಾಪುರ: ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಅಂತಿಮವಾಗಿ ಉತ್ತರ ದೊರೆತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆ ಮೂಲಕ ಹಾಲಾಡಿ ಜೆಡಿಎಸ್ ಸೇರುವರಾ, ಕೆಜೆಪಿ ಕಡೆಗೆ ಹೋಗುವರಾ, ಪಕ್ಷೇತರರಾಗಿ ಸ್ವರ್ಧಿಸುವರಾ ಇಲ್ಲಾ ರಾಜಕೀಯ ಸನ್ಯಾಸ ಪಡೆಯುವರ ಎಂಬ ಉಹಾಪೋಹಗಳಿಗೆ ತೆರೆಬಿದ್ದಂತಾಗಿದೆ.
    ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಕೊಡುವುದಾಗಿ ಕರೆಯಿಸಿ ಬರಿಗೈಯಲ್ಲಿ ವಾಪಾಸು ಕಳುಹಿಸಿದ್ದರಿಂದ ಮನನೊಂದಿದ್ದ  ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತನ್ನ ಮತ್ತು ಕ್ಷೇತ್ರದ ಮತದಾರರ ಆತ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಕ್ಷೇತ್ರದ ಶಾಸಕತ್ವಕ್ಕೆ ಹಾಗೂ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ಮುಂದಿನ ನಡೆ ಏನು ಎಂಬುದನ್ನು ಈವರೆಗೆ ಬಹಿರಂಗ ಪಡಿಸಿರಲಿಲ್ಲ.
      ಮೂರು ಅವಧಿಗೆ ಶಾಸಕನಾಗಿದ್ದ ಹಾಲಾಡಿ ಅಧಿಕಾರಕ್ಕೆ ಹಾತೊರೆಯದೇ ಸರಳ- ಸಜ್ಜನಿಕೆಯಿಂದ ಬದುಕಿ ಕುಂದಾಪುರದ ವಾಜಪೇಯಿ ಎನಿಸಿಕೊಂಡಿದ್ದರು. ತನ್ನ ರಾಜೀನಾಮೆಯ ನಂತರ ಕೂಡ ಜನ ಸೇವೆಯನ್ನು ಮಂದುವರಿಸಿದ್ದರು. ಈ ನಡುವೆ ಸಹೋದರ ಉದಯಕುಮಾರ್ ಶೆಟ್ಟಿ ಸಾವಿನಿಂದ ಮತಷ್ಟು ಕುಗ್ಗಿದ್ದ ಹಾಲಾಡಿ ರಾಜಕೀಯದಿಂದ ದೂರವೇ ಉಳಿದಿದ್ದರು. ರಾಜಕೀಯದಲ್ಲಿ ಮುಂದುವರಿಯಬೇಕೆ, ಬೇಡವೇ ಎಂಬ ಗೊಂದಲದಲ್ಲಿಯೇ ಇದ್ದ ಅವರು ಅಭಿಮಾನಿಗಳು ಹಾಗೂ ಹಿತೈಶಿಗಳ  ಒತ್ತಾಯದ ಮೇರೆಗೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಲು ನಿರ್ಧರಿಸಿದ್ದಾರೆ. ಹಾಲಾಡಿಯ ಈ ನಿಲುವಿನಿಂದಾಗಿ ಅವರ ಅಭಿಮಾನಿಗಳು ಸಂತಸಗೋಂಡಿದ್ದಾರೆ.