ಹೆದ್ದಾರಿ ಅಂಚಿಗೆ ಬಂದ ಕೋಟದ `ಹೋರಿ ಪೈರು'

ಅಂದಿನ ಕೋಟದ ಹೋರಿ ಪೈರು ನಡೆಯುತ್ತಿದ್ದ ಸ್ಥಳ.

ಕುಂದಾಪುರ: ಸ್ಥಳದ ಅಭಾವದಿಂದ ಇತಿಹಾಸ ಪ್ರಸಿದ್ದ ಕೋಟದ ಹೋರಿ ಪೈರು ಇದೀಗ ಹೆದ್ದಾರಿ ಅಂಚಿನಲ್ಲಿ ವ್ಯವಹಾರ ನಡೆಯುತ್ತಿದ್ದು ಅವಸಾನದ ಕ್ಷಣಗಣನೆಯಲ್ಲಿದೆ. 
     ನೂರಾರು ವರ್ಷಗಳಿಂದ ಕೃಷಿ ಚಟುವಟಿಕೆಗೆ ಮತ್ತು ಕಂಬಳಕ್ಕೆ ಕೋಣದ ಜೋಡಿಗಾಗಿ ಮಲೆನಾಡಿನಿಂದ ಹಿಡಿದು ಕರಾವಳಿಯಾದ್ಯಂತ ಇಲ್ಲಿಗೆ ಬರುವ ಕೃಷಿಕರು ಸಂಪ್ರದಾಯಬದ್ದವಾಗಿ ವ್ಯವಹಾರ ಕುದುರಿಸುತ್ತಿದ್ದ ಅಂದಿನ ಕೋಟದ ಹೋರಿ ಪೈರು ಇರುವ ಸ್ಥಳ ಮಾಯವಾಗಿ ಇದೀಗ ರಾಷ್ಟ್ರೀಯ ಹೆದ್ದಾರಿ ಬದಿಯ ಅಂಚಿನಲ್ಲಿ ನಡೆಯುತ್ತಿದೆ.
      ಹಿಂದೆ ವಿಶಾಲವಾದ ಮರ ಗಿಡದ ನೆರಳಿನಲ್ಲಿ ನೂರಾರು ಕೋಣಗಳನ್ನು ಕಟ್ಟಿ ವ್ಯವಹಾರ ನಡೆಸಲಾಗುತ್ತಿತ್ತು. ಈಗ ಮರಗಿಡಗಳು ಸಂಪೂರ್ಣ ನಾಶವಾಗಿ ಮನೆ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದು, ದಿನೇ ದಿನೆ ಜಾಗದ ವಿಸ್ತಾರವು ಕಡಿಮೆಯಾಗುತ್ತಾ ಬಂದು ಇರುವ ಸ್ವಲ್ಪ ಜಾಗದಲ್ಲಿ ಹೋರಿ ಪೈರಿನ ವ್ಯವಹಾರ ನಡೆಯುತ್ತಿದೆ. ಇತ್ತೀಚೆಗೆ ಖಾಸಗಿ ಸ್ಥಳದವರು ಹೋರಿ ಪೈರು ನಡೆಯುತ್ತಿರುವ ತಮ್ಮ ಜಾಗಕ್ಕೆ ಬೇಲಿಮಾಡಿಕೊಂಡಿದ್ದರಿಂದ ಈಗ ಹೆದ್ದಾರಿ ಅಂಚಿನಲ್ಲಿ ಹೋರಿ ಪೈರು ನಡೆಯುವ ದುಸ್ಥಿತಿ ಬಂದಿದೆ.

ಮುಖ್ಯಮಂತ್ರಿಗಳ ಭರವಸೆ: 
ಹೆದ್ದಾರಿ ಬದಿಯಲ್ಲಿ ನಡೆಸುತ್ತಿರುವ ಈಗಿನ ಹೋರಿ ಪೈರು
     ಹೆದ್ದಾರಿ ಆಗಲಿಕರಣದ ಸಂದರ್ಭದಲ್ಲಿ ಹೋರಿ ಪೈರು ನಡೆಸುವ ಹೆಚ್ಚಿನ ಜಾಗ ಹೆದ್ದಾರಿಯ ಪಾಲಾಗಿದ್ದು, ಹೋರಿ ಪೈರು ಮಾಯವಾಗಿ ಸಂಪ್ರದಾಯಬದ್ದ ಕೃಷಿ ಹಾಗೂ ಜಾನಪದ ಕಲೆಯಾಗಿರುವ ಕಂಬಳಕ್ಕೆ ಕುತ್ತು ಬಂದಿದೆ ಎಂದು ಪತ್ರಿಕೆಗಳ ಮೂಲಕ ಗಮನ ಸೆಳೆದಾಗ ಕೋಟದ ಕನ್ನಡ ಪರ ಸಂಘಟನೆ ಎಚ್ಚೆತ್ತುಕೊಂಡು ಅಂದಿನ ಮುಖ್ಯ ಮಂತ್ರಿ ಸದಾನಂದ ಗೌಡರನ್ನು ಭೇಟಿ ಮಾಡಿ ಹೋರಿ ಪೈರು ಉಳಿಸಲು ಸೂಕ್ತ ಜಾಗ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಮನವಿಗೆ ಸ್ಪಂದಿಸಿದ ಸಿಎಂ `ಇತಿಹಾಸ ಪ್ರಸಿದ್ಧ ಕರಾವಳಿಯ ಹೋರಿ ಪೈರಿಗೆ ಧಕ್ಕೆಯಾಗಲು ಖಂಡಿತ ಬಿಡುವುದಿಲ್ಲ, ಸೂಕ್ತ ಸ್ಥಳದಲ್ಲಿ ಹೋರಿ ಪೈರಿಗೆ ಅವಕಾಶ ನೀಡುತ್ತೇನೆ' ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಅದು ಈಡೇರಿಲ್ಲ. ಹೆದ್ದಾರಿ ಬದಿಯ ಪುಟ್ ಪಾತ್ ನಲ್ಲಿ ಕೇವಲ 8-10 ಫೀಟ್ ಆಗಲದ ಸ್ಥಳದಲ್ಲಿ ವಾಹನಗಳ ಅಬ್ಬರದ ಸದ್ದಿಗೆ ಲಗಾಮು ಇಲ್ಲದ ಮರಿಕೋಣಗಳು ಚೆಂಗನೆ ಅತ್ತಿತ್ತ ಹಾರಿ ವಾಹನ ಸಂಚಾರಿಗಳಿಗೆ ಮತ್ತು ಪಾದಾಚಾರಿಗಳಿಗೆ ಗಲಿಬಿಲಿಯ ವಾತಾವರಣ ಸೃಷ್ಟಿಯಾಗಿದೆ. ಇದೀಗ ಕೋಣಗಳ ವ್ಯವಹಾರದ ಸೀಸನ್ ನಲ್ಲಿ ಸುರಕ್ಷಿತ ಸ್ಥಳಕ್ಕೆ ಹೋರಿ ಪೈರು ಸ್ಥಳಾಂತರಗೊಳ್ಳದಿದ್ದಲ್ಲಿ  ಎಲ್ಲರಿಗೂ ಅಪಾಯ ಕಟ್ಟಿಟ್ಟ ಬುತ್ತಿ.

ಏನಿದು ಹೋರಿ ಪೈರು..? : 
   ಹಿಂದೆ ಕೃಷಿ ಬಿಟ್ಟರೆ ಜನರ ದೊಡ್ಡ ವ್ಯವಹಾರವೇ ಹೋರಿ ಪೈರು. ಜೂನ್ ತಿಂಗಳಿಂದ ಕೃಷಿ ಚಟುವಟಿಕೆಗಳು ಆರಂಭವಾಗುವುದರಿಂದ ಜಮೀನನ್ನು ಊಳಲು ಕೋಣಗಳ ಜೋಡಿಗಾಗಿ ಮಾರ್ಚ್ ನಿಂದ ಪ್ರಾರಂಭವಾಗಿ ಜೂನ್ ತಿಂಗಳ ವರೆಗೂ  ಕರಾವಳಿಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಶಿರೂರು, ಭಟ್ಕಳ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರದಿಂದ ಜನರು ಇಲ್ಲಿಗೆ ಬಂದು ತಮಗೆ ಬೇಕಾದ ಕೋಣಗಳನ್ನು ಆಯ್ಕೆ ಮಾಡಿ ಕೊಂಡೊಯ್ಯುತ್ತಿದ್ದರು. ಹಿಂದೆ ಕೋಣದ ಮರಿಗಳನ್ನು ಗದಗ, ಹಾವೇರಿ ಬ್ಯಾಡಗಿಯಿಂದ ತರಿಸುತ್ತಿದ್ದರು ಈಗ ಇಲ್ಲಿ ಎಮ್ಮೆಗಳನ್ನು ಸಾಕುವವರಿಲ್ಲದೆ ಕೋಣಗಳ ಸಂತತಿ ಕಡಿಮೆಯಾಗಿ ಮಹಾರಾಷ್ಟ್ರದಿಂದ ತರಿಸಿ ಈಗಲೂ  ಅಲ್ಲಲ್ಲಿ ಉಳಿದಿರುವ ಸಂಪ್ರದಾಯ ಕೃಷಿಗಾಗಿ ಕೋಣಗಳನ್ನು ಹುಡುಕಿಕೊಂಡು ಇಲ್ಲಿಗೆ ಬಂದು ಈಗಲೂ ವ್ಯಾಪಾರ ನಡೆಸುತ್ತಾರೆ. ಚಿಂಚಿಲಿ, ಪಂಡಾರಪುರ ದಿಂದ ಬರುವ ಶಿವರಾತ್ರಿ ತಳಿಯ ಕೋಣಗಳನ್ನು ಹುಡುಕಿಕೊಂಡು ಈಗಲೂ ಇಲ್ಲಿಗೆ ಬರುತ್ತಾರೆ.
     ಇತ್ತೀಚೆಗೆ ಸಂಪ್ರದಾಯಬದ್ದ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದರಿಂದ ಎಮ್ಮೆಗಳನ್ನು ಸಾಕುವವರಿಲ್ಲದೆ ಕೋಣಗಳ ಸಂಖ್ಯೆ ಕಡಿಮೆ. ಒಂದು ವೇಳೆ ಮನೆಯಲ್ಲಿ ಒಂದು ಜೊತೆ ಕೋಣಗಳಿದ್ದರೆ ಅದನ್ನು ಸಾಕಿ ಕೃಷಿಗೆ ಪಳಗಿಸುವುದೆಂದರೆ  ಹುಲ್ಲು, ಪಶುಆಹಾರ, ವೈದ್ಯಕೀಯ ಸೌಲಭ್ಯ ಸೇರಿ ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಆದ್ದರಿಂದ ಕೋಣಗಳ ಜೋಡಿಗೆ ರೂಪಾಯಿ 25 ಸಾವಿರದಿಂದ 50 ಸಾವಿರದವರೆಗೂ ಇಲ್ಲಿ ವ್ಯವಹಾರ ಕುದುರಿಸುತ್ತಾರೆ.
     ಕರಾವಳಿಯ ಕಂಬಳಕ್ಕೆ ಪ್ರಮುಖ ಆಕರ್ಷಣೆಯೇ ಮರಿಕೋಣಗಳು, ಅಲ್ಲಲ್ಲಿ ಕೋಣಗಳಿದ್ದರೂ ಅದಕ್ಕೆ ಜೊತೆ ಮಾಡಲು ಇಂತಹ ಹೋರಿ ಪೈರಿನಂತಹ ಸ್ಥಳಗಳಿಲ್ಲದೆ ಇರುವುದರಿಂದ ಮುಂದೆ ನಡೆಯಲ್ಲಿರುವ ಕಂಬಳಕ್ಕೆ ಕೋಣಗಳು ಸಂಖ್ಯೆ ಕಡಿಮೆಯಾಗಿ ಜಾನಪದ ಕಲೆ ಕಂಬಳಕ್ಕೂ ಕುತ್ತು ಬರುವ ಭೀತಿ ಉಂಟಾಗಿದೆ.
      ಜಾನಪದ ಕಲೆಯಾದ ಕಂಬಳ, ಸಂಪ್ರದಾಯಬದ್ದ ಕೃಷಿಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಲು ಶತಮಾನಗಳ ಹಿಂದಿನ ಕರಾವಳಿಯಲ್ಲಿನ ಏಕೈಕ ಕೋಟದ ಹೋರಿ ಪೈರನ್ನು ರಕ್ಷಿಸುವುದು ಕೂಡ ಅತ್ಯಗತ್ಯ.