ಯಾರಿಗೆ ಒಲಿಯಲಿದೆ ಪುರಸಭೆಯ ಅಧಿಕಾರದ ಗದ್ದುಗೆ...?


ಕುಂದಾಪುರ: ಈ ಭಾರಿಯ ಕುಂದಾಪುರ ಪುರಸಭೆ ಅಧಿಕಾರದ ಗದ್ದುಗೆ  ಯಾರಿಗೆ ದಕ್ಕಲಿದೆ ಎಂಬ ಸಹಜ ಕುತೂಹಲ ಸದ್ಯ  ಕ್ಷೇತ್ರದ ನಾಗರಿಕರಲ್ಲಿ  ಮನೆಮಾಡಿದೆ.  ಚುನಾವಣೆಯಲ್ಲಿ ಬಿಜೆಪಿ ಸ್ವಷ್ಟ ಬಹುಮತದಿಂದ ಗೆದ್ದರೂ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳ ಹೊಂದಾಣಿಕೆ ಹಾಗೂ ಸಂಸದ ಜಯಪ್ರಕಾಶ್ ಹೆಗ್ಡೆಯವರ ಮತದಿಂದ ಕಾಂಗ್ರೆಸ್-ಸಿಪಿಐ(ಎಂ) ಮೈತ್ರಿಕೂಟ, ಬಿಜೆಪಿಯೊಂದಿಗೆ ಸಮಬಲ ಸಾಧಿಸಿ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸುವ ಸಾಧ್ಯತೆಗಳು ದಟ್ಟವಾಗಿದೆ.
      23 ಸದಸ್ಯರನ್ನು ಹೊಂದಿರುವ ಕುಂದಾಪುರ ಪುರಸಭೆಯಲ್ಲಿ ಬಿಜೆಪಿ 12 ಹಾಗೂ ಚುನಾವಣಾ ಪೂರ್ವ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು (9+2) 11 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್-ಸಿ.ಪಿ.ಐ(ಎಂ) ಮೈತ್ರಿಕೂಟ 12-11 ಅಂತರದಲ್ಲಿರುವುದರಿಂದ, ಪುರಸಭೆ ಆಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಮತವನ್ನು ನೀಡಲು ಅವಕಾಶವಿರುವ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರ ಮತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಜಯಪ್ರಕಾಶ ಹೆಗ್ಡೆಯವರ ಮತದಿಂದ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಮೈತ್ರಿಕೂಟ ಕುಂದಾಪುರ  ಪುರಸಭೆಯಲ್ಲಿ ಸಮಬಲ ಸಾಧಿಸುವ ಸಾಧ್ಯತೆ ಇದೆ.

ಸಂದಿಗ್ಧತೆಯಲ್ಲಿ ಬಿಜೆಪಿ:
      ಕಳೆದ ಬಾರಿ 15 ಕ್ಷೇತ್ರಗಳಲ್ಲಿ ಜಯ ಸಾಧಿಸಿ  ಸ್ವಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದ ಬಿಜೆಪಿ ಈ ಬಾರಿಯೂ ಅಷ್ಟೇ ಸೀಟುಗಳನ್ನು ಉಳಿಸಿಕೊಂಡಿದ್ದರೆ ಸುಲಭವಾಗಿ ಅಧಿಕಾರ ಹಿಡಿಯಬಹುದಿತ್ತು. ಒಂದೆಡೆ  ಆ ಅವಕಾಶವೂ ತಪ್ಪಿಹೋಗಿದ್ದರೇ ಇತ್ತ  ಹಾಲಿ ಕ್ಷೇತ್ರದ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜೀನಾಮೆ ನೀಡಿರುವುದರಿಂದ  ಶಾಸಕರ ಮತವಿಲ್ಲದೇ ಬಿಜೆಪಿ ಸೊರಗಿದೆ.  ಪುರಸಭೆ ಆಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಮತವನ್ನು ನೀಡಲು ಅವಕಾಶವಿರುವುದು ಸಂಸದ ಹಾಗೂ ಶಾಸಕರಿಗೆ ಮಾತ್ರ. ಒಟ್ಟಿನಲ್ಲಿ ಬಿಜೆಪಿ ಸಂದಿಗ್ಧ ಸ್ಥಿತಿಯಲ್ಲಿದೆ.

ಮೈತ್ರಿ ವರವಾಯಿತು ಕಾಗ್ರೆಸ್ ಗೆ: 
     ಕಳೆದ ಬಾರಿ 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದ  ಕಾಂಗ್ರೆಸ್ ಈ ಬಾರಿ ಹೆಚ್ಚುವರಿ 5 ಸ್ಥಾನವನ್ನು ಪಡೆದುಕೊಂಡುಕೊಂಡುದಲ್ಲದೇ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳ ಹೊಂದಾಣಿಕೆಯಿಂದ 2 ಸ್ಥಾನಗಳನ್ನು ಪಡೆದದ್ದು ಇಲ್ಲಿ  ವರವಾಗಿ ಪರಿಣಮಿಸಿದ್ದು, ಸಂಸದರ ಮತದಿಂದ ಬಿಜೆಪಿಯೊಂದಿಗೆ ಸಮಬಲ ಸಾಧಿಸಿ ಸುಲಭವಾಗಿ ಅಧಿಕಾರ ಹಿಡಿಯುವ ಮಾರ್ಗವನ್ನು ಕಂಡುಕೊಂಡಿದೆ.


    ಹಿಂದೊಮ್ಮೆ ಕುಂದಾಪುರ ಪುರಸಭೆಯಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ನ ಹಾರೂನ್ ಸಾಹೇಬರು ಅಧ್ಯಕ್ಷ ಗಾದಿ ಏರಿದ್ದರು. 
    ಕಳೆದ ಭಾರಿ ನಡೆದ ಪುರಸಭಾ ಚುನಾವಣೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಬಹುಮತದ ಸಮಸ್ಯೆ ಎದುರಾದಾಗ ಆಗಿನ ಸಂಸದರಾಗಿದ್ದ ಸದಾನಂದ ಗೌಡ ಮತ್ತು ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮತದಿಂದಾಗಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು.
    ಒಟ್ಟಿನಲ್ಲಿ ಆಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಘೋಷಣೆಯಾದ ಬಳಿಕವಷ್ಟೇ ಮುಂದಿನ ನಡೆ ಏನು ಎಂಬುದು ಸ್ವಷ್ಟವಾಗಲಿದೆ.