ಮಹಾ ಶಿವರಾತ್ರಿ


           ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿಯ ಮಹಿಮೆ: 
          ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
        ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಜಾಗರಣೆಯ ವೈಜ್ಞಾನಿಕ ವಿಶ್ಲೇಷಣೆ: 
       ಮಾನವನ ಬದುಕಿನ ಚಕ್ರ ಸೃಷ್ಟಿ, ಸ್ಥಿತಿ ಹಾಗೂ ಲಯಗಳನ್ನು ಅವಲಂಬಿಸಿದೆ. ಜಲ, ನೆಲ, ಗಾಳಿ, ಬೆಂಕಿ, ಆಕಾಶಗಳೆಂಬ ಪಂಚಭೂತಗಳಿಂದ ಆದ ಮಾನವ ಪ್ರಕೃತಿ ನಿಯಮಗಳಿಗೆ ಒಳಪಟ್ಟಿದ್ದಾನೆ. ಪ್ರಕೃತಿಗೂ ಒಂದು ನಿಯಮಿತ ನಿಯಮ, ಚಲನೆ ಇದೆ. ಭೂಮಿಯ ಸುತ್ತ ಚಲಿಸುವ ಚಂದ್ರ ಒಂದು ದಿನದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದಕ್ಕೆ ತಿಥಿ (ಪಾಡ್ಯ, ಬಿದಿಗೆ.....) ಎನ್ನುತ್ತಾರೆ. ಭೂಮಿಯ ಒಂದು ನಿಗದಿತ ಕೋನಕ್ಕೆ ಚಂದ್ರನು ಬಂದಾಗ ಆತನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರನು ಭೂಮಿಯ 180 ಡಿಗ್ರಿ ಕೇಂದ್ರ- ಕೋನಕ್ಕೆ ಬಂದಾಗ ಆಕರ್ಷಣೆ ಅಧಿಕವಾಗಿರುತ್ತದೆ. ಹೀಗಾಗೇ ಸಮುದ್ರದ ಅಲೆಗಳ ಮೊರೆತವೂ ಹೆಚ್ಚುತ್ತದೆ. ಮಿಗಿಲಾಗಿ ಶೇಕಡಾ 80ರಷ್ಟು ಜಲವರ್ಗಕ್ಕೆ ಸೇರಿದ ಮನುಷ್ಯನ ಮೆದುಳು, ಜೀರ್ಣಾಂಗ, ಪಿತ್ತಕೋಶ ಹಾಗೂ ಮೂತ್ರ ಜನಕಾಂಗಳ ಮೇಲೂ ಚಂದ್ರನ ಪ್ರಭಾವ ಈ ಅವಧಿಯಲ್ಲಿ ತೀಕ್ಷ್ಣವಾಗಿರುತ್ತದಂತೆ. ಅದಕ್ಕೆ ಅಮಾವಾಸ್ಯೆ ಮತ್ತು ಪೂರ್ಣಿಮೆಯಲ್ಲಿ ಮಾನಸಿಕ ರೋಗಿಗಳಿಗೆ ಉದ್ರೇಕ ಹೆಚ್ಚುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಮಾಘ ಮಾಸದ ಚತುರ್ದಶಿಯಂದು ಕ್ಷೀಣ ಚಂದ್ರನ ಪ್ರಭಾವ ಇರುವುದರಿಂದ ಅಂದು ಜಾಗರೂಕರಾಗಿದ್ದು, ಜಾಗರಣೆ ಮಾಡಿದರೆ (ನಿದ್ದೆ ಮಾಡದೆ ಎಚ್ಚರ ಸ್ಥಿತಿ) ಮಾನವನಲ್ಲಿ ಉತ್ಸಾಹ ಹೆಚ್ಚಿ, ಆತನ ಚಿಂತನೆ ವೃದ್ಧಿಸುತ್ತದೆ.

ನಿಮ್ಮ ಅಭಿಪ್ರಾಯ ಬರೆಯಿರಿ