ಕರಾವಳಿಗರ ಕನ್ನಡ ಚಿತ್ರ "ರಂಗನ್ ಸ್ಟೈಲ್"ಗೆ ಬೆಂಗಳೂರಲ್ಲಿ ಮೂಹೂರ್ತ


ಕಾರ್ಕಳ: ಕರಾವಳಿಯ ಕನಸು ಕಂಗಳ ಹುಡುಗರ ಅಪ್ಪಟ ಕನ್ನಡ ಸಿನಿಮಾ "ರಂಗನ್ ಸ್ಟೈಲ್" ಗೆ ಕನ್ನಡ ಚಿತ್ರರಂಗದ ದಿಗ್ಗಜ ನಾಯಕರಾದ ಸುದೀಪ್ ಮತ್ತು ದರ್ಶನ್ ಉಪಸ್ಥಿತಿಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚಿಗೆ ಅದ್ದೂರಿಯ ಮುಹೂರ್ತ ನೆರವೇರಿತು. 
    ಮಂಗಳೂರಿನ ಪ್ರಶಾಂತ್ .ಎಸ್ ಹತ್ತು ವರ್ಷಗಳ ಅನುಭವದೊಂದಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದರೆ,  ಚಿತ್ರವನ್ನು ಕಾರ್ಕಳದ ಖ್ಯಾತ ಯುವ ಉದ್ಯಮಿಗಳಾದ ಅಜಿತ್ ಕಾಮತ್, ಬೋಳ ಶ್ರೀನಿವಾಸ ಕಾಮತ್ ಮತ್ತು ಬೋಳ ಶ್ರೀಪತಿ ಕಾಮತ್ ಅವರು ತಮ್ಮ ಆರೆಂಜ್ ಸಿನಿಮಾಸ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್‌ನ ಈ ಚಿತ್ರ ಕರಾವಳಿಯ ಹಲವಾರು ಪ್ರತಿಭಾನ್ವಿತ ಯುವ ಪ್ರತಿಭೆಗಳನ್ನೊಳಗೊಂಡು ಗಾಂಧಿ ನಗರದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ.    
     ಈಗಾಗಲೇ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಆರಂಭಗೊಂಡಿದ್ದು "ಜಾಲಿಡೇಸ್" ಮೂಲಕ ಖ್ಯಾತಿ ಪಡೆದ ನಟ ಪ್ರದೀಪ್ ಪೂರ್ಣಪ್ರಮಾಣದ ನಾಯಕರಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬೊಂಬಾಟ್ ಸಂಗೀತ ಈ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. 
      ಈಗಾಗಲೇ ಬಹುಭಾಷಾ ಚಲನಚಿತ್ರ "ಡೇವಿಡ್" ಮೂಲಕ ಸುದ್ಧಿಯಲ್ಲಿರುವ, ನಟರೂ ಆಗಿರುವ ದಯಾನಂದ ಕುಲಾಲ್ ಕಡ್ತಲ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವರು.  ಚಿತ್ರರಂಗದ ಖ್ಯಾತ ನಾಮಾಂಕಿತ ನಟರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
   ಚಿತ್ರ ನಟ ದರ್ಶನ್ ಕ್ಯಾಮರಾ ಚಾಲನೆ ಮಾಡಿದರೆ, ಸುದೀಪ್ ಕ್ಲ್ಯಾಪ್ ಆನ್ ಮಾಡಿ ಪೂಜೆ ನೆರವೇರಿಸಿ ಸಿನಿಮಾಕ್ಕೆ ಚಾಲನೆ ನೀಡಿದರು. ನಿರ್ದೇಶಕ ಪ್ರಶಾಂತ್ ಅವರ ಸಿನಿಮಾ ಗುರುಗಳಾದ ನಿರ್ದೇಶಕ ಎಂ.ಡಿ ಶ್ರೀಧರ್ ಜ್ಯೋತಿ ಬೆಳಗಿದರು. 
      ಚಿತ್ರದ ನಿರ್ಮಾಪಕರಾದ ಬೋಳ ಅಜಿತ್ ಕಾಮತ್, ಬೋಳ ಶ್ರೀನಿವಾಸ ಕಾಮತ್, ಬೋಳ ಶ್ರೀಪತಿ ಕಾಮತ್, ನಿರ್ದೇಶಕ ಮಂಗಳೂರಿನ ಪ್ರಶಾಂತ್ ಎಸ್, ಅವರ ಗುರು ಎಂ.ಡಿ.ಶ್ರೀಧರ್, ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರದ ಕಾರ್ಯಕಾರಿ ನಿರ್ಮಾಪಕ ದಯಾನಂದ ಕುಲಾಲ್ ಕಡ್ತಲ, ನಿವೃತ್ತ ಪೋಲಿಸ್ ಅಧಿಕಾರಿ ಜಿ.ಎ.ಬಾವಾ, ನಟರಾದ ದ್ರುವ ಸರ್ಜಾ, ತೂಗುದೀಪ್ ದಿನ್‌ಕರ್, ತಬಲಾ ನಾನಿ, ಸನತ್ ಲೋಹಿತಾಶ್ವ, ಸುರೇಶ್ ಆಂಚನ್ ಮೂಡುಬಿದಿರೆ, ಸಿಸಿಲ್ ಕ್ರಿಕೆಟ್ ತಂಡದ ಸದಸ್ಯರು, ಮಂಜು ಮಾಂಡವ್ಯ, ಸಿನಿಟೆಕ್ ಸೂರಿ, ಸೌಂದರ್ಯ ರಾಜನ್, 
     ಸಹಾಯಕ ನಿರ್ದೇಶಕ ರಾಶಿ ನಿಡಿಂಜೆ, ದಿನಕರ್ ಬಜಾಲ್ ಸೇರಿದಂತೆ ಸಿನಿಮಾ ರಂಗದ ಮತ್ತು ಸಿನಿಮಾ ತಂಡದ ಅನೇಕರು ಉಪಸ್ಥಿತರಿದ್ದರು.