ಸುಲ್ತಾನ್ ಟಿಪ್ಪು - ಕುಂದಾಪುರ ಸಮುದಾಯದ ಸರ್ವಾಂಗ ಸುಂದರ ನಾಟಕ


ಕುಂದಾಪುರ ಸಮುದಾಯ ಪ್ರಸ್ರುತ ಪಡಿಸಿದ 'ಸುಲ್ತಾನ್ ಟಿಪ್ಪು' ನಾಟಕ  ಇತ್ತಿಚಿಗೆ ನಗರದ  ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಪ್ರದರ್ಶನಗೊಂಡಿತು. ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ರಚಿಸಿ, ವಾಸುದೇವ ಗಂಗೇರ ನಿರ್ದೇಶಿಸಿರುವ  ನಾಟಕ ಜನಮನ್ನಣೆ ಪಡೆಯುವಲ್ಲಿ ಯಶಸ್ವಿಯಾಯಿತು.


     
       ಎಚ್.ಎಸ್.ಶಿವಪ್ರಕಾಶರು ಟಿಪ್ಪು ಸುಲ್ತಾನರನ್ನು ರೂಪಿಸಿದ್ದು, ಆತನು ಇತಿಹಾಸದಲ್ಲಿ ಆಗಿ ಹೋದ ಬರೀ ಒಬ್ಬ ವ್ಯಕ್ತಿಯ ರೀತಿಯಲ್ಲಲ್ಲ, ಬದಲಾಗಿ ತನ್ನಾಳ್ವಿಕೆಯ ರಾಜ್ಯದ ಎಲ್ಲಾ ಸಂಪತ್ತನ್ನು ಸೂರೆಗೊಂಡು, ಅದರ ಮೇಲೆ ಆಧಿಪತ್ಯ ಮೆರೆಯುವ ದಾಷ್ಟ್ರ್ಯದ ವಿರುದ್ಧ ಸೆಟೆದು ನಿಂತ ಧೀರ ಸ್ವಾತಂತ್ರ್ಯ ಸೇನಾನಿಯ ಹಾಗೆ. ಟಿಪ್ಪು ಸುಲ್ತಾನರ ಕೊನೆಯ ದಿನಗಳ ಕ್ಷಣಗಳಿಂದ ಆರಂಭವಾಗುವ ಈ ನಾಟಕವು ಟಿಪ್ಪುವಿನ ಜೀವನದ ಮುಖ್ಯ ಘಟನೆಗಳನ್ನೆಲ್ಲವನ್ನೂ ಒಂದೆಡೆ ತಂದು ಪೇರಿಸುವಲ್ಲಿ ಕೃತಿಕಾರರು ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಟಿಪ್ಪುವಿನ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಎದುರು ಸೆಟೆದು ನಿಲ್ಲುವ ವ್ಯಕ್ಕ್ತಿತ್ವ ರೂಪಿಸಲು ಸಹಾಯಕವಾಗುವಂತೆ ಕೃತಿಕಾರರು ಮೀರ್ ಸಾದಿಕ್, ಪೂರ್ಣಯ್ಯ ಇವರನ್ನು ನಮ್ಮ ಮುಂದಿಡುತ್ತಾರೆ. ಬ್ರಿಟಿಷ್ ಕಾಲದ ಭಾರತದ ಇತಿಹಾಸದಲ್ಲಿ ಪ್ಲಾಸಿ ಕದನದ ನಂತರದ ಬೆಳವಣಿಗೆಯಲ್ಲಿ ನಾವು ಕಾಣುವಂತಹ ಸಾಮಾನ್ಯವಾದ ಅಂಶಗಳೆಂದರೆ, ಭಾರತದ ಅರಸೊತ್ತಿಗೆಗಳನ್ನು ಬ್ರಿಟಿಷರು ವಶಪಡಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುವ ಮೀರ್ ಸಾದಿಕ್ ನಂತವರು ಮತ್ತು ಪೂರ್ಣಯ್ಯನಂತವರು.  ಮೀರ್ ಸಾದಿಕ್ ಒಳಗಿದ್ದುಕೊಂಡೇ ತನ್ನ ಸ್ವಾರ್ಥಕ್ಕಾಗಿ ಬ್ರಿಟಿಷರಿಗೆ ಸಹಾಯ ಮಾಡುವ ಪಾತ್ರವಾದರೆ, ಪೂರ್ಣಯ್ಯನವರದು ಬಲಾಢ್ಯರ ಪಾಳೆಯದಲ್ಲಿ ಅಧಿಕಾರ ಪಡೆಯುವ ಲೆಕ್ಕಾಚಾರಗೈಯುವ ಪಾತ್ರ. ಭಾರತದಲ್ಲಿ ಬ್ರಿಟಿಷರು ಅಧಿಕಾರ ಸೂತ್ರ ಹಿಡಿಯುವಲ್ಲಿ ಈ ಎರಡು ರೀತಿಯ ವ್ಯಕ್ತಿತ್ವಗಳನ್ನು ಬ್ರಿಟಿಷರು ಬಲವತ್ತರವಾಗಿ ಬಳಸಿಕೊಂಡಿದ್ದಾರೆ. ಟಿಪ್ಪುವಿನ ಸಂದರ್ಭದಲ್ಲಿ, ಟಿಪ್ಪುವು ಧೀರೋದ್ಧಾತವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಮೀರ್ ಸಾದಿಕ್, ಟಿಪ್ಪುವಿನ ಸೋಲಿಗೆ ಕಾರಣವಾಗುವಂತೆ ಮಾಡುವ ಕುತಂತ್ರಗಳು ಮತ್ತು ಬ್ರಿಟಿಷರು ಅಧಿಕಾರ ಗದ್ದುಗೆ ಹಿಡಿಯುವುದನ್ನು ಮುಂದಾಗಿ ಲೆಕ್ಕಾಚಾರ ಹಾಕಿಕೊಂಡಿರುವ ಪೂರ್ಣಯ್ಯನವರು ದಿವಾನಗಿರಿಗೆ ರಾಜೀನಾಮೆ ನೀಡುವ ಘಟನೆಗಳು, ಟಿಪ್ಪುವಿನ ವ್ಯಕ್ತಿತ್ವವನ್ನು ನಿಜಕ್ಕೂ ಮೇಲ್ಪಂಕ್ತಿಯಲ್ಲಿರಿಸುತ್ತದೆ.
     ಈ ನಾಟಕವನ್ನು ನಿರ್ದೇಶಿಸಿದವರು ಪ್ರಸ್ತುತ ರಂಗಭೂಮಿ ಶಿಕ್ಷಣ ಶಿಕ್ಷಕರಾಗಿರುವ ಶ್ರೀ ವಾಸುದೇವ ಗಂಗೇರರು.  ಸಮುದಾಯದ ಯುವ ಕಲಾವಿದರನ್ನು ಇವರು ರಂಗ ತಾಲೀಮು ಗಳಿಗೆ ಪರಿಣಾಕಾರಿಯಾಗಿ ಬಳಸಿಕೊಂಡಿದ್ದಾರೆ.  ಆರಂಭದ ದೃಶ್ಯ ಮೀರ್ ಸಾದಿಕ್ ಶಾಹಿರ್ದಗಳ ನಡುವೆ ಕಾಣಿಸಿಕೊಂಡು, ಟಿಪ್ಪುವಿನ ಪತನಕ್ಕೆ ಸೈತಾನನ ಗುಣಗಳೆಲ್ಲವನ್ನೂ ಆಹ್ವಾನಿಸಿಕೊಳ್ಳುವುದು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇಡೀ ನಾಟಕವು ತನ್ನ ನಡೆಯ ಓಘವನ್ನು ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಜನಸಾಮಾನ್ಯರ ಪಾತ್ರಗಳೆಲ್ಲವೂ ಟಿಪ್ಪುವಿನ ವ್ಯಕ್ತಿತ್ವÀ್ರಕ್ಕೆ  ಘನತೆ ತುಂಬುವಂತಹ ಪಾತ್ರ ವಹಿಸುತ್ತವೆ. ಗುಂ¥ನ್ನು ಹಲವಾರು ಸಂದರ್ಭಗಳಲ್ಲಿ ರಂಗದ ಮೇಲಿನ ತಾಲೀಮುಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಮೆಚ್ಚಿಗೆಗೆ ಪಾತ್ರವಾಗುತ್ತದೆ. ಇದರ ಜೊತೆಯಲ್ಲಿ ರಂಗಸಜ್ಜಿಕೆ, ಬೆಳಕಿನ ನಿರ್ವಹಣೆ ಪೂರಕವಾಗಿ ಕೆಲಸ ಮಾಡರುತ್ತವೆ.  ಇಡೀ ನಾಟಕದುದ್ದಕ್ಕೂ ಹಿನ್ನೆಲೆ ಸಂಗೀತದ ಅಳವಡಿಕೆ ವಿಶೇಷ ಮಹತ್ವವನ್ನು ನೀಡುತ್ತದೆ.  ಇಲ್ಲಿ ಪ್ರತೀಕ್ ಪೈ ಮತ್ತು ಗೌತಮ್ ಸಾರತ್ಯ ಸ್ತುತ್ಯಾರ್ಹ ಕೆಲಸ ಕೈಗೊಂಡಿರುತ್ತದೆ.
       ಟಿಪ್ಪುವಿನ ಪಾತ್ರ ವಹಿಸಿರುವ ವಿಕ್ರಮ್ ಚೆನ್ನಾಗಿಯೇ ನಟಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಸ್ಟೇಜಿನಲ್ಲಿ ಅವರ ರಾಜಗಾಂಭೀರ್ಯದ ನಡೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದೇ ಹೊತ್ತಿಗೆ, ಟಿಪ್ಪುವು ಭಾವೋದ್ವೇಗಕ್ಕೆ ಒಳಗಾಗುವುದು, ತನ್ನ ತಾಯಿಯು ಹೇಳಿದ ಇಮಾಮ್ ಹುಸೇನರ ಕತೆಯನ್ನು ನೆನಪಿಸಿಕೊಂಡು, ಇಮಾಮ್ ಹುಸೇನರು ಹೇಳಿದ ಸಾಲುಗಳನ್ನು ಹೇಳುವುದು ಮೊದಲಾದ ದೃಶ್ಯಗಳಿಗೆ ರಂಗ ತಾಲೀಮಿನ ಯಾವ ನಡೆ ಅಗತ್ಯವಿದೆಯೋ ಅದಕ್ಕೆ ಹೊಂದಾಣಿಕೆ ಆಗದೇ ಇರುವುದು ಮತ್ತು ಭಾವೋದ್ವೇಗದ ಮಾತುಗಳನ್ನು ಒಸರುವ ಓಘವು ಪ್ರೇಕ್ಷಕರ ಮನಮುಟ್ಟುವಂತೆ ಹಿಡಿಯುವಲ್ಲಿ ಸ್ವಲ್ಪ ಹಿಂದೆ ಸರಿಯುತ್ತದೆ. ಯುವ ಕಲಾವಿದರು ಈ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಾಗುತ್ತದೆ.  ಮೀರ್ ಸಾದಿಕ್ ಪಾತ್ರ ವಹಿಸಿರುವ ಯಶವಂತ್ ಚುರುಕಾಗಿ ನಟಿಸಿದ್ದಾರೆ. ಪೂರ್ಣಯ್ಯನವರ ಪಾತ್ರಕ್ಕೆ ಇನ್ನಷ್ಟು ಪರಿಪೂರ್ಣತೆ ಬೇಕಾಗುತ್ತದೆ. ಗುಂಪು ಪಾತ್ರಗಳು ತುಂಬಾ ಲವಲವಿಕೆಯಿಂದ ನಟಿಸಿದ್ದು ಇಡೀ ನಾಟಕಕ್ಕೆ ಜೀವ ತುಂಬುತ್ತದೆ.

      ಚೈತ್ರಾ ಎಂ. ಭಾವೋದ್ವೇಗಕ್ಕೆ ಒಳಗಾಗಿ ನುಡಿಯುವುದು, ಆಕೆಯ ಹಾವಭಾವ ಲಕ್ಷ್ಮೀ ಅಮ್ಮಣ್ಣಿಯ ಪಾತ್ರಕ್ಕೆ ಜೀವಂತಿಕೆ ತುಂಬುವಲ್ಲಿ ಯಶಸ್ವಿಯಾಗಿದೆ.
 ಸಯ್ಯದ್ ಗಫಾರ್, ರಝಾಖಾನ್ ಮತ್ತು ಜನಸಾಮಾನ್ಯರು ಟಿಪ್ಪುವಿನ ಮೇಲಿಡುವ ಅಪಾರವಾದ ನಿಷ್ಠೆ, ಆತನನ್ನು ಮಾನವೀಯ ಮೌಲ್ಯಗಳನ್ನು ಸ್ಫುರಿಸುವ ಜನಾನುರಾಗಿಯಾಗಿಸುತ್ತದೆ.
    ಆತನು ಧರ್ಮನಿಷ್ಠನಾಗಿ ಸದಾ ಫರ್ವರ್ದಿಗಾರನ ಮೇಲಿಡುವ ವಿಶ್ವಾಸ ಯಾವತ್ತೂ ಮತಾಂಧತೆಗೆ ಎಡೆಮಾಡದೇ ಇರುವುದು ಸಮಾಜದ ಅತೀ ದೊಡ್ಡ ವಿಭಾಗದ ರೈತ ಸಮುದಾಯಕ್ಕೆ ಆತನು ಮಾಡಿದ ಮಹತ್ತರ ಸಹಾಯ ಸಾಕ್ಷಿಯಾಗಿರುತ್ತದೆ. ಸಣ್ಣ ಸಣ್ಣ ಸಾಮಂತರುಗಳನ್ನು ತನ್ನ ಆಡಳಿತದ ತೆಕ್ಕೆಯಲ್ಲಿಟ್ಟುಕೊಂಡಿರುವುದು ಕೂಡ ಆ ಕಾಲದ ರಾಜಕೀಯ ಜಾಯಮಾನಕ್ಕೆ ತಕ್ಕುದಾಗಿಯೇ ಇರುವ ರೀತಿಯಲ್ಲಿಯೇ ಎನ್ನವುದನ್ನು ಗಮನಿಸಬೇಕಾದ ಅಂಶ. ಆತ ಪ್ರಪಂಚದ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನಷ್ಟೇ ಅಲ್ಲ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಎದುರು ಜಯ ಗಳಿಸಬೇಕಾದರೆ ಅವರಷ್ಟೇ ಶಸ್ತ್ರಾಸ್ತ್ರಗಳ ಬಲವೊಂದಿರುವ ಫ್ರೆಂಚರ ಮೈತ್ರಿ ಬೆಳೆಸಿಕೊಳ್ಳುವ ಮಟ್ಟಕ್ಕೆ ಆತ ಯೋಚಿಸುವುದು, ಆತನು ಒಬ್ಬ ಚಾಣಾಕ್ಷ ರಾಜಕೀಯ ಮುತ್ಸದ್ದಿಯೂ ಹೌದೆನಿಸುತ್ತದೆ. ಮೊದಲ ಯುದ್ಧದಲ್ಲಿ ಬ್ರಿಟಿಷರನ್ನು ಸೋಲುಣಿಸಿದ ನಂತರ ರಾಜ್ಯದ ಪರಿಸ್ಥಿತಿಯನ್ನರಿತು, ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಆತನ ಯೋಜನೆಯೂ ಕೂಡಾ ಆತ ಬರೀ ಯುದ್ಧವನ್ನು ಬಯಸುವುದು ಬ್ರಿಟಿಷರನ್ನು ತನ್ನ ನೆಲದಿಂದ ಓಡಿಸುವುದಕ್ಕಷ್ಟೇ ಎಂದು ಸಾಬೀತುಗೊಳಿಸುತ್ತದೆ.  ಆತನ ಕೊನೆಗಾಲದಲ್ಲಿ, ಈ ಅಂಶವನ್ನೇ ಮನಗೊಂಡು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಟಿಪ್ಪುವನ್ನು ವೈಯುಕ್ತಿಕವಾಗಿ ಬಗ್ಗು ಬಡಿಯುವ ನಿಟ್ಟಿನಲ್ಲಿ ಬ್ರಿಟಿಷರು ಆತನ ಇಬ್ಬರು ಎಳೆ ಮಕ್ಕಳನ್ನು ಒತ್ತೆ ಇಡಲು ತಿಳಿಸಿದಾಗಲೂ, ಆತ ತನ್ನ ಹೃದಯವನ್ನು ಗಟ್ಟಿ ಮಾಡಿ, ಒಪ್ಪಿಗೆ ಸೂಚಿಸುವಂತದ್ದು ಆತನಿಗೆ ತನ್ನ ಯೋಜನೆಯ ಮೇಲಿನ ಅತುಲವಾದ ವಿಶ್ವಾಸದಿಂದ.  ಇಲ್ಲಿ ಟಿಪ್ಪುವಿನ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಲ್ಲುವ ವ್ಯಕ್ತಿತ್ವ ಕಾಣಿಸಿಕೊಳ್ಳುವುದು.  ಒಪ್ಪಂದ ತಾತ್ಕಾಲಿಕವಾದುದು, ತನ್ನಿಚ್ಛೆ ನೆರವೇರಿಯೇ ನೆರವೇರುತ್ತದೆ ಎಂದು ಅದಮ್ಯವಾಗಿ ನಂಬಿದ ಧೀರೋದ್ಧಾತ ವ್ಯಕ್ತಿಯೆಂದು ಈ ಘಟನೆಗಳು ಸಾರಿ ಹೇಳುತ್ತವೆ. ಆದರೆ ಮೀರ್ ಸಾದಿಕನ ಕರಾಮತ್ತು ಈ ಉದ್ದೇಶದಲ್ಲಿ ಟಿಪ್ಪುವು ಸಫಲನಾಗಲು ಬಿಡುವುದಿಲ್ಲ. ಬದಲಾಗಿ ಮೀರ್ ಸಾದಿಕ್ ಪೂರ್ಣಯ್ಯನಂತಹ ಲೆಕ್ಕಾಚಾರದ ಅಧಿಕಾರಿಗಳನ್ನು ನಿಷ್ಠಾಂತರಗೊಳ್ಳುವಂತೆ ಮಾಡುವಲ್ಲಿ ಸಫಲನಾಗುತ್ತಾನೆ.  ಟಿಪ್ಪು ಸುಲ್ತಾನ್ ದುರಂತದ ಅವಸಾನ ಹೊಂದಿದರೂ, ನಾಟಕದ ಕೊನೆಯಲ್ಲಿ ಹೇಳುವ ಸಂದೇಶದಂತೆ, ಸ್ವಾತಂತ್ರ್ಯಕ್ಕಾಗಿ ತವಕಿಸಿ, ರಣರಂಗದಲ್ಲಿ ಮಡಿದ ನಾಡಿನ ಇಂತಹ ವೀರಮಣಿಗಳ ಸಮಾಧಿಯ ಮೇಲೆ ಹುಟ್ಟಿ ಬರುವ ಗುಲಾಬಿ ಗಿಡಗಳು ತನ್ನ ಸಾವಿರಾರು ಹೂವುಗಳ ಮೂಲಕ ಇಂತಹ ವೀರರ ಸ್ವಾತಂತ್ರ್ಯ ಸಂದೇಶದ ಕಂಪನ್ನು ನಾಡಿನ ತುಂಬೆಲ್ಲಾ ಹರಡುವಂತಾಗಬೇಕು.
       ವೇಷಭೂಷಣ ಟಿಪ್ಪುವಿನ ಕಾಲವನ್ನು ನೆನಪಿಸಲು ಸಹಾಯಕವಾಗುತ್ತದೆ. ಆದರೆ ವೇಷಭೂಷಣ ಪಾತ್ರಗಳ ವಯೋಮಾನಕ್ಕೆ ತಕ್ಕುದಾಗಿಯೇ ಇರುವಂತೆ ಜಾಗರೂಕತೆ ವಹಿಸುವುದು ಅವಶ್ಯಕ. ಟಿಪ್ಪುವಿನ ಕೊನೆಯ ಕಾಲದಲ್ಲಿ ಆತನನ್ನು ಯುವಕನಂತೆಯೇ ತೋರಿಸುವುದು ಸೂಕ್ತವಲ್ಲ.  ಇದು ನಾಟಕದ ಉದ್ದಕ್ಕೂ ಗೋಚರಿಸುವಂತಾಗುವುದಿಲ್ಲವಾದರೂ, ಆತ ರಣರಂಗದಲ್ಲಿ ಮಡಿದು ಬಿದ್ದಿರುವಾಗ, ತಲೆಯ ಮೇಲಿನ ಶಿರಸ್ತ್ರಾಣ ಕಳಚಿ ಬಿದ್ದಿರುವಾಗ, ಆತನ ಬೊಕ್ಕ ತಲೆಯು ಕಾಣಿಸುವಂತಿರಬೇಕಿತ್ತು.  ಈ ಸೂಕ್ಷ್ಮಗಳು ನಾಟಕದ ದೃಶ್ಯ ಸಂವೇದನೆಗೆ ಅವಶ್ಯ ಸರಕುಗಳಾಗುತ್ತವೆ.

   ನಾಟಕದಲ್ಲಿ ಮಹತ್ವದ ಪಾತ್ರ ವಹಿಸುವುದು ಎಚ್.ಎಸ್.ಶಿವಪ್ರಕಾಶರು ಸಂಭಾಷಣೆಗೆ ಬಳಸುವ ಬಾಷೆ. ಈ ಭಾಷೆ ಕೃತಿಕಾರರ ಸ್ವಂತದ್ದಾಗಿರದೇ, ಎಲ್ಲಾ ತರದಲ್ಲೂ ಟಿಪ್ಪುವಿನ ಮತ್ತು ಟಿಪ್ಪುವಿನ ಪರಿಸರದ ಸಂಸ್ಕೃತಿಗೆ ಒಪ್ಪಗೊಳ್ಳುವ ಭಾಷಾ ಸಂಕಲನವಾಗುವಂತೆ ನೋಡಿಕೊಂಡಿರುವುದು ಗಮನಾರ್ಹವಾದುದು.  ಬಹುಸಂಸ್ಕೃತಿಯ ಭಾರತದಲ್ಲಿ, ಭಾರತದ ಒಕ್ಕೂಟ ವ್ಯವಸ್ಥೆಯು ಒಪ್ಪಿಕೊಂಡಿರುವ,ಒಳಗೊಳಿಸಿಕೊಳ್ಳುವ ಕಾರ್ಯಕ್ರಮಕ್ಕೆ ಪೂರಕವಾದುದು ವೈವಿಧ್ಯಮಯವಾದ ಸಂಸ್ಕೃತಿಯ ಅಭಿವ್ಯಕ್ತಿಗೆ ಅವಕಾಶವೊದಗಿಸುದೇ ಆಗಿರುತ್ತದೆ.  ಶಿಕ್ಷಣ ಕ್ಷೇತ್ರದಲ್ಲೂ ಒಳಗೊಳಿಸಿ ಕೊಳ್ಳುವ ಶಿಕ್ಷಣದಲ್ಲಿ ಇಂತಹ ಅಂಶಗಳಿಗೆ ಮಹತ್ವದ ಸ್ಥಾನವಿದೆ.
 ಒಟ್ಟಂದದಲ್ಲಿ ಟಿಪ್ಪು ನಾಟಕವು ಕುಂದಾಪುರದ ಜನತೆಗೆ ರಂಗತಾಲೀಮಿನ ನವನವೀನ ಮಾದರಿಗಳನ್ನು ಪ್ರೇಕ್ಷಕರ ಮುಂದಿಟ್ಟು, ಧನಾತ್ಮಕ ಸಂವೇದನೆಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕುಂದಾಪುರ ಸಮುದಾಯವು ಪ್ರದರ್ಶಿಸಿದ ಈ ನಾಟಕವು ಸರ್ವಾಂಗ ಸುಂದರವಾಗಿ ಹೊರಹೊಮ್ಮಿದೆ ಎನ್ನಲು ಅಡ್ಡಿಯಿಲ್ಲ.
ನಾಟಕ ವಿಮರ್ಶೆ: ಕೆ.ಶಂಕರ ಖಾರ್ವಿ
ಉಪಪ್ರಾಂಶುಪಾಲರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ಉಡುಪಿ.