ಕಥೆ: ಬದುಕ ಪ್ರೀತಿಸಿದ ಬಡವರ ಮಕ್ಕಳು


   ರೈಲು ಮಯ್ಸೂರು ನಿಲುದಾಣ ತಲುಪುತ್ತಲೆ ಕಟ್ಟೆಯೊಡಕೊಂಡು ಧುಮುಗುಡುವ ನೀರಂತೆ ಸಾವಿರ ಸಾವಿರ ಜನಗಳು ಹರಿಯಲು ತೊಡಗಿದರು. ಹಳ್ಳಿಬಿಟ್ಟು ಪೇಟೆಗಳ ಒಡನಾಟವಿಟ್ಟುಕೊಂಡ ನನಗೀಗ ಇಂತಹ ಹರಿವೆಲ್ಲ ಮಾಮೂಲಾಗಿಬಿಟ್ಟಿತ್ತು. ಇಂದು ಇಂಥದೊಂದು ಹರಿವಿಗೆ ಹೊಸದಾಗಿ ಸೇರಿಕೊಂಡ ನನ್ನ ವಿದ್ಯಾರ್ಥಿ ಗೆಳೆಯರಾದ ಕಾವ್ಯ ಮತ್ತು ಶಶಿಕಲಾರಿಗೆ ಇದು ಅಪರೂಪದ ಘಟನೆ. ಅವರ ಚಿಕ್ಕ ಕಣ್ಣುಗಳು ಬೆರಗಲ್ಲಿ ಅಷ್ಟನ್ನೂ ತುಂಬಿಕೊಳ್ಳಲು ಯತ್ನಿಸಿದರೂ ಹಿಡಿತಕ್ಕೆ ಸಿಗದವುಗಳ ಬಿಟ್ಟು ನನ್ನೊಡನೆ ನಡೆದಿದ್ದರು. ಮಯ್ಸೂರಿಂದ ಮೂವತ್ತು, ನಂಜನಗೂಡಿಂದ ಹತ್ತು ಮೈಲಿ ದೂರವಿರಬಹುದಾದ ಪುಟ್ಟ ನೇರಳೆ ಎಂಬೂರಿನ ಮಕ್ಕಳಿವರು. ನಂಜನಗೂಡು ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದ್ದರಿಂದ ಮಯ್ಸೂರಿಗೆ ದೂರವಾಗೇ ಉಳಿದು ಹೋದವರು.

   ನಂಜನಗೂಡ ದಿಕ್ಕಿಂದ ಮಯ್ಸೂರು ಆರಂಭವಾಗುವುದು ಹೊಸದಾದ ವಿಮಾನ ನಿಲ್ದಾಣದಿಂದ. ವಿಮಾನಗಳು ಬಾರದಿದದರೂ ಆ ವಿಶಾಲ ಬೋಳು ಬಯಲೊಳಗೆ ಹೊಗುವುದಕ್ಕೆ ಶ್ರೀಮಂತಿಕೆ ಕಡ್ಡಾಯ ಎಂಬ ಅಲಿಖಿತ ಫಲಕವ ದೂರದಿಂದಲೆ ಮಿಂಚಿಸುವಂತೆ ಫಳಗುಡುತತ ಅಲ್ಲಿಯ  ಕಟ್ಟಡದ ಗಾಜುಗಳಿದ್ದವು. ಅದೇ ನಿರ್ಜೀವ ಬಯಲಾಚೆ ಎರಡು ಉಕ್ಕಿನ ಕಂಬಿಗಳ ಹಾಸಿಕೊಂಡು ಸಾವಿರಾರು ದೀನರ ಹಮಾಲಿಗಳ ಕೂಲಿಗಳ ತುಂಬಿಕೊಂಡು ರೈಲೊಂದು ತುಂಬಿ ತುಳುಕುತ್ತ ದಿನಕ್ಕೆರಡು ಸಲ ಜೀವಂತಿಕೆಯೆಂಬುದೇ ನಡೆದಾಡಿದಂತೆ ಹಾಯುವುದು. ವಿಮಾನ ನಿಲ್ದಾಣ ಸಮೀಪ ಓಡುವಾಗ ಬುಸ್ಸೆಂದು ಹೊಗೆಯ ಹೂಸುಬಿಟ್ಟು ಕೇಕೆ ಹಾಕಿಯೇ ಸಾಗುವುದು ರೈಲಿನ ದಿನಚರಿಯಾಗಿತ್ತು. ಆ ಕೇಕೆಯೋ ಚಾಮುಂಡಿ ಬೆಟ್ಟಕ್ಕಪ್ಪಳಿಸಿ ಆ ಫಳಗುಡುವ ಗಾಜುಗಳಲ್ಲಿ ಮಾರ್ದನಿಸಿ ಹಂಗಿನಾಟವೊಂದು ನಡೆದಾಗಲೇ ರೈಲಿನೊಳಗೊಂದು ಲವಲವಿಕೆಯೇಳುವುದು. ಇದೇ ರೈಲಿನಲ್ಲಿಯೆ ಕಾವ್ಯ ಶಶಿಕಲಾರಂತಹ ಸಾವಿರಾರು ಮಕ್ಕಳ ಅಪ್ಪಂದಿರು ತಮ್ಮ ಹೊಲದಲ್ಲಿ ಕಾಯಕ ಮಾಡಲಾಗದೆ ಕೂಲಿಯನರಸಿ ರಾಜನಗರಿಗೆ ದಿನವೂ ಬಂದು ಹೋಗುತ್ತಿರುತ್ತಾರೆ. ಮುಂಜಾನೆ ರೈಲು ನಿಲ್ದಾಣದಲ್ಲಿ ಗಿಜಿಗುಟ್ಟಿ ಹರಿದು ಮಯ್ಸೂರ ಮಾಯೆಯ ಮದ್ಯಾಹ್ನದಲ್ಲೆಲ್ಲೋ ಕಳೆದುಹೋಗಿ ಮತ್ತೆ ಇವರೆಲ್ಲ ಕೂಡುವುದು ಸಂಜೆ ಊರ ಕಡೆ ಓಡುವ ರೈಲಿಗಾಗಿ. ಸಾವಿರ ಸಾವಿರ ಹೊಟ್ಟೆಗಳ ಕೂಳಿಗಾಗಿ ಈ ಮಹಾವಾಹನವು ದಿನವೂ ಓಡಾಡುವುದರಿಮದಲೇ ಹಲವು ಹಳಳಿಗಳು ಹಸಿವಿಗೆ ಅನ್ನದ ಪೆಟ್ಟು ಕೊಡುವುದು ಸಾಧ್ಯವಾಗಿದೆ. ಅದ್ಯಾರೋ ಬುದ್ಧಿವಂತರು ಇದಕ್ಕೆ ಕೂಲಿರೈಲು ಎಂಬ ಹೆಸರಿಟ್ಟಿರುವುದು ಮೆಚ್ಚುಗೆಗೋ ಕುಹಕಕ್ಕೋ ತಿಳಿಯದು.

       ನಾವು ಮೂವರೂ ಕೂಡ ಈ ಕೂಲಿರೈಲಿನೊಳಗೆ ಓಡಿಕೊಂಡು ಮಯ್ಸೂರ ತಲುಪಿ ನಗರದ ಮಾಯೆಯೊಳಗೆ ಕರಗದೆ ಉಳಿದೆವು.
“ಯಿ ಮಯ್ಸೂರು ಸಿಟಿಗ ಬಂದ್ರ ಬಡೂರೇ ಕಾಣ್ಸುದಿಲ್ಲ ಅಲ್ವಾ ಸಾ?” ಎಂದು ಕಾವ್ಯ ಸಿಟಿಗಳ ಬಗೆಗಿನ ತನ್ನ ಆತಂಕವ ತೋರಿದಳು.
“ಯಾಕವ್ವ ನಾವಿದ್ದೀವಲ್ಲ ಮೂವರು” ಎಂದೆ.
“ಅಂಗಲ್ಲ ಸಾ, ನಾವೀಗ ಇರ್ತೀವಿ ಆಮ್ಯಾಕ ಓಯ್ತೀವಿ. ಆದ್ರ ಟ್ರೇನೊಳ್ಗ ಬಂದವ್ರಲ್ಲ ಅಂತ ಸಾವ್ರಾರು ಜನ್ಗಳ ತರದ ಒಬ್ರೂವಿ ಇಲ್ಲಿ ಕಾಣ್ಸೂದಿಲ್ಲ. ಇಲ್ಲಿ ಓಡಾಡ್ತಿರೋನ್ನ ನೋಡುದ್ರ ಎಲ್ರೂವಿ ಶ್ರೀಮಂತ್ರ ತರಾನೇ ಕಾಣಸ್ತವ್ರ.”
“ಹೂಂ ಕಾವ್ಯ ಸಿಟಿಗಳಲ್ಲಿ ಶ್ರೀಮಂತ್ರು ಇರ್ತಾರೆ ನಿಜ. ಆದ್ರೆ ನೀ ಹೇಳಿದ್ಯಲ್ಲ ಶ್ರೀಮಂತ್ರ ತರ ಕಾಣ್ಸೋರು ಅಂತವರ ಸಂಖ್ಯೆ ನಿಜವಾದ ಶ್ರೀಮಂತರಕ್ಕಿಂತ್ಲೂ ಹೆಚ್ಚಿಗೆ ಇರುತ್ತೆ.”
“ಆದ್ರೂವಿ ಯಿ ಸಿಟಿನಲ್ಲಿ ಬಡೋರು ಬದ್ಕೋದು ಕಷ್ಟನೇಯಾ. ನಂ ನೇರಳೇಲಿ ಎಲ್ರೂವಿ ಬಡೋರು. ಎಷ್ಟ್ ಚೆನ್ನಾಗಿದ್ದೀವಿ ಗೊತ್ತಾ ಸಾ. ಇಂತಾ ಸಿಟಿಗಳನ್ನು ನೋಡ್ದಾಗ್ಲೀಯ ನಮ್ಗ ನಾವು ಬಡವರು ಅನ್ಸೋದು. ಅದ್ಕ ಬಡವರು ಸಿಟಿ ನೋಡ್ಬಾರದು ಸಾ” ಶಶಿಕಲಾ ತನ್ನೂರನ್ನು ಮೆಚ್ಚಿಕೊಂಡು ಮಾತಾಡಿದಳು.
“ನಿಜವಾಗ್ಲೂ ಸಿಟೀನಲ್ಲಿ ಬಡೋರು ಇರಲ್ವಾ ಸಾ” ಕಾವ್ಯಳಿಗೆ ಬಗೆಹರಿಯದ ಅನುಮಾನ.
“ಖಂಡಿತಾ ಇರ್ತಾರೆ ಆದ್ರೆ ನಾವೀಗ ಹೋಗ್ತಾ ಇರೋ ಈ ದೇವರಾಜ ಅರಸು ರಸ್ತೇಲಿ ಬಡವರು ಇರಲ್ಲ.”
“ದೇವರಾಜ ಅರಸು ಅಂದ್ರೆ ಮುಖ್ಯಮಂತ್ರಿ ಆಗಿದ್ರಲ್ಲ ಅವ್ರ ಸಾ?”
“ಹುಂ ಅವರೆ. ಅವರದಲ್ಲ ರಸ್ತೆ ರಸ್ತೆಗೆ ಅವರ ಹೆಸರಷ್ಟೆ. ಮಯ್ಸೂರಲ್ಲಿ ಅತ್ಯಂತ ಶ್ರೀಮಂತ ರಸ್ತೆಗೆ ಅವರ ಹೆಸರಿಟ್ಟಿದ್ದಾರೆ, ಅತ್ಯಮತ ಕೊಳಕು ಕಾಲೋನಿಗೂ ದೇವರಾಜ ಅರಸು ಅಂತ ಹೆಸರಿಟ್ಟಿದ್ದಾರೆ.”
“ಬಡವರು ಇಲ್ಲಿರಲ್ಲ ಯಾಕ?” ಮಕ್ಕ್ಳಿಗೆ ಕುತೂಹಲ.
“ಯಾಕೆ ಅಂದ್ರೆ ಇಲ್ಲಿಯ ಶ್ರೀಮಂತಿಕೆ. ನಿಮ್ಮ ಅಪ್ಪಂದಿರ ದಿನದ ಕೂಲಿಗೆ ಇಲ್ಲಿಯ ಅಂಗಡಿಗಳಲ್ಲಿ ಒಂದು ಮಕ್ಕಳ ಚಡ್ಡಿ ಕೂಡ ಸಿಗೋದಿಲ್ಲ.”
ಗಾಜೊಳಗೆ ಬಚ್ಚಿಟ್ಟುಕೊಂಡ ಅಲ್ಲಿನ ಅಂಗಡಿಗಳ ವೈಭವ ಕಂಡು ದಿಗಿಲಾಗಿರಬೇಕು. ಸುಮ್ಮನೆ ನೋಡುತ್ತಾ ನೋಡುತ್ತಾ ನಡೆದು ನಡೆಯುತ್ತಲೆ ನಾವು ಸೇರಬೇಕಾದ ಬಾಲಮೇಳದ ತಾವಿಗೆ ಬಂದೆವು. ಅದೊಂದು ಸರ್ಕಾರಿ ಶಾಲೆಯ ಆವರಣ. ಅದೂ ಕೂಡ ಮಯ್ಸೂರೆ. ಆದರೆ ನಾವೀಗ ಕಂಡು ಬಂದ ಮಯ್ಸೂರಿನ ಯಾವ ಚಹರೆಯೂ ಇಲ್ಲದ  ನನ್ನ ಗೆಳೆಯರಿಬ್ಬರು ಇಷ್ಟೊತ್ತು ಅರಸುತ್ತಿದ್ದ ಬಡ ಮಯ್ಸೂರು. ಅಲ್ಲಿ ಚೀರಿಕೊಂಡು ಗೊಣ್ಣೆ ಸುರಿಸುತ್ತಾ ಓಡಾಡಿಕೊಂಡಿದ್ದ ಮಕಕಳ ಕಾವ್ಯಳಿಗೆ ತೋರಿಸಿ “ನೀನು ಕೇಳ್ತಿದ್ಯಲ್ಲ ಅಂಥವರ ಮಕ್ಕಳಿವರು” ಎಂದೆ. ಬಡವರ ಮಕ್ಕಳು ಇನ್ನೂ ಸಿಟಿಗಳಲ್ಲಿ ಬದುಕಿದ್ದಾರೆ ಎಂದು ಸಮಾಧಾನವಾಗಿರಬೇಕು. ಕಾವ್ಯ ತಲೆಯಾಡಿಸಿದಳು.
     “ಸರ್ ಆ ರೋಡಿಗ ದೇವರಾಜ ಅರಸು ಅಂತ ಹೆಸ್ರು ಮಡ್ಗಿದ್ರಲ್ಲ. ಮತ್ತೆ ಇಲ್ಲಿಗ ಯಾನ್ ಹೆಸ್ರು?” ಶಶಿಕಲಾ ಕೇಳಿದಳು. “ಕುಕ್ಕರಹಳ್ಳಿ” ಎಂದೆ. ಅವರಿಬ್ಬರೂ ಮುಖ ಮುಖ ನೋಡಿಕೊಂಡು ನಕ್ಕರು. ‘ಸಿಟಿಯೊಳ್ಗೂ ಹಳ್ಳೀನಾ?’ ಎಂದುದಕ್ಕೆ ನಾನೂ ನಕ್ಕೆ. ಈ ಮಕ್ಕಳು ನಗರಗಳನ್ನು ಬಡತನದ ಕಣ್ಣಿಂದಲೇ ನೋಡುವರಲ್ಲ! ಬಹುಶಃ ಅವರಿಗಿದು ಬಡತನವೇ ಕಲಿಸಿದ ಪಾಠವಿರಬೇಕು. 
ಬಾಲಮೇಳ ಮುಗಿಸಿಕೊಂಡು ಮತ್ತೆ ನಾವು ರೈಲು ನಿಲ್ದಾಣ ತಲುಪಿದಾಗ ಬಿಸಿಲು ಏರು ಜವ್ವನ ಕಳೆದುಕೊಂಡು ಬಾಗುತ್ತಿತ್ತು.
“ಕಾವ್ಯ ಕಾಫಿ ಕುಡಿಯೋಣವಾ?”
“ನಾ ಕುಡಿಯಲ್ಲ ಸಾ”
“ಶಶಿಕಲಾ?”
“ಕುಡಿತಿನಿ”
“ಹಾಗಾದರೆ ಟೀ ಕುಡಿತೀಯಾ ಕಾವ್ಯ?”
“ಇಲ್ಲ ಸಾ ನಾ ಯಾನೂ ಕುಡಿಯಲ್ಲ”
“ಯಾಕವ್ವ?”
ಸ್ವಲ್ಪ ಅನುಮಾನಿಸಿದ ಕಾವ್ಯ ನಂತರ “ನಂ ಹಟ್ಟೀಲಿ ಟೀ ಕಾಯ್ಸೋದು ಅಪ್ರೂಪಕ್ಕ. ಅಪ್ಪನ ಕಯ್ಗ ಕಾಸು ಬಂದಾಗ ಮಾತ್ರ ಹಾಲು ಬುಡಿಸ್ಕತೀವಿ. ಆಗ ಟೀನೋ ಕಾಫೀನೋ ಕಾಯಿಸ್ಕತೀವಿ. ಕಾಸಿಲ್ದಿದ್ರ ಯಾನು ಇಲ್ಲ. ಅದ್ಕ ಅಭ್ಯಾಸನೇ ಮಾಡ್ಕಂಡಿಲ್ಲ ಸಾ”
“ಅಪ್ಪ ಏನ್ ಕೆಲಸ ಮಾಡ್ತಾರೆ?”
“ಬೇರೆಯವರ ಹೊಲದಲ್ಲಿ ಕೂಲಿ ಮಾಡ್ತಾರ. ನಾವಿರೋದು ನಮ್ಮ ಚಿಕ್ಕಪ್ಪನ ಮನಾಲಿ. ನಮ್ಗ ಮನ ಇಲ್ಲ.”
“ಅಮ್ಮ ಏನ್ ಮಾಡ್ತಾರೆ?”
“ನಂಗ ಅಮ್ಮ ಇಲ್ಲ”
ಇಡೀ ರೈಲು ನಿಲ್ದಾಣ ಅರೆಕ್ಷಣ ಸ್ತಬ್ದವಾಗಿ ಕಾವ್ಯಳ ಅಂತರಾಳದ ಪಿಸುದನಿಯನ್ನು ಆಲಿಸಿತು. ಅಲ್ಲಿ ಆ ಪುಟ್ಟ ಹೃದಯ ಬಿಕ್ಕಿ ಬಿಕ್ಕಿ ಅಳುತ್ತಿತ್ತು.
ಒಮ್ಮೆಲೆ ಕಿರುಚಿಕೊಂಡ ರೈಲು ಬೆನ್ನು ಮಾಡಿ ಕುಳಿತಿದ್ದ ನಾವು ಮೂವರನ್ನು ಹಿಂದೆ ಹಿಂದಕ್ಕೆಳೆಯುತ್ತಾ ಡಬ್ಬಿಗಳನ್ನು ಎಳೆದುಕೊಂಡು ಮುಂದಕ್ಕೆ ಓಡತೊಡಗಿದ್ದೇ........
ಹೀಗಾಯ್ತು,
  ಸಾವಿರದೊಂಬೈನೂರ ಎಂಬತ್ತನೆ ಇಸವಿಯ ಯಾವುದೋ ಒಂದು ದಿನ ಆ ಗಂಡು ಮಗು ಹುಟ್ಟುತ್ತದೆ. ಆ ಮಗುವಿಗಾಗಲೆ ಅಕ್ಕ ಹುಟ್ಟಾಗಿತ್ತು. ತಂಗಿಯರು ಹುಟ್ಟುವವರಿದ್ದರು. ತಿಂಗಳ ಬೆಳಕಿರದ ಅಮವಾಸ್ಯೆಯ ಕಪ್ಪು ರಾತ್ರಿಯಲ್ಲಿ ಹುಟ್ಟಿ ಅದೇ ಬಣ್ಣವ ತಾನೂ ಧರಿಸಿಕೊಂಡು ಬಂದ ಮಗುವಿಗೆ ಮನೆಯವರು ಹೆಸರಂತ ಒಂದು ಇಟ್ಟಿದ್ದರೂ ಸಿಕ್ಕ ಸಿಕ್ಕವರು ಸಿಕ್ಕ ಹಾಗೆ ಕರೆದು “ಕರಿಯ” ಎಂಬುದು ಕಾಯಂ ಆಗುಳಿಯಿತು.

ಈ ಕರಿಯನಿಗೆ ಸಿಹಿಯೆಂದರೆ ಮೆಚ್ಚು. ಸಿಹಿ ಇದೆಯೆಂದರೆ ಬೇರೆ ಏನನ್ನೂ ಮುಟ್ಟದಷ್ಟು ಹುಚ್ಚು. ಮನೆಯಲ್ಲಿನ ಸಿಹಿ ತಿಂಡಿಗಳಾದ ಸಕ್ಕರೆ ಅಪರೂಪದ ಬೆಲ್ಲ ಕದಿಯುವುದರಲ್ಲಿ ಇರುವೆಗಿಂತಲೂ ನಿಪುಣ. ಹೀಗಾಗಿ ಅವನ ಹಲ್ಲುಗಳಲ್ಲಿ ಹುಳಗಳು ಕಾಯಂ ನಿವಾಸಿಗಳಾಗಿಬಿಟ್ಟಿದ್ದವು. ಅವನ ಸಿಹಿಯ ಚಪಲ ತಿಳಿದುಕೊಂಡಂತೆ ಒಮ್ಮೆ ಇದ್ದಕ್ಕಿದ್ದಂತೆ ಅಷ್ಟಮಿ ಬಂದುಬಿಡ್ತು. ವರ್ಷಂಪ್ರತಿ ಅಷ್ಟಮಿಯ ಪಾಯಸ ಬೇಡಲು ಹೋಗುತ್ತಿದ್ದ ಕರಿಯನ ಮಾಯಿ ಅವನನ್ನೂ “ನಮ್ಮೊಟ್ಟಿಗೆ ಬಪ್ಪಿಲೆ ಹುಡ್ಗ” ಎಂದು ಸಂಗ್ತಿಗೆ ಕರೆದಳು. ಈಗಷ್ಟೇ ಶಾಲೆಯ ಮುಖ ನೋಡಿದ ಚಿಕ್ಕ ಕರಿಯನಿಗೆ ಅದು ಮೊದಲಿ ಅಷ್ಟಮಿ. ಅದಾಗಲೆ ಹಲವಾರು ಅನುಭವಸ್ತರು ತಮ್ತಮ್ಮ ಪಾತ್ರೆ ಹಿಡಿದು ಹಾದಿಬದಿಯಲಲಿ ಸೇರಿಯಾಗಿತ್ತು. ಕರಿಯ ತಾನೂ ಒಂದು ದೊಟ್ಟ ಬೋಗುಣಿ ಹೊತ್ತುಕೊಂಡು ಓಡಿದ. ಅದ ಕಂಡು ಅವರೆಲ್ಲ ಕುಶಾಲು ಮಾಡಿ ನೆಗೆಯಾಡಿ ಹಿರಿಯಳಾದ ಮಾಯಿ “ಹುಡ್ಗ ನಿಂಗೆ  ತಿಂಬೇನಂಬಷ್ಟ್ ಕೊಡುದಿಲ್ಲ. ಸ್ಯಣ್ಣ ಪಾತ್ರು ತಕ್ಕೊ. ನಿನ್ಪಾತ್ರು ಕಂಡ್ಕ ಕಡೀಕೆ ನಮ್ಗೂ ಕೊಡುದಿಲ್ಲ ಆ ಬಟ್ಟಕಳ್” ಎಂಬ ಸಿಟ್ಟಲ್ಲದ ಒಂದು ಆಕ್ಷೇಪಕ್ಕೆ ಕರಿಯನ ಪಾತ್ರೆಯೇ ಸ್ಯಣ್ಣದಾಗಿ ಅವನ ಬಳಗ ಅಷ್ಟಮಿಯ ಪಾಯಸ ಬೇಡಲು ಕಾಲ ಕಿತ್ತಿಟ್ಟಿತು.
ವರಾಹಿ ನದಿಯ ದಂಡೆಯ ಮೇಲೆ ಆ ಊರು ಅತ್ತ ಬೆಳೆಯದೆ ಇತ್ತ ಒಣಗದೆ ಒಂದು ಹದದಲ್ಲಿ ಬದುಕು ಸಾಗಿಸುತ್ತಿತ್ತು. ಆ ಊರ ಒಳಗೆಲ್ಲ ಜನರಿಗಿಂತ ಜಾಸ್ತಿ ದೇವರುಗಳೆ. ಲೋಕನಾಥೇಶ್ವರ, ಮಾರಲಾಂಬೆ, ಮಹಾಗಣಪತಿ ಅವರವರ ಗಣಂಗಳು, ಪರಿವಾರದವರು ಒಂದಷ್ಟು ಬಸದಿಗಳೂ ಇದ್ದು ಅವರವರು ಅವರವರ ಗುಡಿಗಳಲ್ಲಿ  ಪೂಜೆ ಮಾಡಿಸಿಕೊಂಡು ಜಾತ್ರೆ ಹಬ್ಬ ಮಾಡಿಸಿಕೊಂಡು ಮೈಮರೆತು ಕಲ್ಲಾಗಿ ಕುಳಿತುಬಿಟ್ಟಿದ್ದರು. ತಮ್ತಮ್ಮ ಗುಡಿ ಪಕ್ಕಕ್ಕೆ ತಮ್ತಮ್ಮ ಅರ್ಚಕರಿಗೂ ಕುಟೀರಗಳ ಕಟ್ಟಿಸಿಕೊಟ್ಟು ಅಲ್ಲಲ್ಲೇ ಅವರೆಲ್ಲ ಶಾಶ್ವತವಾಗಿದ್ದರು. ಈ ದೇವರುಗಳ ಆವಾಸದಲ್ಲಿ ಅಷ್ಟಮಿಯೆಂಬುದು ಬಲು ಜೋರು. ಇದೇ ಅಷ್ಟಮಿಯ ಪಾಯಸ ಬೇಡಲು ಕರಿಯನ ಬಳಗ ಗದ್ದೆಯ ಕಂಟದ ಮೇಲೆ ಸಾಲು ಮೆರವಣಿಗೆಯಲ್ಲಿ ಬಂದು ಊರು ತಲುಪುವಾಗ ಸಾರ್ವಜನಿಕ ಅನ್ನ ಸಂತರ್ಪಣೆ ಮುಗಿದು ಸೂರ್ಯನೂ ಸುಸ್ತಾಗಿ ಸಮುದ್ರಸ್ನಾನಕ್ಕೆ ತಯಾರಾಗುತ್ತಿದ್ದರೆ ಅತ್ತ ದೊಡ್ಡದೊಂದು ಗದೆಯಲ್ಲಿ ಯಕ್ಷಗಾನದವರು ರಂಗಸ್ಥಳ ತಯಾರು ಮಾಡಿ ಮೈಕಿನಲ್ಲಿ ಆಟ ಕೇಳಿಸುತ್ತಿದ್ದಾರೆ.
ಮಸಕು ಮಸಕು ಮುಸ್ಸಂಜೆಯಲ್ಲಿ ಆ ಊರಿಗೆ ಟಾರು ಹಾಕಿದ ರಸ್ತೆಗೆ ಆಚೀಚೆ ಬದಿಯ ಮಣ್ಣಿನಲ್ಲಿ ಒಂದಷ್ಟು ಕುಳಿ ತೆಗೆದು ಅದರೊಳಕ್ಕೆ ಬಾಳೆಯೆಲೆ ಇಟ್ಟುಬಿಡುತ್ತಾರೆ. ಆ ಪ್ರತಿ ಕುಳಿಯ ಮುಂದೆ ಕರಿಯನ ಬಳಗದ ಒಬ್ಬೊಬ್ಬರು ಕುಳಿತರೆ ಮದ್ಯಾಹ್ನದ ಉಳಿದ ಪಾಯಸವೆಂಬ ಅಷ್ಟಮಿಯ ಪ್ರಸಾದವನ್ನು ಕುಳಿಯಲ್ಲಿ ಸುರಿದು ಹೋಗುತ್ತಾರೆ. ಅನುಭವಿಗಳೆಲ್ಲ ಬಾಳೆಯಲೆಯಿಂದ ತಮ್ತಮ್ಮ ಪಾತ್ರೆಗೆ ಪಾಯಸ ಸುರಿದುಕೊಂಡರೆ ಮೊದಲ ಅಷ್ಟಮಿಯ ಕರಿಯ ಕುಳಿಗೇ ಕೈ ಹೆಟ್ಟಿ ನೆಕ್ಕುವಾಗ ಅಲ್ಲೇ ಹೆಂಚಿನ ಮನೆಗಳ ಜುಗಲಿಯ ಮೇಲೆ ಇವನದೆ ವಯಸ್ಸಿನ ಒಂದಷ್ಟು ಮಾಣಿಗಳು ನಗುವುದು ಕಂಡು ‘ಆ ಮಕ್ಕಳಿಗೆಲ್ಲ ಕುಳಿ ಎಂತಕ್ಕಿಲ್ಲ?’ ಎಂಬವನ ಯೋಚನೆಯ ತುಂಡರಿಸಿದ ಮಾಯಿ “ಏಯ್ ಕರಿಯ ಪಾತ್ರಕ್ಕೆ ಪಾಯ್ಸ ಹಯ್ಕೋ... ಇಲ್ದಿರೆ ಬಾಳಿಯಲಿ ತೂತಾಯಿ ಪಾಯ್ಸು ಮಣ್ಣಾಪುಕಿತ್ತ್” ಎಂದಳು. ಇಲ್ಲ. ಕರಿಯ ಪಾಯ್ಸುನ ಹಯ್ಕಣ್ಲಿಲ್ಲ!!
******
ಯೀ ಕರಿಯನ್ಕಿಂತ ವಸಿ ದೊಡ್ಡಕ ಮಾದಪ್ಪ ಅಂತ ನಮ್ಮೂರ್ಲಿ ಅವ್ನ. ಅವ ಇನ್ನ ಕೂಸಿದ್ದಾಗ್ಲೀಯ ಅವನ ಅಪ್ಪ ಅವ್ವ ಅದ್ಯಾನೋ ರೋಗ ಬಂದ್ಬುಟ್ಟು ಒಬ್ರಾದ ಮ್ಯಾಗ ಒಬ್ರು ತೀರ್ಕಂಡ್ರು. ಅವನ್ನ ನೋಡುದ್ರ ಕಳ್ಳು ಕಿವುಚೋದು. ಅವಗ ಅಜ್ಜ ಇದ್ರು. ಅವ್ರ ಜೊತ್ಗ ಇರೋದು. ಅವ್ರ ಹಟ್ಟಿಯಂತೂ ತುಂಬಾನೇ ಚಿಕ್ದು. ನಂ ಜ್ವತ್ಗ ಇಸ್ಕೂಲ ಮನಿಗ ಬರೋನು. ಈಗ್ಲೂ ಬಂದಿದ್ರ ನಮ್ಮ ಹಾಗೆ ಟೆನ್ತ್ ಆಗಿರೋದು. ಆದ್ರ ಅಂವ ಬರ್ನಿಲ್ಲ. ಬರಾಕ ಮನ್ಸಿತ್ತು. ಒಂದೊಂದ್ ಜಿನ ಹಸ್ಗಂಡು ಹಟ್ಟಿ ಮುಂದ ಕೂತ್ಗಂಡು ಜೋರಾಗಿ ಅಳೋನು. ನಂಬೀದಿಗೂ ಕೇಳೋದು. ಆವಾಗೆಲ್ಲ ತುಂಬಾನೇ ಬ್ಯಾಜರಾಗೋದು. ನಂ ಹಟ್ಟೀಗ ಕರ್ಕ ಬಂದು ಬಿಡೋಣ ಅನ್ಸೋದು. ಅವ್ನ ಜಾತಿಯವರ್ನ ನಂ ಬೀದಿಗೂ ಬಿಟ್ಕಳದಿಲ್ಲ ನಂ ಜಾತಿಯೋರು. ಆದ್ರೂವಿ ಮಾದಪ್ಪ ಹೊಟ್ಟ ಹಸ್ಗಂಡು ಅತ್ಗಂಡು ನಂತಪು ಬರೋನು. ಆಗಿನ್ನು ನಮ್ಮವ್ವ ಇದ್ದಿದ್ಲು. ಅವನ್ನ ಹಟ್ಟಿ ಒಳ್ಗ ಬಿಟ್ಕಳದಿಲ್ಲ. ಆದ್ರೂವಿ ಬೀದೀಲಿ ಕೂರಿಸ್ಬುಟ್ಟು ಅವ್ವ ನಮ್ಗೂ ಉಳಸ್ಗಂಡು ಅವ್ನಿಗೂ ವಸಿ ಊಟಕ್ಕ ಇಕ್ತಿದ್ಲು. ಹೀಂಗ ಅವ ಎಲ್ಲಾರ ಬೀದೀಲೂ ಉಂಡ್ಕಂದು ಇಸ್ಕೂಲಗ ಬರೋನು. ಅಷ್ಟೇ ಚೆನ್ನಾಗೋದೋನು. ಅವ್ರಜ್ಜ ಮಾತ್ರ ‘ಇಸ್ಕೂಲ ಬುಟ್ಬುಡು ಕೆಲ್ಸಕ್ಕೋಗು..... ಕೊಡಗ್ಗೋಗು....’ ಅಂದೂ ಅಂದು ಮಾದಪ್ಪ ಈಗ ನಂಜನಗೂಡ್ಲಿ ಬೇಕ್ರಿನಲ್ಲಿ ಕೆಲ್ಸ ಮಾಡ್ತವ್ನಂತ.
*******
ಕರಿಯನ ಚಿಕ್ಕ ತಂಗಿಗೆ ಭೂತದ ಚಾಷ್ಟಿಯಾಗಿತ್ತು. ಆ ಕಿರಿಯ ದೇಹಕ್ಕೆ ತಗುಲಿಕೊಂಡಿದ್ದ ನೂರೆಂಟು ಭೂತಗಳು ಅವನ ಮನೆ ದೇವರನ್ನೆಲ್ಲ ವಂಚಿಸಿ ಯಡವಟ್ಟು ಮಾಡಿದ್ದವು. ಧರ್ಮಸ್ಥಳ, ಸುಬ್ರಮಣ್ಯ, ಹಿರಿಯಡ್ಕ, ಮಾರಣಕಟ್ಟೆ, ಕೊಲ್ಲೂರು, ಹಟ್ಟಿಯಂಗಡಿ ಕಡೆಗಾ ಗಾಣದಮಕ್ಕಿಯ ಯಾವ ಬಲಿಷ್ಟ ದೇವರನ್ನು ಕೇರು ಮಾಡದೆ ಆ ಹೆಣ್ಣು ಮಗುವಿಗೆ ನಾನಾ ತರದ ರೋಗಗಳ ತಂದ್ಹಾಕಿ ಹೈರಾಣು ಮಾಡಿದ್ದವು. ಬಾಳೆಕೆರೆಯ ಭಯಂಕರ ಮಂತ್ರವಾದಿಯ ಕರೆಸಿ ಕಟ್ಟುಪಾಡು ಮಾಡಿಸಾಯ್ತು. ಊಹುಂ! ಕರಿಯನ ತಾಯಿಯ ಮೇಲೆ ಮೈದಾಳಿ ಬಂದ ಅದ್ಯಾವುದೋ ಸಸ್ಯಾಹಾರಿ ಅಮ್ಮನವರು ಭೂತಗಳ ಜೊತೆ ಜಿದ್ದಿಗೆ ಬಿದ್ದು ನುಕ್ಕೆ ಸೊಪ್ಪ ಹಿಡಿಗೆ ತಗೊಂಡು “ನನ್ನ ಸಿಸುಮಗೀನ ಮೈಬಿಡು” ಎಂದು ಆ ಎಳೇ ದೇಹದ ಮೇಲೆ ಎಗರಿಬಿದ್ದಾಗ ಆ ಮಗುವಿನ ಪಾಡು ನೋಡಲಾರದ ದೊಡ್ಡಮ್ಮನು ಬಾಯಿ ತೆಗೆದು ಅಳಲಾರಂಭಿಸಿದರೆ ಇತ್ತ ಉಳಿದೆಲ್ಲ ಬಂದಾಯಿತು. ಅಳುವ ದನಿಗೆ ದೇಹವೂ ಕೂಡಿಕೊಂಡು ಕುಣಿಯಲಾರಂಭಿಸಿದ್ದೇ ಇದ ಅರಿತುಗೊಂಡ ಕರಿಯನ ಅಪ್ಪಯ್ಯ ‘ಓಹೋ... ಇದು ತೀರಿಕೊಂಡ ನಮ್ಮ ಅಜ್ಜಯ್ಯನ ಗಾಳಿ’ ಎಂಬುದ ಮನಸಸಿಗೆ ತಂದುಕೊಂಡು ಬೀಡಿ ಹಚ್ಚಿಕೊಟ್ಟರು. ಬೀಡಿ ಸೇದುತ್ತ ಗಾಳಿಯು ನಾಲ್ಕಾರು ಸುತ್ತು ಕುಣಿದು ಮತ್ತೆ ಸುಸ್ತಾಗಿ ಗಲ ಗಲ ಅಲುಗುತ್ತಾ.....
“ನನ್ನ ಹಸುಮಗೀನ ಮೈಪಟ್ಕಂಡಂತ..... ಹಂ... ಹಂ...
ಅದು ಸಾಮಾನಿ ಗಾಳಿಯಲ್ಲ ಕುಟುಂಬ. ಬಾಣಂತಿ... ಹಂ... ಹಂ...
ನಿಂಗೆ ಮನಿ ದೆಯ್ಯದೇವ್ರೇಲ್ಲ ಬ್ಯಾಡಲ್ದ ಕುಟುಂಬ? ಹಂ... ಹಂ...
ನನ್ನ ಸಿಸುಮಕ್ಳ ಜಬದಾರಿ ನಂದಲ್ದ ಹಂ... ಹಂ...
ಹಾಂಗಾಯಿ ನೀನ್ ಕರಿದೇ ಇದ್ರೂ ನಾನೇ ಬಂದೆ ಹಂ... ಹಂ...
ಇಷ್ಟೆಲ್ಲ ಆರೂ ನನ್ನೊಂದ್ಸಲ ಉಂಟು ಮಾಡ್ಕಂತ ನಿನ್ನ್ ಮನ್ಸಿಗೆ ಬರ್ಲೇ ಇಲ್ಲ ಅಲ್ದ 
ಕುಟುಂಬ?”
ಅಜ್ಜಯ್ಯನ ಗಾಳಿ ಹೀಂಗೆ ಜಾಡಿಸುತ್ತಿದ್ದರೆ ಕರಿಯನ ಅಪ್ಪಯ್ಯನ ಬಾಯ್ಕಟ್ಟಿ ಹೋಗಿತ್ತು. ಇನ್ನೇನಾಗುವುದೋ ಎಂಬ ಭಯ ಅಲ್ಲೆಲ್ಲ ತುಂಬಿಕೊಂಡು ಆ ಜಾಡ್ಸುವಿಕೆಯು ಮುಂದುವರಿದಿತ್ತು.
ಈ ಅಜ್ಜಯ್ಯ ಗಾಳಿಯಾಗುವುದಕ್ಕೂ ಮುಂಚೆ ಭಯಂಕರ ಮಂತ್ರವಾದಿಯಂತೆ. ಒಮ್ಮೆ ಕೊಲ್ಲೂರ ಕಾನು ದಾಟಿ ಮೇಲೆ ಘಟ್ಟಕ್ಕೆ ಭೂತ ಬಿಡಿಸುವುದಕ್ಕೆ ಹೋಗಿದ್ದಂತೆ. ಆಗೆಲ್ಲ ನಡೆದೇ ಹೋಗಬೇಕಲ್ಲ. ತಿರುಗಿ ವಾಪಾಸ್ಸು ಬರುವಾಗ ಅದೇ ಕೊಲ್ಲೂರ ಕಾನಲ್ಲಿ ಕತ್ತಲಾಯಿತಂತೆ. ಕತ್ತೆಲಯೆಂದರೆ ಕಗಗತ್ತಲು. ಏನು ಮಾಡುವುದೆಂದು ವಿಚಾರ ಮಾಡಿದ ಮಂತ್ರವಾದಿಯು ತನಗೆದುರಾದ ಜೋಡಿ ಹುಲಿಗಳ ಮಂತ್ರಕ್ಕೆ ಬಗ್ಗಿಸಿ ತನ್ನ ತಲೆಗೊಂದು ಕಾಲಿಗೊಂದು ಕಾಯಲು ಕೂರಿಸಿ ನಿದ್ದೆ ಹೋದನಂತೆ. ಇದು ನಡೆದು ಹೊತ್ತೂ ಕಳೆದು ಆ ದಾರಿಯಲ್ಲಿ ಬ್ರಿಟೀಷರು ಬಂದು, ಬಂದವರು ಹುಲಿಗಳ ನೋಡಿ ಬೆಚ್ಚಿ ಅಜ್ಜಯ್ಯನ ಕಂಡು ದಿಗಿಲಾಗಿ “ಎಲಾ... ಕಾಡಿನ ಮೂಕ ಪ್ರಾಣಿಗಳ ಮಂತ್ರಿಸಿದವನು ಇನ್ನೂ ಬದುಕಿದರೆ ನಮ್ಮ ಬಿಟ್ಟಾನೆಯೇ?” ಎಂಬ ಭಯಾಲೋಚನೆಯ ಕಯ್ಗೆ ಬಂದೂಕ ಕೊಟ್ಟು ಗುಂಡ ಸಿಡಿಸಿ ಕರಿಯನಜ್ಜನ ಏಳನೇ ಗುಂಡಿಗೆ ಕೊಂದುಬಿಟ್ಟರಂತೆ!!
ಇಂಥದೊಂದು ರೋಚಕ ಕತೆಯ ತಾನು ಮೈದಾಳಿ ಬಂದ ಹೆಂಗಸಿನ ಬಾಯಲ್ಲಿ ಹೇಳಿಸಿಕೊಂಡು ಎಲ್ಲರಲ್ಲಿ ಬಯಬಕ್ತಿ ಮೂಡಿಸಿ ತಾಣು ಅಳುವುದು ಅಜ್ಜಯ್ಯನ ಗಾಳಿಯ ಕರ್ಮಸಿದ್ಧಾಂತ.
ಇಡೀ ರಾತ್ರಿ ಗಾಳಿ ಭೂತಗಳ ಅಮ್ಮನವರ ಜಟಾಪಟಿ ಮುಗಿದು ಬೆಳಕು ಮೂಡುತ್ತಲೆ ಅದ್ಯಾರೋ ಮಗುವ ಕಾಣಲು ಬಂದ ಅಕ್ಷರವಂತರು ‘ಆಸ್ಪತ್ರೆಗೆ ಕರ್ಕೊಂಡೋಗಿ’ ಎಂದು ಗದರಿಸಿದಾಗ ಡಾಕ್ಟರು ಆಸ್ಪತ್ರೆಯಲ್ಲಿ “ಮಗು ಸತ್ತಿದೆ” ಎಂದು ಘೋಷಿಸಿದರು. ಜ್ಯೋತಿಯೆಂಬ ಮಗುವು ತೀರಿಕೊಂಡಿತ್ತು. ಕರಿಯನ ಕಿರೀ ತಂಗಿಯ ಕೊಲೆಯಾಗಿತ್ತು.
******
         ನಂ ಪಕ್ಕದೂರ್ಲಿ ಸುಂದ್ರಮ್ಮ ಅಂತ ಒಬ್ಬ ಇದ್ಲು. ನಮ್ಕಿಂತ ಎರಡ್ಮೂರು ವರ್ಷಕ್ಕ ದೊಡ್ಡವ. ನೋಡಾಕ ತುಂಬಾ ಚನ್ನಾಗಿದ್ಲು. ಅವ್ರ ಅಪ್ಪ ಅವ್ವ ಕೊಡಗ್ಗೋಯ್ತರ. ತಿರ್ಗ ಬರೋದು ಐದಾರು ತಿಂಗ ಹಿಡಿತದ. ಸುಂದ್ರಮ್ಮ ಅಜ್ಜಿ ಮನೇಲಿರ್ತ ಇಸ್ಕೂಲಿಗೊಯ್ತಳ. ಇನ್ನೂವಿ ಎಂಟ್ನೇ ಕ್ಲಾಸು. ಇಸ್ಕೂಲಿಗ ನಮ್ಮೂರ್ಗ ಬಂದೇ ಓಯ್ತಳ. ಸುಂದ್ರಮ್ಮ ನಿಜಕ್ಕೂ ಸುಂದರವಾಗಿದ್ಲು. ಛೆ! ಹಾಗಿರ್ಬಾರ್ದಿತ್ತು ಅವ. ಅವ್ಳು ಇಸ್ಕೂಲಿಗ ಹೋಗ್ಬರೋವಾಗ ಪೀಲಿ ಹುಡುಗ್ರು ಕಾಡ್ಸೋರು. ಈನಾ ಹೀಂಗ ನಡ್ದು ಅವ್ಳು ಇಸ್ಕೂಲು ಬಿಡೋಗಂಟ ಬಂದಿತ್ತು. ಒಂಜಿನ ಅವ್ಳು ನೀರ್ದಿಕ್ಕ ವೋದಾಗ ಯಾರೋ ಊರ ಯಜಮಾನ ಅಂತ ಅವ ಯೀ ಚಿಕ್ಕುಡುಗಿನ ಕೆಡಿಸ್ಬುಟ್ನಂತ. ಅದ್ನ ಆ ಪೋಲಿಬಡ್ಡೇತವು ನೋಡುದ್ವಂತ. ಯಜಮಾನ ಇವುಗಳ ನೋಡ್ಬುಟ್ಟು ಕಡದೋದ ಮ್ಯಾಲ ಆ ಅಷ್ಟೂ ಜನನೂವಿ ಅವ್ಳುನ್ನ ಕೆಡಿಸ್ಬುಟ್ಟು ಕೊಂದು ಬಳ್ಳಾರಿ ಗಿಡದ ಮುಳ್ಳಿನ ಮ್ಯಾಕ್ಕ ಎಸದ್ಬುಟ್ಟಿದ್ರು.
******
ಕರಿಯ ಈಗ ಸಲ್ಪ ದೊಡ್ಡಕಾಗಿ ಕರಿಯಣ್ಣ ಆಗಿಬಿಟ್ಟಿದ್ದನು. ಕರಿಯಣ್ಣ ತನ್ನೂರ ನಾಲ್ಕನೇ ತರಗತಿ ಶಾಲೆ ಕಲಿತು ಉನ್ನತ ವಿದ್ಯಾಭ್ಯಾಸಕ್ಕಾಗಿ ಪರೂರಾದ ತಲ್ಲೂರ ಇಗರ್ಜಿ ಶಾಲೆಯ ಅಯ್ದನೇ ತರಗತಿಯಲ್ಲಿ ಬೆಂಚು ಹಿಡಿದನು. ಅದೇ ತರಗತಿಗೆ ವರಾಹಿ ತೀರದೂರಿನ ನಾಲ್ಕಾರು ಬಟ್ರ ಮಾಣಿಗಳೂ ಒಬ್ಬ ಜೈನ ಮಾಣಿಯೂ ಪಾರ್ತಿಕಟ್ಟೆಯ ಸಾಯಬ್ರ ಮಗ ಅಸ್ಲಾಂನೂ ತಲ್ಲೂರಿನ ಲಾರೆನ್ಸನೂ ಬಂದು ಬೆಂಚು ಹಿಡಿದರು. ಈಗ ಆ ತರಗತಿಗೆ ಒಂದು ಮಿನಿ ಸರ್ವಧರ್ಮ ಸಮ್ಮೇಳನದ ಕಳೆ ಬಂದು, ಮದ್ಯಾನದ ಉಪ್ಪಿಟ್ಟು ಹುಡಿಯು ಸೌಹಾರ್ದ ಭೋಜನದ ಸ್ಥಾನಕ್ಕೇರಿತ್ತು.
ಕರಿಯಣ್ಣನ ಸಹಪಾಠಿಗಳಾದ ಬಟ್ರಮಾಣಿಗಳ ಹೆಸರುಗಳು ಅವನಿಗೆ ವಿಚಿತ್ರ ತೋರುತ್ತಿತ್ತು. ‘ಅಲ್ಲ ಯಿ ಮಕ್ಕಳಿಗೆಲ್ಲ ದೇವ್ರ ಹೆಸ್ರಿಟ್ಟೀರಲೆ!!’ ಎಂಬುದೇ ಆಶ್ಚರ್ಯ. ರಾಘವೇಂದ್ರ, ಮಂಜುನಾಥ, ಪ್ರಸನ್ನ, ಗಣಪತಿ, ವಿದ್ಯಾಪ್ರಸಾದ, ಅಣ್ಣಪ್ಪಸ್ವಾಮಿ, ಚಂದ್ರನಾಥ ಇಂತವು. ತನ್ನ ಮನೆಯವರ ಹೆಸರುಗಳ ಮನಸ್ಸಿಗೆ ತಂದುಕೊಂಡರೆ: ಕರಿಯಣ್ಣ, ಕಾಲ, ಬಚ್ಚ, ನಾಗ, ಯಾದವ, ಬಡಿಯ, ಚೆಲುವ ಹೀಗೆ. ಅವುಗಳಲ್ಲಿ ಪ್ರೀತಿಯ ಆತ್ಮೀಯತೆಯ ಸೆಲೆಯ ಯಾರು ಬೇಕಾದರೂ ಗುರುತಿಸಬಹುದು. ಕರಿಯಣ್ಣ, ಕಾಳಣ್ಣ, ನಾಗಣ್ಣ, ಚೆಲುವಣ್ಣ ಎಂದು ಕರೆಯಲು ಬರುವ ಹಾಗೆ ರಾಘವೇಂದ್ರಣ್ಣ, ಮಂಜುನಾಥಣ್ಣ ಎಂದು ಕರೆಯುವುದು ಅಷ್ಟು ಸಮಂಜಸ ಕಾಣದೆ ಅವನ ತುಟಿಗಳಲ್ಲಿ ಸಣ್ಣಗೆ ಕೊಂಕಿನ ನಗೆ ಮೂಡಿ ಮರೆಯಾಯಿತು. ಯಿ ಬಟ್ರ ಮಾಣಿಗಳ ಎಲ್ಲೋ ಕಂಡಂತಾಗುತ್ತಿತ್ತು ಆದರೂ ಗುರುತು ಹತ್ತದೆ ಸುಮ್ಮನಾಗಿ ಶಾಲೆಯಲಲಿ ತೊಡಗಿಕೊಂಡನು. ಉಳಿದವರೆಲ್ಲ ದಿನಾಲು ಬಣ್ಣ ಬಣ್ಣದ ಬಟ್ಟೆ ತೊಟ್ಟು ಬರುವಾಗ ಆಸೆಯ ಕಂಗಳಿಂದ ಹೋಗಿ ಮುಟ್ಟಿ ನೋಡಿಕೊಂಡು ಬರುತ್ತಿದ್ದ. ಆದರೆ ಕರಿಯಣ್ಣನಿಗೆ ತನಗಿರುವ ಒಂದೇ ಜೊತೆ ಬಟ್ಟೆಯ ಬಗ್ಗೆ ಎಂದೂ ತಿರಸ್ಕಾರ ಮೂಡಲಿಲ್ಲ. ಬರ ಬರುತ್ತಾ ಹುಡುಗರೆಲ್ಲ ಗೆಳೆಯರಾಗಿ ಬೆಳೆದು ದೊಡಡವರಾದರು. ಶಾಲೆಯ ದೊಡ್ಡ ತರಗತಿಯಾದ ಏಳನೇ ತರಗತಿಗೆ ಬರುವಷ್ಟರಲಲಿ ಪ್ಯಾಂಟು ಹಾಕುವಷ್ಟು ಬೆಳೆದರು. ಶಾಲೆಯ ಚುನಾವಣೆಗೆ ನಿಂತು ಗೆದ್ ಕರಿಯಣ್ಣ ಉಪ್ಪಿಟ್ಟು ಕೊಡುವ ಮಂತ್ರಿಯಾಗುವಷ್ಟು ಜನಪ್ರೀಯನಾಗಿಬಿಟ್ಟಿದ್ದನು. ಶಾಲೆಯಲ್ಲಿ ನಡೆಯುವ ಹಾಡುವ ಸ್ಪಧೆಗಳಲ್ಲಿ ಇವನಿಗೆ ಸರಿಸಮನಾಗಿ ಹಾಡಬಲ್ಲ ಗಾಯಕರು ಆ ಬಟ್ರ ಮಾಣಿಗಳಲ್ಲೂ ಇರದದ ಬಹುಮಾನಗಳು ಅರಸಿ ಅರಸಿ ಬಂದು ಮನೆಯಲ್ಲಿ ತಟ್ಟೆ ಲೋಟಗಳ ಸಂಖ್ಯೆ ಬೆಳೆಯುತ್ತಾ ಹೋದವು.
ಇಷ್ಟೆಲ್ಲ ಸಂಭವಿಸಿದರೂ ಕರಿಯಣ್ಣನ ಬಳಿ ಒಂದು ಪ್ಯಾಂಟು ಎಂಬುದು ಇರಲಿಲ್ಲ. ಇದ್ದೊಂದು ಚಡ್ಡಿಯ ಹರಿಯದಂತೆ ನೋಡಿಕೊಂಡಿದ್ದನು. ಅವನ ಅಪ್ಪಯ್ಯ ಪ್ಯಾಂಟು ಹೊಲಿಸಿಕೊಡುವಷ್ಟು ಸ್ಥಿತಿವಂತನಲ್ಲ ಎಂಬುದು ಅವನಿಗೆ ಗೊತ್ತು. ಎರಡ್ಹೊತ್ತು ಕೂಳಿಗೆ ಮೀನಿಗೆ ಎಂದೂ ಕಮ್ಮಿ ಮಾಡದ ಅಪ್ಪಯ್ಯನ ದುಡಿಮೆಯ ಬಗ್ಗೆ ಮೆಚ್ಚುಗೆಯೂ, ಹೆಣ್ಣು ಮಕ್ಕಳಿಗಿಂತ ಒಬ್ಬನೇ ಗಂಡೆಂದು ಅತಿ ಮುದ್ದಿನಲಿ ಒಂದ್ಹೋಳು ಮೀನ ಹೆಚ್ಚಿಗೆ ನೀಡುವ ಅಬ್ಬಿಯ ಬಗ್ಗೆ ಅಪಾರ ಪ್ರೀತಿಯೂ ಇತ್ತು. ಕರಿಯಣ್ಣನ ದೊಡ್ಡಬ್ಬಿ ತಾನು ಕೆಲಸ ಮಾಡುವ ಕ್ರಿಶ್ಚಿಯನ್ನರ ಮನೆಯಲ್ಲಿ ದುಬೈಗೆ ಹೋಗುವ ಲ್ಯಾನ್ಸಿಯ ಹತ್ತಿರ: ‘ನನ್ಮಗ ಏಳ್ನೆ ಕಲಾಸಿಗೆ ಹ್ವಾತಿದ್ನ ಮರಾಯ ನಿಂದೊಂದ್ ಹಳಾತ್ ಪ್ಯಾಂಟಿದ್ರೆ ಕೊಟ್ಟಿಕೆ ಹೋಗ್ ತಮ್ಮ’ ಎಂದು ಬೇಡಿ ತಂದ ಕಪ್ಪು ಪ್ಯಾಂಟೇ ಕರಿಯಣ್ಣ ತೊಟ್ಟ ಮೊಟ್ಟಮೊದಲ ಊದ್ದದ ಚಡ್ಡಿ. ಇವನ ಸೊಂಟದಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದ ಅದು ಜಾರಿ ಜಾರಿ ಹೋಗುತ್ತಿತ್ತು. ಅದ ಕೂರಿಸುವ ಬಗೆಯ ಕುರಿತು ಹೆಣಗಾಡಿ ಕಡೆಗೆ ಅಪ್ಪಯ್ಯ ನೇಯ್ದಿಟ್ಟ ಕತ್ತ(ತೆಂಗಿನ ನಾರು)ದ ಹಗ್ಗವನ್ನು ಪ್ಯಾಂಟಿಗೆ ಬಿಗಿದು ಕಟ್ಟುಪಾಡು ಮಾಡಿ ಅದರ ಮೇಲೆ ಅಂಗಿ ಇಳಿಬಿಟ್ಟು ಅತಿ ಸಂತೋಷದಲ್ಲಿ ಪ್ಯಾಂಟು ಧರಿಸುವ ಸಹಪಾಠಿಗಳ ಸರೀಗೆ ಓಡಾಡಿದ್ದ.
ಓಡಾಡುತ್ತ ಒಂದು ದಿನ ಶಾಲೆಯ ವಾರ್ಷಿಕೋತ್ಸವ ಬಂದು ಭಾರೀ ತಯಾರಿಯು ತರಾತುರಿಯಲ್ಲಿ ನಡೆದಿತ್ತು. ನಾಟಕ, ಯಕ್ಷಗಾನ, ಹಾಡು ಕುಣಿಗಳ ತಾಲೀಮುಗಳು ಭರ್ಜರಿ ಸಾಗಿತ್ತು. ಚಿಕ್ಕಂದಿನಿಂದಲೂ ಯಕ್ಷಗಾನ ನೋಡುತ್ತ ಬೆಳೆದಿದ್ದ ಕರಿಯಣ್ಣನಿಗೆ ಅಂತಹ ಬಣ್ಣದ ವೇಷಗಳ ತಾನೂ ಮಾಡಬೇಕೆಂಬ ಬಯಕೆಗೆ ಜಾತಿ ಅಡ್ಡವಾಗಿತ್ತು. ಕಾಳಿಂಗ ನಾವಡರ ಭಾಗವತಿಕೆ ಕೇಳಿ ಕೇಳಿ ಅಬ್ಬಿಯ ಮುಂದೆ ಅನುಕರಣೆ ಮಾಡುತ್ತಿದ್ದ. ಅಬ್ಬಿಯಂತೂ “ನೀನ್ ನಾವಡ್ರ ಕಂಡಂಗೆ ಪದ ಹೇಳ್ತಿ ಮಗ್ನೆ” ಎಂದು ಲಟಿಕೆ ಮುರಿದು ಪ್ರಶಸ್ತಿ ನೀಡುತ್ತಿದ್ದಳು. ಶಾಲೆಯಲ್ಲಿಯಾದರೂ ಯಕ್ಷಗಾನಕ್ಕೆ ಸೇರಿಕೊಳ್ಳಬೇಕೆಂಬ ಅವನ ಆಸೆ ಫಲಿಸಲಿಲ್ಲ. ಆಗಲೇ ಕುಣಿತದ ಹೆಜ್ಜೆ ಕಲಿತಿದ್ದ ಬಟ್ರ ಮಾಣಿಗಳು ಯಕ್ಷಗಾನಕ್ಕೆ ತುಂಬಿಹೋಗಿದ್ದರು. ಕರಿಯಣ್ಣನ ಪ್ರೀತಿಯ ಗುರುಗಳೂ ಕಲಾವಿದರೂ ಇವನ ಅಪ್ಪಯ್ಯನ ಚೆನ್ನಾಗಿ ಬಲ್ಲಂತ ಮುಡೂರ ಮಾಸ್ಟ್ರು “ಬಲಿದಾನ’ ನಾಟಕದಲ್ಲಿ ಸಮಾಜದ ಡೊಂಕುಗಳ ತಿದ್ದುವ ಆದರ್ಶ ಶಿಕ್ಷಕನ ಪಾತ್ರವನ್ನು ನೀಡಿ ಮಾತುಗಳನ್ನು ಬಾಯಿಪಾಠ ಮಾಡಿಸಿದ್ದರು. ಏಳನೇ ತರಗತಿಯಲಲೇ ಮೇಸ್ಟ್ರಾದ ಕುಷಿಗೆ ಕರಿಯಣ್ಣಂಗೆ ಯಕ್ಷಗಾನ ಎಂಬುದು ಸಧ್ಯಕ್ಕೆ ಮರೆತು ನಾಟಕದ ಮಾತುಗಳನ್ನು ತನ್ನದೆ ಮಾತೆಂಬಂತೆ ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕುಂತಲ್ಲಿ ಕೊನೆಗೆ ನಿದ್ದೆಯಲ್ಲಿಯೂ ಮಾತಾಡಿ ಮನೆಯವರಿಂದ ಬೈಸಿಕೊಂಡು ಸಲೀಸು ಮಾಡಿಕೊಂಡು ಗುರುಗಳ ಮೆಚ್ಚುಗೆಗೆ ಮಾತ್ರನಾದನು. ಅವನ ಅಪ್ಪಯ್ಯ ಮಗನಿಗೆ  ವಾರ್ಷಿಕೋತ್ಸವಕ್ಕೆ ಉಡುಗೊರೆ ಎಂಬಂತೆ ಹೇಗೋ ದುಡಡು ಹೊಂದಿಸಿ ಹೊಸ ಪ್ಯಾಂಟು ಹೊಲಿಸಿದರು. ಪಕ್ಕದ ಮನೆಯಿಂದ ಕಡ ತಂದ ಇಸ್ತ್ರಿ ಪೆಟ್ಟಿಗೆಯಿಂದ ಹಳೇಯ ಅಂಗಿಗೆ ಮತ್ತೆ ಮತ್ತೆ ಇಸ್ತ್ರಿ ತಿಕ್ಕಿದ. ಒಂದು ದಿನದ ಮಟ್ಟಿಗೆ ಮಾಯಿಯ ಮಗನ ಬೂಡ್ಸನ್ನು ತಂದು ತೊಟ್ಟುಕೊಂಡು ಮುಂಜಾನೆಯೇ ಶಾಲೆಗೆ ಹೋದ.
ವಾರ್ಷಿಕೋತ್ಸವದ ಮದ್ಯಾಹ್ನ ಶಾಲೆಯ ಅಧ್ಯಾಪಕರೆಲ್ಲ ಸೇರಿ ಮಕ್ಕಳಿಗೆಂದು ಪಾಯಸದೂಟ ಮಾಡಿಸಿದ್ದರು. ಕರಿಯಣ್ಣ, ರಾಘವೇಂದ್ರ ವಿದ್ಯಾಪ್ರಸಾದರ ಜೊತೆಯಲ್ಲಿಯೇ ಊಟಕ್ಕೆ ಕೂತಿದ್ದ. ಅನ್ನ ಸಾಂಬಾರಿನ ಟ್ರಿಪ್ಪು ಮುಗಿದು ಪಾಯಸ ಬಡಿಸುತ್ತಾ ಬಂದರು. ಅವನ ನೆಚ್ಚಿನ ಪಾಯಸಕ್ಕೆ ಕಾದುಕುಳಿತಿದ್ದ. ಬಡಿಸುಚುದೇ ತಡ ಗಬಗಬನೆ ತಿನ್ನತೊಡಗಿದ. ಕರಿಯಣ್ಣನ ತಡೆದ ರಾಘವೇಂದ್ರ “ಯೆಯ್ ಯೆಯ್ ಹಗೂರ ತಿಂಬಿಲೆ ಕರಿ” ಎಂದ. ಕಯ್ಯಲ್ಲಿ ಪಾಯಸ ಹಿಡಿದೇ ಅವನ ಕಡೆ ನೋಡಿದ. ತುಂಬಾ ಹೊತ್ತು ನೋಡಿದ ಗುರುತು ಹತ್ತಿತ್ತು. ‘ಯೀ ಬಟ್ರ ಮಾಣಿಗಳು ಅವ್ರೆ! ಅಷ್ಟಮಿ ಪಾಯ್ಸ ತಿಂಬತಿಗೆ ನ್ಯಗಿಯಾಡ್ತ ನಿಂತಿದ್ದವು’ ನಿಧಾನ ಬಾಳೆಎಲೆ ಎತ್ತಿ ನೋಡಿದ ಕೆಳಗೆ ಕುಳಿಯಿರಲಿಲ್ಲ.
*********
ಕಾವ್ಯ: ಕುಳಿಯಲ್ಲಿ ಪಾಯ್ಸ ಇಕ್ಕಿದ್ರಲ್ಲ, ಹಂಗೆ ನಿಜವಾಗ್ಲೂ ಊಟಕ್ಕಿಕ್ತಾರಾ? ಥೂ! ಅವ್ರು ಮನುಷ್ಯರಾ ಸಾ?
ಶಶಿ: ಕುಳಿ ಅಂದ್ರ ಯಾನ್ ಸಾ?
ಕಾವ್ಯ: ಕರಿಯನ ತಂಗೀದು ಕೊಲೆ ಹೆಂಗಾದ್ದು ಸಾ?
ಶಶಿ: ಕರಿಯಣ್ಣ ನಿಮ್ಮೂರವ್ನಾ?
ಕಾವ್ಯ: ಯಕ್ಷಗಾನ ಮಾಡಾಕೆ ಮೇಲ್ಜಾತಿಯವ್ರೇ ಆಗ್ಬೇಕಾ?
ಶಶಿ: ಹೆಸ್ರಲ್ಲೇ ಜಾತಿ ಗೊತ್ತಾಯ್ತದ ಸಾ?
ಕಾವ್ಯ: ಕರಿಯನ ಅಜ್ಜ ಸ್ವಾತಂತ್ರ್ಯ ಹೋರಾಟಗಾರನ ಸಾ?
ಶಶಿ: ಅವ್ನಿಗ ಬ್ರಿಟೀಷರು ಹೆದ್ರಿದ್ರಲ್ಲ ಅದು ನಿಜವಾ?
ಕಾವ್ಯ: ಕರಿಯಣ್ಣನ ಅಕ್ಕನ ಬಗ್ಗ ನೀವು ಹೇಳ್ನೇ ಇಲ್ಲ.
ಶಶಿ: ಏಳ್ನೇ ಕ್ಲಾಸ್ನಲ್ಲಿ ಮೇಸ್ಟ್ರಾದವ ಆಮ್ಯಾಕ ನಿಜವಾಗ್ಲೂ ಮೇಸ್ಟ್ರಾದ್ನಾ?
ಕಾವ್ಯ: ಈಗೆಲ್ಲಿದ್ದಾನು ಕರಿಯಣ್ಣ? ಯಾನ್ಮಾಡದಾನು? ಸರ್ ನಾವು ಕೇಳ್ತಿದ್ರೂವಿ ಮಾತಾಡ್ತಾನೇ
ಇಲ್ವಲ್ಲ ನೀವು. ತಪ್ಪ ತಿಳ್ಕಬ್ಯಾಡಿ, ಸಾವಿರದೊಂಬೈನೂರ ಎಂಬಂತ್ರಲ್ಲಿ ಹುಟ್ಟಿದ ಗಂಡ್ಮಗ 
ನೀವೇನ ಸಾ?


“ನಂಜನಗೂಡು ಬಂತು. ನಿಮ್ಮೂರಿಗೆ ಈಗ ಬಸ್ಸಿದೆ ಅಲ್ವಾ, ನಡೀರಿ ಹೋಗೋಣ” ಎಂದಾಗ ರೈಲು ನಮ್ಮನ್ನಿಳಿಸಿ ಮತ್ತೆ ವಾಪಾಸ್ಸು ಕೂಗುತ್ತಾ ಹೊರಟಿತು. ಮಕ್ಕಳಿಬ್ಬರನ್ನು ಬಸ್ಸು ಹತ್ತಿಸಿ ಮನೆ ಕಡೆಗೆ ಹೆಜ್ಜೆ ಹಾಕುತ್ತ, ನಂಜನಗೂಡಿಗೆ ಆವರಿಸಿಕೊಳ್ಳುತ್ತಿದ್ದ ಕತ್ತಲೊಳಗೆ ನಾನು ಮುಳುಗಿದೆ. ಕರೆಂಟು ಹೋಗಿರಬೇಕು. ಮನೆಯೊಳಗೆ ಮೊಬಯ್ಲು ಬೆಳಕಿನಲ್ಲಿ ಮೇಣದ ಬತ್ತಿಗಾಗಿ ತಡಕಾಡುತ್ತಿದ್ದಾಗ ಫೋನ್ ಕಿರುಚಿತು. ಕಾವ್ಯಳ ಮನೆಯ ನಂಬರು. ಅವಳ ಅಪ್ಪ:
“ಎಲ್ಲಿದ್ದೀರಿ ಸಾ?”
“ನಂಜನಗೂಡ್ಲಿ”
“ಮಕ್ಳು?”
“ಆಗ್ಲೇ ಕಳ್ಸಿದೀನಿ, ಇನ್ನ ಬಂದಿಲ್ವಾ?”
“ ಇನ್ನೂವಿ ಬಂದಿಲ್ಲ ಸಾ! ನಮ್ಮೂರ ಲಾಸ್ಟ್ ಬಸ್ಸೂವಿ ಬಂದಾಯ್ತು!!
“.....?!.....”
*********
ಕಥಾಕಾರ ಸಂತೋಷ ಗುಡ್ಡಿಯಂಗಡಿ  ಮೈಸೂರು ಜಿಲ್ಲೆಯ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಾಟಕದ ಶಿಕ್ಷಕರಾಗಿದ್ದಾರೆ.