ಹೋಳಿ ಸುಡುವ ಸಂಪ್ರದಾಯ- ಧಿಮ್ಸಾಲ್ ಎನಿರೋ ದಿಮ್‌ಗುಟ್ಕಣ್ ಕುಣಿರೋ... ಧಿಮ್ಸಾಲ್


ಧಿಮ್ಸಾಲ್ ಎನಿರೋ ದಿಮ್‌ಗುಟ್ಕಣ್ ಕುಣಿರೋ| ಧಿಮ್ಸಾಲ್
ಕಾಮಣ್ಣ ಭೀಮಣ್ಣ ಹೆಣ್ ಕಾಂಬೂಕೆ ಹೋದ್ರೊ| ಧಿಮ್ಸಾಲ್
ಕಾಮಣ್ಣನ ಮಕ್ಕಳೋ ಮಹಾ ಪುಂಡಗಾರರೋ| ಧಿಮ್ಸಾಲ್
ಮಾಹಾ ಪುಂಡಗಾರರಾಗಿ ಊರಿಗೇನ್ ಮಾಡಿರೋ| ಧಿಮ್ಸಾಲ್
ಊರಿಗೇನ್ ಮಾಡ್ದೋರು ಕೇರಿಗೇನೆ ಮಾಡಿರೋ| ಧಿಮ್ಸಾಲ್
ಕೇರಿಗೇನ್ ಮಾಡದೋರು ಬೀದಿಗೇನ್ ಮಾಡಿರೋ| ಧಿಮ್ಸಾಲ್
ಧಿಮ್ಸಾಲ್ ಎನಿರೋ ಧಿಮ್ ಕುಟಿಕಾ ಕುಣಿರೋ|
ಇಂದಿಷ್ಟೊತ್ತಿಗೆ ಬಹುದೊಡ್ಡ ಹಬ್ಬವೋ|
ನಾಳಿಷ್ಟೊತ್ತಿಗೆ ಬಟ್ಟೆಂಬ ಬಯಲೋ| ಧಿಮ್ಸಾಲ್

      ಹೀಗೆ ಹಾಡುತ್ತಾ ಮನೆ ಮನೆ ಸುತ್ತುತ್ತಿದ್ದರು ಮಂದಿ. ಈಗ ಬಂದಾರು-ಇನ್ನೇನು ಬಂದಾರು ಎಂದು ಕಾಯುತ್ತಿದ್ದರು ಮನೆಮಂದಿ! ಆ ದಿನಗಳೆಲ್ಲ ಕಳೆದು ಇಂದು ಬಲು ಅಪರೂಪವಾಗಿದೆ ಈ ಹೋಳಿ ಸುಡುವ ಜನಪದೀಯ ಸಂಪ್ರದಾಯ.

ಆಚರಣೆಯ ಹಿನ್ನೆಲೆ:
     ಕುಂದಾಪುರ ತಾಲೂಕಿನ ಹಲವೆಡೆ ಉರಿನ ಹಿರಿಯರು-ಕಿರಿಯರು ಸೇರಿ ಧಿಮ್ಸಾಲ್ ಹೇಳುತ್ತಾ ಪ್ರತಿ ಮನೆಯನ್ನು ಸುತ್ತಿ ಈ ವಿಶಿಷ್ಟ ಜನಪದೀಯ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಇದಕ್ಕೆ ಹೋಳಿ ಸುಡುವುದು, ಹಣಬು ಸುಡುವುದು, ಕಾಮನ ಹಬ್ಬ ಎಂದೂ ಕರೆಯಲಾಗುತ್ತದೆ.
    ಶಿವರಾತ್ರಿಯ ಮರುದಿನ ಅಮವಾಸ್ಯೆಯ ಸಂಜೆ ಹಣಬಿನ ಗುಡ್ಡೆಯನ್ನು ನಿರ್ಮಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಬಳಿಕ ಮನೆ ಮನೆಗೆ ತಿರುಗಾಟ ಆರಂಭವಾಗುತ್ತದೆ. ಧಿಮ್ಸಾಲ್ ಹಾಡಿನೊಂದಿಗೆ ಮನೆಗೆ ತೆರಳಿದಾಗ ಅವರಿಗೆ ತೆಂಗಿನಕಾಯಿ, ಅಕ್ಕಿ, ಬೆಲ್ಲ ಇಲ್ಲವೇ ಹಣವನ್ನು ನೀಡಿ ಕಳುಹಿಸಲಾಗುತ್ತದೆ.   ಕಾಮ(ಮನ್ಮಥ)ನನ್ನು ದಹಿಸಿದ ಶಿವ ಮನೆಗೆ ಬರುತ್ತಾನೆ ಎಂಬ ನಂಬುಗೆ ಜನರದ್ದು. ಸೂರ್ಯೋದಯದ ಹೊತ್ತಿಗೆ ಮತ್ತೆ ಹಣಬಿನ ಗುಡ್ಡೆಯತ್ತ ಬಂದು ಶಿವನನ್ನು ಪೂಜಿಸಿ ಮನ್ಮಥನನ್ನು ದಹಿಸಲಾಗುತ್ತದೆ. ಮನ್ಮಥನನ್ನು ದಹಿಸುವುದರಿಂದ ನಮ್ಮಲ್ಲಿನ ಅರಿಷಡ್ವರ್ಗಗಳು ನಾಶವಾಗಿ, ಉರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಕೊನೆಗೆ ಮನೆಗಳಿಂದ ಸಂಗ್ರಹಿಸಿದ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಹಣವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ.

ಮನೋರಂಜನೆ-ಆತಂಕ:
   ಧಿಮ್ಸಾಲ್ ಕೂಗುತ್ತಾ ಗುಂಪಾಗಿ ಮನೆಗಳಿಗೆ ತೆರಳುವುದು, ಅಕ್ಕಿ, ಕಾಯಿ, ಹಣಕ್ಕಾಗಿ ಬೇಡಿಕೆ ಇಡುವುದು ನಡೆಯುತ್ತದೆ. ಮನೆಯ ಕಿರಿಯರಿಗೆ ಧಿಮ್ಸಾಲ್ ತಂಡ ಏನು ಮಾಡುತ್ತದೆ ಎಂದು ನೋಡುವುದೇ ಮನೋರಂಜನೆಯಾದರೆ ಹಿರಿಯರಿಗೆ ಧಿಮ್ಸಾಲ್ ತಂಡ ಬಂದು ಹೋಗುವವರೆಗೆ ಆತಂಕ ಕಾಡುತ್ತಿರುತ್ತದೆ. ಒಬ್ಬರ ಮನೆಯ ವಸ್ತುಗಳು ಮತ್ತೊಬ್ಬರ ಮನೆಯಲ್ಲಿ, ಮತ್ತೊಬ್ಬರ ಮನೆಯದು ಇನ್ಯಾಯಾರದೋ ಮನೆ ಸೇರುವುದು ಸಾಮಾನ್ಯವಾಗಿರುತ್ತದೆ. ಅದಕ್ಕೆಂದೇ ಈ ದಿನದಂದು ಮನೆಯ ಆವರಣದಲ್ಲಿರುವ ವಸ್ತುಗಳನ್ನು ಧಿಮ್ಸಾಲ್ ತಂಡದ ಕಣ್ಣಿಗೆ ಬಿಳದ ಹಾಗೆ ಇಡಲಾಗುತ್ತದೆ. ಕಲವೊಮ್ಮೆ ಅವರು ಹೋಗುವ  ತನಕ ನಿದ್ದೆಗೆಟ್ಟು ಕುಳಿತುಕೊಳ್ಳುವುದೂ ಇದೆ. 

ನಶಿಸುತ್ತಿರುವ ಸಂಪ್ರದಾಯ:
     ಒಂದು ಕಾಲಘಟ್ಟದಲ್ಲಿ ಕುಂದಾಪುರ ತಾಲೂಕಿನೆಲ್ಲೆಡೆ ಆಚರಿಸಲಾಗುತ್ತಿದ್ದ ಹೋಳಿ ಸುಡುವ ಸಂಪ್ರದಾಯ ಇಂದು ಮರೆಯಾಗುತ್ತದೆ. ಕೆಲವೇ ಗ್ರಾಮಗಳಲ್ಲಿ ಉತ್ಸಾಹಿ ಯುವಕರು ಇಂದು ಆಚರಿಸಿಕೊಂಡು ಬರುತ್ತಿದ್ದಾರೆ. ಅದು ತನ್ನ ನೈಜತೆಯನ್ನು ಕಳೆದುಕೊಂಡು ಗಳಿಕೆಯ ಭಾಗವಾಗುತ್ತಿದೆ ಎಂಬುದು ಸಂಪ್ರದಾಯ ವಾದಿಗಳ ಅಂಬೋಣ. ಒಟ್ಟಿನಲ್ಲಿ ಆಧುನಿಕತೆಯ ಅವಸರದ ಬದುಕಿನ ನಡುವೆ ಹಾಡುವವರಿಲ್ಲದೆ, ಉತ್ಸಾಹದಿಂದ ರಾತ್ರಿಯಿಡಿ ತಿರುಗಾಡುವವರಿಲ್ಲದೆ ಈ ವಿಶಿ ಸಂಪ್ರದಾಯ ನಶಿಸುತ್ತಿದೆ