
ಅದಕ್ಕೆ ಮುನಿಶ್ರೀ ತರುಣ ಸಾಗರ ಹೇಳುತ್ತಾರೆ," ಜೀವನದ ಹೋರಾಟದಲ್ಲಿ ಕೆಲವೊಮ್ಮೆ ಗೆಲ್ಲುವಿರಿ, ಕೆಲವೊಮ್ಮೆ ಸೋಲುವಿರಿ, ಕೆಲವೊಮ್ಮೆ ಬೀಳುವಿರಿ,ಕೆಲವೊಮ್ಮೆ ಪರಾಜಯದ ಪಾಲಾಗಬಹುದು.ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಬಂಧುತ್ವ ಸಂಬಂಧಗಳುನಮುರಿದು ಹೋಗಲಿ ಚಿಂತಿಸುವ ಅಗತ್ಯವಿಲ್ಲ.ಕೆಲಸ ಕಾರ್ಯಗಳು ನಿಂತು ಹೋಗಲಿ ಚಿಂತೆ ಇಲ್ಲ.ಮನೆ ಮಠ ಮುರಿದು ಹೋಗಲಿ ಚಿಂತೆ ಇಲ್ಲ.ಆತ್ಮವಿಶ್ವಾಸ ಎಂಬುದೊಂದು ಇದ್ದರೆ ಮುರಿದು ಹೋದದ್ದೆಲ್ಲಾ ಸರಿಹೋಗಿ ಬಿಡುತ್ತದೆ". ಆತ್ಮವಿಶ್ವಾಸ ಇರುವವನು ಯಾರನ್ನು ಅವಲಂಬಿಸಿರುವುದಿಲ್ಲ. ಆ ವ್ಯಕ್ತಿ ಎಲ್ಲೂ ಧೈರ್ಯಗೆಡುವುದಿಲ್ಲ. ವ್ಯಕ್ತಿಯಲ್ಲಿರುವ ಸಕಾರಾತ್ಮಕ ಯೋಚನೆಗಳೆ ಹಾಗೂ ಮಾನಸಿಕ, ಭೌದ್ಧಿಕ ಬಲಗಳ ಆತ್ಮವಿಶ್ವಾಸದ ಗುಟ್ಟು.

ಜೀವನದಲ್ಲಿ ಕಷ್ಟಗಳು ಎಲ್ಲರನ್ನು ಒಂದೇ ರೀತಿ ಕಂಗೆಡಿಸುತ್ತವೆ ಎನ್ನಲಾಗದು. ಕೆಲವರು ಸಣ್ಣಪುಟ್ಟ ತೊಂದರೆಗಳಿಗೂ ಖಿನ್ನರಾಗಿ ಬಿಡುವ ಅಪ್ರಭುದ್ಧರು.ಕೆಲವರು ನಗುತ್ತಲೇ ನೋವನ್ನು ನೊಗುವವರು. ಮನುಷ್ಯನಲ್ಲಿ ವೈವಿಧ್ಯ, ವೈಶಿಷ್ಟ್ಯಗಳಿರುವಂತೆ ಅವರು ಎದುರಿಸುವ ಸಮಸ್ಯೆಗಳಲ್ಲೂ ವೈವಿಧ್ಯ, ವೈಶಿಷ್ಟ್ಯಗಳಿರುತ್ತದೆ. ಬಾಲ್ಯ, ಯೌವನಾವಸ್ಥೆಗಳಲ್ಲಿ,ದೈಹಿಕ ಶಕ್ತಿ ಚೆನ್ನಾಗಿರುವಾಗ, ಕಲಪನೆಯ ಕನಸು ಕಾಣುತ್ತ ಭವಿಷ್ಯದ ಚಿತ್ರಸೌಧಗಳನ್ನು ಕಟ್ಟಬಹುದು. ಸೋಲು, ಹತಾಶೆ, ವಿರೋಧ, ದುರ್ಬಲತೆ, ಅಸಹಾಯಕತೆಗೆ ತತ್ತರಿಸದೆ,ಸೋಲೆಂಬ ತೆರೆಗಳು ಬಂದು ಅಪ್ಪಳಿಸಿದಾಗ ಮನಸ್ಸಿನ ದುಗುಡವನ್ನು ದೂರಮಾಡಿ,ಅನಿವಾರ್ಯವನ್ನು ಎದುರಿಸಲು ಸಿದ್ಧವಾಗಬೇಕು. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಮತ್ತು ಬೌದ್ಧಿಕವಾಗಿ ತಮ್ಮನ್ನು ತಾವು ಕೆಳಗಿದ್ದೇವೆಂದು ತಿಳಿದುಕೊಂಡವರು ಮೊದಲು ತಮ್ಮ ಕೀಳರಿಮೆಯಿಂದ ಹೊರಬರಬೇಕು. ನಮ್ಮಲ್ಲಿ ಸುಪ್ತವಾಗಿರುವ ಅಪಾರ ಶಕ್ತಿಯಲ್ಲಿ ಅಚಲ ವಿಶ್ವಾಸವಿಡುವುದು ಅತ್ಯಂತ ಅವಶ್ಯಕ ಮಾತ್ರವಲ್ಲ, ಮೊದಲ ಕರ್ತವ್ಯವೂ ಹೌದು.ನಾವು ನಿಂತ ಸ್ಥಾನದಿಂದ ಮೊದಲು ಏರಲು ಪ್ರಯತ್ನಿಸಬೇಕು. ನಮ್ಮ ಅಭಿರುಚಿಯ ಕೆಲಸದಲ್ಲಿ ಮೆಲ್ಲಮೆಲ್ಲನೆ ಮೇಲೇರುತ್ತ ದುರ್ಬಲಗೊಳಿಸುವ ನಿಷೇಧಾತ್ಮಕ ಭಾವನೆಯನ್ನು ಹೊರತಳ್ಳಬೇಕು. ಈ ಮೂಲಕ ಆತ್ಮವಿಶ್ವಾಸವನ್ನು ವೃದ್ಧಿಸುವ ಉಪಾಯವನ್ನು ಕಂಡುಕೊಳ್ಳಬೇಕು. ಇದು ಒಂದೇ ದಿನದಲ್ಲಿ ಆಗುವ ಕೆಲಸವಲ್ಲದಿದ್ದರೂ ತಾಳ್ಮೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಮೊದಲುಅಸಾಧ್ಯವೆಂದು ತೋರಿದರೂ ಕೊನೆಯಲ್ಲಿ ಸಾಧ್ಯವಾಗಿಯೇ ಆಗುತ್ತದೆ.

ನಾವು ಯಾವುದೇ ಕಾರ್ಯವನ್ನು ಕೈಗೊಳ್ಳಬೇಕಾದರೆ ಮುಂದಾಲೋಚನೆ ಜೊತೆ, ಪೂರ್ವ ತಯಾರಿ ಬೇಕು ಇಲ್ಲದಿದ್ದರೆ ಮನೆಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡಿದಂತಾಗುವುದು. ಏನೇ ಆಗಲಿ ಸಾಧಿಸಿದರೆ ಅಬಳ ನುಂಗಬಹುದು ಎಂಬ ಮಾತಿನಂತೆ ಯಾವುದೇ ಕೆಲಸವಾಗಲಿ ನಾನು ಮಾಡಿಯೇ ಮಾಡುತ್ತೇನೆ ಎಂಬ ಧೃಢ ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು. ಆದರೆ ಕೆಲವು ಸಂಧರ್ಭಗಳಲ್ಲಿ ನಮ್ಮ ಅತಿಯಾದ ಆತ್ಮ ವಿಶ್ವಾಸ ನಮ್ಮ ಯೋಜನೆಯನ್ನೇ ಬುಡಮೇಲು ಮಾಡಬಹುದು. ಆರೋಗ್ಯವಂತ ಆತ್ಮವಿಶ್ವಾಸವಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ.
- ಚೈತ್ರಾ ಚಂದನ್ ಪಡುಕೋಣೆ
ಕುಂದಾಪ್ರ ಡಾಟ್ ಕಾಂ- editor@kundapra.com