ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?


ಕುಂದಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಏ.7 ಕೊನೆಯ ದಿನಾಂಕವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾವಣೆ, ಪರಿಷ್ಕರಣೆ ಇಲ್ಲವೇ ರದ್ದು ಮಾಡಲು ಹತ್ತಿರದ ಪುರಸಭೆ, ಗ್ರಾಮ ಪಂಚಾಯತ್ ಇಲ್ಲವೇ  ಸಹಾಯಕ ಚುನಾವಣಾ ನೋಂದಣಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ಅರ್ಜಿ ಪಡೆಯಬೇಕು:
  • ಮತದಾರರ ಪಟ್ಟಿಯಲ್ಲಿ ನೂತನವಾಗಿ ಹೆಸರು ಸೇರಿಸಲು, ಸ್ಥಳ ಬದಲಾವಣೆ ಬಗ್ಗೆ ಮಾಹಿತಿ ನೀಡಲು ಮತ್ತು ಹೆಸರು ನಾಪತ್ತೆಯಾಗಿದ್ದರೆ ಪುನಃ ಸೇರಿಸಲು ಫಾರಂ-6 ಅನ್ನು ಬಳಸಬಹದು. 
  • ನಿಮ್ಮ ಹೆಸರನ್ನು ರದ್ದು ಪಡಿಸಲು,  ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆಸಲು ಫಾರಂ-7,
  • ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳಲ್ಲಿ ತಪ್ಪುಗಳಿದ್ದರೆ ಸರಿಪಡಿಸಲು ಫಾರಂ-8 
  • ಒಂದೇ ಚುನವಣಾ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲು ಅಂದರೆ ನಿಮ್ಮ ವಿಳಾಸ ಬದಲಾಗಿದ್ದರೆ ಫಾರಂ-8ಎ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. 
    ನೀವು ಅರ್ಜಿಯನ್ನು ಪಡೆದುಕೊಂಡ ಕಚೇರಿಯಲ್ಲಿಯೇ ಮರಳಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಮತದಾರರ ನೋಂದಣಿ ವರ್ಷಪೂರ್ತಿ ನಡೆಯುತ್ತದೆ. ಆದರೆ, ಚುನಾವಣೆ ನಡೆಯುವ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಿರುವವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿರುತ್ತದೆ. 
ಅರ್ಜಿಗಳು ಎಲ್ಲಿ ಲಭ್ಯ:
      ಆನ್ ಲೈನ್ ಮೂಲಕವು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬಹುದಾಗಿದ್ದು ಚುನಾವಣಾ ಆಯೋಗದ www.voterreg.kar.nic.in ಅಂತರ್ಜಾಲ ತಾಣದಲ್ಲಿ ಅರ್ಜಿ ನಮೂನೆಗಳು ಲಭ್ಯವಿದೆ.
      ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಸಿಇಒ ಅಥವಾ ಸಮೀಪದ ಸಹಾಯಕ ಚುನಾವಣಾ ನೋಂದಣಿ (AIRO) ಕೇಂದ್ರದಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬಹುದು. ಅಥವಾ http://ceokarnataka.kar.nic.in ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಅವಶ್ಯ ದಾಖಲೆಗಳು :
        ಎಸ್ಎಸ್ಎಲ್ ಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ವಿವಾಹ ನೋಂದಣಿ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ವಯೋಮಿತಿ ತಿಳಿಸುವ ಯಾವುದಾದರೂ ದಾಖಲೆಗಳು.
       ಕೆಲಮೊಮ್ಮೆ ಕಾರಣಾಂತರಗಳಿಂದ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೊಗುವ ಸಾಧ್ಯತೆಗಳಿರುತ್ತವೆ.  ಯಾವುದಕ್ಕೂ ಮತಪಟ್ಟಿಗೆ ಹೆಸರು ಸೇರಿಸಲು ಇರುವ ಕೊನೆ ದಿನಾಂಕ (ಏ.7) ಕಳೆಯುವ ಮುನ್ನವೇ ಒಮ್ಮೆ ಪರಿಶೀಲಿಸುವುದು ಉತ್ತಮ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆನ್ ಲೈನ್ ಮುಖಾಂತರ ಸುಲಭವಾಗಿ ತಿಳಿಯಬಹುದು. ಕರ್ನಾಟಕ ಚುನಾವಣಾ ಆಯೋಗದ ಈ ವೆಬ್ ಸೈಟಿನಲ್ಲಿ ವಿವರ ನೀಡಿ ಖಚಿತಪಡಿಸಿಕೊಳ್ಳಿ. ಅದನ್ನು ತಿಳಿಯುವ ನಾಲ್ಕು ಸುಲಭ ಹಂತಗಳು ಇಲ್ಲಿವೆ.
  •  ನಿಮ್ಮ ಬಳಿ ಕೇಂದ್ರ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಇದ್ದರೆ ಅದರಲ್ಲಿ (ಮೇಲ್ಭಾಗದಲ್ಲಿ) ನಮೂದಿಸಲಾಗಿರುವ EPIC ಸಂಖ್ಯೆ ಒದಗಿಸಿ, ಯಾವ ಕ್ಷೇತ್ರದಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ತಿಳಿಯಿರಿ. 
  • ಗುರುತಿನ ಚೀಟಿ ಇಲ್ಲದಿದ್ದರೆ ಜಿಲ್ಲೆ, ನಿಮ್ಮ, ಸಂಬಂಧಿಯ ಹೆಸರು ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳನ್ನು ನಿಖರವಾಗಿ ನೀಡಿ ತಿಳಿಯಬಹುದು
  • .ಒಂದು ವೇಳೆ 2013ರ ಜನವರಿ 16ರ ನಂತರ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆಯಾ ಅಥವಾ ಸೇರಿಸಲಾಗಿದೆಯಾ ಅಥವಾ ಮಾರ್ಪಡಿಸಲಾಗಿದೆಯಾ ಎಂಬುದನ್ನು ವಿವರಗಳನ್ನು ನೀಡಿ ತಿಳಿಯಬಹುದು. 
  • ನೀವು ಈಗಾಗಲೆ ಸಂಬಂಧಿತ ಅರ್ಜಿಯನ್ನು ಸಲ್ಲಿಸಿದ್ದರೆ, ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲಾಗಿದೆಯೋ ಇಲ್ಲವೋ ತಿಳಿಯಬಹುದು.