ಕುಂದಾಪ್ರ ಡಾಟ್ ಕಾಂ: ವರ್ಷದ ಹರ್ಷ


      ವರ್ಷದ ಹಿಂದಿನ ಮಾತಿದು. ಕಾಲೇಜು ದಿನಗಳವು. ಓಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿದ್ದಾಗ ಅಂತರ್ಜಾಲ ತಾಣವೊಂದನ್ನು ರೂಪಿಸಬೇಕು ಎಂಬ ಉತ್ಕಟತೆ ಹುಟ್ಟಿಕೊಂಡಿತ್ತು. ವಿದ್ಯಾರ್ಥಿಗಳ ಬರವಣಿಗೆಯನ್ನು ಪೋಷಿಸಲು 'ದರ್ಶನ' ವಾರ್ಷಿಕಾಂಕ, ಭಿತ್ತಿ ಪತ್ರಿಕೆಗಳು ಕಾಲೇಜಿನಲ್ಲಿ ಇತ್ತಾದರೂ ಅಂತರ್ಜಾಲ ಪತ್ರಿಕೆಯೊಂದನ್ನು ಹುಟ್ಟಿಹಾಕುವ ಕ್ರಿಯಾತ್ಮಕ ಪ್ರಯತ್ನಕ್ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗವಾಗಲಿ, ಗಣಕ ವಿಜ್ಞಾನ ವಿಭಾಗವಾಗಲಿ ಮನಸ್ಸು ಮಾಡಿರಲಿಲ್ಲ. ಪತ್ರಿಕೋದ್ಯಮದಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದ ನನಗೆ, ಅದೇನಾದರೂ ಸಾಧಿಸಬೇಕು ಎಂಬ ಬಯಕೆಯಿತ್ತು. ಹೇಗೆ ಎಂಬುದಕ್ಕೆ ಉತ್ತರವೂ ದೊರೆಯಿತು. ಅದರ ಬೆನ್ನಲ್ಲೇ ಹತ್ತಾರು ಯೋಜನೆಗಳು ಹಾಕಿಕೊಂಡದ್ದಾಯ್ತು.  'ಬಿಂಬ' ಎಂಬ ಹೆಸರಿನೊಂದಿಗೆ ಬ್ಲಾಗ್ ಆರಂಭಿಸಿದೆ. ಕಾಲೇಜಿನ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಬಂತು. ವಿದ್ಯಾರ್ಥಿಗಳಿಂದಲೇ ಲೇಖನಗಳ ಸರಣಿ ಆರಂಭವಾಯ್ತು. ಆದರೆ ಬ್ಲಾಗ್ ಗೆ ಕಾಲೇಜಿನಲ್ಲಿ ಅಧಿಕೃತ ಮಾನ್ಯತೆ ದೊರಕಿಸಬೇಕೆಂಬ ನನ್ನ ಉದ್ದೇಶವಾಗಿತ್ತು. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರ ಬಳಿ ಸಾಕಷ್ಟು ಚರ್ಚಿಸಿದ ಬಳಿಕ ನನ್ನ ನಿಲುವನ್ನೇ ಬದಲಿಸಿಕೊಂಡೆ. ಸ್ವಾತಂತ್ರ್ಯವಿರದ ಆ ನಿಯಮಾವಳಿಗಳ ನಡುವೆ ಮನ್ನಡೆಯಲು ನನಗೊ, ಇಷ್ಡವಿರಲಿಲ್ಲ. 
     ಹೌದು ಈ ಎಲ್ಲಾ ಬೆಳವಣಿಗೆಗಳೇ ಕುಂದಾಪ್ರ ಡಾಟ್ ಕಾಂ ಹುಟ್ಟಿಗೆ ಸ್ಪೂರ್ತಿಯಾಯಿತು. ಕುಂದಾಪ್ರ ಡಾಟ್ ಕಾಂ ಅನ್ನು ಕಾಲೇಜಿನಲ್ಲಿಯೇ ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಏಜುಕೇಶನ್ ನ ಆಡಳಿತಾಧಿಕಾರಿ ಡಾ| ಹೆಚ್. ಶಾಂತಾರಾಮ್ ಅವರಿಂದ ಲೋಕಾರ್ಪಣೆಗೋಳಿಸಲಾಯಿತು. ಅಂತರಾಷ್ಟ್ರೀಯ ಜಾದುಗಾರ್ ಓಂ ಗಣೇಶ್, ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ್ ದೋಮ ಹಾಗೂ ಸ್ನೇಹಿತರು ಇದಕ್ಕೆ ಸಾಕ್ಷಿಯಾದರು. 
     ಅಂದಿನಿಂದ ಇಂದಿನ ತನಕ ಒಂದಿಲ್ಲೊಂದು ರೀತಿಯಲ್ಲಿ ಕುಂದಾಪುರವನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಕುಂದಾಪ್ರ ಡಾಟ್ ಕಾಂ ಮಾಡುತ್ತಲೇ ಬಂದಿದೆ. ಆದಾಯವಿಲ್ಲದೇ ನಡೆಸುತ್ತಿದ್ದ ಪೋರ್ಟಲ್ ಆಗಿದ್ದರಿಂದ ಸುದ್ದಿ-ಲೇಖನಗಳಲ್ಲಿ ವ್ಯತ್ಯಗಳಾಗಿವೆ, ತಡವಾಗಿದೆ, ಬೇರೆಯದೇ ಕಾರಣಗಳಿಂದ ತಾಂತ್ರಿಕ ದೋಷಗಳುಗಳು ಕಂಡುಬಂದಿದೆ. ಅದೆಲ್ಲವನ್ನು ಮೀರಿ ನೀವು ಹರಸಿದ್ದಿರಿ. ಹರಸುತ್ತಿದ್ದಿರಿ. 
    ನಿಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ, ಪ್ರೋತ್ಸಾಹ ನೋಡಿ ಆಡಲು ಮಾತುಗಳಿಲ್ಲವಾಗಿತ್ತು. ಅಂತು ಹಲವು ಏಳು-ಬಿಳುಗಳ ನಡುವೆ ಕುಂದಾಪ್ರ ಡಾಟ್ ಕಾಂ ಒಂದು ವರ್ಷ ಪೂರೈಸಿದೆ. 
      ಇದೀಗ ನಮ್ಮ ಜವಾಬ್ದಾರಿಗಳು ಹೆಚ್ಚಿವೆ. ಸಾಮಾಜಿಕ ಬದ್ದತೆಗಳೂ ಹೆಚ್ಚಿವೆ. ಕುಂದಾಪುರ ಕೇವಲ ಒಂದು ಪ್ರದೇಶ ಮಾತ್ರವಲ್ಲ. ಅದೊಂದು ಸಂಸ್ಕ್ರತಿ, ಅಂದೊಂದು ಜನಜೀವನ ಎಂದು ಸಾರುತ್ತಾ, ನಮ್ಮೂರಿನ ವೃವಿಧ್ಯತೆಗಳನ್ನು ನಾಡಿಗೆ ತಿಳಿಸುತ್ತ, ವಸ್ತುನಿಷ್ಠ ವರದಿಗಳ ಮೂಲಕ ಮುನ್ನಡೆಯುತ್ತ,  ಸ್ವಸ್ಥ ಸಮಾಜವನ್ನು ಹುಟ್ಟುಹಾಕುವಲ್ಲಿ ಶ್ರಮಿಸುತ್ತಾ ಸಹೃದಯಿ ಓದುಗರನ್ನು ಸೆಳೆಯುತ್ತಾ ಮುನ್ನಡೆಯುವ ಇರಾದೆ ನಮ್ಮದು. ಇನ್ನೂ ಪೋರ್ಟಲ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಇನ್ನಷ್ಟು ಜನರನ್ನೂ ತಲುಪಬೇಕಿದೆ. ಇವೆಲ್ಲವನ್ನೂ ಸಾಧಿಸಲು ಆರ್ಥಿಕವಾಗಿ ಸಬಲರಾಗಬೇಕಿದೆ. 
      ಕುಂದಾಪ್ರ ಡಾಟ್ ಕಾಂ  ಹುಟ್ಟಿಗೆ ಕಾರಣರಾದ ಗುರು ಶೇಖರ್ ಅಜೆಕಾರ್, ಆರಂಭದಲ್ಲಿ ಸಹಕಾರವಿತ್ತ ಭಂಡಾರ್ಕಾರ್ಸ್ ಕಾಲೇಜಿನ ಮಿತ್ರವೃಂದ, ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ್ ದೋಮ ಮತ್ತು ಆಡಳಿತ ವರ್ಗ, ಮಾರ್ಗದರ್ಶನವಿತ್ತ ಸಂತೋಷ ಕೋಣಿ, ಓಂ ಗಣೇಶ, ಎ.ಎಸ್.ಎನ್. ಹೆಬ್ಬಾರ್, ಚಂದ್ರ ಕೆ. ಹೆಮ್ಮಾಡಿ, ನರೇಂದ್ರ ಗಂಗೊಳ್ಳಿ, ಆರಂಭದಲ್ಲಿ ತಾಂತ್ರಿಕ ಸಹಕಾರ ನೀಡಿದ ಗೌತಮ್ ನಾವಡ, ವರದಿ ನೀಡಿದ ಯೋಗಿಶ್ ಕುಂಭಾಶಿ, ನಮ್ಮ ಅಂಕಣಕಾರರು, ಈಗ ತಾಂತ್ರಿಕ ಸಹಕಾರ ನೀಡುತ್ತಿರುವ ಆತ್ಮೀಯ ದಿನೇಶ ಹೊಳ್ಳ, ನಮ್ಮೆಲ್ಲಾ ಬರಹಗಾರರು, ಹಿತೃಷಿಗಳು ಹಾಗೂ ನಮ್ಮ ಓದುಗರೆಲ್ಲರಿಗೂ ನಾನು ಚಿರಋಣಿ.
-ಸುನಿಲ್ ಬೈಂದೂರು.


ವರ್ಷದ ಅವಲೋಕನದ ಒಂದು ವಿಡಿಯೊ ತುಣುಕು