ಅಕ್ಷಯ ತೃತೀಯವೆಂಬ ಸುದಿನ


      ಭಾರತೀಯ ಹಿಂದೂ ಹಬ್ಬಗಳಲ್ಲಿ ಯುಗಾದಿ ನಂತರದ ಸ್ಥಾನ ಅಕ್ಷಯ ತೃತೀಯಕ್ಕೆ ಸಲ್ಲುತ್ತದೆ. ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿ ಕೊಂಡಿರುವ, ಜೀವನದ ಅಭಿವೃದ್ಧಿ ಕುರಿತು ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾ ಸುದಿನವಾಗಿದೆ.
   ಅಕ್ಷಯವೆಂದರೆ, ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನತೆ ಇಲ್ಲದ್ದು, ಇದು ಸಂವೃದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರೆಯ ಪ್ರತೀಕ. ಆದ್ದರಿಂದಲೇ ಈ ದಿನವಸ ಶುಭಕಾರ್ಯಗಳ ಪ್ರಾರಂಭ, ಗೃಹಪ್ರವೇಶ, ಅಕ್ಷರಾಭ್ಯಾಸ, ಹೊಸ ಉದ್ಯಮ, ವ್ಯಾಪಾರ, ವ್ಯವಹಾರಗಳ ಪ್ರಾರಂಭ ಉಪನಯನ, ವಿವಾಹ, ಹಣ ಹೂಡಿಕೆ, ಬಂಗಾರದ ಖರೀದಿ, ದಾನ ಕಾರ್ಯ, ಪೂಜೆ, ಪುನಸ್ಕಾರಗಳಿಗೆ ಅತ್ಯಂತ ಶ್ರೇಷ್ಠವಾಗಿದೆ. ಈ ದಿವಸ ಯಾವುದೇ ಸತ್ಕಾರ್ಯ, ಸಮಾರಂಭ, ಖರೀದಿಸಿದ ಬಂಗಾರ, ವಿಶೇಷವಾಗಿ ಆಭರಣ, ಮಾಡಿದ ಪೂಜೆ-ಪುನಸ್ಕಾರ, ಜಪ-ತಪ, ದಾನ-ಧರ್ಮಗಳಿಗೆ ಅಕ್ಷಯಫಲ ಪ್ರಾಪ್ತಿ ಎಂದು ಹೇಳಲಾಗಿದೆ. ಈ ದಿವಸ ಸಾಮಾನ್ಯವಾಗಿ ಎಲ್ಲ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು.
        ಈ ದಿವಸ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ. ಈ ಶುಭ ದಿವಸದಂದು ವಿಷ್ಣು ಮತ್ತು ಲಕ್ಷ್ಮೀ, ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ ತೃತೀಯ ದಿವಸ. ಈ ದಿವಸ ಕೃತ ಯುಗದ ಪ್ರಾರಂಭ ದಿನ. ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಹಾಗೂ 12ನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರವರು ಜನಿಸಿದ್ದು, ಈ ದಿವಸದಂದು. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಈ ದಿವಸ ವಿಷ್ಣುವಿನ ಪೂಜೆಗೆ ಮೊದಲ ಆದ್ಯತೆಯಿದೆ.
       ಹಿಂದುಗಳ ಪವಿತ್ರ ದಿನಗಳಲ್ಲಿ ಪವಿತ್ರವಾದ ಮೂರುವರೆ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯತತೀಯ. ವಿಜಯ ದಶಮಿ ಮತ್ತು ಬಲಿಪಾಡ್ಯಮಿ ದಿವಸ ಶುಭಕಾರ್ಯಗಳಿಗೆ ಪಂಚಾಂಗ ಶುದ್ಧಿ ನೋಡುವ ಅವಶ್ಯಕತೆ ಇರುವುದಿಲ್ಲ.
       ಅಕ್ಷಯ ತೃತೀಯ, ವೈಶಾಖಮಾಸ ಶುಕ್ಲಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಈ ದಿವಸ ಸೂರ್ಯ ಮತ್ತು ಚಂದ್ರನು ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದುವುದರಿಂದ, ಈ ದಿನವಿಡೀ ಶುಭ ದಾಯಕವಾಗಿರುತ್ತದೆ. ಈ ದಿವಸ ಸೂರ್ಯೋದಯಕ್ಕೆ ತೃತೀಯ ತಿಥಿಯಿದ್ದು, ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಶುಭದಾಯಕವಾಗಿರುತ್ತದೆ. ಬುಧವಾರವಾಗಿದ್ದರೆ ಅತ್ಯಂತ ಶುಭವಾಗಿರುತ್ತದೆ. ಮೇ 13 ರಂದು ಸೋಮವಾರ ದಿವಸ ಅಕ್ಷಯ ತೃತೀಯ ಬಂದಿದೆ.
       ಅಕ್ಷಯ ತೃತೀಯ ಹಲವು ಪರಂಪರೆಗಳ ಪ್ರಾರಂಭ ದಿನ. ತ್ರೇತಾಯುಗದ ಪ್ರಾರಂಭದಿನ. ಅಕ್ಷಯ ತೃತೀಯ ದಿನದಂದೇ. ಮಹರ್ಷಿ ವೇದವ್ಯಾಸರು ಗಣಪತಿ ಅಮೃತಹಸ್ತದಿಂದ ಮಹಾಭಾರತದ, ಮಹಾಕಾವ್ಯ ಬರವಣಿಗೆ ಪ್ರಾರಂಭಿಸಿದ್ದು, ಕುಬೇರ ಸಂಪತ್ತಿಗೆ ಒಡೆಯ, ದೇವತೆಗಳಲ್ಲೆಲ್ಲ ಅತಿಸಿರಿವಂತ. ಅಷ್ಟಾಧಿಕ್ಪಾಲಕನಾದ ಕುಬೇರ, ತಾನೇ ಮಹಾಲಕ್ಷೀ ಪೂಜೆ ಮಾಡಿದ್ದು ಈ ಶುಭದಿವಸವೇ ಆಗಿದೆ. ಆದ್ದರಿಂದಲೇ ಪುರುಷಾರ್ಥ ಸಾಧನೆಗಾಗಿ ಈ ಶುಭ ದಿವಸ, ಕುಬೇರ ಹಾಗೂ ಲಕ್ಷ್ಮೀ ಇವರ ಪೂಜೆಯನ್ನುಮಾಡಲಾಗುತ್ತದೆ. 
      ಪಾಂಡವರು ವನವಾಸದಲ್ಲಿದ್ದಾಗ ಶ್ರೀಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು, ಅಕ್ಷಯ ತೃತೀಯ ದಿವಸವೇ ಹಾಗೂ ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ, ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು, ಅಕ್ಷಯ ತೃತೀಯದಂದು, ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ಅಕ್ಷಯ ತೃತೀಯ ದಿನದಂದು. ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ ಶ್ರೇಷ್ಠದಿನ. ಕೃಷ್ಣನ ಅಣ್ಣ ಬಲರಾಮನು ಜನಿಸಿದ್ದು ಈ ಶುಭ ದಿವಸದಂದೆ. ವಿಷ್ಣುವಿನ ಆರನೇ ಅವತಾರ ಪರಶುರಾಮನು ಜನಿಸಿದ್ದು ಸಹ ಈ ದಿವಸದಂದೆ.
     ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳಿಗೆ ಸನಾತನ ಸಂಸ್ಕೃತಿ ಮತ್ತು ಧರ್ಮಗಳಲ್ಲಿ ಬಹಳ ಮಹತ್ವವಿದೆ. ಧರ್ಮವು ಕರ್ತವ್ಯ, ಅಧ್ಯಾತ್ಮಿಕವನ್ನು, ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷ, ಆಕಾಂಕ್ಷೆಗಳನ್ನು, ಮೋಕ್ಷ ಈ ಭೌಮ ಬಂಧನದಿಂದ ಮುಕ್ತನಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿಯಾವುದಾದರೊಂದರ ಪ್ರಾರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲ ರೀತಿಯಿಂದಲೂ ಅನುಕೂಲವಾದ ಶುಭದಿವಸ ಈ ಅಕ್ಷಯ ತೃತೀಯ.
      ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗೂ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀ ವರ್ಷ ಉತ್ತಮ ಫಲ ದೊರೆಯುತ್ತದೆ.
      ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗೂ ಸಮೃದ್ಧಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತದೆ.

* ಆರ್. ಸೀತಾರಾಮಯ್ಯ
                                                                                                                                                                                                                                                   (ಲೇಖನ ಕೃಪೆ: ವಿಕ )