ಬೈಂದೂರಿನ ಕೈಗೆ ಕೊನೆಗೂ ದಕ್ಕಲಿಲ್ಲ ಮಂತ್ರಿಪಟ್ಟ.


ಬೈಂದೂರು: ಕ್ಷೇತ್ರದಲ್ಲಿ ನಾಲ್ಕನೇ ಭಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕೆ. ಗೋಪಾಲ ಪೂಜಾರಿ ಅವರಿಗೆ ಸಿದ್ದು ಸಂಪುಟದಲ್ಲಿ ಮಂತ್ರಿ ಪದವಿ ಸಿಗಬಹುದು ಎಂಬ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. 
     ಪೂಜಾರಿ ಅವರಿಗೆ ಮಂತ್ರಿ ಪದವಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳು ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅದು ಕೊನೆಗೂ ಹುಸಿಯಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಇಂದಿನ ತನಕ ಯಾರೋಬ್ಬರಿಗೂ ಸಚಿವ ಸ್ಥಾನ ದಕ್ಕಿಲ್ಲ. ಇದೀಗ ಕ್ಷೇತ್ರದ ಶಾಸಕರಾದ ಗೋಪಾಲ ಪೂಜಾರಿ ಅವರನ್ನು ಕಡೆಗಣಿಸುವುದರ ಮೂಲಕ ಜಿಲ್ಲೆಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಬೈಂದೂರಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ಯಾಯವೆಸಗಿದೆ ಎಂಬ ಅಸಮಾಧಾನ ಕಾರ್ಯಕರ್ತರಲ್ಲಿ ಮೂಡಿದೆ. ಕಳೆದ ಭಾರಿ ಕುಂದಾಪುರದ ಶಾಸಕರಾಗಿ ಮೂರು ಭಾರಿ ಆಯ್ಕೆಯಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಬಿಜೆಪಿ ಸರಕಾರದ ಮಂತ್ರಿ ಪದವಿ ಕೈತಪ್ಪಿ ಹೊದದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಯಾವ ಸರಕಾರ ಬಂದರೂ ಈ ಭಾಗದ ಜನನಾಯಕರಿಗೆ ಮಂತ್ರಿ ಪದವಿ ದೋರಕದೇ ಇರುವುದು ವಿಪರ್ಯಾಸವೇ ಸರಿ.


ಶಾಸಕನಾಗಿದ್ದುಕೊಂಡೇ ಕ್ಷೇತ್ರದ ಅಭಿವೃದ್ಧಿ ಮಾಡುವೆ - ಶಾಸಕ ಗೋಪಾಲ ಪೂಜಾರಿ
ಮಂತ್ರಿಪದವಿ ದೊರಕದಿರುವುದರಿಂದ ಬೈಂದೂರಿನ ಜನತೆಗೆ ನಿರಾಶೆಯಾಗಿದೆ. ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷನಾಗಿ, ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮರು ಚುನಾವಣೆಯಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಯ ನೇತೃತ್ವ ವಹಿಸಿ ಪಕ್ಷದ ಗೆಲುವಿಗೆ ಶ್ರಮಿಸಿದ್ದ ತನಗೆ ಹೈಕಮಾಂಡ್ ಮಂತ್ರಿ ಪದವಿ ನೀಡಬಹುದೆಂಬ ಭಾವನೆ ಜನತೆಯಲ್ಲಿದ್ದುದರಿಂದ ಸಹಜವಾಗಿಯೇ ನಿರಾಶೆಯಾಗಿದೆ. ಆ ಬಗ್ಗೆ ನನಗೆ ಬೇಸರವಿಲ್ಲ. ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತೆನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಮಂತ್ರಿ ಪದವಿ ದೊರೆಯಲಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ದ್ರೋಹ ಬಗೆಯಲಾರೆ.