ಕುಂದಾಪುರ: ತಾಲೂಕಿನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕುಂದಾಪುರ-ಶೇ. 75.89, ಬೈಂದೂರು-ಶೇ.75.55 ಮತದಾನ ದಾಖಲಾಗಿದೆ.
ಬೆಳಿಗ್ಗೆ 7ರಿಂದ ಸಂಜೆ 6 ತನಕ ಮತದಾನ ನಡೆದಿದ್ದು, 451 ಮತಗಟ್ಟೆಗಳ ಮೂಲಕ 3,76,684 ಮತದಾರರ ಪೈಕಿ 284460 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕುಂದಾಪುರದಲ್ಲಿ 1,81,873 ಮತದಾರರ ಪೈಕಿ 1,36,404 ಮಂದಿ ಮತ ಚಲಾಯಿಸಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ 1,94,811 ಮತದಾರರಲ್ಲಿ 1,48,056 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ತಾಲೂಕಿನ ನಕ್ಸಲ್ ಸಕ್ರಿಯ ಪ್ರದೇಶಗಳಲ್ಲಿ ಶೇ.70ಕ್ಕೂ ಮಿಕ್ಕಿ ಮತದಾನ ನಡೆದಿದೆ. ಹೊಸಂಗಡಿಯಲ್ಲಿ ಶೇ.82, ಯಡಮೊಗೆ ಶೇ.79, ಮಡಾಮಕ್ಕಿ ಶೇ.82, ಅಮಾಸೆಬೈಲು ಶೇ.72 ಮತದಾನ ದಾಖಲಾಗಿದೆ.
ಬೈಂದೂರು, ಮರವಂತೆ, ಗಂಗೊಳ್ಳಿಯಲ್ಲಿನ ಸಣ್ಣ ಮಟ್ಟದ ಗೊಂದಲ ಹೊರತುಪಡಿಸಿ ಉಳಿದಂತೆ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ 7ರಿಂದ 10 ಗಂಟೆ ತನಕ ಉತ್ತಮ ಮತದಾನ ನಡೆದಿದ್ದು, ಬಳಿಕ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ಹೊತ್ತು ತಾಲೂಕಿನಲ್ಲಿ ಒಟ್ಟು ಶೇ.57ರಷ್ಟು ಮತದಾನ ನಡೆದಿತ್ತು.
ಶುಭಸಮಾರಂಭಗಳ ಭರಾಟೆ ಹೆಚ್ಚಿದ್ದರಿಂದ ಮತದಾನ ಕುಂಠಿತವಾಗಬಹುದೆಂಬ ಆತಂಕವಿತ್ತು. ಆದರೆ ಸಂಜೆ 3 ಗಂಟೆ ತನಕ ಮತದಾನ ಚುರುಕುಗೊಂಡಿತು. ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಶತಾಯುಷಿಗಳಿಂದ ಹಿಡಿದು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವಕ, ಯುವತಿಯರು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
KUNDAPURA ELECTION, VOTING 75% VOTING IN KUNDAPURA AND BYNDOOR UDUPI DISTRICT VOTING