ಹಾಲಾಡಿಗೆ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ

ಕುಂದಾಪುರ: ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ನಿರೀಕ್ಷೆಯಂತೆ ಗೆಲುವು ಲಭಿಸಿದೆ.   

      ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಶಾಸಕರಾಗಿದ್ದ ಹಾಲಾಡಿ ಅವರು, ಕೊನೆಯ ಮಂತ್ರಿಮಂಡಲ ಪುನಾರಚನೆ ಸಂದರ್ಭದಲ್ಲಿ ಮಂತ್ರಿಗಿರಿ ಭರವಸೆ ಪಡೆದು ಕೊನೆಯ ಕ್ಷಣದಲ್ಲಿ ಅದು ಕೈ ತಪ್ಪಿದ್ದರಿಂದ ನೊಂದು ಬಿಜೆಪಿಯ ಶಾಸಕ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ತಟಸ್ಥರಾಗಿದ್ದರು. ಆ ಬಳಿಕ ಚುನಾವಣೆ ಘೊಷಣೆಯಾದ ಸಂದರ್ಭದಲ್ಲಿ ತಮ್ಮ ಅಭಿಮಾನಿ ಬೆಂಬಲಿಗರ ಒತ್ತಡಕ್ಕೆ ಮಣಿದು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದರು. ಜೆಡಿಎಸ್‌ ಈ ಕ್ಷೇತ್ರದಲ್ಲಿ ತನ್ನ ಬೆಂಬಲವನ್ನು ಹಾಲಾಡಿ ಅವರಿಗೆ ಘೋಷಿಸಿದ್ದರಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.  ಬಿಜೆಪಿಯಿಂದ ಹೊರನಡೆದ ಅಭ್ಯರ್ಥಿಗಳು ತಿರುಗಿ ಬಿದ್ದು ಗೆಲುವಿನ ಬಾವುಟ ಹಿಡಿಯುದರ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ನಿಂದ ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಬಿಜೆಪಿಯಿಂದ ಕಿಶೋರ್ ಕುಮಾರ್ ಸ್ಪರ್ಧೆಯಲ್ಲಿದ್ದರೂ ಹಾಲಾಡಿ ಅವರ ಸಮಕ್ಕೆ ಹೋರಾಟ ನೀಡಲು ವಿಫಲರಾಗಿದ್ದಾರೆ. 
     ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಗೆಲ್ಲುವುದಕ್ಕೆ ಸಮರ್ಥ ಅಭ್ಯರ್ಥಿ ಸಿಗದೆ ಪರದಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಒದ್ದಾಡಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ತನ್ನ ಕಾರ್ಯತಂತ್ರ ಸಿದ್ಧಿಸಿಕೊಂಡಿತ್ತು. ಹ್ಯಾಟ್ರಿಕ್ ವಿಜೇತ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲು ಕಷ್ಟಸಾಧ್ಯ ಎಂಬುದರನ್ನು ಅರಿತ ಜೆಡಿಎಸ್ ಇಬ್ಬರ ಜಗಳದ ನಡುವೆ ಲಾಭ ಪಡೆದುಕೊಂಡಿತ್ತು. 1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಹಾಗೂ 2008ರನ್ನು ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಅಂತರದಿಂದ ಸೋಲಿಸಿ ಹ್ಯಾಟ್ರೆಕ್ ಸಾಧಿಸಿದರು. ಹಾಲಾಡಿ ಅವರು 1,24,716 ಮತ ಗಳಿಸಿದ್ದರು.