ಅಮೇರಿಕದ 'ನ್ಯಾಷನಲ್ ಜಿಯೊಗ್ರಾಫಿಕ್ ಬೀ' ಸ್ಪರ್ಧೆ ಗೆದ್ದ ಕುಂದಾಪುರ ಮೂಲದ ಹುಡುಗ


ಕುಂದಾಪುರ: ಅಮೇರಿಕದ ಪ್ರತಿಷ್ಠಿತ 'ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ' ನಡೆಸುವ 'ರಾಷ್ಟ್ರೀಯ ಜಿಯೋಗ್ರ್ರಫಿಕ್ ಬೀ' ರಸಪ್ರಶ್ನೆ ಸ್ಪರ್ಧೆಯಲ್ಲಿ   ಕುಂದಾಪುರದ ಸುಳ್ಸೆ ಮೂಲದ ಸಾತ್ವಿಕ್ ಕರ್ಣಿಕ್ ಜಯಸಾಧಿಸಿದ್ದಾನೆ. ಸ್ವರ್ಧೆಯಲ್ಲಿ ಕೇಳಲಾದ ಎಲ್ಲ 5 ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ ಸಾತ್ವಿಕ್ ತನ್ನ ಸಮೀಪದ ಪ್ರತಿಸ್ಪರ್ಧಿಯಾದ 13 ವರ್ಷದ ಕೊನಾರ್ಡ್ ಒಬರ್‌ಹಾಸ್ ನನ್ನು ಹಿಂದಿಕ್ಕಿ ವಿಜೇತನಾಗಿದ್ದಾನೆ. ಈ ಮೂಲಕ ಸತತ 6ನೇ ವರ್ಷವೂ ಜಿಯೋಗ್ರಫಿಕ್ ಬೀ ಪ್ರಶಸ್ತಿಯು ಭಾರತೀಯ ಮೂಲದವರ ಪಾಲಾದಂತಾಗಿದೆ.
       ಅಮೆರಿಕದ ದಕ್ಷಿಣ ಬೋಸ್ಟನ್‌ನ ನೋರ್‌ಫೋಕ್ ಸಿಟಿಯ ಕಿಂಗ್ ಫಿಲಿಪ್ ಪ್ರಾದೇಶಿಕ ಮಾಧ್ಯಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ  12 ವರ್ಷದ ಸಾತ್ವಿಕ್, 'ಭೂ ಕೇಂದ್ರದಿಂದ ಅತ್ಯಂತ ದೂರದಲ್ಲಿರುವ ಬಿಂದು ಯಾವುದು?, ಎಂಬ ರಸಪ್ರಶ್ನೆಯ ಅಂತಿಮ ಸವಾಲಿಗೆ ಈಕ್ವೇಡಾರ್‌ನ 'ಚಿಂಬೊರಾಜೊ' ಬೆಟ್ಟ ಎಂಬ ಸರಿಯುತ್ತರ ನೀಡಿ ಅಮೆರಿಕದ ಅತ್ಯಂತ ಬುದ್ಧಿವಂತ 'ಬೀ' ಎನಿಸಿಕೊಂಡಿದ್ದಾನೆ.

ವಿದ್ಯಾರ್ಥಿ ವೇತನ- ಪ್ರಶಸ್ತಿ:
  ಸಾತ್ವಿಕ್ 'ಬೀ' ಪ್ರಶಸ್ತಿ ಫಲಕದ ಜತೆಯಲ್ಲಿ 25 ಸಾವಿರ ಡಾಲರ್ ಮೌಲ್ಯದ (ಅಂದಾಜು ರೂ13.75 ಲಕ್ಷ)  ಕಾಲೇಜು ವ್ಯಾಸಂಗದ ವಿದ್ಯಾರ್ಥಿ ವೇತನವನ್ನು ಬಹುಮಾನ ರೂಪದಲ್ಲಿ ಗಳಿಸಿರುವುದಲ್ಲದೇ, ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿಯ ಆಜೀವ ಸದಸ್ಯತ್ವ ಹಾಗೂ ಕೊನೆ ಪ್ರಶ್ನೆಯ ಸರಿಯುತ್ತರವಾದ ಚಿಂಬೊರಾಜೊ ಬೆಟ್ಟಕ್ಕೆ ಪ್ರವಾಸ ಹೋಗುವ ಅವಕಾಶವನ್ನೂ ಪಡೆದುಕೊಂಡಿದ್ದಾನೆ.

ಹೆತ್ತವರ ಕನಸನ್ನು ನನಸಾಗಿಸಿದ ಸಾತ್ವಿಕ್:
ಕುಂದಾಪುರ ಮೂಲದ ಸುಳ್ಸೆ ಯ ಸಾತ್ವಿಕ್‌ನ ತಂದೆ ವಿಶ್ವನಾಥ್ ಕರ್ಣಿಕ್ ಹಾಗೂ ತಾಯಿ ರತ್ನಾವತಿ, ಇಬ್ಬರೂ ಸುರತ್ಕಲ್‌ನ ಎನ್‌ಐಟಿಕೆಯ ಎಂಜಿನಿಯರ್  ವಿದ್ಯಾರ್ಥಿಗಳು. ಈ ದಂಪತಿ ತಮ್ಮಿಬ್ಬರು ಮಕ್ಕಳನ್ನು 'ಬೀ' ಸ್ಪರ್ಧೆಗಾಗಿ ವರ್ಷಗಟ್ಟಲೇ ತರಬೇತು ನೀಡಿದ್ದರು. ತಾಯಿ ರತ್ನಾವತಿ ತಮ್ಮ ಕೆಲಸವನ್ನು ತೊರೆದು ಮಕ್ಕಳಿಗೆ ಮಾರ್ಗದರ್ಶನ ನೀಡುವುದಕ್ಕೇ ಸಮಯ ಮಿಸಲಿರಿಸಿದ್ದರು.  ಮೊದಲ ಮಗ ಕಾರ್ತಿಕ್ ಕರ್ಣಿಕ್ 2011ರ ಸ್ಪರ್ಧೆಯಲ್ಲಿ 5 ಹಾಗೂ 2012ರ ಸ್ಪರ್ಧೆಯಲ್ಲಿ 6ನೇ ಸ್ಥಾನ ಗಳಿಸಿಕೊಂಡಿದ್ದ. ಈದೀಗ ಕಿರಿಯ ಮಗ ಸಾತ್ವಿಕ್ ಈ ಬಾರಿಯ 'ನ್ಯಾಷನಲ್ ಜಿಯೊಗ್ರಾಫಿಕ್ ಬೀ' ಸ್ವರ್ಧೆಯಲ್ಲಿ ವಿಜಯಿಯಾಗಿ ಹೆತ್ತವರ ಕನಸನ್ನು ನನಸಾಗಿಸಿದ್ದಾನೆ.

ಭಾರತೀಯರದೇ ದರ್ಬಾರು:
      ಸುಮಾರು 40 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯ 10 ಅಂತಿಮ ಸ್ಪರ್ಧಾಳುಗಳಲ್ಲಿ 8 ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳೇ ಆಗಿದ್ದು, ಮೂರನೇ ಹಾಗೂ ನಾಲ್ಕನೆಯ ವಿಜೇತರೂ ಭಾರತೀಯರೇ ಆಗಿದ್ದಾರೆ. ಅಟ್ಲಾಂಟಾದಲ್ಲಿ ವಾಸಿಸುತ್ತಿರುವ ಸಂಜೀವ್ ಉಪ್ಪಲುರಿ (11) ಹಾಗೂ ವರ್ಜಿನಿಯಾ ನಿವಾಸಿ ಅಖಿಲ್ ರೇಕುಲಾಪಲ್ಲಿ (12) ಕ್ರಮವಾಗಿ ಮೂರನೇ ಹಾಗೂ ನಾಲ್ಕನೆಯ ಸ್ಥಾನ ಗಳಿಸಿಕೊಂಡಿದ್ದಾರೆ. ಎರಡನೇ ಸ್ಥಾನವನ್ನು ಅಮೆರಿಕದ ಕೊನಾರ್ಡ್ ಒಬರ್‌ಹಾಸ್ (13) ಪಡೆದುಕೊಂಡಿದ್ದಾನೆ. ಇವರಿಗೆ ತಲಾ 15 ಸಾವಿರ ಡಾಲರ್ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ. ಇತರ ಅಂತಿಮ ಸ್ಪರ್ಧಾಳುಗಳಿಗೆ ತಲಾ 500 ಡಾಲರ್ ಹಣ ನೀಡಲಾಗುತ್ತದೆ.
     ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ ನಡೆಸುವ 'ಬೀ' ಸ್ಪರ್ಧೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರತೀಯ ಮೂಲದವರೇ ಸತತವಾಗಿ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ. 'ಜಿಯೊಗ್ರಾಫಿಕ್ ಬೀ' ಸ್ಪರ್ಧೆಯಲ್ಲಿ 2008ರಲ್ಲಿ ಅಕ್ಷಯ್ ರಾಜಗೋಪಾಲ್ ಹಾಗೂ 2012ರಲ್ಲಿ ರಾಹುಲ್ ನಾಗ್ವೇಕರ್ ಯಶ ಪಡೆದಿದ್ದರು. 'ಸ್ಪೆಲ್ಲಿಂಗ್ ಬೀ' ಸ್ಪರ್ಧೆಯಲ್ಲಂತೂ 2008ರಿಂದಲೂ ಭಾರತೀಯ ಮೂಲದ ವಿದ್ಯಾರ್ಥಿಗಳೇ ದಿಗ್ವಿಜಯ ಸಾಧಿಸುತ್ತಿದ್ದು, ಸಮೀರ್ ಮಿಶ್ರಾ (2008), ಕಾವ್ಯ ಶಿವಶಂಕರ್ (2009), ಅನಾಮಿಕಾ ವೀರಮಣಿ (2010), ಸುಕನ್ಯಾ ರಾಯ್ (2011) ಹಾಗೂ ಸ್ನಿಗ್ಧಾ ನಂದಿಪಾಟಿ (2012) ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿಯ ಆಜೀವ ಸದಸ್ಯತ್ವ ಪಡೆದಿದ್ದರು. ಈ ಭಾರಿ `ಜಿಯೋಗ್ರಫಿ ಬೀ' ಮತ್ತು `ಸ್ಪೆಲಿಂಗ್ ಬೀ' ಎರಡೂ ಪ್ರಕಾರಗಳಲ್ಲಿ ಸಾತ್ವಿಕ್ ವಿಜೇತನಾಗಿದ್ದಾನೆ. 1989ರಿಂದ ಈ ಸ್ಪರ್ಧೆ ನಡೆಯುತ್ತಿದೆ.

       ಸಾತ್ವಿಕ್ ಸಾಧನೆ ನಿಜಕ್ಕೂ ಕುಟುಂಬದ ಹಾಗೂ ದೇಶದ ಹೆಮ್ಮೆಯ ವಿಚಾರ. ಆತನ ಅಣ್ಣ ಕಾರ್ತಿಕ್‌ನಿಂದ ಸ್ಪೂರ್ತಿ ಪಡೆದು, ಈ ಮಟ್ಟದಲ್ಲಿ ಯಶಸ್ಸು ಗಳಿಸುವುದು ತಮ್ಮನಿಗೆ ಸಾಧ್ಯವಾಯಿತು. ಕಳೆದ ಸಾಲಿನಲ್ಲಿ ಇದೇ ಪ್ರಶಸ್ತಿ ಚಿಕ್ಕ ಅಂತರದಲ್ಲಿ ಕಾರ್ತಿಕ್‌ಗೆ ತಪ್ಪಿಹೋಗಿದ್ದರಿಂದ ನಮಗೆಲ್ಲ ನಿರಾಸೆ ಆಗಿತ್ತು. ಇದೀಗ ನಮ್ಮ ಸಂತೋಷಕ್ಕೆ ಎಲ್ಲೆಯೇ ಇಲ್ಲದಂತಾಗಿದೆ.
 -ನಾಗಪ್ಪಯ್ಯ ಕರ್ಣಿಕ್, ಸಾತ್ವಿಕ್ ಅಜ್ಜ, ಅಂಕದಕಟ್ಟೆ -ಕುಂದಾಪುರ
ಸುದ್ದಿ ಮೂಲ : 
*National Geography Press Release
*Deccan Herald 
*ವಿಜಯ ಕರ್ನಾಟಕ
ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com