ಬೈಂದೂರು ಕ್ಷೇತ್ರದಲ್ಲಿ ಮತ್ತೆ ಗೋಪಾಲ ಪೂಜಾರಿ ಕೈ ಹಿಡಿದ ಮತದಾರ


ಬೈಂದೂರು: ಬೈಂದೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಗೋಪಾಲ ಪೂಜಾರಿ 2008ರ ಅವಧಿಯ ಬಳಿಕ ಈ ಭಾರಿ ಮತ್ತೆ ಗೆಲುವು ಸಾಧಿಸಿದ್ದಾರೆ. 
   ಪ್ರತಿಸ್ಪರ್ಧಿ ಬಿಜೆಪಿಯ ಬಿ.ಎಂ.ಸುಕುಮಾರ ಶೆಟ್ಟಿ ವಿರುದ್ಧ ಭಾರಿ ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಬೈಂದೂರಿನಲ್ಲಿ ನಾಲ್ಕನೇ ಭಾರಿಗೆ ತನ್ನ ಖಾತೆ ತೆರೆದಿದ್ದಾರೆ. ಗೋಪಾಲ ಪೂಜಾರಿ 2008ರ ಚುನಾವಣೆಯಲ್ಲಿ ಬಿಜೆಪಿ ಲಕ್ಷ್ಮೀನಾರಾಯಣ ಎದುರು 7970 ಮತಗಳ ಅಂತರದಿಂದ ಸೋತಿದ್ದರು.
     1998ರ ಉಪಚುನಾವಣೆ, 1999 ಮತ್ತು 2004ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಹೀರೊ ಎನಿಸಿಕೊಂಡವರು. ಶಿವಮೊಗ್ಗ ಲೋಕಸಭೆ ವ್ಯಾಪ್ತಿಗೆ ಸೇರಿರುವ ಬೈಂದೂರು ಕ್ಷೇತ್ರದಲ್ಲಿ ಈ ಭಾರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು. ಮಲೆನಾಡು ಹಾಗೂ ಕರಾವಳಿ ದಟ್ಟ ಭೂಪ್ರದೇಶ ಹೊಂದಿರುವ ಅತಿ ವಿಸ್ತಾರದ ಬೈಂದೂರು ಕ್ಷೇತ್ರದಲ್ಲಿ ಸಹಜವಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿತ್ತು. ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಜವಾಬ್ದಾರಿ ಹೊತ್ತಿರುವ ಪೂಜಾರಿ ಈ ಬಾರಿ ಬೈಂದೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಹೋರಾಟ ನಡೆಸಿದವರು. ಆಡಳಿತ ವಿರೋಧಿ ಅಲೆ, ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವುದು, ಬಿಜೆಪಿ ಮುಖಂಡ ನವೀನ್‌ಚಂದ್ರ ಉಪ್ಪುಂದ ಕೆಜೆಪಿಯಿಂದ ಸ್ಪರ್ಧೆಗಿಳಿದಿದ್ದು ಎಲ್ಲವೂ ಪೂಜಾರಿಯವರಿಗೆ ಪೂರಕವಾಗಿ ಪರಿಣಮಿಸಿತ್ತು.
ಪೂಜಾರಿಯ ಗೆಲುವಿನ ಹಾದಿ: 
1998ರಲ್ಲಿ 22,000, 1999ರಲ್ಲಿ 5982, 2004ರಲ್ಲಿ 3252 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಕೆ.ಗೋಪಾಲ ಪೂಜಾರಿ 2008ರಲ್ಲಿ ಬಿಜೆಪಿ ಲಕ್ಷ್ಮೀನಾರಾಯಣ ವಿರುದ್ಧ 7,970 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಬಿಜೆಪಿಯ ಬಿ.ಎಂ.ಸುಕುಮಾರ ಶೆಟ್ಟಿ ವಿರುದ್ಧ 28,723 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 


ಹಾಲಾಡಿಗೆ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ