ಕೊಲ್ಲೂರಿನಲ್ಲಿ ಕನ್ನಡ ಚಿತ್ರನಟಿ ಶೃತಿ ವಿವಾಹ


ಮಗಳ ಜನ್ಮ ದಿನದಂದೇ ಕಂಕಣ ಭಾಗ್ಯ- ಹೊಸನಗರದಲ್ಲಿ ವರಪೂಜೆ, ಕೊಲ್ಲೂರಿನಲ್ಲಿ ವಿವಾಹ

ಕೊಲ್ಲೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಹಾಗೂ ಪತ್ರಕರ್ತ, ಚಿತ್ರ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ ಅವರ ವಿವಾಹ ಗುರುವಾರ ಬೆಳಗ್ಗೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯಿತು. ಶ್ರುತಿ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಮದುವೆಯಾಗಿದ್ದು ವಿಶೇಷವಾಗಿದ್ದು, ದಂಪತಿಗಳಿಗೆ ಇದು ಎರಡನೇ ವಿವಾಹವಾಗಿದೆ.
      ಅತ್ಯಂತ ಸರಳವಾಗಿ ನಡೆದ ವಿವಾಹದಲ್ಲಿ ಇಬ್ಬರ ಕುಟುಂಬ ಸದಸ್ಯರು, ಹಿತೈಷಿಗಳು ಮಾತ್ರವಷ್ಟೇ ಉಪಸ್ಥಿತರಿದ್ದರು. ಕೇವಲ 20 ನಿಮಿಷಗಳಲ್ಲಿ ವಿವಾಹ ವಿಧಿ ವಿಧಾನಗಳು ನಡೆದವು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಾಣಿಗ ಗ್ರಾಮದಲ್ಲಿ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರುತಿ-ಚಂದ್ರಚೂಡ ಅವರ ಮದುವೆ ನಿಗದಿಯಾಗಿತ್ತು. ಬುಧವಾರ ರಾತ್ರಿ ವರಪೂಜೆ ಸಹ ನಡೆದಿತ್ತು. ಆದರೆ ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ಪಡೆಯದೆ ಇದ್ದ ಕಾರಣ ಮದುವೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ವಿವಾಹ ವಿಧಿ ವಿಧಾನದ ಬಳಿಕ ಕೊಲ್ಲೂರಿನಿಂದ ನೇರವಾಗಿ ಚೆನ್ನೈಗೆ ಶೂಟಿಂಗ್‌ಗೆ ತೆರಳಿದ ಶ್ರುತಿ ಮತ್ತು ಆಕೆಯ ಪತಿ, ಏಳೆಂಟು ದಿನಗಳ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ.  
      ಶ್ರುತಿ ಈ ಹಿಂದೆ ಚಿತ್ರ ನಟ ಮಹೇಂದರ್‌ ಜತೆ ವಿವಾಹವಾಗಿದ್ದು ಅವರ ದಾಂಪತ್ಯ ಜೀವನ ಕಾರಣಾಂತರಗಳಿಂದ ಮುರಿದು ಬಿದ್ದಿತ್ತು. ಮಹೇಂದರ್‌ ಅವರು ಇತ್ತೀಚೆಗೆ ಎರಡನೇ ಮದುವೆಯಾಗಿದ್ದರು..

ಚಂದ್ರಚೂಡ ತನ್ನನ್ನು ಪ್ರೀತಿ, ಗೌರವದಿಂದ ಕಾಣುವ ಅತ್ಯಂತ ಸ್ನೇಹಮಯಿ ವ್ಯಕ್ತಿಯಾಗಿದ್ದು ಕಳೆದ ಐದಾರು ವರ್ಷಗಳಿಂದ ತಮ್ಮ ಕುಟುಂಬಕ್ಕೆ ಪರಿಚಿತರಾಗಿದ್ದಾರೆ. ತಮ್ಮ ಮಗಳ ವಿಶೇಷ ಮುತುವರ್ಜಿಯಲ್ಲೇ ಈ ಮದುವೆ ನಡೆದಿದೆ.
                                                                                            -ನಟಿ ಶ್ರುತಿ