ತಾಲೂಕಿನಾದ್ಯಂತ ಸುರಿದ ಭಾರಿ ಮಳೆ, ಹಲವೆಡೆ ಹಾನಿ, ಲಕ್ಷಾಂತರ ರೂ. ನಷ್ಟ

ಕುಂದಾಪುರ: ತಾಲೂಕಿನಾದ್ಯಂತ ಮುಂಗಾರು ಬಿರುಸುಗೊಂಡಿದ್ದು ಕಳೆದೆರೆಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿಯಿಂದ ಆರಂಭಗೊಂಡ ಮಳೆ ಮಂಗಳವಾರವೂ ಮುಂದುವರಿದಿದ್ದು ಇವರೆಗೆ ತಾಲೂಕಿನಲ್ಲಿ ಸರಾಸರಿ 83 ಮಿ.ಮೀ ಮಳೆ ದಾಖಲಾಗಿದೆ. ಭಾರಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳಿಗೆ ಹಾನಿಗಳಾಗಿದ್ದು. ತಗ್ಗು ಪ್ರದೇಶಗಳು ಹಾಗೂ ನದಿತಟದ ಸ್ಥಳಗಳು ಜಲಾವೃತಗೊಂಡು ಜನಜೀವನ ಆಸ್ತವ್ಯಸ್ತಗೊಂಡಿದೆ. 
         ತಾಲೂಕಿನ ಶಿರೂರು, ಬೈಂದೂರು, ಗಂಗನಾಡು, ಉಪ್ಪುಂದ, ತಾರಾಪತಿ, ಕಿರಿಮಂಜೇಶ್ವರ, ಮರವಂತೆ, ಗಂಗೊಳ್ಳಿ, ಕೋಟೆಶ್ವರ, ಕೋಡಿ, ಬಸ್ರೂರು, ಕಂಡ್ಲೂರು, ಸಿದ್ದಾಪುರ, ಶಂಕರನಾರಾಯಣ ಅಮಾಸೆಬೈಲು, ಕೊಲ್ಲೂರು, ಮಾರಣಕಟ್ಟೆ, ಜಡ್ಕಲ್‌, ಮುದೂರು, ಹಾಲ್ಕಲ್‌, ಇಡೂರು, ಕುಂಜ್ಞಾಡಿ, ವಂಡ್ಸೆ, ಕೆರಾಡಿ, ಬೆಲ್ಲಾಳ ಪ್ರದೇಶಗಳಲ್ಲಿ ಮಳೆ ಬಿರುಸುಗೊಂಡಿತ್ತು.

ನದಿಪಾತ್ರದ ಪ್ರದೇಶಗಳು ಜಲಾವೃತ:
     ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆನಗಳ್ಳಿ, ಹೇರಿಕುದ್ರು, ಉಪ್ಪಿನಕುದ್ರು, ಕಾವ್ರಾಡಿ, ಮರವಂತೆ,  ಪಡುಕೋಣೆ, ನಾಡ, ಸೇನಾಪುರ, ನಾವುಂದ, ಸಾಲ್ಬುಡ, ತೊಪ್ಲು  ಬಸ್ರುರು, ಮೊದಲಾದ ತಗ್ಗು ಪ್ರದೇಶಗಳು ಮತ್ತು ಕೃಷಿಭೂಮಿಗಳು ಜಲಾವೃತಗೊಂಡಿದೆ.

ಅಬ್ಬರಿಸುತ್ತಿದೆ ಕಡಲಬ್ಬರ:
      ಮಳೆ ಗಾಳಿಯಿಂದಾಗಿ ಕಡಲು ಬಿರುಸುಗೊಂಡಿದ್ದು ಮರವಂತೆಯಲ್ಲಿ ಕಡಲ ಅಬ್ಬರದಿಂದಾಗಿ ತೆರೆಗಳು ರಸ್ತೆಗೆ ಚಿಮ್ಮುತ್ತಿದೆ.

ಗಾಳಿಮಳೆಗೆ ಅಪಾರ ಹಾನಿ:
         ತಾಲೂಕಿನ  ಉಳ್ತೂರು, ತೆಕ್ಕಟ್ಟೆ, ವಡೇರಹೋಬಳಿಗಳಲ್ಲಿ ಬೆಳಗ್ಗಿನಿಂದಲೇ ಸುರಿದ ಮಳೆ ಹಾಗೂ ಗಾಳಿಗೆ ಹಲವಾರು ಮರಗಳು ಮನೆಯ ಮೇಲೆ ಉರುಳಿದ್ದಲ್ಲದೇ, ಹಂಚು ಹಾಗೂ ತಗಡಿನ ಶೀಟುಗಳು ಹಾರಿಹೋಗಿದೆ. ನಗರದ ವಡೇರಹೋಬಳಿ ಗ್ರಾಮದ ರಾಯಪ್ಪನಮಠ ಪರಿಸರದ ವೆದ್ಯ ಡಾ.ಮಾಧವ ಶೆಟ್ಟಿ ಅವರ ನಿವಾಸದ ಕಂಪೌಂಡ್ ಮೇಲೆ ಮಾವಿನ ಮರ ಬಿದ್ದು ಕಂಪೌಂಡ್ ಹಾನಿಗೀಡಾಗಿದೆ. ರಾಯಪ್ಪನಮಠ ರಸ್ತೆ ನಿವಾಸಿ ರಾಜೇಂದ್ರ  ಅವರ ಮನೆಯ ದನದ ಕೊಟ್ಟಿಗೆ ಮೇಲೆ ಮಾವಿನ ಮರ ಬಿದ್ದು ಅಪಾರ ಸಂಪೂರ್ಣ ಹಾನಿಗೊಂಡಿದೆ. ತೆಕ್ಕಟ್ಟೆ ಗ್ರಾಮದ ಲಲಿತಾ ಅವರ ಮನೆಯ ಹಂಚುಗಳು, ತೆಕ್ಕಟ್ಟೆ ಮಂಜುನಾಥ ಆಚಾರ್ಯ ಅವರ ಗ್ಯಾರೇಜ್‌ನ ತಗಡಿನ ಶೀಟುಗಳು ಹಾರಿಹೋಗಿದೆ. ತೆಕ್ಕಟ್ಟೆ ಗುಲಾಬಿ ಪೂಜಾರ್ತಿ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಛಾವಣೆ ಹಾನಿಯಾಗಿದೆ. ಮುತ್ತಕ್ಕ ಶೆಡ್ತಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಗೋಡೆ ಬಿರುಕು ಬಂದಿದೆ. ಬಳ್ಕೂರು ಗ್ರಾಮದ ಕಳಿಗುಡ್ಡೆ ನಿವಾಸಿ ಸಂಜೀವ ಮೊಗವೀರ ಅವರ ಮನೆ ಗಾಳಿ ಮಳೆಗೆ ಸಿಲುಕಿ ಗೋಡೆ ಕುಸಿದಿದೆ. ಉಳ್ತೂರು ಗ್ರಾಮದ ಸುಗಂಧಿ ಶೆಟ್ಟಿ ಎಂಬವರಿಗೆ ಸೇರಿದ ಮನೆಯ ಹೆಂಚಿನ ಮಾಡು ಕುಸಿದಿದೆ. ಬಳ್ಕೂರು ಗ್ರಾಮದ ಕಳ್ಳಿಗುಡ್ಡೆ ನಿವಾಸಿ ಸಂಜೀವ ಮೊಗವೀರ ಅವರ ಮನೆ ಮಳೆಯ ಬಿರುಸಿಗೆ ಕುಸಿದು ಬಿದ್ದಿದೆ. ಉಳಿದಂತೆ ಬೈಂದೂರು ಪರಿಸರದಲ್ಲೂ ಸಣ್ಣ ಪುಟ್ಟ ಹಾನಿಗಳಾಗಿದೆ. ಒಟ್ಟಿನಲ್ಲಿ ಭಾರಿ ಮಳೆಯಿಂದಾಗಿ ಲಕ್ಷಾಂತರ ರೂ. ನಷ್ಟು ಸಂಭವಿಸಿದೆ. ಜಿಲ್ಲಾದ್ಯಂತ ಈವರೆಗೆ  ಸರಾಸರಿ 76.10 ಮಿ.ಮೀ. ಮಳೆ ಬಿದ್ದ ಬಗ್ಗೆ ವರದಿಯಾಗಿದೆ.