ವಿದ್ಯೆಗೆ ಬಡತನ ಅಡ್ಡಿಯಲ್ಲ ಎಂದು ತೋರಿಸಿಕೊಟ್ಟ ರಂಜಿತ್, ಪಿಯುಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಮೊದಲಿಗ.

ರಂಜಿತ್ ಕುಮಾರ್
ಕುಂದಾಪುರ: ವಿದ್ಯೆಗೆ ಬಡವ-ಬಲ್ಲಿದನೆಂಬ ಭೇದವಿಲ್ಲ. ಪರಿಶ್ರಮ ಪಟ್ಟರೆ ಯಾವುದೂ ಕಷ್ಟವಲ್ಲ ಎಂಬುದನ್ನು ತನ್ನ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾನೆ ಈ ಗ್ರಾಮೀಣ ಪ್ರತಿಭೆ. ಈತನ ಹೆಸರು ರಂಜಿತ್ ಕುಮಾರ್. ತ್ರಾಸಿಯ ಗ್ರಾಮದ ಮೊವಾಡಿಯ ನಿವಾಸಿ. ಕಿತ್ತು ತಿನ್ನುವ ಬಡತನ. ಕೂಲಿ ಈ ಕುಟುಂಬದ ಆಧಾರ. ಆದರೆ, ಪರಿಶ್ರಮವೇ ಉಸಿರಾಗಿಸಿಕೊಂಡ ಈ ಮನೆಯ ಹುಡುಗ ರಂಜಿತ್ ಕುಮಾರ್  ಈ ಬಾರಿ ತಾಲೂಕಿಗೆ ಪಿಯುಸಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ! ಈ ವಿಷಯ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ. ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ಮಾತ್ರಕ್ಕೆ ಸಾಕಷ್ಟು ಪ್ರಚಾರ ಪಡೆಯುವ ಇಂದಿನ ದಿನಗಳಲ್ಲಿ ಬಡತನದಲ್ಲೇ ಅದೂ ಸರ್ಕಾರಿ ಕಾಲೇಜಿನಲ್ಲಿ ಓದಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿರುವುದು ಅಷ್ಟೊಂದು ಸುದ್ದಿಯಾಗದಿರುವುದು ವಿಷಾದದ ಸಂಗತಿಯೇ ಸರಿ.

 ರಂಜಿತ್ ಕುಮಾರ್ ಈ ಬಾರಿ ಪಿಯುಸಿಯಲ್ಲಿ 568 ಅಂಕಗಳನ್ನು ಪಡೆದಿದ್ದಾರೆ. ಇದೇನು ಸಣ್ಣ ಸಾಧನೆಯಲ್ಲ. ಕಷ್ಟಪಟ್ಟು ಓದಿ ಈ ಸಾಧನೆ ಮಾಡಿರುವ ರಂಜಿತ್ ತೀರಾ ಮುಗ್ದ ವಿದ್ಯಾರ್ಥಿ. ಕಠಿಣ ಪರಿಶ್ರಮಿ. ಈತ ಬಾಲ್ಯದಿಂದಲೇ ಓದಿನಲ್ಲಿ ಚುರುಕು. ಪ್ರತಿ ಹಂತದಲ್ಲಿಯೂ ಕಲಿಕೆಯಲ್ಲಿ ಮೊದಲಿಗನಾಗುತ್ತಲೇ ಬಂದ ರಂಜಿತ್ ಎಸ್.ಎಸ್.ಎಲ್.ಸಿಯಲ್ಲಿ ಕೂಡಾ ಉತ್ತಮ ಸಾಧನೆ ಮಾಡಿದ್ದ. ಬಡತನ ಆತನ ಏಕಾಗ್ರಚಿತ್ತತೆಗೆ ಭಂಗ ತರಲಿಲ್ಲ. ಕಲಿಕೆಯೊಂದೇ ಜೀವನದ ಪರಮೋಚ್ಚ ಗುರಿಯಂತೆ ಓದಿನಲ್ಲಿ ಹೆಚ್ಚು ಲಕ್ಷ್ಯಕೊಟ್ಟ ರಂಜಿತ್ ಪಿಯುಸಿಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಿದ್ದಾರೆ. ಆ ಮೂಲಕ ರಂಜಿತ್  ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ.
 ಪಿಯುಸಿ ಕನ್ನಡ -98 ಇಂಗ್ಲಿಷ್-80 ಪಿಜಿಕ್ಸ್ -99 ಕೆಮಿಸ್ಟ್ರೀ-100, ಗಣಿತ-97  ಬಯೊಲಜಿ-94 ಹೀಗೆ 94.47 ಶೇ ಅಂಕ ಗಳಿಸಿದ್ದಾರೆ. ಸಿಇಟಿಯಲ್ಲಿ ಮೆಡಿಕಲ್ ವಿಭಾಗದಲ್ಲಿ 1129, ಇಂಜಿನಿಯರಿಂಗ್ ವಿಭಾಗದಲ್ಲಿ 2230 ಗಳಿಕೆ  ಕಂಡಿರುವ ರಂಜಿತ್ ಡಾಕ್ಟರ್ ಆಗುವ ಆಕಾಂಕ್ಷೆ ಹೊಂದಿದ್ದಾರೆ.
 ರಂಜಿತ್ ಕುಮಾರ್ ಸಾಧನೆ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಈತನ ಮನೆ ಇರುವುದು ಮೊವಾಡಿಯ ತೀರಾ ಒಳ ಭಾಗದಲ್ಲಿ.  ನಡೆದುಕೊಂಡೇ ಮುಖ್ಯ ರಸ್ತೆಗೆ ಬರಬೇಕು. ದಿನ ನಾಲ್ಕು ಕಿಮೀ ಕಾಲ್ಮಡಿಗೆಯಲ್ಲಿಯೇ ಕ್ರಮಿಸಬೇಕು. ಪರಿಶ್ರಮನವನ್ನೇ ಉಸಿರಾಗಿಸಿಕೊಂಡ ರಂಜಿತ್ ಕುಮಾರ್ ಓದುವ ತುಡಿತ ನೀಡಿದ್ದೇ ತಂದೆ  ಮುಂಜುನಾಥ ಗಾಣಿಗ, ತಾಯಿ ಕಾವೇರಿ. ತೀರಾ ಬಡತನ. ಕೂಲಿಯಿಂದ ಮಾತ್ರ ಸಂಸಾರ ರಥ ಸಾಗಬೇಕು. ಗಂಡ ಹೆಂಡತಿ ಇಬ್ಬರು ದುಡಿದು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ರಂಜಿತ್ ಕುಮಾರ್ ಮನೆ
  ಮಂಜುನಾಥ ಗಾಣಿಗ-ಕಾವೇರಿ ದಂಪತಿಗಳು ತಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ಹಿರಿಯ ಮಗ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಬಿಎಸ್ ಸಿ ಮಾಡುತ್ತಿದ್ದರೆ, ರಂಜಿತ್ ಕುಮಾರ್ ಎರಡನೇ ಮಗ. ಮೂರನೇ ಮಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಷ್ಟ ಎಷ್ಟೆ ಇರಲಿ ಮಕ್ಕಳಿಗೆ ಅದು ಗೊತ್ತಾಗಬಾರದು. ಅವರು ಯೋಗ್ಯ ಶಿಕ್ಷಣ ಪಡೆದು ಆ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಹಂಬಲ ಅವರದ್ದು. ಎಷ್ಟೇ ಕಷ್ಟ ಆಗಲಿ ಸಾಲ ಮಾಡಿ ಆದರೂ ಶಿಕ್ಷಣ ಕೊಡಿಸುತ್ತೇನೆ ಎನ್ನುವ ಮಂಜುನಾಥ ಗಾಣಿಗರ ಮುಖದಲ್ಲಿ ಪರಿಶ್ರಮದ ಮೂಲಕ ಮಾಡಿದ ಸಾಲ ತೀರಿಸುತ್ತೇನೆ ಎನ್ನುವ ಆಶಾಬಾವವಿತ್ತು.
ಮಂಜುನಾಥ ಗಾಣಿಗ  ದಂಪತಿಗಳು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಎರಡು ವರ್ಷಗಳ ಕೆಳಗೆ ಪುಟ್ಟ ಮನೆಯ ನೆಲಕ್ಕೆ ಗಾರೆ ಮಾಡಿಸಿದ್ದಾರೆ. ಮೊದಲು ಶಿಕ್ಷಣದಲ್ಲಿ ಒಂದು ಹಂತ. ನಂತರ ಮನೆ ಮಠ ಎನ್ನುವ ಇರಾದೆ ಇವರದ್ದು. ಮಕ್ಕಳು ಕೂಡಾ ತಂದೆ ತಾಯಿಯ ಮಾತಿಗೆ ಎಣೆ ಆಡುತ್ತಿಲ್ಲ.  ವಿಶೇಷ ಎಂದರೆ ಇವರ ಮನೆಯಲ್ಲಿ ಟಿವಿ ಇಲ್ಲ. ಆದನ್ನು ಮಕ್ಕಳು ಅಪೇಕ್ಷಿಸಿಸಿಯೂ ಇಲ್ಲ.
ಮಗನ ಸಾಧನೆಯನ್ನು ಸಂಘ ಸಂಸ್ಥೆಯವರು ಗುರುತಿಸಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಪೋಷಕರು, ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ದೊರತ ವಿದ್ಯಾರ್ಥಿ ವೇತನಗಳ ¸ತ್ಫ್ಪಲವನ್ನು ಕಂಡುಕೊಂಡಿದ್ದನ್ನು ಹಂಚಿಕೊಳ್ಳುತ್ತಾರೆ. ಮಗನಿಗೆ ವೈದ್ಯನಾಗುವ ಹಂಬಲ ಸೂಕ್ತ ಬೆಂಬಲಕ್ಕೆ ತಂದೆ ಮಂಜುನಾಥ್ ನಿಂತಿದ್ದಾರೆ. ಮಗನ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಕ್ರೋಢೀಕರಣಕ್ಕೆ ಈಗಾಗಲೇ ತಂದೆ ತಾಯಿಗಳು ಸಿದ್ದತೆ ನಡೆಸಿದ್ದಾರೆ. ಸಾಲ ಮಾಡದೇ ಬೇರೆ ದಾರಿ ಈ ಕುಟುಂಬಕ್ಕಿಲ್ಲ.


 ಸಹಕಾರ ನೀಡುವ ವಿದ್ಯಾಭಿಮಾನಿಗಳು-7760348194 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



ಲೇಖನ ಸಹಕಾರ ಮತ್ತು ಚಿತ್ರ: 
ನಾಗರಾಜ ವಂಡ್ಸೆ