ಕಾಲ್ತೋಡಿನಲ್ಲಿ ಕಾಣಿಸಿಕೊಂಡ ಕಾಳಿಂಗ!

ಕುಂದಾಪುರ: ಇಲ್ಲಿನ ಕಾಲ್ತೋಡು ಗ್ರಾಮದ ಪೈನಾಡಿ ಜೋಗಿಬೆಟ್ಟಿಗೆ ಕಾಳಿಂಗ ಸರ್ಪವೊಂದು ಆಹಾರ ಅರಸುತ್ತಾ ಬಂದು ಗ್ರಾಮಸ್ಥರ ನಿದ್ದೆಗೆಡಿಸಿದ ಘಟನೆ ಮಂಗಳವಾರ ಸಂಜೆ ನಡೆಯಿತು.  
     ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಗ್ರಾಮಸ್ಥರು ವೇಗವಾಗಿ ಬುಸುಗುಡುತ್ತಾ ಹಳ್ಳದ ನೀರನ್ನು ಸೀಳಿಕೊಂಡು ಬರುತ್ತಿದ್ದ ಕಾಳಿಂಗ ಸರ್ಪವನ್ನು ಕಂಡು ಹೆದರಿ ಅರಣ್ಯ ಇಲಾಖೆಗೆ ಸುದ್ದಿ ತಲುಪಿಸಿದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರಾದರೂ ಅದಾಗಲೇ ಮರವೇರಿ ಕುಳಿತಿದ್ದ ಹಾವನ್ನು ಏನೂ ಮಾಡುವಂತಿರಲಿಲ್ಲ. ರಾತ್ರಿಯಿಡಿ ಮಳೆಯಲ್ಲಿ ಹಾವು ಮರದಿಂದ ಕೆಳಗೆ ಇಳಿಯದಂತೆ ನೋಡಿಕೊಳ್ಳಲಾಯಿತು. ಬೆಳಿಗ್ಗೆ  ಉಡುಪಿಯ ಉರಗತಜ್ಞ ಗುರುರಾಜ ಸನಿಲ್ ಸ್ಥಳಕ್ಕಾಗಮಿಸಿ ಮರವೇರಿದ್ದ ಹಾವನ್ನು ಉಪಾಯದಿಂದ ಕೆಳಗಿಳಿಸಿ ಹಿಡಿದರು.
     14 ಅಡಿಗಳಷ್ಟು ಉದ್ದ, 12 ಕೆ.ಜಿ.ಗೂ ಅಧಿಕ ತೂಕದ ಕಾಳಿಂಗ ಸರ್ಪವನ್ನು ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಶೆಟ್ಟಿಯವರ ಮಾರ್ಗದರ್ಶನದಡಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ತಲುಪಿಸಲಾಯಿತು. ಹಾವಿನ ಇರುವಿಕೆಯಿಂದಾಗಿ ಕಂಗೆಟ್ಟ ಜನತೆ ನಿಟ್ಟುಸಿರು ಬಿಡುವಂತಾಯಿತು.
         ಇದೇ ವೇಳೆ ಸ್ಥಳೀಯರಿಗೆ ಮತ್ತು ಇಲಾಖೆಯ ಸಿಬ್ಬಂದಿಗಳಿಗೆ ಅಲ್ಲಿಯೇ ಮಾಹಿತಿ ನೀಡಿದ ಉರಗತಜ್ಞ ಗುರುರಾಜ ಸನಿಲ್  ಈ ಹಾವು ಕೇರೆ ಹಾವನ್ನು ಅಟ್ಟಿಸಿಕೊಂಡು ಬಂದಿರಬಹುದು. ಕೇರೆ ಹಾವು ಸಿಗದೆ ಇದ್ದಲ್ಲಿ 10 ದಿನಗಳಾದರೂ ಈ ಜಾಗ ಬಿಟ್ಟು ಅವುಗಳು ಕದಲಲಾರವು. ಆಕಸ್ಮಿಕವಾಗಿ ಕಾಳಿಂಗ ಕಡಿದರೆ ಸಾಯುವುದ ಖಚಿತ. ಕಾನೂನು ಪ್ರಕಾರ ಕಾಳಿಂಗ ಸರ್ಪವನ್ನು ಹಿಡಿಯುವುದು, ಹಿಂಸಿಸುವುದು ಅಪರಾಧವಾಗಿದ್ದು. ಮಾನವ ಹಿತದಷ್ಟಿಯಿಂದ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಡಿದು ತಲುಪಿಸಿದರೆ ಯಾವುದೇ ತೊಂದರೆ ಆಗಲಾರದು. ಬೇರೆ ಜಿಲ್ಲೆಗೆ ಹೋಲಿಸಿದರೆ ಕಾಳಿಂಗ ಸರ್ಪವನ್ನು ಕೊಲ್ಲುವುದು ಉಡುಪಿ ಜಿಲ್ಲೆಯಲ್ಲಿ ಕಡಿಮೆ ಎಂದ ಅವರು ಹಾವುಗಳು ನಮ್ಮಂತೆ ಪ್ರಾಣಿಗಳು, ಅವುಗಳನ್ನು ರಕ್ಷಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದು ಧೈರ್ಯ ತುಂಬಿದರು. 
       ಉಪವಲಯ ಅರಣ್ಯಾಧಿಕಾರಿ ಸಿದ್ದೇಶ್, ಸಿಬ್ಬಂದಿಗಳಾದ ಶ್ರೀನಿವಾಸ ಜೋಗಿ, ಮಹೇಶ್, ಪಶುವೆದ್ಯ ಕಾಳಿಂಗ ಗೌಡ, ಕೋಟೇಶ್ವರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ದೊಡ್ಮನೆ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.


 ಪೋಟೋ: ಗಣೇಶ್ ಬಿಜಾಡಿ