ದೇಶದಲ್ಲಿ ಅದೆಷ್ಟೋ ಮಂದಿಗೆ ರಕ್ತದ ಅವಶ್ಯಕತೆ ಇದೆ. ಅಪಘಾತ, ಅವಘಡ ಸಂಭವಿಸಿದವರು,ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಇವರೆಲ್ಲ ಯನಿಟ್ ರಕ್ತಕ್ಕಾಗಿ ಒದ್ದಾಡುತ್ತಿದ್ದಾರೆ. ಇಂತವರಿಗಾಗಿಯಾದರೂ ನಾವು ರಕ್ತದಾನವನ್ನು ಮಾಡಬೇಕಾಗಿದೆ.ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಪ್ರಾಣಾಪಾಯದಿಂದ ಪಾರು ಮಾಡಬಲ್ಲದು. ಆದುದರಿಂದ ವಿಶ್ವ ರಕ್ತದಾನಿಗಳ ದಿನವನ್ನು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ.
ವಿಶ್ವ ರಕ್ತ ದಾನಿಗಳ ದಿನದ ಹಿನ್ನೆಲೆ:
ವಿಶ್ವದಾದ್ಯಂತ ಪ್ರತಿ ವರ್ಷವೂ ಜೂನ್ 14ರಂದು `ವಿಶ್ವ ರಕ್ತ ದಾನಿಗಳ ದಿನ'ವನ್ನು ಆಚರಿಸುತ್ತೇವೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ 2004ರಲ್ಲಿ ಈ ಆಚರಣೆ ಆರಂಭವಾಯಿತು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್ ಅವರ ಜನ್ಮದಿನದ ನೆನಪಿಗಾಗಿ ಈ ಆಚರಣೆ. ಈತ ರಕ್ತವನ್ನು ಎ, ಬಿ, ಒ ಎಂಬ ಗುಂಪುಗಳನ್ನಾಗಿ ವಿಂಗಡಿಸುವ ಬಗೆಯನ್ನು ಕಂಡು ಹಿಡಿದ. ಇಂದಿಗೂ ರಕ್ತವನ್ನು ಈ ಬಗೆಯಲ್ಲಿಯೇ ವಿಂಗಡಿಸಲಾಗುತ್ತಿದೆ.
ಈ ಆಚರಣೆಯ ಮುಖ್ಯ ಧ್ಯೇಯ
ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಈ ಆಚರಣೆಯ ಮುಖ್ಯ ಧ್ಯೇಯ. ಅದರ ಜೊತೆಯಲ್ಲಿಯೇ ಸ್ವಯಂಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸುವುದು, ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದು ಈ ಆಚರಣೆಯ ಅಭಿಯಾನದಲ್ಲಿ ಪ್ರಮುಖವಾಗಿವೆ. ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದು ಈ ಆಚರಣೆಯ ಬಹು ಮುಖ್ಯ ಉದ್ದೇಶ.
ಈ ಬಾರಿಯ ವಿಶ್ವ ರಕ್ತದಾನಿಗಳ ದಿನದ ಧ್ಯೇಯ ವಾಕ್ಯ:
ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ ಎಂಬ ಅರ್ಥವನ್ನು ಬಿಂಬಿಸುವ `ರಕ್ತದಾನ ಮಾಡಿ, ಜೀವನವೆಂಬ ಉಡುಗೊರೆಯನ್ನು ಕೊಡಿ' ಎಂಬುದು ಈ ಬಾರಿಯ ಧ್ಯೇಯ ವಾಕ್ಯ.
ರಕ್ತದ ಗುಂಪುಗಳು :
1. A ರಕ್ತದ ಗುಂಪು.
2. B ರಕ್ತದ ಗುಂಪು.
3. AB ರಕ್ತದ ಗುಂಪು.
4. O ರಕ್ತದ ಗುಂಪು.
ಯಾರಿಂದ ಯಾರಿಗೆ ರಕ್ತ ಕೊಡಬಹುದು ಮತ್ತು ಪಡೆಯಬಹುದು:
ರಕ್ತದ ಗುಂಪು ಯಾರಿಗೆ ರಕ್ತ ಕೊಡಬಹುದು ಯಾರಿಂದ ರಕ್ತ ಪಡೆಯಬಹುದು
AB AB AB, A, B, O
A A ಮತ್ತು AB A ಮತ್ತು O
B B ಮತ್ತು AB B ಮತ್ತು O
0 AB, A, B, 0 O
ರಕ್ತದಾನಕ್ಕೆ ಇರಬೇಕಾದ ಕನಿಷ್ಟ ಅರ್ಹತೆಗಳು:
- ಆರೋಗ್ಯಕರ ವ್ಯಕ್ತಿಯಾಗಿರಬೇಕು.
- ವಯಸ್ಸು 18 ರಿಂದ 60 ವರ್ಷದವರೆಗೆ.
- 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರಬೇಕು.
- 4.12.5 ಗ್ರಾಂ ಗಿಂತಲೂ ಹೆಚ್ಚು ಹಿಮೊಗ್ಲೋಬಿನ್ ಅಂಶವಿರಬೇಕು.
- ಅಂಗೀಕೃತವಾದ ರಕ್ತದ ತಾಪಮಾನ 160/90 ಇಂದ 110/60.
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5ರಿಂದ 6 ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ಸ್ವೀಕರಿಸುವುದರಿಂದ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಯಾರು ರಕ್ತದಾನ ಮಾಡಬಾರದು:
ಯಕೃತ್ತು (ಲಿವರ್), ಮೂತ್ರಪಿಂಡ (ಕಿಡ್ನಿ) ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ರಕ್ತಹೀನತೆ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು. ಹಾಗೆಯೇ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದವರು ಒಂದು ವರ್ಷದವರೆಗೆ, ರಕ್ತ ವರ್ಗಾವಣೆ ಮಾಡಿಸಿಕೊಂಡವರು ಆರು ತಿಂಗಳವರೆಗೆ, ಮಲೇರಿಯಾ, ಟೈಫಾಯ್ಡ, ಜಾಂಡೀಸ್‌ನಿಂದ ಬಳಲಿದವರು ಮುಂದಿನ ಆರು ತಿಂಗಳವರೆಗೆ, ಯಾವುದಾದರೂ ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದು.
ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತವಷ್ಟೇ ರೋಗಿಯ ಜೀವವನ್ನು ಉಳಿಸಲು ಸಾಧ್ಯ. ಇಂದೇ ರಕ್ತದಾನ ಮಾಡಿ ನಿಜವಾದ ಹೀರೋಗಳೆನ್ನಿಸಿಕೊಳ್ಳೋಣ.