ನಗರದ ಬಾಲಭಿಕ್ಷುಕರ ರಕ್ಷಣೆ/ಪುನರ್ವಸತಿ. ಸ್ಫೂರ್ತಿ ಸಂಸ್ಥೆಯ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ.

   ಬಾಲ ಭಿಕ್ಷಾಟನೆ ಸಮಾಜಕ್ಕೆ ಅಂಟಿದ ಶಾಪ. ಹೆತ್ತವರ ಅಸಡ್ಡೆಯಿಂದಾಗಿ ಮಕ್ಕಳು ಭಿಕ್ಷಾಟನೆಯನ್ನು ಮಾಡುವಂತಾಗಿದೆ. ಭಿಕ್ಷಾಟನೆ ನಿರತ ಸಣ್ಣ ಮಕ್ಕಳು ಹಾಗೂ ಅವರೊಂದಿಗೆ ಇದ್ದ ಮಹಿಳಾ ಭಿಕ್ಷುಕರ ರಕ್ಷಣೆ ಮತ್ತು ಪುನರ್ವಸತಿ ಅಂದೋಲನದ ಅಂಗವಾಗಿ ಕುಂದಾಪುರ ನಗರದಲ್ಲಿ ಕಾರ್ಯಚರಣೆ ನಡೆಯುತು. 
     ದಿನ ನಿತ್ಯ ಬೆಳಗಾಯಿತೆಂದರೆ ನಗರದ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ನಿರತ ಮಕ್ಕಳು ಹಾಗೂ ಮಹಿಳೆಯರು ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದರು. ಹೆಣ್ಣು ಮಕ್ಕಳೇ ಬಹುತ್ತೇಕ ಸಂಖ್ಯೆಯಲ್ಲಿದ್ದು ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಹಿಂದೆ ಬಿದ್ದು ಭಿಕ್ಷೆಗಾಗಿ ಪೀಡಿಸುತ್ತಿದ್ದರು. ಹಲವಾರು ಬಾರಿ ವಿವಿಧ ಇಲಾಖೆಗಳು ಇದನ್ನು ತಡೆಯುವ ಮತ್ತು ಜನರಿಗೆ ಭಿಕ್ಷೆ ನೀಡುವುದನ್ನು ತಡೆಯಲು ನಡೆಸಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಇದನ್ನು ಮನಗಂಡ ಕೋಟೇಶ್ವರ ಸ್ಫೂರ್ತಿ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, ರೋಟರಿ ಕ್ಲಬ್ ತೆಕ್ಕಟ್ಟೆ, ಮಿಲಾಗ್ರಸ್ ಕಾಲೇಜು ಸಮಾಜ ಕಾರ್ಯ ವಿಭಾಗ ಕಲ್ಯಾಣಪುರ, ಮಣಿಪಾಲ ಯುನಿವರ್ಸಿಟಿ ಸಮಾಜ ಕಾರ್ಯ ವಿಭಾಗ, ಡಾ|| ಎ.ವಿ.ಬಾಳಿಗ ಕಾಲೇಜ್ ಆಫ್ ಸೋಶಿಯಲ್ ಸೈಸ್ಸ್ ಮತ್ತು ರೂರಲ್ ಡೆವೆಲಪ್‍ಮೆಂಡ್ ಹಾರಾಡಿ ಹಾಗೂ ಕುಂದಾಪುರ ಪೋಲೀಸ್ ಇಲಾಖೆ ಇವರ ಸಹಯೋಗದಲ್ಲಿ ಬಾಲ ಭಿಕ್ಷುಕರ ರಕ್ಷಣೆ ಮತ್ತು ಪುನರ್ವಸತಿ ಅಂದೋಲನ ನಡೆಸಲಾಯಿತು. 

      ನಗರದ ಸಂತೆ ಮಾರುಕಟ್ಟೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ, ಶಾಸ್ತ್ರಿ ಪಾರ್ಕ, ಪರಿಜಾತ ವೃತ್ತ ಪುರಸಭೆ ಮುಖ್ಯ ರಸ್ತೆಯ ಹಲವೆಡೆ ಕಾರ್ಯಚರಣೆಯನ್ನು ನಡೆಸಿತು. ಹಲವೆಡೆ ಸಂಚರಿಸಿದ ತಂಡ ಎಂಟು ಮಂದಿ 2 ರಿಂದ 3 ವರ್ಷ ವಯಸ್ಸಿನ ಸಣ್ಣ ಮಕ್ಕಳು, ಬಂಬತ್ತರಿಂದ ಹನ್ನೆರಡು ವಯಸ್ಸಿನ ಒಳಗಿನ 6 ಮಂದಿ ದೊಡ್ಡ ಮಕ್ಕಳು ಹಾಗೂ ಇವರ ಪಾಲಕರಾದ ಏಳು ಮಂದಿ ಮಹಿಳೆಯರನ್ನು ವಶಕ್ಕೆ ತೆಗೆದುಕೊಳ್ಲಲಾಯಿತು.
       ಅನಂತರ ಪೋಲೀಸ್ ಠಾಣೆಗೆ ಕರೆದೊಯ್ದು ಮಕ್ಕಳನ್ನು ಉಡುಪಿಯ ಸಿಡಬ್ಲ್ಯೂಸಿ(ಮಕ್ಕಳ ಕಲ್ಯಾಣ ಸಮಿತಿ)  ವಶಕ್ಕೆ ನೀಡಲಾಯಿತು. ಭಿಕ್ಷಾಟನೆ ನಿರತ ಹೆಂಗಸರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ ಮಕ್ಕಳ ಕಲ್ಯಾಣ ಸಮಿತಿ 6 ಮಂದಿ ಮಕ್ಕಳನ್ನು ಪುನರ್ವಸತಿಯ ಉದ್ದೇಶಕ್ಕೆ ಸ್ಫೂರ್ತಿಧಾಮದ ವಶಕ್ಕೆ ನೀಡಲಾಗಿದೆ. 

       ಈ ಕಾರ್ಯಚರಣೆಯಲ್ಲಿ ಸ್ಫೂರ್ತಿಯ ಮುಖ್ಯಸ್ಥ ಡಾ||ಕೇಶವ ಕೋಟೇಶ್ವರ, ಮಿಲಾಗ್ರಸ್ ಕಾಲೇಜಿನ ಉಪನ್ಯಾಸಕಿ ಲಿಲ್ಲಿ ಪುಷ್ಪಾ, ವಿವಿಧ ಕಾಲೇಜಿನ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳು, ಬಾಲ ಕರ್ಮಿಕ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್ಯ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಕೋಶಾಧಿಕಾರಿ ಬಾಬು ಪೈ, ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಜೇಶ್ವರಿ-ಭಾಗ್ಯವತಿ, ರೋಟರಿ ತೆಕ್ಕಟ್ಟೆಯ ಅಧ್ಯಕ್ಷ ಮಂಜುನಾಥ ಪ್ರಭು, ಶ್ರಿಧರ ಆಚಾರ್ಯ ಉಪಸ್ಥಿತರಿದ್ದರು. 
        
       ಇಲಾಖೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಉಡುಪಿ ಜಿಲ್ಲೆಯನ್ನು ಬಾಲಕಾರ್ಮಿಕರ ಹಾಗೂ ಬಾಲ ಭಿಕ್ಷುಕ ರಹಿತ ಜಿಲ್ಲೆಯನ್ನಾಗಿ ಪರಿವರ್ತಿಸು ಗುರಿ ಹೊಂದಲಾಗಿದೆ. ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಗಳು ಈ ಕಾರ್ಯದೊಂದಿಗೆ ಕೈ ಜೋಡಿಸಬೇಕು. ಪ್ರತಿ ವಾರಕ್ಕೊಮ್ಮೆ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಆಂದೋಲನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು.                                                                 -ಡಾ| ಕೇಶವ ಕೋಟೇಶ್ವರ