ಖಾಸಗಿ ಶಾಲೆಗಳನ್ನೂ ಮೀರಿಸಿದ ಹೆಸ್ಕುತ್ತೂರು ಸರಕಾರಿ ಶಾಲೆ

ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆಗಳ ಬಗೆಗಿನ ಪಾಲಕರ ನಿರಾಸಕ್ತಿ ಇವೆರಡರ ನಡುವೆಯೂ ಕುಂದಾಪುರ ತಾಲೂಕಿನ ಸರಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದ ಮೂಲಕ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲ ಎಂಬಂತೆ ಬೆಳೆದು ನಿಂತಿರುವುದು ಸೊಜಿಗವೇ ಸರಿ. ನಿಜಕ್ಕೂ ಇದು ಉಳಿದೆಲ್ಲಾ ಸರಕಾರಿ ಶಾಲೆಗಳಿಗೂ ಮಾದರಿ. 


       ಆ ಶಾಲೆಯ ಒಳಹೊಕ್ಕರೆ ಇದು ಸರ್ಕಾರಿ ಶಾಲೆಯೋ ಎಂಬ ಸಂಶಯ ಒಮ್ಮೆ ಬಾರದಿರದು. ಗುಣಮಟ್ಟದ-ಪರಿಣಾಮಕಾರಿ ಬೋಧನೆಗೆ ವಿಭಿನ್ನ ಪರಿಕಲ್ಪನೆಗಳು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದ ಜೊತೆ ಸಾರ್ವಜನಿಕ ಸಹಭಾಗಿತ್ವ. ಒಟ್ಟಿನಲ್ಲಿ ಒಂದು ಖಾಸಗಿ ಶಾಲೆಗಿಂತ ಮೇಲ್ಮಟ್ಟದಲ್ಲಿದೆ ಈ ಶಾಲೆಯ ವ್ಯವಸ್ಥೆ. ಹೌದು. ಇದು ಕುಂದಾಪುರ ತಾಲೂಕು ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಸ್ಕುತ್ತೂರು ಸ.ಹಿ.ಪ್ರಾ ಶಾಲೆ.
 ಸರ್ಕಾರಿ ಶಾಲೆಗಳನ್ನು ಹೀಗೂ ಅಭಿವೃದ್ಧಿ ಮಾಡಬಹುದು ಎನ್ನುವುದನ್ನು ಇಲ್ಲಿನ ಬೋಧಕರು ಹಾಗೂ ಪೋಷಕರು, ವಿದ್ಯಾಭಿಮಾನಿಗಳು ತೋರಿಸಿಕೊಟ್ಟಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಈ ಶಾಲೆ ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಗಮನ ಸಳೆದಿದೆ. ತೀರಾ ಗ್ರಾಮೀಣ ಪ್ರದೇಶ ಹೆಸ್ಕುತ್ತೂರಲ್ಲಿ ಈ ಶಾಲೆ ಮನೆಮಾತು. ಸರ್ಕಾರಿ ಶಾಲೆಗಳತ್ತ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುವುದಿಲ್ಲ. 1957ರಲ್ಲಿ  ಕಿರಿಯ ಪ್ರಾಥಮಿಕ ಶಾಲೆಯಾಗಿ ಪ್ರಾರಂಭವಾದ ಶಾಲೆ, 1997-98ರಲ್ಲಿ ಹಿ.ಪ್ರಾ.ಶಾಲೆಯಾಗಿ ಭಡ್ತಿ ಪಡೆಯಿತು. ಪ್ರಸ್ತುತ 131 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ವೃದ್ಧಿಸುವ, ಅವರ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2010ರಲ್ಲಿ ಇಂಚರ ಹಸ್ತ ಪತ್ರಿಕೆಯನ್ನು ಇಲ್ಲಿ ಪ್ರಾರಂಭಿಸಲಾಯಿತು. ಇದು ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಮೊದಲ ಪತ್ರಿಕೆ. ಶಾಲಾ ಮಕ್ಕಳ ಬರಹ, ಚಿತ್ರ, ಲೆಕ್ಕದ ಮೋಜುಗಳ ಜೊತೆ ಶಾಲೆಯ ಬಗ್ಗೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರ ಬರಹಗಳು, ಪೋಷಕರ ಬರಹಗಳನ್ನೊಳಗೊಂಡ ಪತ್ರಿಕೆಯನ್ನು ಪ್ರತಿ ತಿಂಗಳು ಹಸ್ತರೂಪದಲ್ಲಿ ಅಚ್ಚು ಹಾಕಿಸಿ, ಗ್ರಾಮದ ಪ್ರತಿಮನೆಗೂ  ಹಂಚಲಾಗುತ್ತದೆ. ಇದಕ್ಕೆ ತಿಂಗಳಿಗೊಬ್ಬರು ದಾನಿಗಳು ಪ್ರಾಯೋಜಕತ್ವ ವಹಿಸಿಕೊಳ್ಳುತ್ತಾರೆ. ಈ ಪ್ರಯತ್ನದ ಸ್ಪೂರ್ತಿಯಿಂದ ಇಂದು ತಾಲೂಕಿನ ಕೆಲವು ಶಾಲೆಗಳಲ್ಲಿ ಹಸ್ತಪತ್ರಿಕೆ ಪ್ರಾರಂಭವಾಗಿದೆ.
ಮಕ್ಕಳೇ ಪತ್ರಕರ್ತರು:
ಹಸ್ತಪತ್ರಿಕೆಯ ಜೊತೆಯಲ್ಲಿ ತರಗತಿವಾರು ಪತ್ರಿಕೆಗಳನ್ನು ಹೊರ ತರಲಾಗುತ್ತದೆ. 1ಮತ್ತು 2ನೇ ತರಗತಿ ಮಕ್ಕಳ ನಲಿಕಲಿ ಚಿಲಿಪಿಲಿ, 3ನೇ ತರಗತಿಯ ಚಿತ್ತಾರ, 4ನೇ ತರಗತಿಗೆ ಚಿಣ್ಣರಲೋಕ, 5ನೇ ತರಗತಿಗೆ ಬಾಲರ ಪ್ರಪಂಚ, 6ನೇ ತರಗತಿಗೆ ಮಳೆಹನಿ, 7ನೇ ತರಗತಿಗೆ ನಮ್ಮ ಶಾಲೆ ಎನ್ನುವ ತರಗತಿವಾರು ಪತ್ರಿಕೆಗಳನ್ನು ಮಕ್ಕಳೆ ನಿರ್ವಹಿಸುತ್ತಾರೆ. ಮಕ್ಕಳ ಮನಸ್ಸಿಗೆ ತೋಚಿದ್ದನ್ನು ಹಸ್ತಪತ್ರಿಕೆಯ ರೂಪಕ್ಕೆ ತಂದು ಓದುಗರ ಮುಂದಿಡುತ್ತಾರೆ. ಈ ರೀತಿ ಮಕ್ಕಳ ಸಾಹಿತ್ಯಿಕ ಪ್ರಬುದ್ಧತೆ 2012ರಲ್ಲಿ ಇಂಚರ ಸಾಹಿತ್ಯೋತ್ಸವಕ್ಕೆ ವೇದಿಕೆಯಾಗಿದೆ. ಸುತ್ತಲಿನ 8 ಶಾಲಾ ಸಾಹಿತ್ಯಾಸಕ್ತ ಪುಟಾಣಿಗಳು ಈ ಉತ್ಸವದಲ್ಲಿ ತಮ್ಮ ಪ್ರೌಢಿಮೆಯನ್ನು ಬಿಂಬಿಸಿದ್ದಾರೆ.
ಎಜುಸ್ಯಾಟ್ ವ್ಯವಸ್ಥೆ:
ಉಪಗ್ರಹಧಾರಿತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಸಿದ್ಧಪಾಠಗಳನ್ನು ತಂತ್ರಜ್ಞಾನ ಮೂಲಕ ಮಕ್ಕಳ ಮುಂದೆ ಪರಿಣಾಮಕಾರಿಯಾಗಿ  ಇಡುವ ಎಜುಸ್ಯಾಟ್ ವ್ಯವಸ್ಥೆಯಿಂದ ಮಕ್ಕಳು ಪಾಠಕ್ಕೆನೈಜತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈ ಕೊಠಡಿಯ ನೆಲಹಾಸು ಚಿತ್ತಾಕರ್ಷಕವಾಗಿದೆ. ಮಧ್ಯಾಹ್ನದ ಎರಡು ಅವಧಿಯಲ್ಲಿ 5ನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ತರಗತಿವಾರು ಗ್ರಂಥಾಲಯ:
ವಿದ್ಯಾರ್ಥಿಗಳ ಓದುವ ಪ್ರೀತಿ ವೃದ್ಧಿಸಲು  ಪುಟ್ಟ ಗ್ರಂಥ ಭಂಡಾರ ಪ್ರತಿ ತರಗತಿಯಲೂ  ಇದೆ. ಮಕ್ಕಳ ಕುತೂಹಲಕ್ಕೆ ಅಗತ್ಯವಾದ ಪುಸ್ತಕಗಳನ್ನು ಅಲ್ಲಿಂದಲೇ ಪಡೆಯಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳೇ ತಯಾರಿಸಿದ  ಚಿತ್ರ, ಬರಹಗಳಿಂದ ಕೂಡಿದ ಪ್ರತಿ ತರಗತಿಯಲ್ಲಿಯೂ ಮಕ್ಕಳ ಸೃಜನಶೀಲತೆಯ ಅನಾವರಣ ಕಲಿಕಾ ಮನೆ, ಮಕ್ಕಳಿಗೆ ತಕ್ಷಣ ಸಿಗುವಂತೆ ಬೋಧನೋಪಕರಣಗಳನ್ನು ತರಗತಿಯಲ್ಲಿಯೇ  ಜೋಡಿಸಿಡಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೂ ಪೂರಕವಾದ ಸಾಮಾಗ್ರಿಗಳಿಗೆ ಮೀಸಲಿರಿಸಲಾಗಿದೆ. ಪ್ರತೀ ತರಗತಿಗೂ ಡಿಸ್‍ಪ್ಲೇ ಬೋರ್ಡ್ ಅಳವಡಿಸಲಾಗಿದೆ.
ಆಂಗ್ಲ ಹಾಗೂ ಕಂಪ್ಯೂಟರ್ ಶಿಕ್ಷಣ:
ಪ್ರತಿ ಮಗುವಿಗೂ ಆಂಗ್ಲಭಾಷೆಯನ್ನು ಸರ್ಕಾರಿ ಪಠ್ಯದಂತೆ ಒಂದನೇ ತರಗತಿಯಿಂದಲೇ ಕಲಿಸಲಾಗುತ್ತಿದೆ. ಮಕ್ಕಳಲ್ಲಿ ಇಂಗ್ಲಿಷ್ ಭಾಷಾ ಸಂವಹನವೂ ಸ್ಪಷ್ಟವಾಗಿ ನಡೆಯುತ್ತಿದೆ. ಕಂಪ್ಯೂಟರ್ ಶಿಕ್ಷಣಕ್ಕೂ ಶಾಲೆಯಲ್ಲಿ ಆಧ್ಯತೆ ನೀಡಲಾಗಿದೆ. ಪ್ರತ್ಯೇಕ ಕಂಪ್ಯೂಟರ್ ಕೊಠಡಿಯನ್ನು ಶಾಲೆ ಹೊಂದಿದೆ. ಗಣಕದ ಬಗೆಗೆ ಮಕ್ಕಳಿಗೆ ಪ್ರಾಯೋಗಿಕವಾದ ಜ್ಞಾನವನ್ನು ನೀಡಲಾಗುತ್ತಿದೆ.
ತರಗತಿಗಳು ಡಿಫರೆಂಟ್:
ಇತರ ಶಾಲೆಗಳಲ್ಲಿ ಒಂದರ ಹಿಂದೊಂದರಂತೆ ಬೆಂಚು ಹಾಕಿಸಿ ಮಕ್ಕಳನ್ನು ಕುಳ್ಳಿರಿಸುತ್ತಾರೆ. ಇಲ್ಲಿ ಡಿಫರೆಂಟ್. ಮೂರು ಕಡೆಗಳಲ್ಲಿ ಬೆಂಚು ಹಾಕಲಾಗಿದೆ. ಮಧ್ಯ ಶಿಕ್ಷಕರು ನಿಂತು ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ. ಗಂಡು ಹಾಗೂ ಹೆಣ್ಣು ಮಗುವಿಗೆ ಯಾವುದೇ ಬೇಧ ಮಾಡದೇ ಎಲ್ಲರನ್ನು ಒಟ್ಟಿಗೆ ಕುಳಿಸಲಾಗಿದೆ. ಒಂದರ ಹಿಂದೊಂದರಂತೆ ಬೆಂಚ್ ಹಾಕದೇ ಇರುವುದರಿಂದ ಪರಸ್ಪರ ಮಕ್ಕಳ ಮುಖವನ್ನು ನೋಡಿಕೊಳ್ಳುತ್ತಾರೆ. ಪಾಠ ಮಾಡುವಾಗ ಶಿಕ್ಷಕರಿಗೆ ಎಲ್ಲರನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ಪ್ರತಿ ತರಗತಿ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಆಕರ್ಷಣಿಯವಾಗಿ ಬಳಿಯಲಾಗಿದೆ.
ದಾನಿಗಳ ಸಹಭಾಗಿತ್ವ:
ಶಾಲೆ ಸಾರ್ವಜನಿಕ ಸ್ವತ್ತು. ಸರ್ಕಾರದ ಜೊತೆ ಸಾರ್ವಜನಿಕ ಪಾತ್ರವೂ ಇರಬೇಕು ಎನ್ನುವುದಕ್ಕೆ ಇಲ್ಲಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ವಿದ್ಯಾಭಿಮಾನಿಗಳ ಸಹಕಾರ ಪಡೆದುಕೊಂಡಿದೆ. ಶಾಲೆಗೆ ಧ್ವನಿವರ್ಧಕ, ವಾಚಾನಾಲಯ ಪೀಠೋಪಕರಣಗಳು, ಶೌಚಾಲಯ,  ಟಿ.ವಿ. ಡಿವಿಡಿ, ಪ್ರವೇಶದ್ವಾರ, ಎಜ್ಯುಸ್ಯಾಟ್, ಕಂಪ್ಯೂಟರ್, ಪ್ರತಿವರ್ಷ ಮಕ್ಕಳಿಗೆ ಕೊಡೆ, ಎಕ್ವಾ ಗಾರ್ಡ್ ಸಮವಸ್ತ್ರ ಹೀಗೆ ಶಾಲೆಯ ಸಾರ್ವತ್ರಿಕ ಪ್ರಗತಿಗೆ ದಾನಿಗಳ ಸಹಕಾರ ಪಡೆದುಕೊಳ್ಳಲಾಗಿದೆ.

ಮಗುವಿಗೊಂದು ಫೈಲ್:
ಪ್ರತಿ ಮಗುವಿನ ಪ್ರೊಫೈಲ್‍ಗೆ ಪ್ರತ್ಯೇಕ ಫೈಲ್‍ಗಳನ್ನು ನೀಡಲಾಗಿದೆ. ಅದರಲ್ಲಿ ವಿವರಗಳು ದಾಖಲಾಗುತ್ತದೆ. ಪ್ರಗತಿ ಪತ್ರ, ಹೆಲ್ತ್ ಕಾರ್ಡ್‍ಗಳು ಇರುತ್ತದೆ. ಮುಂದಿನ ತರಗತಿಗೆ ಹೋದಾಗ ಆ ಪೈಲ್ ಕೂಡಾ ಆ ವಿದ್ಯಾರ್ಥಿಯ ಜೊತೆಗಿರುತ್ತದೆ. ಇದು ಇಲಾಖೆಯ ನಿಯಮವಾಗಿದ್ದರೂ ಕೂಡಾ ಇಲ್ಲಿ ಅನುಷ್ಠಾನ ಪರಿಪೂರ್ಣವಾಗಿದೆ. ಮಕ್ಕಳಿಗೂ ಕೂಡಾ ಆಸಕ್ತಿ ಮೂಡಿಸುವ, ಶಾಲೆಯ ಆಕರ್ಷಣೆಯ ಹೆಚ್ಚಿಸುವ ಕೆಲಸ ಆಗುತ್ತಲೇ ಇರುತ್ತದೆ.
ಸಂಸದೀಯ ಮಾದರಿ ಚುನಾವಣೆ:
  ಪ್ರಜಾತಂತ್ರ ವ್ಯವಸ್ಥೆಯ ಅರಿವು ಮೂಡಿಸಲು ಸಂಸದೀಯ ಮಾದರಿಯ ಚುನಾವಣೆ ನಡೆಸಿ, ವಿದ್ಯಾರ್ಥಿ ನಾಯಕರನ್ನು ಚುನಾಯಿಸಲಾಗುತ್ತದೆ. ಬ್ಯಾಲೆಟ್ ಪೇಪರ್ ಬಳಕೆ, ನಾಮಪತ್ರ ಸಲ್ಲಿಸುವುದು, ಪ್ರಚಾರ, ಮತದಾನ ಎಲ್ಲವೂ ಚುನಾವಣಾ ಮಾದರಿಯಲ್ಲಿ ನಡೆಯುತ್ತದೆ. ನಂತರ ಸಂಸತ್ ಕಲಾಪ, ಶೂನ್ಯ ವೇಳೆ, ಸಭಾ ತ್ಯಾಗ, ಸದನ ಬಾವಿ ಇತ್ಯಾದಿ ವಿಚಾರಗಳನ್ನು ಪ್ರಾಯೋಗಾತ್ಮಕವಾಗಿಯೇ ವಿವರಿಸಲಾಗುತ್ತದೆ.
ಪ್ರಯೋಗಶೀಲ ಗುರುವರೇಣ್ಯರು:
ಶಾಲೆಯಲ್ಲಿನ ವೈಶಿಷ್ಟ್ಯತೆಗಳಿಗೆ ಇಲ್ಲಿನ ಬೋಧಕ ವೃಂದ ಮತ್ತು ಶಾಲಾಭಿವೃದ್ಧಿ ಸಮಿತಿ ಕಾರಣ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಲೆಯನ್ನು ಸರ್ಕಾರ, ದಾನಿಗಳ ಸಹಕಾರದಿಂದ ಜಿಲ್ಲೆಯಲ್ಲಿಯೇ ಗುರುತಿಸುವಂತೆ ಮಾಡಲಾಗಿದೆ. ಕಳೆದ ವರ್ಷ ಇಲ್ಲಿ ಎಫ್.ಎಸ್. ಇಂಡಿಯಾದಿಂದ ಜರ್ಮನ್ ದೇಶದ ಯುರೋನಿಕಾ ಕರೀಮ್ ಎನ್ನುವವರು ಒಂದು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಶಾಲಾ ಮುಖ್ಯೋಪಾಧ್ಯಾಯರಾಗಿ ಶೇಖರ ಕುಮಾರ್, ಸಹಶಿಕ್ಷಕರಾಗಿ ಜಯಲಕ್ಷ್ಮೀ,  ಜಯರಾಮ ಶೆಟ್ಟಿ, ವಿಜಯ ಆರ್., ಅಶೋಕ್ ತೆಕ್ಕಟ್ಟೆ, ವಿಜಯ ಶೆಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ನಾಗಶ್ರೀ ಕೆದ್ಲಾಯ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲೆಯಲ್ಲಿ ಸೇವಾದಳ, ಮೀನಾ ತಂಡ, ಶಾಲಾ ಸಂಸತ್ತ್ ಕಾರ್ಯಚರಿಸುತ್ತಿವೆ. ಬಿಸಿಯೂಟದಲ್ಲಿಯೂ ಶುಚಿಗೆ ಒತ್ತು ನೀಡಲಾಗಿದೆ. ಅಡುಗೆ ತಯಾರಿಸುವಾಗ ಅಡುಗೆ ಸಿಬ್ಬಂದಿ ತಲೆಗವಚ, ಏಪ್ರಿನ್, ಗ್ಲೌಸ್ ಬಳಸುತ್ತಾರೆ.
  ಗುಣಮಟ್ಟದ ಬೋಧನೆಯಿಂದ ಶಾಲೆ ಗ್ರಾಮದ ಅಮೂಲ್ಯ ಆಸ್ತಿಯಾಗಿ ಬೆಳೆಯುತ್ತಿದೆ. ಚಟುವಟಿಕೆ ಆಧಾರಿತ ಬೋಧನಾ ಕ್ರಮ, ಮಗುವಿಗೆ ಅತ್ಯಂತ ಸ್ನೇಹಿಯಾಗಿರುವ ಶಿಕ್ಷಕರು ಇಲ್ಲಿ ಗಮನ ಸೆಳೆಯುತ್ತಾರೆ. ಶಾಲೆಗೆ ಒಂದು ಒಳಾಂಗಣ ಸಭಾಭವನದ ಅವಶ್ಯಕತೆ ಇದೆ. ಆವರಣ ಗೋಡೆ ಪೂರ್ಣವಾಗಬೇಕಿದೆ. ಶಾಲಾ ಮೈದಾನವನ್ನು ಸಮತಟ್ಟು ಮಾಡುವ ಕೆಲಸ ಆಗಬೇಕಿದೆ. 
ಸಾರ್ವಜನಿಕ ಸಹಭಾಗಿತ್ವ, ಶಿಕ್ಷಕರ ದೂರಗಾಮಿ ಚಿಂತನೆಗಳು, ವಿದ್ಯಾರ್ಥಿಗಳ ಸಕರಾತ್ಮಕ ಸ್ಪಂದನ ಈ ಬೆಳವಣಿಗೆಗಳಿಗೆ ಕಾರಣವಾಗಿದೆ.  ಮಕ್ಕಳ ಕೊರತೆಯ ಕೂಗು ಕೇಳಿ ಬರುತ್ತಿರುವ ಸರಕಾರಿ ಶಾಲೆಗಳಿಗೆ ಇದೊಂದು ಆತ್ಮ ವಿಶ್ವಾಸದ ಹೊಸ ತರಂಗ.


ಚಿತ್ರ-ಲೇಖನ: ನಾಗರಾಜ್ ವಂಡ್ಸೆ ಬಳಗೇರಿ


 ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com
ಹೆಸ್ಕುತ್ತೂರು ಶಾಲೆಯ ಆವರಣ

ವಿಶೇಷ ಕೊಠಡಿಗಳಲ್ಲಿ ಕಲಿಕೆಯಲ್ಲಿ ನಿರತರಾಗಿರುವ ಮಕ್ಕಳು

ಮಕ್ಕಳ ಕೈಚಳಕ ತರಗತಿಯಲ್ಲಿ ಅನಾವರಣ
ತರಗತಿಯಲ್ಲಿಯೇ ಗ್ರಂಥಾಲಯ
ವಿಶೇಷ ಭೋಧನಾ ಕೊಠಡಿ

ಸುತ್ತಲೂ ಮಕ್ಕಳನ್ನು ಕುರಿಸಿ ಭೋದಿಸುವ ರಂಗ ಶಿಕ್ಷಣ ಮಾದರಿ ಇಲ್ಲೂ  ಇದೆ.

ಶಾಲೆಯ ಶಿಕ್ಷಕ ವೃಂದ


 Write your Comments Below