ಮಾಲಿನ್ಯದ ಸಮಸ್ಯೆಯಲ್ಲಿ ಕುಂದಾಪ್ರದ್ ಸಂತೆ!

ಕುಂದಾಪುರ: ಕುಂದಾಪುರದ ಪ್ರಸಿದ್ಧ ವಾರದ ಸಂತೆಯಲ್ಲಿ ಮಾಲಿನ್ಯದ ಸಮಸ್ಯೆಯಿಂದ ಗ್ರಾಹಕರು ಮತ್ತು ವ್ಯಾಪಾರಿಗಳು ತೊಂದರೆಯನ್ನು ಅನುಭವಿಸುವಂತಾಗಿದೆ. ಸಂತೆಯ ತ್ಯಾಜ್ಯ ಮತ್ತು ಮಳೆಯಿಂದಾಗಿ ಇಲ್ಲಿನ ಚರಂಡಿಗಳಲ್ಲಿ ನೀರು ಸಮರ್ಪಕವಾಗಿ ಹರಿದುಹೋಗಲು ತೊಂದರೆ ಉಂಟಾಗಿದ್ದರಿಂದ ಸಂತೆಗೆ ಬಂದವರು ಅನೈರ್ಮಲ್ಯಕರ ವಾತಾವರಣದಿಂದಾಗಿ ಭಾರೀ ಚಿಂತೆಗೊಳಗಾಗಿರುವುದು ಕಂಡುಬಂದಿದೆ. ಜನಜಂಗುಳಿ ಮತ್ತು ನಿರಂತರ ವಾಹನ ಸಂಚಾರವಿರುವ ಇಲ್ಲಿನ ಪರಿಸರದಲ್ಲಿ ಆರೋಗ್ಯಕರ ವಾತಾವರಣ ಮಾಯವಾಗಿದೆ.
      ಪ್ರತೀ ಶನಿವಾರ ನಡೆಯುವ ಕುಂದಾಪುರ ವಾರದ ಸಂತೆಗೆ ಕುಂದಾಪುರ ತಾಲೂಕಿನ ಬಹುತೇಕ ಹಳ್ಳಿಗಳ ಕೃಷಿಕರು, ವ್ಯಾಪಾರಿಗಳು ಹಾಗೂ ಗ್ರಾಹಕರು ಬರುತ್ತಾರೆ. ಹೊರಜಿಲ್ಲೆಗಳ ಕೃಷ್ಯುತ್ಪನ್ನಗಳ ವ್ಯಾಪಾರಿಗಳು ಶುಕ್ರವಾರವೇ ಕುಂದಾಪುರ ಸಂತೆಗೆ ತಮ್ಮ ಕೃಷ್ಯುತ್ಪನ್ನಗಳನ್ನು ಹೊತ್ತು ತರುತ್ತಾರೆ. ಸಂತೆಯಲ್ಲಿ ತರಕಾರಿ, ಹಣ್ಣುಹಂಪಲು, ದವಸಧಾನ್ಯಗಳು ಹೆಚ್ಚಾಗಿ ಬಿಕರಿಯಾಗುವುದರಿಂದ ಮಾರಾಟದ ಬಳಿಕ ಉಳಿಯುವ ತ್ಯಾಜ್ಯವಸ್ತುಗಳು ಇಲ್ಲಿನ ಸಂತೆಮಾರುಕಟ್ಟೆ ಪರಿಸರದಲ್ಲಿನ ಚರಂಡಿಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಹರಡಿಕೊಳ್ಳುತ್ತವೆ. ಅದರೊಂದಿಗೆ ಇನ್ನಿತರ ತ್ಯಾಜ್ಯವಸ್ತುಗಳು ಅಲ್ಲಲ್ಲಿ ಎಸೆಯಲ್ಪಡುವುದರಿಂದಾಗಿ ದಿನವಿಡೀ ಸಂತೆಯ ಸುತ್ತಮುತ್ತ ಮಾಲಿನ್ಯಕರ ಸನ್ನಿವೇಶ ಉಂಟಾಗುತ್ತದೆ. ಸಂತೆಯಲ್ಲಿ ತ್ಯಾಜ್ಯವಸ್ತು ಸಂಗ್ರಹ ಡಬ್ಬಿಗಳನ್ನು ಇಡದಿರುವುದು ತ್ಯಾಜ್ಯ ಸಮಸ್ಯೆಗೆ ಕಾರಣವಾಗಿದೆ. 
    ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಿನಲ್ಲಿರುವ ಸಂತೆಯ ಆಸುಪಾಸಿನ ಚರಂಡಿಗಳಲ್ಲಿ ನೀರು ಬ್ಲಾಕ್ ಆಗುವುದರಿಂದ ಕಲುಷಿತ ನೀರು ಇಲ್ಲಿನ ಪರಿಸರದಲ್ಲಿಯೇ ನಿಲುಗಡೆಗೊಳ್ಳುತ್ತದೆ. ಸಂತೆಯ ತ್ಯಾಜ್ಯದಾರ್ಥಗಳು ನೀರಿನಲ್ಲಿ ಕೊಳೆಯುವುದರಿಂದ ದುರ್ವಾಸನೆ ಹರಡುವುದರೊಂದಿಗೆ ಸೊಳ್ಳೆ ಉತ್ಪತ್ತಿಗೆ ಅವಕಾಶವಾಗಿದೆ. ಇಲ್ಲಿನ ಹೆದ್ದಾರಿ ಮತ್ತು ಸಂತೆ ಪರಿಸರದಲ್ಲಿನ ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡುವುದು ಮತ್ತು ಚರಂಡಿಯ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ಆದಲ್ಲಿ ಸಮಸ್ಯೆಗೆ ತಕ್ಕಮಟ್ಟಿಗೆ ಕಡಿವಾಣ ಹಾಕಲು ಸಾಧ್ಯವಿದೆ. 
     ಸಂತೆಯ ಆಸುಪಾಸಿನಲ್ಲಿ ಜನರು ಇಲ್ಲಿನ ಹೋಟೇಲು ಅಂಗಡಿಗಳಲ್ಲಿ ಅಶುದ್ಧಕರವಾದ ನೀರು ಮತ್ತು ಆಹಾರಪದಾರ್ಥಗಳನ್ನು ಸೇವಿಸುವುದರಿಂದ ಜನರ ಆರೋಗ್ಯ ಹದಗೆಡುವುದಕ್ಕೂ ಕಾರಣವಾಗುತ್ತಿದೆ. ಡೆಂಗ್ಯು, ಚಿಕುನ್‍ಗುನ್ಯಾ, ಮಲೇರಿಯಾದಂತಹ ಕಾಯಿಲೆಗಳು ಅನೈರ್ಮಲ್ಯಕರ ವಾತಾವರಣ ಹಾಗೂ ಸೊಳ್ಳೆತಾಣಗಳಿಂದಲೇ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯದ ಸಮಸ್ಯೆಯಿಂದ ಬಳಲುತ್ತಿರುವ ಕುಂದಾಪುರ ವಾರದ ಸಂತೆ ಪರಿಸರದ ನೈರ್ಮಲ್ಯ ಸಂರಕ್ಷಣೆಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. 
    ಕುಂದಾಪುರ ಕೃಷ್ಯುತ್ಪನ್ನ ಮಾರುಕಟ್ಟೆ ಸಮಿತಿಯು ಕುಂದಾಪುರದ ವಾರದ ಸಂತೆಯ ನೈರ್ಮಲ್ಯ ಸಂರಕ್ಷಣೆಯ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಸುಂದರ ಕುಂದಾಪುರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಯನ್ನು ಹಾಕಿಕೊಂಡಲ್ಲಿ ಸಂತೆಯ ಮಾಲಿನ್ಯದ ಚಿಂತೆಯನ್ನು ನಿವಾರಿಸಲು ಸಾಧ್ಯ. ಅತೀ ಮುಖ್ಯವಾಗಿ ಕುಂದಾಪುರ ಸಂತೆಯಲ್ಲಿ ವೈಜ್ಞಾನಿಕ ಮಾದರಿಯ ತ್ಯಾಜ್ಯ ವಿಲೇವಾರಿ ಮತ್ತು ಪರಿಸರದ ಚರಂಡಿಗಳ ಸುಸೂತ್ರ ನಿರ್ವಹಣೆಗೆ ಮಹತ್ವ ನೀಡಿದಲ್ಲಿ ಸಂತೆಯಲ್ಲಿ ತಮ್ಮ ಚಿಂತೆ ಕಡಿಮೆಯಾಗಬಹುದು ಎಂದು ಸಂತೆಗೆ ಬಂದ ಹಲವು ಗ್ರಾಹಕರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. 
                                                                              ವಿಶೇಷ ವರದಿ: ಸಿ. ಕೆ. ಹೆಮ್ಮಾಡಿ