ರಾಜಕಾರಣಿಯ ಯಕ್ಷಗಾನ ಪ್ರೇಮ!

     ಕೆಲವೊಮ್ಮೆ ವೃತ್ತಿ ಕಲಾವಿದರಿಗಿಂಥ ಪ್ರವೃತ್ತಿ ಕಲಾವಿದರೆ ಸುದ್ದಿಯಾಗುತ್ತಾರೆ. ಅವರಲ್ಲಿ ಪರಿಪೂರ್ಣವಾಗಿ ಅಭ್ಯಿವ್ಯಕ್ತಿ ಪಡಿಸಬೇಕೆಂಬ ಅಮಿತ ತುಡಿತವಿರುತ್ತದೆ. ಅದೇ ಅವರನ್ನು ಪ್ರಸಿದ್ಧಿಯ ಪಥದತ್ತ ಕರೆದೊಯ್ಯುತ್ತದೆ. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಅವರನ್ನು ಇಂಥಹ ಪ್ರವೃತ್ತಿಯನ್ನು ತನ್ನದಾಗಿಸಿಕೊಂಡ ಅಪರೂಪದ ಹವ್ಯಾಸಿ ಕಲಾವಿದ ಎನ್ನಬಹುದು.ಸಮಾಜ ಸೇವೆ, ರಾಜಕಾರಣ, ಅಚ್ಚು ಮೆಚ್ಚಿನ ವೃತ್ತಿ ಜೊತೆಗೆ ಬಿಡದ ಪ್ರವೃತ್ತಿ.
       ಗಣಪತಿ ಶ್ರೀಯಾನ್ ಈಗ ರಾಜಕಾರಣಿ. ಹಿಂದೆ ಕೋಟೇಶ್ವರ ಮೊಗವೀರ ಸಂಘಟನೆಯಲ್ಲಿ ಸಕ್ರಿಯ ಮುಂದಾಳು. ಅಧ್ಯಕ್ಷ, ಕಾರ್ಯದರ್ಶಿ ಹೀಗೆ ಹತ್ತಾರು ಜವಾಬ್ದಾರಿಯತ ಹುದ್ದೆಗಳನ್ನು ನಿರ್ವಹಿಸಿದ ವ್ಯಕ್ತಿ.  ತನ್ನ ಬಿಡುವಿಲ್ಲದ ಸಮಯದಲ್ಲಿಯೂ ಕೂಡಾ ಸಂಘ ಸಂಸ್ಥೆಗಳ ಕಲಾ ಪ್ರದರ್ಶನಗಳಲ್ಲಿ ಶ್ರೀಯಾನ್ ವೇಷ ಹಾಕುತ್ತಾರೆ. ಪ್ರಬುದ್ಧ ಯಕ್ಷಗಾನ ಕಲಾವಿದನಿಗೆ ಇರಬೇಕಾದ ಎಲ್ಲಾ ಗುಣಲಕ್ಷಣ, ನಿಷ್ಣಾತತೆ ಕೂಡಾ ಇವರಲ್ಲಿದೆ.  ಗಣಪತಿ ಶ್ರೀಯಾನ್ ಪಾತ್ರ ಇದೆ ಎಂದರೆ ಪ್ರೇಕ್ಷಕರು ಅವರ ಪಾತ್ರದ ನಿರೀಕ್ಷೆಯಲ್ಲಿ ಇರುತ್ತಾರೆ. ಅಂತಹ ಒಂದು ಅಭಿಮಾನಿತ್ವವನ್ನು ಶ್ರೀಯಾನ್ ತೆಕ್ಕಟ್ಟೆ ಭಾಗದಲ್ಲಿ ಪಡೆದಿದ್ದರು.
ಯಕ್ಷಗಾನದ ಪುಂಡು ವೇಷ, ರಾಜವೇಷ, ಎರಡನೇ ವೇಷ, ಹಾಸ್ಯ ಹೀಗೆ ಪಾತ್ರ ಯಾವುದೇ ಇರಲಿ ಇವರು ಅದಕ್ಕೆ ಜೀವ ತುಂಬುತ್ತಾರೆ. ದೇವೇಂದ್ರ ಸರಿ, ನಂದಿಕೇಶ್ವರನೇ ಇರಲಿ, ಆ ಪಾತ್ರದ ಔಚಿತ್ಯವನ್ನು ಅರ್ಥೈಸಿಕೊಂಡು ಜೀವ ತುಂಬುತ್ತಾರೆ. ಶ್ವೇತ ಕುಮಾರ ಚರಿತ್ರೆಯ ಇವರ ಪ್ರೇತ ವೇಷ ಅಂದಿನ ಕರ್ಕಿ ಹಾಸ್ಯಗಾರರನ್ನು ನೆನಪಿಸುತ್ತದೆ. ಇವರು ಪಾತ್ರ ನಿರ್ವಹಣೆಯಲ್ಲಿ ತೋರಿಸುವ ಅಸೀಮ ಅಸ್ಥೆ, ತಾಳ್ಮೆ, ಸನ್ನಿವೇಶಗಳನ್ನು ಬಳಸಿಕೊಳ್ಳುವ ರೀತಿ ಅವರನ್ನು ಯಶಸ್ಸುಗೊಳಿಸಿತು. ಸಾಹಿತ್ಯಭರಿತ ಮಾತುಗಾರಿಕೆ, ಅಶ್ಲೀಲವಿಲ್ಲದ ಹಾಸ್ಯ, ಕುಣಿತದಲ್ಲಿನ ತಾತ್ಕಾರ, ಭಾವಾಭಿವ್ಯಕ್ತಿ, ಸಂಜ್ಞೆ, ರಂಗ ನಿಲುವು ಪ್ರಸಂಗಗದ ಯಾವ ಪಾತ್ರಕ್ಕಾದರೂ ಸಚೇತನಗೊಳಿಸುತ್ತದೆ.
01-06-1966ರಲ್ಲಿ ತಿಮ್ಮ ಶ್ರೀಯಾನ್, ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಯಾನ್, ಗುರು ಸೀತಾರಾಮ ಆಚಾರ್ಯರಿಂದ ಯಕ್ಷಗಾನದ ತದ್ಧಿಮಿ ತಕಧಿಮಿ ದೀಕ್ಷೆ ಪಡೆದರು. ಮುಂದೆ ಸಿಕ್ಕ ಅವಕಾಶಗಳಲ್ಲಿ ಧೀಂಕಿಟ ಎಂದು ಕುಣಿದರು. ಹಲವಾರು ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಡೀಸೆಲ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲಮೋ ಮಾಡಿ, ಭಾರತೀಯ ವಿಕಾಸ ಟ್ರಸ್ಟಿನಿಂದ ಐಟಿಐ ತರಬೇತಿ ಪಡೆದು ತೆಕ್ಕಟ್ಟೆಯಲ್ಲಿ ಮಂಜುಶ್ರೀ ಇಂಜಿನಿಯರಿಂಗ್ ವರ್ಕ್ ಶಾಪ್ ಪ್ರಾರಂಭಿಸಿ ಅದರಲ್ಲಿ ಕೂಡಾ ಕಲಾವಿದನ ಕೈಚಳ ಮೆರೆದರು. ಯಕ್ಷಗಾನ ಮಾತ್ರವಲ್ಲದೇ ನಾಟಕಗಳಲ್ಲಿ ನಟನೆ, ನಿದೇರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳ ಪಡೆದಿದ್ದಾರೆ. ಹೂವಿನಕೋಲು ಕಲಾವಿದರಾಗಿ, ಭಜನಾ ಪಟುವಾಗಿ, ಹೌಂದೇರಾಯನ ವಾಲಗ ಇತ್ಯಾದಿ ಪ್ರಾದೇಶಿಕ, ಜಾನಪದ ಕಲೆಗಳಲ್ಲಿ ತನ್ನ ತೊಡಗಿಸಿಕೊಂಡಿದ್ದಾರೆ. ನಾಟಕಗಳಲ್ಲಿ ಕೂಡಾ ಅರ್ಥಗರ್ಭಿತವಾಗಿಯೂ, ಹಾಸ್ಯ ಪಾತ್ರಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
ಮೊಗವೀರ ಯುವ ಸಂಘಟನೆಯಲ್ಲಿ ಕೂಡಾ ಹತ್ತಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇವರದ್ದು. ನಾಡೋಜ ಡಾ| ಜಿ.ಶಂಕರ್ ಆವರ ಸಹಕಾರವನ್ನು ಸದಾ ಸ್ಮರಿಸುವ ಇವರು, ಕ್ರೀಡೆ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಕರ್ತವ್ಯ ನಿರ್ವಹಣೆ ಮಾಡಿ, ಮೆಚ್ಚುಗೆ ಪಡೆದಿದ್ದಾರೆ. ಪ್ರಸ್ತುತ ಕೋಟೇಶ್ವರ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ, ಇವರು  ಪತ್ನಿ, ಮಕ್ಕಳೊಂದಿಗೆ ತೆಕ್ಕಟ್ಟೆಯಲ್ಲಿ ನೆಲೆಸಿದ್ದಾರೆ.
-ನಾಗರಾಜ್ ವಂಡ್ಸೆ ಬಳಗೇರಿ 
ಪತ್ರಕರ್ತರು ಕುಂದಾಪುರ