ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳ ಮಜಾ, ಮೋಜು ಒಂದಿಷು ಕಲಿಕೆ

       ಭತ್ತದ ಬೇಸಾಯ ನೆನಗುದಿಗೆ ಬೀಳುತ್ತಿದೆ. ಹೊಸ ತಲೆಮಾರು ಕೃಷಿಯಿಂದ ದೂರ ಸರಿಯುತ್ತಿದೆ. ಜೀವ ಜಗತ್ತಿಗೆ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ಕೃಷಿಯತ್ತ ಅಕರ್ಷಿಸುವ ವಿಶಿಷ್ಠ ಕಾರ್ಯಕ್ರಮ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಏರಿಬೈಲುಮನೆ ಸಂಕಯ್ಯ ಶೆಟ್ಟಿಯವರ ಕೃಷಿ ಗದ್ದೆಯಲ್ಲಿ ಇತ್ತೀಚೆಗೆ  ನಡೆಯಿತು.
       ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೆಸರು ಗದ್ದೆಯತ್ತ ಬಂದರು. ಭತ್ತದ ಸಸಿ, ನೇಜಿ ಕೀಳುವುದು, ನಾಟಿ, ಕೋಣಗಳ ಉಳುಮೆ, ಯಂತ್ರ ನಾಟಿ ಇತ್ಯಾದಿ ಪ್ರಾತ್ಯಕ್ಷಿತೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡ ವಿದ್ಯಾರ್ಥಿಗಳು, ತಮ್ಮ ಮನಸ್ಸಿನಲ್ಲಿ ಕೃಷಿಯ ಬಗೆಗಿನ ಆಸಕ್ತಿಯನ್ನು ತಣಿಸಿಕೊಂಡರು. ತಮ್ಮ ಮನೆಯಲ್ಲಿ ಸಾಕಷ್ಟು ಕೃಷಿ ಭೂಮಿ, ತೋಟ, ಗದ್ದೆ ಇದ್ದರೂ ಕೂಡಾ ಕೆಸರು ಗದ್ದೆಗೆ ಇಳಿಯದ  ವಿದ್ಯಾರ್ಥಿಗಳು ಇಲ್ಲಿ ಕೆಸರು ಗದ್ದೆಗೆ ಇಳಿದರು. ಕೃಷಿಯಲ್ಲಿ ತಾವು ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ನೇಜಿ ಗದ್ದೆಯಲ್ಲಿ ತುಂಬಿದ ಉತ್ಸಾಹದಿಂದ ಅನುಭವಿ ಕಾರ್ಮಿಕರ ಜೊತೆಗೆ ಭತ್ತದ ಸಸಿಗಳನ್ನು ಕಿತ್ತರು, ಛಾಪೆ ನೇಜಿಯ ನಾಟಿಯ ಕೌತುಕವನ್ನು ಕಣ್ಣು ತುಂಬಿಸಿಕೊಂಡರು. ಕೆಲವು ವಿದ್ಯಾರ್ಥಿಗಳು ಕೋಣಗಳ ಉಳಿಮೆಯಲ್ಲಿ ತಮ್ಮ ಕುತೂಹಲವನ್ನು ಓರೆಗೆ ಹಚ್ಚಿದರು. ನೇಗಿಲು ಹಿಡಿದು ಸಂತಷ ಪಟ್ಟರು.
     ಮಕ್ಕಳಲ್ಲಿ ಕೃಷಿಯ ಆಸಕ್ತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಕೆಸರು ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕೆಸರು ಗದ್ದೆ ಓಟ ಸಾಕಷ್ಟು ಗಮನ ಸಳೆದರೆ, ಹಗ್ಗ ಜಗ್ಗಾಟ ಮೊದಲಾದ ಕೆಸರು ಗದ್ದೆಯಲ್ಲಿ ನಡೆದ ಸ್ಫರ್ಧೆಯಲ್ಲಿ ವಿಧ್ಯಾರ್ಥಿಗಳು ತಮ್ಮ ಕ್ರೀಡಾ ಸಾಮಥ್ರ್ಯ ಬಿಂಬಿಸಿದರು. ಇಲ್ಲಿ ಸೋಲು ಗೆಲುವು ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿರಲಿಲ್ಲ. ಕೆಸರು ಗದ್ದೆಯಲ್ಲಿ ನಲಿದಾಟದ ಮಜ ಅವರನ್ನು ತಾವು ಕಳೆದುಕೊಂಡ ಬಾಲ್ಯವನ್ನು ನೆನಪು ಮಾಡಿದವು. ಉಳುಮೆ ಮಾಡಿ ಹದ ಮಾಡಿದ ಗದ್ದೆಯಲ್ಲಿ ಮಕ್ಕಳ ಪಚ ಪಚ ಓಟ, ಬೀಳುವುದು, ಏಳುವುದು ಒಂಥರ ಮನೋರಂಜನೆ ಆಗಿಯೂ ಮೂಡಿ ಬಂತು.
      ಕೆಸರು ಗದ್ದೆಯಲ್ಲಿ ನಡೆದ ಹಗ್ಗ ಜಗ್ಗಾಟ ಕುತೂಹಲ ಕೇಂದ್ರವಾಗಿತ್ತು. ಕೆಸರು ಎಂದರೆ ಕಾಲನ್ನು ಜಾಗರೂಕವಾಗಿ ಹಾಕುತ್ತಿದ್ದವರು ಕೆಸರಿನಲ್ಲಿ ಬಿದ್ದು ಮಿಂದೆದ್ದರು. ಕೆಸರಿನ ರೋಮಾಂಚನ ಅನುಭೂತಿಗೆ ಅವರು ಒಳಗಾದರು. ರೋಮಾಂಚನ ಸ್ಪರ್ಶದ ಕೆಸರೇ  ಬಟ್ಟಲಿಗೆ ಅನ್ನವಾಗಿ ಬರಲು ಪ್ರಮುಖವಾದ ನಿರ್ಣಯಕ ಘಟ್ಟ ಎನ್ನುವ ಮೂಲಭೂತ ಕಲ್ಪನೆಯನ್ನು ಅವರು ಮಾಡಿಕೊಂಡರು. ಇಂಥಹ ಅವಕಾಶಗಳು ನೈಸರ್ಗಿಕವಾಗಿ ದೊರೆಯುತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳಲು ಆಗದವರು ಈ ಅನುಭವದಿಂದ ತಮ್ಮ ಅನುಭವ ಬುತ್ತಿಯಲ್ಲಿ ಜೋಪಾನವಾಗಿ ಸಂಗ್ರಹಿಸಿಕೊಂಡರು.
        ಭಾಗವಹಿಸಿದ ವಿದ್ಯಾರ್ಥಿಗಳಿಗೆಲ್ಲ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಗ್ರೀನ್ ಇಂಡಿಯಾ ಮೂಮೆಂಟ್‍ನ ಮುನಿಯಾಲ್ ಗಣೇಶ ಶೆಣೈ ಬಿಲ್ವ, ಶ್ರೀಗಂಧ ಮೊದಲಾದ ಗಿಡಗಳನ್ನು ನೀಡಿದರು. ಪ್ರತಿಯೊಂದು ಗಿಡದ ನಿರ್ವಹಣೆಯನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ಹಸಿರು ಉಳಿಸುವಲ್ಲಿ ತಾವು ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಕಿವಿಮಾತು ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ  ಕೆಸರಿಗಿಳಿದ ನೆನಪಾಗಿ ಗಿಡಗಳನ್ನು ಕೊಂಡೊಯ್ದರು.
       ಕೈ ಕೆಸರಾದರೆ ಬಾಯಿ ಮೊಸರು ಎಂಬ ಶೀರ್ಷಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ನೇತೃತ್ವದಲ್ಲಿ ಅನ್ಸ್ ಕ್ಲಬ್, ಶಿಕ್ಷಣ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಹಸಿರು ಭಾರತ ಅಂದೋಲನ ಕಾರ್ಯಕರ್ತರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮ, ಪ್ರಾತ್ಯಕ್ಷಿಕೆ, ಪರಿಚಯ, ಸ್ಪರ್ಧೆಗಳಿಂದ  ಗಮನ ಸಳೆಯಿತು. ವಿಶಿಷ್ಠವಾದ, ಅಪರೂಪದ ಈ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಯಿತು. ಇಕೋ ಕ್ಲಬ್, ಇಂಟರ್ಯಾಕ್ಟ್, ಎನ್.ಎಸ್.ಎಸ್., ಸ್ಕೌಟ್,ಗೈಡ್ಸ್  ಇತ್ಯಾದಿಗಳಿಗೆ ಒಳಪಟ್ಟ ವಿದ್ಯಾರ್ಥಿಗಳು ಭಾಗವಹಿಸಿದ್ದರು.
         ವರುಣನ ವಿರಾಮದಿಂದ ಕಾರ್ಯಕ್ರಮ ಇನ್ನಷ್ಟು ಕಳೆ ಬಂತು. ಹಿರಿಯ ಕೃಷಿಕ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯವದಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲೆ 3180ರ ವಲಯ 1ರ ಸಹಾಯಕ ಗವರ್ನರ್ ಟಿ.ಕೆ ಎಂ.ಭಟ್,  ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮದಾಸ ರೈ, ಅನ್ಸ್ ಕ್ಲಬ್‍ನ ಚೇತನಾ ಜಿ.ಶೆಟ್ಟಿ, ಗೀತಾ ಬಿ.ಶೆಟ್ಟಿ,  ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕು ಪೂಜಾರಿ, ಸಸ್ಯ ತಜ್ಞ ಹಾಗೂ ಹಸಿರು ಭಾರತ ಅಂದೋಲನದ ಸ್ಥಾಪಕ ಅಧ್ಯಕ್ಷರಾದ ಮುನಿಯಾಲ್ ಗಣೇಶ ಶೆಣೈ, ಪ್ರಭಾಕಿರಣ ಟೈಲ್ಸ್ ಗುಲ್ವಾಡಿಯ ಆಡಳಿತ ನಿರ್ದೆಶಕ ಪ್ರಶಾಂತ್ ತೋಳಾರ್, ಕೃಷಿ ತಜ್ಞ ಕೆಂಚನೂರು ಸೋಮಶೇಖರ್ ಶೆಟ್ಟಿ, ಶಿವರಾಮ ಶೆಟ್ಟಿ, ಕರುಣಾಕರ ಪೂಜಾರಿ ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಎಸ್.ಹತ್ವಾರ್ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷ ವರದಿ: ನಾಗರಾಜ್ ವಂಡ್ಸೆ ಕುಂದಾಪುರ