ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಸಚಿವ ಕಿಮ್ಮನೆ ರತ್ನಾಕರ

ಕುಂದಾಪುರ: ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಕಾಣದಷ್ಟು ಅಭಿವೃದ್ಧಿ ಸಾಧಿಸಲಾಗುವುದು. ಈ ಬಗ್ಗೆ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶೈಕ್ಷಣಿಕ ಮಟ್ಟದ ವರದಿ ತರಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ರತ್ನಾಕರ ಕಿಮ್ಮನೆ ಹೇಳಿದ್ದಾರೆ.
       ಅವರು ಕುಂದಾಪುರದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂಸಾರ ಸಮೇತ ಖಾಸಗೀ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಮಾತನಾಡಿದರು. 
      ಹಿಂದೆಯೇ ನಾಲ್ಕು ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೆನೆಗುದಿಗೆ ಬಿದ್ದಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೈದ್ರಾಬಾದ್ ಕರ್ನಾಟಕ ಘಟನೆಯಿಂದಾಗಿ ಅದಕ್ಕೆ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದು, ಒಂದೊಮ್ಮೆ ಅದು ಅನುಷ್ಟಾನಗೊಂಡಿದ್ದರೆ, 371 ಜೆ ಅಡಿಯಲ್ಲಿ ಮೀಸಲಾತಿ ಕೊಡಬೇಕಾಗಿದ್ದುದರಿಂದ ಅಲ್ಲಿಯ ಶಿಕ್ಷಕರು ಇಲ್ಲಿಗೆ ಬರುತ್ತಿದ್ದರು. ಇದರಿಂದಾಗಿ ಮತ್ತೆ ರಾಜ್ಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ತಪ್ಪುತ್ತಿತ್ತು. ಹಾಗಾಗಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು ಎಂದ ಅವರು, ಮುಂದಿನ ತಿಂಗಳೊಳಗಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ 12 ಸಾವಿರ ಶಿಕ್ಷಕರನ್ನು ತಾತ್ಕಾಲಿಕ ನೆಲೆಯಲ್ಲಿ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
       ತಾತ್ಕಾಲಿಕ ಶಿಕ್ಷಕರ ಬದಲಿಗೆ ಖಾಯಂ ಶಿಕ್ಷಕರ ನೆಮಕಾತಿ ಬಗ್ಗೆ ಯೋಚಿಸಬಹುದಿತ್ತಲ್ಲವೇ ಎಂದ ಪ್ರಶ್ನೆಗೆ, ರಾಜ್ಯದಲ್ಲಿ 51 ಸಾವಿರ ಶಾಲೆಗಳಿದ್ದು, 24 ಸಾವಿರ ಶಿಕ್ಷಕರ ಹುದ್ದೆ ಖಾಲಿಯಿವೆ. ಇದೆಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಈಗ ನಿಯೋಜಿಸಲಾಗುವ ತಾತ್ಕಾಲಿಕ ಶಿಕ್ಷಕರ ಸೇವೆ ಪರಿಗಣಿಸಿ ಮುಂದಿನ ದಿನಗಳಲ್ಲಿ ಖಾಯಂಗೊಳಿಸುವ ಬಗ್ಗೆ ಆಲೋಚಿಸಲಾಗುತ್ತದೆ ಎಂದರು.
      ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಶೈಕ್ಷಣಿಕ ಅವಧಿಗೆ ಮುನ್ನವೇ ನಿವೃತ್ತಿಯಾಗುವ ಶಿಕ್ಷಕರನ್ನು ಆ ಸಾಲಿನ ಅಂತ್ಯದ ವರೆಗೆ ಮುಂದುವರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರೀ ಶಾಲೆಗಳ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಲ್ಲಿ ಇದ್ದ ಸ್ಥಿತಿಯಲ್ಲಿಯೇ ಅಭಿವೃದ್ಧಿಗೊಳಿಸುವ ಬಗ್ಗೆ ಚಿಂತಿಸಲಾಗುತ್ತದೆ. ಇದಕ್ಕೆ ಪ್ರತೀ ಜಿಲ್ಲಾ ಮಟ್ಟದಲ್ಲಿ 80ರಿಂದ 150 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ರಾಜ್ಯದಲ್ಲಿ ಇಂತಹಾ ಅಭಿವೃದ್ಧಿಗೆ 6000 ಕೋಟಿ ರೂಪಾಯಿ ತಗುಲಲಿದೆ. ಹೀಗೇ ಹಂತ ಹಂತವಾಗಿ ಪ್ರತೀ ಶಾಲೆಯನ್ನೂ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

ಬೈಂದೂರಿನ ಹೊಸ್ಕೋಟೆ ಶಾಲೆಯ ಜಾಗದ ಸಮಸ್ಯೆ, ಹಲ್ತೂರು ಶಾಲಾ ಶಿಕ್ಷಕರ ಸಮಸ್ಯೆ ಹಾಗೂ ಬಿಜೂರು ಶಾಲೆಯ ಕಟ್ಟಡ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ನನಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ, ಈ ಬಗ್ಗೆ ವರದಿ ತರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಶಾಲೆಯಲ್ಲಿ ಮಾನಸಿಕ ಅಸ್ವಸ್ಥ ಶಿಕ್ಷಕರು ಇದ್ದರೆ ಅಥವಾ ಸರಿಯಾಗಿ ಪಾಠ ಮಾಡದ ಶಿಕ್ಷಕರು ಇದ್ದರೆ ಅಂತಹಾ ಶಿಕ್ಷಕರನ್ನು ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಅಥವಾ ಸ್ವಯಂ ನಿವೃತ್ತಿಗೊಳಿಸಲಾಗುವುದು. ಇದಕ್ಕೆ ಶಿಕ್ಷಕರ ಯಾವುದೇ ಮನವಿ ಅಥವಾ ಅರ್ಜಿಗಳ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವರ ಪತ್ನಿ ಅರುಂಧತಿ, ಪುತ್ರ ಮಂಥನ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಕಂಬದಕೋಣೆ ಸಮೂಹ ಸಂಪನ್ಮೂಲ ವ್ಯಕ್ತಿ ಜಯಾನಂದ ಪಟಗಾರ್ ಮೊದಲಾದವರು ಜೊತೆಯಲ್ಲಿದ್ದರು.


ಮಾದರಿ ಶಾಲೆ ಯೋಜನೆ: ಪ್ರತೀ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಒಂದು ಶಾಲೆಯಂತೆ ರಾಜ್ಯದ 5100 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಆಯಾ ಗ್ರಾಮ ಪಂಚಾಯಿತಿಯ ನಿರ್ಣಯದಂತೆ ಆಯ್ಕೆಯಾದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲಾಗುವುದು. ಯಾವುದೇ ದಾನಿಗಳೂ ಶಾಲೆಗೆ ಸಹಕಾರ ನೀಡಿದರೆ ಅವರ ಹೆಸರನ್ನು ಸರ್ಕಾರದ ಶಿಕ್ಷಣ ವೆಬ್‍ಸೈಟ್‍ನಲ್ಲಿಯೂ ನಮೂದಿಸುವ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ದೊರಕಿದ್ದು, ಮಲೆನಾಡು ಪ್ರದೇಶಗಳಲ್ಲಿ ಅನುಷ್ಟಾನವಾಗಬೇಕಿದೆ. ಮುಂದಿನ ಎರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಲಾಗುತ್ತದೆ ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com