ಭತ್ತ ಕೃಷಿಯನ್ನು ನಲುಗಿಸಿದ ನೆರೆಹಾವಳಿ; ಸಂಕಷ್ಟದಲ್ಲಿ ರೈತರು

ಕುಂದಾಪುರ: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಪಾರ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಹಲವೆಡೆ ನದಿತೀರ ಹಾಗೂ ತಗ್ಗುಪ್ರದೇಶಗಳಲ್ಲಿ ಮೂರಕ್ಕಿಂತಲೂ ಹೆಚ್ಚು ಬಾರಿ ನೆರೆಹಾವಳಿ ಕಾಣಿಸಿಕೊಂಡಿದ್ದರಿಂದ ಈ ಪ್ರದೇಶಗಳಲ್ಲಿನ ಅಪಾರ ಭತ್ತಕೃಷಿ ನಲುಗಿಹೋಗಿದ್ದು, ರೈತರು ನಷ್ಟ ಭೀತಿಯಲ್ಲಿ ಸಿಲುಕಿದ್ದಾರೆ.
   ತಾಲೂಕಿನ ಪಂಚನದಿಗಳ ತೀರಪ್ರದೇಶಗಳಲ್ಲಿನ ಸಾವಿರಾರು ಎಕರೆ ಪ್ರದೇಶಗಳಲ್ಲಿ ಭತ್ತ ಕೃಷಿ ಮಾಡಲಾಗುತ್ತಿದ್ದು, ನಿರಂತರವಾಗಿ ಬಾಧಿಸಿದ ನೆರೆಹಾವಳಿಯಿಂದ ಇಲ್ಲಿನ ಭತ್ತ ಬೆಳೆ ನಾಮಾವಶೇಷಗೊಂಡಿದೆ. ಸೌಪರ್ಣಿಕಾ ನದಿತೀರದ ಅರೆಹೊಳೆ, ಸಾಲ್ಬುಡ, ಬಾಂಗಿನ, ಪಡುಕೋಣೆ, ಹಡವು, ಬಡಾಕೆರೆ-ಕಳಿನಬಾಗಿಲು, ನಾಡಾ-ಚಿಕ್ಕಳ್ಳಿ, ಕೋಣ್ಕಿ-ಕೂಡ್ಗಿತ್ಲು, ಸೇನಾಪುರ-ತೆಂಗಿನಗುಂಡಿ, ಪರಮಕಳಿ, ಹೊಸಾಡು-ಅರಾಟೆ, ಹೊಕ್ಕೊಳಿ, ಚಕ್ರಾನದಿ ತೀರದ ಹೆಮ್ಮಾಡಿ ಗ್ರಾಮದ ಕಟ್‍ಬೇಲ್ತೂರು, ಸುಳ್ಸೆ, ಮುವತ್ತುಮುಡಿ, ಹಕ್ಲಾಡಿ ಗ್ರಾಮದ ತೊಪ್ಲು, ಬಟ್ಟೆಕುದ್ರು, ಯಳೂರು, ರಾಜಾಡಿ ನದಿತೀರದ ಹರೆಗೋಡು, ಜಾಲಾಡಿ, ಹೊಸ್ಕಳಿ ಮೊದಲಾದೆಡೆ ಭತ್ತದ ಸಸಿಗಳು ನೆರೆನೀರಿನಲ್ಲಿ ಮುಳುಗಿ ಕೊಳೆತಿದ್ದು, ಕೃಷಿಕರು ಪುನಃ ಭತ್ತನಾಟಿ ಮಾಡುವಂತಾಗಿದೆ.
   ಕೂಲಿಯಾಳು ಸಮಸ್ಯೆ, ಅಧಿಕ ಖರ್ಚು, ಸಕಾಲದಲ್ಲಿ ಕೃಷಿ ಕಾಯಕ ನಡೆಸುವ ಅನಿವಾರ್ಯತೆ ಮತ್ತಿತರ ಕಾರಣಗಳಿಂದ ರೈತರು ಒತ್ತಡದಲ್ಲಿ ಸಿಲುಕಿದ್ದು, ನೆರೆಹಾವಳಿಯು ರೈತರ ತುತ್ತಿಗೆ ಕಲ್ಲು ಹಾಕಿದೆ. ಸಾಲಸೋಲ ಮಾಡಿ ಭತ್ತ ಕೃಷಿ ಮಾಡಿದ ಇಲ್ಲಿನ ಹಲವಾರು ರೈತರು ನಷ್ಟಭೀತಿಯಿಂದ ಕಂಗಾಲಾಗಿದ್ದಾರೆ. ಭತ್ತಕೃಷಿಗೆ ಬೆಳೆನಷ್ಟ ಪರಿಹಾರವಾಗಿ ಕೃಷಿ ಇಲಾಖೆಯಿಂದ ಸಿಗುವುದು ಎಕರೆಗೆ ಕೇವಲ 800 ರೂಪಾಯಿಗಳು ಮಾತ್ರ. ಓಬೀರಾಯನ ಕಾಲದ ಈ ಮೊತ್ತದಿಂದ ಕಷ್ಟಪಟ್ಟು ದುಡಿಯುವ ರೈತರಿಗೆ ಯಾವ ಪ್ರಯೋಜನವೂ ಇಲ್ಲ ಎನ್ನುವುದು ರೈತರ ಅಭಿಪ್ರಾಯ.

ಕೃಷಿ ವಿಮುಖತೆಯ ಆತಂಕ:  ವಿಪರೀತ ನೆರೆ ಹಾವಳಿಯಿಂದ ನದಿತೀರ ಪ್ರದೇಶಗಳ ಕೃಷಿಕರು ಕೈಸುಟ್ಟುಕೊಂಡಿದ್ದು, ಕೃಷಿ ಕಸುಬಿಗೆ ವಿದಾಯ ಹೇಳುವ ಸಿದ್ಧತೆಯಲ್ಲಿದ್ದಾರೆ. ಅಧಿಕ ಖರ್ಚು ಕಡಿಮೆ ಲಾಭದಾಯಕ ಎಂಬಂತಾಗಿದ್ದರಿಂದ ಕೃಷಿ ಕಾಯಕವನ್ನು ನೆಚ್ಚಿಕೊಂಡ ಕೃಷಿಕರು ಪ್ರಕೃತಿಯ ಮುನಿಸಿಗೆ ತಲ್ಲಣಗೊಂಡಿದ್ದಾರೆ. ತಾಲೂಕಿನ ಸೌಪರ್ಣಿಕಾ, ಚಕ್ರಾ, ವಾರಾಹಿ ಮೊದಲಾದ ನದಿಗಳ ತೀರದಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಭತ್ತ ಕೃಷಿ ಕಾಯಕ ನಡೆಸಿಕೊಂಡು ಬಂದಿರುವ ಅನ್ನದಾತರು ನಷ್ಟಭೀತಿ, ಬೆಳೆ ಕೈಗೆಟುಕುವ ಭರವಸೆಯಿಲ್ಲದಿರುವ ಹಿನ್ನೆಲೆಯಲ್ಲಿ ಕೃಷಿಯಿಂದ ದೂರವುಳಿಯುವ ಮನಸ್ಸು ಮಾಡುತ್ತಿರುವುದರಿಂದ ನಾಡಿನ ಆಹಾರಭದ್ರತೆಗೆ ಭಾರೀ ಪೆಟ್ಟು ನೀಡುವ ಆತಂಕ ಎದುರಾಗಿದೆ.

 ಕೃಷಿಭೂಮಿ ಹಡೀಲು ಬೀಳುವ ಚಿಂತೆ:  ಕೃಷಿ ಲಾಭದಾಯಕವಲ್ಲ ಎಂಬ ನೆಲೆಯಲ್ಲಿ ಈಗಾಗಲೇ ಕರಾವಳಿ ಭಾಗದ ನೂರಾರು ಎಕರೆ ಕೃಷಿಭೂಮಿ ಹಡೀಲು ಬಿದ್ದಿರುವುದು ಸರ್ವವಿಧಿತ. ಪ್ರಾಕೃತಿಕ ವಿಕೋಪದಿಂದ ನಲುಗಿದ ಗದ್ದೆಗಳ ಸ್ಥಿತಿಗತಿಯಿಂದ ಕಂಗೆಟ್ಟ ರೈತಾಪಿಜನರು ಕೈಗೆ ಬಂದಿದ್ದು, ಬಾಯಿಗಿಲ್ಲ ಎಂಬ ಹತಾಶೆಯಿಂದ ತಮ್ಮ ಗದ್ದೆಗಳನ್ನು ಕೃಷಿ ಮಾಡದೇ ಹಾಗೆಯೇ ಬಿಡುವ ಪರಿಸ್ಥಿತಿ ಬಂದಿದೆ. ಹಡೀಲ್ ಬಿದ್ದ ಕೃಷಿಭೂಮಿಯನ್ನು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವ, ವಾಣಿಜ್ಯಿಕ ಉದ್ದೇಶಗಳಿಗಾಗಿ ಬಳಸುವ ಸಾಧ್ಯತೆ ಹಿನ್ನೆಲೆಯಲ್ಲಿ ರೈತರು ನಿರ್ಧಾರ ತಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸರಕಾರದ ಸಹಾಯಹಸ್ತ ಬೇಕು:  ಕರಾವಳಿ ಪ್ರದೇಶದ ನದಿತೀರ ಹಾಗೂ ತಗ್ಗುಪ್ರದೇಶಗಳಲ್ಲಿ ಭತ್ತ ಕೃಷಿ ಕಾಯಕವನ್ನು ನಡೆಸುವ ರೈತರಿಗೆ ಸರಕಾರ ಕೃಷಿಭದ್ರತೆ ಕಲ್ಪಿಸಬೇಕು. ನೆರೆಹಾವಳಿಯಿಂದ ತೊಂದರೆಗೊಳಗಾಗಿ ಆರ್ಥಿಕ ಸಂಕಷ್ಟ ಎದುರಿಸುವ ರೈತರಿಗೆ ಹೆಚ್ಚಿನ ಆರ್ಥಿಕ ಸಹಾಯವನ್ನು ಒದಗಿಸಿ ನಷ್ಟಭರ್ತಿ ಮಾಡಿಕೊಡುವ ಮೂಲಕ ಕೃಷಿ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ಕೊಡುವುದು ಆವಶ್ಯಕ. ಕೆ.ಜಿ.ಗೆ ಒಂದು ರೂಪಾಯಿ ಅಕ್ಕಿ ಕೊಡುವ ಘನ ಉದ್ದೇಶದಂತೆಯೇ ಅನ್ನ ಬೆಳೆಯುವವರ ದುಃಖದುಮ್ಮಾನಕ್ಕೂ ಆಳುವ ಮಂದಿ ಪ್ರಾಮಾಣಿಕ ನೆಲೆಯಲ್ಲಿ ಗಮನಹರಿಸಲೇಬೇಕಿದೆ.

ನಾವುಂದ ಗ್ರಾಮದ ಸಾಲ್ಬುಡದಲ್ಲಿ ನೆರೆಗೆ ನಲುಗಿದ ಭತ್ತದ ಗದ್ದೆಗಳು 
ನಾಡಾ ಗ್ರಾಮದ ಚಿಕ್ಕಳ್ಳಿಯಲ್ಲಿ ಕೊಳೆತ ಭತ್ತದ ಸಸಿಗಳು
 

ಚಿತ್ತ ವರದಿ: ಚಂದ್ರ ಕೆ. ಹೆಚ್
 ಕುಂದಾಪ್ರ ಡಾಟ್ ಕಾಂ- editor@kundapra.com