ಈ ವಿಶಾಲವಾದ ಪ್ರದೇಶದಲ್ಲಿ ನಗರದ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕ್ರಮ ಕೈಗೊಂಡು, ತಡೆ ಬೇಲಿ ನಿರ್ಮಿಸಬೇಕು ಎಂದು ಒತ್ತಾಯಿಸಿ ವಕ್ವಾಡಿ, ಕೆದೂರು, ಹೂವಿನಕೆರೆ, ಅಸೋಡು ಗ್ರಾಮಸ್ಥರು ಹಾಗೂ ಇಲ್ಲಿಯ ವಿವಿಧ ಸಂಘ ಸಂಸ್ಥೆಗಳವರಲ್ಲಿ ಹಿಂದೆ ಮನವಿ ಮಾಡಿಕೊಂಡಿದ್ದಾರೆ. ಸಂಬಂಧ ಪಟ್ಟವರು ಇಲ್ಲಿಯವgಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ವಕ್ವಾಡಿಯಿಂದ ಕುರುವಾಡಿ, ಚಾರುಕೊಟ್ಟಿಗೆವರೆಗಿನ ವಿಶಾಲವಾದ 90 ಹೆಕ್ಟೇರ್ ಪ್ರದೇಶದಲ್ಲಿ ಅವ್ಯಾಹತವಾಗಿ ಸತ್ತ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಆಸ್ಪತ್ರೆಯ ತ್ಯಾಜ್ಯ, ಕ್ಷೌರದ ಕೂದಲು, ಪ್ಲಾಸ್ಟಿಕ್ ಲೋಟ, ತಟ್ಟೆ, ಬಾಟ್ಲಿ, ಕಾರ್ಖಾನೆಯ ವಿಷಯುಕ್ತ ತ್ಯಾಜ್ಯ ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
ಎಲ್ಲೆಲ್ಲೋ ಹಿಡಿದ ವಿಷಕಾರಿ ಹಾವುಗಳಾದ ಹುಲಿ ಕನ್ನಡಿ ಹಾವು, ಕೊಳ್ಕ್ ಕನ್ನಡಿ, ಹೆಬ್ಬಾವುಗಳನ್ನು ಈ ರಸ್ತೆಯ ಎರಡು ಬದಿಯಲ್ಲಿ ಪ್ಲಾಸ್ಟಿಕ್ ಕೊಡದಲ್ಲಿ ತಂದು ಬಿಟ್ಟು ಹೋಗುತ್ತಾರೆ. ಇಲ್ಲಿ ಬಿಟ್ಟುಹೋದ ಹಾವುಗಳಿಗೆ ನವಿಲುಗಳ ಕಾಟ, ಆಹಾರವಿಲ್ಲದೆ ಸ್ವಚ್ಛಂದವಾಗಿ ವಿಹರಿಸಲು ಸಾದ್ಯವಾಗದೆ ಆಹಾರಕ್ಕಾಗಿ ಇಲ್ಲಿಯ 300 ಮೀಟರ್ ದೂರದ ಕೆದೂರು, ಹೂವಿನಕೆರೆ, ವಕ್ವಾಡಿ ಗ್ರಾಮದ ಪರಿಸರದ ಮನೆಗಳ ವಠಾರಕ್ಕೆ ವಿಷಕಾರಿ ಹಾವುಗಳು ಬಂದು ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಕೋಳಿಗಳನ್ನು ಹಿಡಿದು ತಿಂದ ರುಚಿಗೆ ಇಲ್ಲಿನ ಮನೆ, ಕೋಳಿಗೂಡು ಹಾಗೂ ದನದ ಕೊಟ್ಟಿಗೆಯಲ್ಲಿ ಖಾಯಂ ವಾಸವಾಗಿದ್ದರಿಂದ ಜನರು ಭಯಭೀತರಾಗಿದ್ದಾರೆ. ಇಲ್ಲೆಲ್ಲಿಯೂ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಂಜೆ ಹೊತ್ತು ಮನೆಯಿಂದ ಹೊರಗೆ ಬರುವುದು ಕಷ್ಟವಾಗಿದೆ. ಅವ್ಯಾಹತವಾಗಿ ತ್ಯಾಜ್ಯ ವಿಲೇವಾರಿಯಿಂದ ಸೊಳ್ಳೆಗಳ ಕಾಟ ಮತ್ತು ಭೀಕರ ಕಾಯಿಲೆಯ ಭಯ ಆವರಿಸಿಕೊಂಡಿದೆ.
ದೇಶಾದ್ಯಂತದಿಂದ ಶ್ರೀ ವಾದಿರಾಜ ಗುರಗಳ ಭಕ್ತಾಭಿಮಾನಿಗಳು ಶ್ರೀ ಗುರುಗಳ ಮೂಲ ಜನ್ಮ ಕ್ಷೇತ್ರವಾದ ಹೂವಿನಕೆರೆ, ಗೌರಿಗದ್ದೆ ಹಾಗೂ ಅವರ ಆರಾಧನಾ ದೇವರಾದ ಶ್ರೀ ಚೆನ್ನಕೇಶವ ದೇವಾಲಯದ ಪವಿತ್ರ ಸ್ಥಳದ ವೀಕ್ಷಣೆಗಾಗಿ ಹೂವಿನಕೆರೆಗೆ ನಿರಂತರವಾಗಿ ಬರುತ್ತಾರೆ. ಭಕ್ತಿಭಾವದಿಂದ ಬರುವ ಇವರನ್ನು ಇಲ್ಲಿನ ಗಬ್ಬು ವಾಸನೆಯೇ ಸ್ವಾಗತಿಸುವ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದ ಭಕ್ತರ ಧಾರ್ಮಿಕ ಮನೋಭಾವನೆಗೆ ತೀವೃ ಧಕ್ಕೆಯುಂಟಾಗಿದೆ.
ಈ ವಿಶಾಲವಾದ ಸ್ಥಳದಲ್ಲಿ ಮೇವನ್ನು ಹುಡುಕಿಕೊಂಡು ಬರುವ ಜಾನುವಾರುಗಳು ಇಲ್ಲಿ ಎಸೆದಿರುವ ವಿಷಯುಕ್ತ ತ್ಯಾಜ್ಯ ತಿಂದು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದಲ್ಲದೇ. ಮಳೆಗಾಲದಲ್ಲಿ ರೈತರ ಕೃಷಿ ಭೂಮಿಗೆ ಇಲ್ಲಿಂದ ತ್ಯಾಜ್ಯ ಮತ್ತು ಪ್ಲಾಸ್ಟಿಕ್‍ಗಳು ಹರಿದು ಬರುವುದರಿಂದ ಬೇಸಾಯ ಮಾಡುವುದೇ ಕಷ್ಟವಾಗಿದೆ. ತ್ಯಾಜ್ಯಗಳಿಂದಾಗಿ ಅಂತರ್‍ಜಲ ಕೂಡ ಕಲುಷಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಬೈಂದೂರು ಸಮೀಪದ ಒತ್ತಿನೆಣೆ ಪ್ರದೇಶದಲ್ಲಾದಂತೆ ಸಾಮೂಹಿಕ ಜಾನುವಾರಗಳ ಸಾವು ಇಲ್ಲಿಯೂ ಸಂಭವಿಸಬಹುದು. ಇಂತಹ ಪವಿತ್ರ ಧಾರ್ಮಿಕ ಸ್ಥಳದ ಸಮೀಪ ತ್ಯಾಜ್ಯ ಹಾಕದಂತೆ ಮತ್ತು ಈ ಪರಿಸರದಲ್ಲಿ ಸೂಕ್ತ ತಡೆಬೇಲಿ ನಿರ್ಮಿಸಿ ಎಚ್ಚರಿಕೆ ಫಲಕ ನೆಡುವಂತೆ ಆಗ್ರಹಿಸಿ ಹೂವಿನಕೆರೆ ಶ್ರೀ ವಾದಿರಾಜ ಮಠದ ಅಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್ ಹಾಗೂ ತೊಂದರೆಗೊಳಗಾದ ಗ್ರಾಮಸ್ಥರ ನೇತೃತ್ವದಲ್ಲಿ ಸ್ಥಳೀಯ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ದಿನದಿಂದ ದಿನಕ್ಕೆ ಈ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವ ಪ್ರಮಾಣ ಜಾಸ್ತಿಯಾದ್ದರಿಂದ ಮುಂದಿನ ದಿನಗಳಲ್ಲಿ ತ್ಯಾಜ್ಯ ಹಾಕುವ ಸ್ಥಳವಾಗಿ ನಿರ್ಮಾಣವಾದರೂ ಆಶ್ವರ್ಯವಿಲ್ಲ.
ತ್ಯಾಜ್ಯ |
ಕಾರ್ಖಾನೆ ವಿಷಪೂರಿತ ತ್ಯಾಜ್ಯ, |
ಪ್ಲಾಸ್ಟಿಕ್ ಕೊಡದಿಂದ ರಾಜಾರೋಷಾವಾಗಿ ರಸ್ತೆ ಬದಿಯಲ್ಲಿಯೇ ಹಾವು ಬಿಡುವುದು |
ಚಿತ್ರ ವರದಿ: ಸುಧಾಕರ ವಕ್ವಾಡಿ
ಪತ್ರಕರ್ತರು.
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com