ಹೂವಿನಕೆರೆ: ಜಾನುವಾರು ಬಲಿ ತಡೆಗೆ ಬೇಕಿದೆ ಬೇಲಿ

ಕುಂದಾಪುರ: ಶ್ರೀ ವಾದಿರಾಜರ ಜನ್ಮಕ್ಷೇತ್ರವಾದ ಹೂನಿಕೆರೆ ಮಠದ ಸಮೀಪದಲ್ಲಿಯೇ ಹಾದು ಹೋಗುವ ರೈಲ್ವೆ ಹಳಿ ದಾರಿಯಲ್ಲಿ ಹಸಿ ಹುಲ್ಲನ್ನು ಹುಡುಕಿ ಬರುವ ಕೃಷಿಕರ ಜಾನುವಾರು, ಸಾಕು ಪ್ರಾಣಿಗಳು  ರೈಲಿಗೆ ಸಿಲುಕಿ ಸಾವನಪ್ಪುತ್ತಿರುವ ಘಟನೆ ಹೂವಿನಕೆರೆ ಬಳಿ ನಿರಂತರವಾಗಿ ನಡೆಯುತ್ತಿದೆ.
      ಹೂವಿನಕೆರೆ ಮಠದ ವ್ಯಾಪ್ತಿಯಲ್ಲಿ 400ಎಕರೆ ಗಿಂತಲೂ ಹೆಚ್ಚು ವಿಶಾಲವಾದ  ಈ ಹೊಲದಿಂದ  ಅನಾದಿಕಾಲದಿಂದಲೂ ಇಲ್ಲಿನ ನಾಲ್ಕೈದು ಗ್ರಾಮದ ಕೃಷಿಕರು ಸೊಪ್ಪು, ದರಲೆ, ಸೌದೆ ತರುತ್ತಿದ್ದಾರೆ. ಹಾಗೂ ಜಾನುವಾರುಗಳಿಗೆ ಹಸಿ ಹುಲ್ಲಿನ ಮೇವಿನ ಪ್ರದೇಶ ಇದಾಗಿದೆ. ಇತ್ತೀಚೆಗೆ ಅರಣ್ಯ ಪ್ರದೇಶವು ಸಂಪೂರ್ಣವಾಗಿ ನಾಶವಾದ ನಂತರ  ಗೇರು ನೆಡು ತೋಪು ಪ್ರದೇಶವಾಗಿ ಮಾರ್ಪಟ್ಟಿದೆ, ಈ ಹೊಲದ ಮದ್ಯದಲ್ಲಿಯೇ ಕೊಂಕಣ ರೈಲ್ವೆ ಮಾರ್ಗ ಹಾದುಹೋಗಿದೆ. ಹೂವಿನಕೆರೆ ಮಠದ ಹತ್ತಿರದಲ್ಲಿಯೇ ತೆರದ ದಾರಿಯಲ್ಲಿ ಹಸಿ ಹುಲ್ಲನ್ನು ಹುಡುಕಿ ಬರುವ ಜಾನುವಾರುಗಳು ಇನ್ನೂ ಹೆಚ್ಚಿನ ಹುಲ್ಲನ್ನು ಮೇಯಲು ಆಳವಾದ  ರೈಲ್ವೆ ಹಳಿ ಕಂದಕಕ್ಕೆ  ಬರುತ್ತವೆ, ಒಂದೇ ಸವನೇ ಭಾರೀ ಶಬ್ದದಿಂದ ರೈಲು ಹತ್ತಿರಕ್ಕೆ ಬಂದಾಗ ಈ ಮೂಕ ಪ್ರಾಣಿಗಳಿಗೆ ದಿಕ್ಕು ತೋಚದೆ ಪ್ರಾಣ ರಕ್ಷಣೆಗಾಗಿ ಅಡ್ಡಾದಿಡ್ಡಿ ಓಡಿ ರೈಲಿಗೆ ಸಿಕ್ಕಿ ಸಾವನಪ್ಪುತ್ತಿವೆ. 
     ರೈಲ್ವೆ ಇಲಾಖೆಯವರು ಎಲ್ಲಿ ಅಗತ್ಯ ವಿಲ್ಲವೋ ಅಲ್ಲಿ ತಡೆ ಬೇಲಿ ನಿರ್ಮಿಸಿದ್ದಾರೆ. ಆದರೆ, ಇಲ್ಲಿ ಕೃಷಿಕರು, ಜಾನುವಾರುಗಳು ಸಂಚರಿಸುವ ಕೇವಲ 100 ಅಡಿ ಉದ್ದದಲ್ಲಿ ಯಾವುದೇ ತಡೆ ಬೇಲಿ ಇಲ್ಲದೆ ಇರುವುದರಿಂದ ಮೇಯಲು ಹೋದ ಮತ್ತು ಕೊಟ್ಟಿಗೆಯಿಂದ ಕೈತಪ್ಪಿಸಿಕೊಂಡ ಹೋರಿ,ಎಮ್ಮೆ, ದನ ಕರುಗಳ ಬಲಿ ಇಲ್ಲಿ ನಿರಂತರವಾಗಿ ನಡೆಯುತ್ತಲೆ ಇದೆ. ಜನರು ಮಾತ್ರ ರೈಲ್ವೆ ಇಲಾಖೆಯವರು ವಿಧಿಸುತ್ತರುವ ದಂಡಕ್ಕೆ ಹೆದರಿ ರೈಲ್ವೆಗೆ ಸಿಕ್ಕಿ ಸಾವನಪ್ಪಿದ ಜಾನುವಾರಗಳು ನಮ್ಮದಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ.
     ದಿನದಿಂದ ದನಕ್ಕೆ  ಈ ಪ್ರದೇಶದಲ್ಲಿ ಜಾನುವಾರುಗಳ ಬಲಿ ಹೆಚ್ಚುತ್ತಿದ್ದು, ರೈಲ್ವೆ ಇಲಾಖೆಯವರು ಮಾನವೀಯ ದೃಷ್ಠಿಯಿಂದ  ರೈಲ್ವೆ ಹಳಿಯ ಎರಡು ಬದಿಯಲ್ಲಿ ಕೇವಲ 100 ಅಡಿ ತಡೆ ಬೇಲಿಯನ್ನು ನಿರ್ಮಿಸ ಬೇಕಾಗಿದೆ. ಇಲ್ಲವಾದರೆ ತೆರದ ರೈಲ್ವೆ ಹಳಿಯಲ್ಲಿ ದಾಟುವ ಶಾಲಾ ಮಕ್ಕಳು, ಹೊರೆಯಾಳುಗಳಿಗೆ ಇದೇ ದುರ್ಗತಿ ಬರಬಹುದು. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಸಚಿವರ ಗಮನ ಸೆಳೆಯಲು  ಈ ಕ್ಷೇತ್ರದ ಲೋಕಸಭಾ ಸದಸ್ಯರ ಮೂಲಕ ಮನವಿ ಸಲ್ಲಿಸಿದ್ದಾರೆ.
ಚಿತ್ರ ವರದಿ: ಸುಧಾಕರ ವಕ್ವಾಡಿ
ಪತ್ರಕರ್ತರು.


ಜಾನುವಾರುಗಳು ರೈಲಿಗೆ ಸಿಕ್ಕಿ ಬಲಿಯಾಗುತ್ತಿರುವ ಪ್ರದೇಶದ ಚಿತ್ರಣ

ಜಾನುವಾರುಗಳ ಪ್ರವೇಶ
         
 ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com