ಅಭಿವೃದ್ಧಿಗೊಳ್ಳದ ರಸ್ತೆ; ಕುಗ್ರಾಮವಾಗುಳಿದ ತಾರೀಬೇರು

ಕುಂದಾಪುರ: ದಿನಬೆಳಗಾದರೆ ಸಾಕು, ಈ ಊರಿನ ಜನರು ನೆನಪಿಸಿಕೊಳ್ಳುವ, ಮಾತನಾಡುವ ವಿಚಾರದಲ್ಲಿ ತಮ್ಮೂರಿನ ರಸ್ತೆ ಅಭಿವೃದ್ಧಿಯ ಕನಸೇ ತುಂಬಿರುತ್ತದೆ. ಅದೆಷ್ಟೋ ಜನಪ್ರತಿನಿದಿಗಳು, ಸರಕಾರಗಳು ಅದಿಕಾರಕ್ಕೆ ಬಂದು ಹೋದರೂ ಇಲ್ಲಿನ ಜನರಿಗೆ ಸಿಕ್ಕಿದ್ದು ಕೇವಲ ಭರವಸೆಗಳು ಮಾತ್ರವೇ. ಯಾವುದೇ ದೊಡ್ಡ ಯೋಜನೆಗಳನ್ನು ಮಂಜೂರುಗೊಳಿಸದಿದ್ದರೂ ಪರವಾಗಿಲ್ಲ, ತಮ್ಮೂರಿನ ಉದ್ಧಾರಕ್ಕಾಗಿ ಸಂಪರ್ಕ ರಸ್ತೆಯೊಂದನ್ನು ಮಾತ್ರ ಸುಸಜ್ಜಿತವಾಗಿ ಅಭಿವೃದ್ಧಿ ಮಾಡಿಸಿಕೊಟ್ಟರೆ ಸಾಕು ಎಂಬ ಒಂದೇ ಒಂದು ಕನವರಿಕೆ ಹೊತ್ತು 50 ವರ್ಷಗಳಿಂದ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿದ್ದಾರೆ ಇಲ್ಲಿನ ಜನತೆ. ಊರಿನ ಅಭಿವೃದ್ಧಿಗೆ ಕಳಶದಂತಿರುವ ಸಂಪರ್ಕ ರಸ್ತೆ ಅಭಿವೃದ್ಧಿಯ ಕನಸು ನನಸಾಗದಿರುವುದರಿಂದ ಇಂದಿಗೂ ಕುಗ್ರಾಮವಾಗಿಯೇ ಉಳಿದಿರುವ ಈ ಹಳ್ಳಿಯ ಹೆಸರೇ ತಾರೀಬೇರು !
     ಬೈಂದೂರು ವಿಧಾನಸಭಾ ಕ್ಷೇತ್ರದ ಆಲೂರು ಮತ್ತು ನಾಡಾ ಗ್ರಾಮ ಪಂಚಾಯತ್‍ಗಳ ವ್ಯಾಪ್ರಿಯ ಗಡಿಭಾಗದಲ್ಲಿರುವ ತಾರೀಬೇರು ಗ್ರಾಮದಲ್ಲಿ ನೂರೈವತ್ತಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಆಲೂರಿನಿಂದ ಪಶ್ಚಿಮಕ್ಕೆ 7 ಕಿ. ಮೀ. ಹಾಗೂ ನಾಡಾ-ಗುಡ್ಡೆಅಂಗಡಿಯಿಂದ ಪೂರ್ವಕ್ಕೆ 8 ಕಿ. ಮೀ ಅಂತರದಲ್ಲಿದೆ ತಾರೀಬೇರು ಗ್ರಾಮ. ಒಂದೆರಡು ಅಂಗಡಿಗಳು, ಶಾಲೆ-ಅಂಗನವಾಡಿಗಳು ಹೊರತು ಆಧುನಿಕ ಸೌಲಭ್ಯಗಳನ್ನೇನೂ ಹೊಂದಿರದ ಅಪ್ಪಟ ಹಳ್ಳಿ ಪ್ರದೇಶವಿದು. ದಕ್ಷಿಣ ದಿಕ್ಕಿನಲ್ಲಿ ಕಾಡುಪ್ರದೇಶ ಹಾಗೂ ಉತ್ತರ ದಿಕ್ಕಿನಲ್ಲಿ ಸೌಪರ್ಣಿಕಾ ನದಿತೀರದಲ್ಲಿರುವ ಈ ಹಳ್ಳಿ ಜನತೆಗೆ ಸಂಪರ್ಕ ರಸ್ತೆಯೊಂದೇ ನಿತ್ಯಜೀವನೋತ್ಸಾಹದ ಜೀವನಾಡಿ. ಈ ರಸ್ತೆಯು ಆಲೂರಿನಿಂದ ತಾರೀಬೇರು, ನಾಡಾ, ಬಡಾಕೆರೆ, ನಾವುಂದ, ಕುಂದಾಪುರ, ಬೈಂದೂರು ಮೊದಲಾದೆಡೆಗೆ ಸಂಪರ್ಕ ಕಲ್ಪಿಸುವ ಬಹುಗ್ರಾಮ ಸಂಪರ್ಕ ರಸ್ತೆಯಾಗಿದೆ. ಇಲ್ಲಿನ ನದಿಗೆ ಸೇತುವೆ ನಿರ್ಮಾಣಗೊಂಡಿದ್ದಲ್ಲಿ ನದಿಯಾಚೆಗಿನ ರಾಗಿಹಕ್ಲು ಮೂಲಕ ನಾವುಂದ, ಹೇರೂರು, ಕಾಲ್ತೋಡು, ಕಂಬದಕೋಣೆ, ಬೈಂದೂರು ಮೊದಲಾದೆಡೆಗೂ ಸಂಪರ್ಕ ಸಾಧ್ಯವಾಗುವ ನಿರೀಕ್ಷೆಯನ್ನು ಮೂಡಿಸಿದ ಸಂಚಾರಮಾರ್ಗವಿದು.
     ನಿರಂತರ ದುಃಸ್ಥಿತಿಯಲ್ಲಿ:  ಕನಿಷ್ಟಪಕ್ಷ ಉತ್ತಮ ಚರಂಡಿ, ಮೋರಿಗಳ ವ್ಯವಸ್ಥೆಯೂ ಇಲ್ಲದ ತಾರೀಬೇರು ರಸ್ತೆಗೆ ವರ್ಷಕ್ಕೊಮ್ಮೆ ಮಣ್ಣು ಸುರಿದು ದುರಸ್ತಿಯ ನಾಟಕ ನಡೆಯುವುದರಿಂದ ಈ ರಸ್ತೆ ನಿರಂತರವಾಗಿ ದುಃಸ್ಥಿತಿಯಲ್ಲಿದೆ. ಸ್ಥಳೀಯ ಗ್ರಾಮ ಪಂಚಾಯತ್ ಉಸ್ತುವಾರಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ಅಸಮರ್ಪಕ ಹಾಗೂ ಅವೈಜ್ಞಾನಿಕ ಮಾದರಿಯ ಚರಂಡಿಗಳು ಇಲ್ಲಿನ ರಸ್ತೆಮಾರ್ಗದ ಇನ್ನಷ್ಟು ದುರವಸ್ಥೆಗೆ ಕಾರಣವಾಗಿವೆ. ತಾರೀಬೇರು ರಸ್ತೆಗೆ ತೀರಾ ಇತ್ತೀಚೆಗೆ ಹಾಕಿದ ಮಣ್ಣು ಮಳೆಗಾಲದಲ್ಲಿ ವಾಹನಗಳು ಸಂಚರಿಸದಂತೆ ಮಾಡಿದೆ. 
     ಬದುಕು ಅತಂತ್ರ: ರಸ್ತೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುವ ತಾರೀಬೇರು ಗ್ರಾಮದ ಜನರ ಬದುಕು ರಸ್ತೆಯ ದುರವಸ್ಥೆಯಿಂದಾಗಿ ದಿನೇದಿನೇ ಅತಂತ್ರಗೊಳ್ಳುತ್ತಿದೆ. ಈ ಹಳ್ಳಿಯ ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿದ್ದಲ್ಲದೇ ಮಕ್ಕಳ ಶಿಕ್ಷಣ ಸೊರಗುತ್ತಿದೆ. ಅನೇಕ ಮಕ್ಕಳು ಈಗಾಗಲೇ ಶಾಲೆಯನ್ನು ತೊರೆದಿದ್ದು, ಹೋಟೆಲ್ ಕಾರ್ಮಿಕರಾಗಿ ಊರೂರಿಗೆ ವಲಸೆ ಹೋಗುವಂತಾಗಿದೆ. ಸೈಕಲ್ ಸವಾರಿಗೂ ಲಾಯಕ್ಕಿಲ್ಲದ ಈ ಊರಿನ ರಸ್ತೆಯಲ್ಲಿ ಯಾಕಾದರೂ ಬರಬೇಕಪ್ಪಾ ಅನ್ನಿಸಿಬಿಡುತ್ತದೆ. ಆದ್ದರಿಂದ ಈ ಊರಿನ ನೆಂಟಸ್ತನ ಮಾಡುವವರು ಕೂಡಾ ಕ್ಷಣಕಾಲ ಯೋಚನೆಗೆ ಕೈಹಚ್ಚುತ್ತಾರೆ.
     ರಿಕ್ಷಾಗಳು ಬರುತ್ತಿಲ್ಲ: ತಾರೀಬೇರುವಿಗೆ ಹೋಗೋದಿದೆ ಬರುತ್ತೀರಾ ಎಂದು ಕೇಳಿದರೆ ಆಲೂರು, ಗುಡ್ಡೆಹೋಟೆಲ್, ನಾಡಾ-ಗುಡ್ಡೆಅಂಗಡಿ, ಕೋಣ್ಕಿ ಅಥವಾ ಬಡಾಕೆರೆ ಮೊದಲಾದೆಡೆಯ ಯಾವುದೇ ರಿಕ್ಷಾ ಮತ್ತು ಓಮ್ನಿ ಚಾಲಕರು ಬರೋದಿಲ್ಲ ಎಂದು ಸುತಾರಾಂ ಹೇಳಿಬಿಡುತ್ತಾರೆ. ನಾಡಾ ಅಥವಾ ಆಲೂರಿನಿಂದ ತಾರೀಬೇರುವಿಗೆ ಬಂದಲ್ಲಿ ರಿಕ್ಷಾಚಾರ್ಜು ಕೇವಲ 40 ರೂಪಾಯಿಗಳು. ಆದರೆ ಇಲ್ಲಿನ ರಸ್ತೆಮಾರ್ಗದ ದುರವಸ್ಥೆಯಿಂದಾಗಿ ನೂರೈವತ್ತು ರೂಪಾಯಿಗಳನ್ನು ಕೊಡುತ್ತೇವೆ ಎಂದರೂ ಬರಲು ಯಾರೂ ಸಿದ್ಧರಿಲ್ಲ. ಪ್ರಸಕ್ತ ಮಳೆಗಾಲದಲ್ಲಿ ಈ ರಸ್ತೆ ಕೆಟ್ಟಿರುವ ಪರಿಯಿಂದ ವಾಹನ ಚಾಲಕರು ತಳೆದಿರುವ ಕಠಿಣ ನಿರ್ಧಾರವಿದು. ತಾರೀಬೇರುವಿನ ಬಹುತೇಕ ಕುಟುಂಬಗಳು ಸ್ವಂತ ವಾಹನವನ್ನು ಹೊಂದಿದ್ದರಿಂದ ಗ್ರಾಮಸ್ಥರು ಅನಾರೋಗ್ಯ ಮತ್ತಿತರ ತುರ್ತು ಪರಿಸ್ಥಿತಿಯಲ್ಲಿ ಆಪತ್ತಿನಿಂದ ಪಾರಾಗಲು ಸಾಧ್ಯವಾಗಿದ್ದರೂ ಊರಿನಲ್ಲಿ ಗರ್ಭಿಣಿ ಮಹಿಳೆಯರಿದ್ದಲ್ಲಿ ಎರಡು ದಿನಗಳ ಮುಂಚೆಯೇ ಅವರನ್ನು ಆಸ್ಪತ್ರೆಗೆ ಹೊತ್ತೊಯ್ಯುವುದು ಅನಿವಾರ್ಯವಾಗಿದೆ. ಇದು ಇಲ್ಲಿನ ರಸ್ತೆಯ ಎಫೆಕ್ಟ್ ಎಂದೇ ಹೇಳಬೇಕಾಗಿದೆ.
      ಇನ್ನಾದರೂ ಭರವಸೆ ಈಡೇರೀತೇ? ತಮ್ಮೂರಿನ ರಸ್ತೆ ಅಭಿವೃದ್ಧಿಯ ಬೇಡಿಕೆ ಈಡೇರದಿದ್ದಲ್ಲಿ ತಾವು ಯಾರೊಬ್ಬರೂ ಮತದಾನ ಮಾಡುವುದಿಲ್ಲ ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಯಕ್ಷೇಶ್ವರೀ ದೇವಸ್ಥಾನದ ಬಳಿ ಸಭೆಸೇರಿದ್ದ ತಾರೀಬೇರು ಗ್ರಾಮಸ್ಥರು ದಿಟ್ಟನಿಲುವು ತಳೆದು ರಾಜಕಾರಣಿಗಳನ್ನು ದಂಗುಬಡಿಸಿದ್ದರು. ಆಗ ತಾರೀಬೇರುವಿಗೆ ಭೇಟಿ ನೀಡಿದ್ದ ಈಗಿನ ಶಾಸಕ ಕೆ. ಗೋಪಾಲ ಪೂಜಾರಿ ಅವರು ತಾರೀಬೇರು ಜನರಿಗೆ ರಸ್ತೆ ಅಭಿವೃದ್ಧಿಯ ಖಚಿತ ಭರವಸೆಯನ್ನು ನೀಡಿದ್ದರು. ಈಗ ಅವರು ಶಾಸಕರಾಗಿ ಆಯ್ಕೆಗೊಂಡಿದ್ದರಿಂದ ತಾರೀಬೇರು ರಸ್ತೆಯ ವ್ಯವಸ್ಥಿತ ಅಭಿವೃದ್ಧಿಯ ಬೇಡಿಕೆ ಈಡೇರುವ ಆಸೆಯೊಂದು ಚಿಗುರಿದೆ. ರಸ್ತೆ ಅಭಿವೃದ್ಧಿಗೆ ಭಾರೀ ಮೊತ್ತದ ಅನುದಾನ ನೆರವು ಲಭಿಸುವ ನಬಾರ್ಡ್, ನಮ್ಮ ಗ್ರಾಮ ನಮ್ಮ ರಸ್ತೆಯಂತಹ ಯೋಜನೆಗಳು ಮಂಜೂರುಗೊಂಡಲ್ಲಿ ರಸ್ತೆ ಅಭಿವೃದ್ಧಿಯ ಮೂಲಕ ಕುಗ್ರಾಮ ತಾರೀಬೇರುವಿನ ಸಮಗ್ರ ಅಭಿವೃದ್ಧಿಗೂ ದಿಕ್ಸೂಚಿಯಾಗಬಹುದು ಎಂಬುದು ಇಲ್ಲಿನ ಜನರ ಮಹತ್ವಾಕಾಂಕ್ಷೆ.  

-ಚಂದ್ರ ಕೆ. ಹೆಚ್

ಅಭಿವೃದ್ಧಿ ಕಾಣದ ತಾರೀಬೇರು ರಸ್ತೆ