ಶ್ರೀ ಕೃಷ್ಣ ಜನ್ಮಾಷ್ಟಮಿ

    ಇಂದು ಕೃಷ್ಣ ಜನ್ಮಾಷ್ಟಮಿ.  ಹಿಂದೂಗಳಿಗೆ ಪವಿತ್ರ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಗೋಪಾಲನ ಜನನವಾಯಿತು.  ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ದೇವಕಿ ಗೋವಿಂದನಿಗೆ ಜನ್ಮ ನೀಡುತ್ತಾಳೆ. ಆ ದಿನವನ್ನು ಹಿಂದೂಗಳು ಕೃಷ್ಣಾಷ್ಟಮಿಯಾಗಿ ಆಚರಿಸುತ್ತಾರೆ. 
     ಗೋಕುಲಾಷ್ಟಮಿಯನ್ನು  ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಆಚರಿಸುತ್ತಾರೆ. ಇಂದು  ಎಲ್ಲೆಲ್ಲೂ ಗೋವಿಂದನ ನಾಮ ಸ್ಮರಣೆ ಮೊಳಗಿದೆ. . ದೇವಾಲಯಗಳು ಅಲಂಕಾರಗೊಳ್ಳುತ್ತವೆ.  ಮುರಳಿಲೋಲನಿಗೆ ಬಗೆ ಬಗೆಯ ಆಭರಣಹಾಕಿ ಸಿಂಗಾರಗೊಳಿಸುತ್ತಾರೆ . ಜನಾರ್ದನನನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಾರೆ . ಮುಕುಂದನಿಗೆ ಇಷ್ಟವಾಗುವ ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ, ಘನಶ್ಯಾಮನಿಗೆ ಅರ್ಪಿಸಲಾಗುತ್ತದೆ. 
   
    ಪ್ರತಿ ಮನೆ ಮನಗಳಲ್ಲೂ  ಕೃಷ್ಣನ ನಾಮ ಸ್ಮರಣೆ. ಹೆಣ್ಣು ಮಕ್ಕಳು  ಬಾಲಗೋಪಾಲನ ಹೆಜ್ಜೆಗಳನ್ನು ರಂಗೋಲಿ ಹುಡಿಯಲ್ಲಿ ಹಾಕಿ, ನಂದಗೋಪಾಲನಿಗೆ ಅಲಂಕಾರ ಮಾಡಿ, ಸಿಹಿ ತಿಂಡಿ ಮಾಡಿ, ಪಾಂಡುರಂಗನಿಗೆ ಅರ್ಪಿಸುತ್ತಾರೆ. ಉಡುಪಿಯ ಕೃಷ್ಣ ಮಠ, ಬೆಂಗಳೂರಿನ ಇಸ್ಕಾನ್ ಸೇರಿದಂತೆ ದೇಶದೆಲ್ಲೆಡೆಯ ಕೃಷ್ಣ ಮಂದಿರಗಳಲ್ಲಿ  ಜನ್ಮಾಷ್ಟಮಿಯ ಸಂಭ್ರಮ ಅನನ್ಯ.

 ಗಿರಿಧರ ತಡರಾತ್ರಿ ಜನಿಸಿದ್ದರಿಂದ ರಾತ್ರಿ ಪೂರ್ತಿ, ದ್ವಾರಕಾನಾಥನ ನಾಮ ಸ್ಮರಣೆಯಲ್ಲಿ ಭಕ್ತರು ನಿರತರಾಗುತ್ತಾರೆ. ಕೆಲವೆಡೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಉಪವಾಸವಿದ್ದು, ಚಕ್ರಧಾರಿಯನ್ನು ನೆನೆದು, ತಡರಾತ್ರಿ ಆಹಾರ ಸೇವಿಸುವವರೂ ಇದ್ದಾರೆ.  ಕೃಷ್ಣಜನ್ಮಾಷ್ಟಮಿ ನಿಮಿತ್ತ ಅನೇಕ ಸ್ಪರ್ಧೆಗಳು ನಡೆಯುತ್ತವೆ. ಪುಟಾಣಿ ಮಕ್ಕಳು ರಾಧಾಮಾಧವನ ವೇಷ ಧರಿಸಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೆಡೆ ಮಡಿಕೆಯೊಡೆಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ. 
-ಜನಪ್ರಿಯ
ಪೋಟೋ: ಪುನೀಕ್ ಶೆಟ್ಟಿ
ಸಮಸ್ತ ಓದುಗರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು .

ಕುಂದಾಪ್ರ ಡಾಟ್ ಕಾಂ- editor@kundapra.com