ಕುಂದಾಪುರದ ಶಿಕ್ಷಕರಿಗೆ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿ

ಕುಂದಾಪುರ: ಕುಂದಾಪುರ ವಲಯದ ಇಬ್ಬರು ಶಿಕ್ಷಕರಿಗೆ ರಾಜೀವ ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಕುಂದಾಪುರದ ಕಾಳಾವರ ಶಾಲೆಯ ಶಿಕ್ಷಕ ಗಣೇಶ ಶೆಟ್ಟಿಗಾರ್ ಹಾಗೂ ಮಚ್ಚಟ್ಟು ಶಾಲೆಯ ಶಿಕ್ಷಕ ಶ್ರೀಧರ ಐತಾಳ್ ಅವರಿಗೆ ಈ ಪ್ರಶಸ್ತಿಗೆ ಲಭಿಸಿದೆ.  

ಗಣೇಶ ಶೆಟ್ಟಿಗಾರ್
   ಗಣೇಶ ಶೆಟ್ಟಿಗಾರ್ ಕಾಳಾವರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿದ್ದು 15 ವರ್ಷಗಳಿಂದ (ಹಾಸನ ತಾಲೂಕಿನ ಮರ್ಕುಲಿ-5 ವರ್ಷ, ಕಾಳಾವರ-10 ವರ್ಷ) ವಿಜ್ಞಾನ ಮತ್ತು ಗಣಿತ ವಿಷಯ ಬೋಧನೆ ಮಾಡುತ್ತಿದ್ದಾರೆ. ಈ ತನಕ 50ಕ್ಕೂ ಹೆಚ್ಚು ಕಲಿಕೋಪಕರಣ ತಯಾರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಜಿಯೋಜಿಬ್ರಾದಿಂದ ಗಣಿತದ ಅನೇಕ ಕಲಿಕಾ ಸ್ಲೈಡ್‌ ರಚನೆ ಇದರ ಜೋತೆಗೆ ವಿದ್ಯಾರ್ಥಿಗಳಿಗೆ ಮತ್ತು ಇಲಾಖೆ ಪ್ರಕಟಿಸಿದ ಪುಸ್ತಕ ರಚನೆಯಲ್ಲಿ, ವಿಷಯ ಶಿಕ್ಷಕರ ವೇದಿಕೆ ತರಬೇತಿಯಲ್ಲಿ, ಪ್ರಾ. ಶಾಲಾ ಶಿಕ್ಷಕರ ಮಾಸಿಕ ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ದಕ್ಷಿಣ ವಲಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ 2 ಬಾರಿ, ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 3 ಬಾರಿ ಭಾಗವಹಿಸಿದ್ದಾರೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಪ್ರಶಸ್ತಿ ಲಭಿಸಿದೆ. ಹೀಗೆ  ತಾಲೂಕು, ಜಿಲ್ಲಾ, ರಾಜ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವುದು ಇವರ ಸಾಧನೆಗಳು.



ಶ್ರೀಧರ್ ಎಸ್
     ಶ್ರೀಧರ ಐತಾಳ್  11 ವರ್ಷಗಳಿಂದ ಮಚ್ಚಟ್ಟು ಶಾಲೆಯ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಹ 50ಕ್ಕೂ ಹೆಚ್ಚು ಕಲಿಕೋಪಕರಣ ತಯಾರಿಸಿದ್ದು ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಜನರೇಟರ್‌, ಡೈನಮೋ, ಗಾಳಿಯಿಂದ ವಿದ್ಯುತ್‌ ತಯಾರಿ, ನ್ಯೂಟನ್‌ 3ನೆಯ ನಿಯಮ ಇತ್ಯಾದಿ 100ಕ್ಕೂ ಹೆಚ್ಚು ಸಣ್ಣ ಸಣ್ಣ ಮಾದರಿಗಳನ್ನು ಮಾಡಿದ್ದಾರೆ. ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿಜ್ಞಾನಮೇಳ, ಔಷಧ ಸಸ್ಯಗಳ ಕುರಿತು ಪರಿಚಯ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.  ಶಾಲಾ ಪತ್ರಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯವಾಗಿ ಹೊಸ ಚಿಂತನೆ ಮೂಡಿಸುವಲ್ಲಿ ಗಮನ ಸೆಳೆಯುತ್ತಿದ್ದು, ಕಡಿಮೆ ವೆಚ್ಚದ ಉಪಕರಣಗಳನ್ನು ತಯಾರಿಸಿ ಅದರಿಂದ ಮಕ್ಕಳ ಪ್ರತಿಭೆಯನ್ನು ಹೆಚ್ಚಿಸುವಂತೆ ಮಾಡುವುದು ಶ್ರೀಧರ್ ಅವರ ಯಶಸ್ವೀ ಪ್ರಯೋಗವಾಗಿದೆ. ಅವಕಾಶ ವಂಚಿತ ಮಕ್ಕಳನ್ನು ವೈಜ್ಞಾನಿಕವಾಗಿ ಚಿಂತನೆ ನಡೆಸುವಂತೆ ಮಾಡಿ ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ.

   ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಸೆ.5ರ ಬೆಳಗ್ಗೆ 10.30ಕ್ಕೆ ನಡೆಯುವ ರಾಜ್ಯ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com