ಅವನಿಗೆ ಗಲ್ಲಾಗದಿರಲು ಆತನೇನು ಹಾಲುಗಲ್ಲದ ಮಗುವೇ?

    “ಕಳೆದ ಡಿಸೆಂಬರ ಹದಿನಾರರಂದು ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಪಾಶವೀ ರೀತಿಯಲ್ಲಿ ಅತ್ಯಾಚಾರ ನಡೆಸಿ ಆಕೆಯ ಕ್ರೂರ ಸಾವಿಗೆ ಕಾರಣರಾದ ನಾಲ್ಕು ಮಂದಿಗೆ ಮೊನ್ನೆ ಮೊನ್ನೆ  ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದಾಗ ನಾವೆಲ್ಲಾ ಎಷ್ಟೊಂದು ಖುಷಿಯಾದೆವಲ್ಲಾ! ನಿಜಕ್ಕೂ ಖುಷಿ ಪಡುವಂತಾದ್ದೆ. ಆದರೆ ಆ ಸಂಭ್ರಮದಲ್ಲಿ ಉಳಿದ ವಿಷಯಗಳನ್ನು ನಾವು ಮರೆತುಬಿಡಬಾರದು ಅಲ್ಲವೇ?”
      “ನಿಜ. ಸಹಸ್ರಾರು ಅತ್ಯಾಚಾರ ಪ್ರಕರಣಗಳ ಪೈಕಿ ಈ ಹುಡುಗಿಗಾದರೂ ಒಂದು ನ್ಯಾಯ ಸಿಕ್ಕಿತಲ್ಲಾ ಅಂತ ನಾವು ನಮ್ಮನ್ನು ಸಮಾಧಾನ ಮಾಡಿಕೊಂಡೆವು. ಆದರೆ ಆ ನಿರ್ಭಯಳಿಗಾದರೂ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಿತ್ತಾ? ಖಂಡಿತಾ ಇಲ್ಲ. ಆ ಅಪರಾಧಿಗಳಿಗೆ ಹೋರಾಡಲು ಜೀವ ಉಳಿಸಿಕೊಳ್ಳಲು ನಮ್ಮ ಮಹಾನ್ ಕಾನೂನಿನಲ್ಲಿ ಇನ್ನು ಬೇಕಾದಷ್ಟು ಅವಕಾಶಗಳಿವೆ. ಗಲ್ಲು ಶಿಕ್ಷೆ ಜಾರಿಯಾದ ಬಳಿಕವಷ್ಟೇ ನಾವು ನಿಟ್ಟುಸಿರುಬಿಡಬಹುದು. ಇನ್ನು  ಅಪರಾಧಿಗಳ ಪರ ವಕೀಲರು ಆಡುತ್ತಿರುವ ಮಾತುಗಳು ಅವರ ಮನುಷ್ಯತ್ವವನ್ನೇ ಪ್ರಶ್ನಿಸುವಂತಿದೆ. ನಮ್ಮದಂತೂ ಜಾಣ ಕಿವುಡು ಬಿಡಿ. ಅದು ಒತ್ತಟ್ಟಿಗಿರಲಿ. ಅದರೆ ಈ ಪ್ರಕರಣದ ಅತ್ಯಂತ ಘೋರ ಅಪರಾಧಿಗೆ ಸಿಕ್ಕ ಶಿಕ್ಷೆ ಏನು? ನಿಮಗೆ ಗೊತ್ತಿರಲಿ ವಾಸ್ತವದಲ್ಲಿ  ಆ ಆಪರಾಧಿ  ಆಕೆಯನ್ನು ಎರಡೆರಡು ಬಾರಿ ಅತ್ಯಾಚಾರ ಮಾಡಿದ್ದ. ಅಷ್ಟೇ ಅಲ್ಲ. ತೀರಾ ಆಕೆಯ ಹೊಟ್ಟಯೊಳಕ್ಕೆ ಕಬ್ಬಿಣದ ಸಲಾಕೆಯನ್ನು ತುರುಕಿ ತಿರುಚಿ ತಿರುಚಿ ಆಕೆಯ ಕರುಳನ್ನು ಸೇರಿದಂತೆ  ಇತರ ಅಂಗಾಂಗಳನ್ನು ತೀವ್ರವಾಗಿ ಘಾಸಿಗೊಳಿಸಿ ಆಕೆಯನ್ನು ಆವತ್ತೇ ಜೀವಂತ ಶವ ಮಾಡಿದ್ದ. ಜಗತ್ತಿನ ಬೇರಾವ ಪ್ರಾಣಿ ಕೂಡ ಈ ತೆರನಾಗಿ ವರ್ತಿಸಲಾರದು. ಆದರೆ ಆತ ಬಾಲಕನೆನ್ನುವ ನೆಲೆಯಲ್ಲಿ ಬಾಲ ನ್ಯಾಯ ಮಂಡಳಿ ಕೇವಲ ಮೂರು ವರುಷದ ಜೈಲು ಶಿಕ್ಷೆಯನ್ನು ಆತನಿಗೆ ನೀಡಿ ಕೈತೊಳೆದುಕೊಂಡಿರುವುದು ನಿಜಕ್ಕೂ ನಮ್ಮ ಒಟ್ಟಾರೆ ಕಾನೂನು ವ್ಯವಸ್ಥೆಯ ಬಗೆಗೆ ನನ್ನಂತಹ ಕೋಟ್ಯಂತರ ಜನಸಮಾನ್ಯರಲ್ಲಿ ಒಂದು ತೀರಾ ಬೇಸರ, ಅಸಡ್ಡೆ, ಜಿಜ್ಞಾಸೆಯನ್ನು ಹುಟ್ಟುಹಾಕಿರುವುದಂತೂ ಸತ್ಯ. ಆತ ಅಂತಾದ್ದೊಂದು ಭೀಕರ ಅಪರಾಧ ಮಾಡಿದಾಗ ಆತನ ವಯಸ್ಸು ಹದಿನೇಳುವರೆ ವರುಷ. ಮತ್ತು ಅದೊಂದೇ ಕಾರಣಕ್ಕೆ ಆತ ಮಾಡಿದ ಅಪರಾಧಕ್ಕೆ ನಮ್ಮ ಕಾನೂನಿನಲ್ಲಿ ಭಾರೀ ವಿನಾಯತಿ ಸಿಕ್ಕಿಬಿಟ್ಟಿದೆ. ಅಂದರೆ ಹದಿನೆ0ಟು  ವರುಷ ಆಗಿಲ್ಲವೆಂದರೆ ಏನು ಬೇಕಾದರೂ ಮಾಡಬಹುದಾ? ಹೌದು. ಹಾಗೊಂದು ಪ್ರಶ್ನೆ ಹುಟ್ಟಿಕೊಂಡು ಬಿಟ್ಟೂ ಬಿಡದಂತೆ ನನ್ನನ್ನು ಕಾಡತೊಡಗಿದೆ. ಉತ್ತರ ಮಾತ್ರ ಸಿಗುತ್ತಿಲ್ಲ.” 
           "ಯೆಸ್. ಇದು ಸತ್ಯ. ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೇ ಆ ಬಳಿಕ ವಿಕ್ಷಿಪ್ತವಾಗಿ ವರ್ತಿಸಿ ಹಲ್ಲೆ ನಡೆಸಿ ಪಾಶವೀ ಕೇತ್ಯ ಮೆರೆದವನಿಗೆ ನಮ್ಮ ಕಾನೂನು ಇಷ್ಟು ಸಣ್ಣ ಪ್ರಮಾಣದ ಶಿಕ್ಷೆ ನೀಡುತ್ತದೆ ಎಂದರೇ!!!! ಅಷ್ಟಕ್ಕೂ ಆತ ಬಾಲಕನೇ?! ಬಾಲ್ಯತನದ ಮುಗ್ಧತೆಯೇ ಇಲ್ಲದವ ಬಾಲಕ ಹೇಗಾಗಬಲ್ಲ? ಒಬ್ಬ ವ್ಯಕ್ತಿಯ ಅಪರಾಧಕ್ಕೆ ಶಿಕ್ಷೆ ಅನ್ನುವಂತಾದ್ದು ಆತನ ವಯಸ್ಸಿನ ನೆಲೆಯಲ್ಲಿ ನಿರ್ಧಾರವಾಗುವುದಾದರೆ ಅಂತಹ ಕಾನೂನಿಗೆ ಏನಾದರೂ ಅರ್ಥ ಇದೆ ಅಂತ ಅನ್ನಿಸುತ್ತಾ?"
         "ಸರಿ. ಪುಟ್ಟ ಬಾಲಕನೊಬ್ಬ ಗೊತ್ತಿಲ್ಲದೆ ತಿಳಿಯದೇ ಯಾರಿಗೋ ಹೊಡೆದ ಅಥವಾ ಯಾರೊಂದಿಗೋ ಗುದ್ದಾಡಿಕೊಂಡ ಒಪ್ಪಿಕೊಳ್ಳೋಣ. ಯಾರನ್ನೋ ಚುಡಾಯಿಸಿದ ಅಥವಾ ಕೋಪದ ಭರದಲ್ಲಿ ಯಾರ ಮೇಲೋ ಹಲ್ಲೇ ನಡೆಸಿದ ಅದನ್ನೂ ಒಪ್ಪಿಕೊಳ್ಳೋಣ.ಆವೇಶದ ಭರದಲ್ಲಿ ಯಾರನ್ನೋ ಕೊಲೆ ಮಾಡಿಬಿಟ್ಟ.ಒಕೆ.ಒಕೆ. ತತ್ಕಾಲಕ್ಕೆ ಅದನ್ನೂ ಕೂಡ ಒಪ್ಪಿಕೊಳ್ಳೋಣ. ಅರಿವಿಲ್ಲದೇ ಆಕಸ್ಮಿಕವಾಗಿ ಇ0ತಹ ಘಟನೆಗಳು ನಡೆದುಬಿಡುತ್ತವೆ. ದೊಡ್ಡೋರು ಅನ್ನಿಸಿಕೊಂಡೋರು ಕೂಡ ಈ ಕಾರಣದಿಂದಲೇ ತಪ್ಪುಗಳನ್ನು ಮಾಡಿಬಿಡುತ್ತಾರೆ. ಹಾಗಂತ ಇಬ್ಬರ ತಪ್ಪುಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಲು ಸಾಧ್ಯವಿಲ್ಲ. ಅನ್ನೋ ಮಾತುಗಳನ್ನು ಒಪ್ಪಿಕೊಳ್ಳೋಣ. ಆದರೆ ಸ್ವಾಮೀ ಆತ ಮಾಡಿದ್ದು ಅತ್ಯಂತ ಅಮಾನುಷವಾದ ಹಲ್ಲೆ ಸಹಿತದ ಅತ್ಯಾಚಾರ. ತೋರಿಸಿದ್ದು ವಿಕೃತಿಯ ಪರಮಾವಧಿ. ಅದಕ್ಕೆಲ್ಲಾ ಆತನ ಬಾಲ್ಯ ಅಡ್ಡಿ ಬರುವುದಿಲ್ಲ ಎಂದಾದಲ್ಲಿ ಕಠಿಣ ಶಿಕ್ಷೆಗೆ ಏನಡ್ಡಿ? ಎಷ್ಟಾದರೂ ಆತ ಚಿಕ್ಕವನು-ಬಾಲಕ. ಯಾವದೋ ಅನಾಗರಿಕ ಹಿನ್ನಲೆಯಲ್ಲಿ ಬೆಳೆದುಬಂದವನು. ಅದಕ್ಕೆ ಹೀಗಾಗಿದೆ. ಒಂದಿಷ್ಟು ವರುಷ ಜೈಲಿನಲ್ಲಿಟ್ಟು ಕೌನ್ಸೆಲಿ0ಗ್ ಮಾಡಿದರೆ ಸರಿಹೋಗುತ್ತಾನೆ. ಅವನ ಭವಿಷ್ಯ ಹಾಳು ಮಾಡುವುದು ಸರಿಯಲ್ಲ ಎಂದೆಲ್ಲಾ ತೀರಾ ಸೊಬಗರ ಶೈಲಿಯಲ್ಲಿ ಮಾತನಾಡುವುದಿದೆಯಲ್ಲಾ ಅದು ಶುಧ್ಧ ಮೂರ್ಖತನದ ಸಂಗತಿ. (ಇನ್ ಫ್ಯಾಕ್ಟ್ ಇದೇ ಅವಸ್ಥೆ ತಮ್ಮ ಕುಟುಂಬಕ್ಕೆ ಒದಗಿದರೆ ಈ ರೀತಿ ಮಾತನಾಡುವವರು ಅದೇ ಭಾವವನ್ನು ಖಂಡಿತಾ ಉಳಿಸಿಕೊಳ್ಳೋದಿಲ್ಲ. ) ನಾಳೆದಿನ ತನಗೆ ಕೌನ್ಸೆಲಿಂಗ್ ಮಾಡುವವರ ಮೇಲೇಯೇ ಅತ್ಯಾಚಾರ ಮಾಡದಿದ್ದರೆ ಅದೇ ಪುಣ್ಯ. ನಮಗೆ ತಮಾಷೆ ಅನ್ನಿಸಬಹುದು. ಆದರೆ ವಾಸ್ತವವನ್ನು ನಾವುಗಳು ನೋಡಬೇಕಿದೆ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ ನಾವು ಮಾಡುವ ಅಮಾನುಷ ಕೃತ್ಯದಂತಹ ತಪ್ಪುಗಳಿಗೂ ನಮ್ಮ ಕಾನೂನು ತೀವ್ರತೆರನಾದ ಶಿಕ್ಷೆಯನ್ನೇನೂ ಕೊಡುವುದಿಲ್ಲ. ಆಕಸ್ಮಾತ್ ಶಿಕ್ಷೆ ಅಂತ ಕೊಟ್ಟರೂ ಬಾಲಾಪರಾಧಿ ಅನ್ನೋ ನೆಲೆಯಲ್ಲಿ ಅದರ ಪ್ರಮಾಣ ತೀರಾ ಕಡಿಮೆ ಇರುತ್ತದೆ ಅಂತ ನಮ್ಮ ಹದಿಹರೆಯದ ಮನಸ್ಸುಗಳಿಗೆ ಒಮ್ಮೆ ಖಚಿತವಾಗಿಬಿಟ್ಟರೆ ಅಷ್ಟೇ ಸಾಕು ಪ್ರೇರೆಪಣೆಗೊಳ್ಳಲಿಕ್ಕೆ. ಆಗ ಯಾರನ್ನು ದೂಷಿಸೋಣ!!??"
       "ಅದೇ ಅತ್ಯಾಚಾರ ಮಾಡಿದವರಿಗೆ ಗಲ್ಲು ಶತಸಿದ್ಧ ಅಂತ ಒಂದು ಕಾನೂನು ಬರಲಿ ಆಗ ನೋಡೋಣ! ನೆನೆಪಿರಲಿ ಅಂತಹ ಕಾನೂನುಗಳು ಬಂದ ತಕ್ಷಣ ಅತ್ಯಾಚಾರ ಅನ್ನೋದು ನಿಂತೇ ಹೋಗುತ್ತೆ ಅಂತ ನಾನು ಹೇಳುತ್ತಿಲ್ಲ. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ಇವತ್ತಿನ ದಿನ ಒಬ್ಬನಿಗೆ ನೀಡುವ ಶಿಕ್ಷೆಯಿಂದ ಮುಂದಿನ ದಿನಗಳಲ್ಲಿಘಟಿಸುವ ಅಪರಾಧಗಳು ಕಡಿಮೆಯಾಗುತ್ತವೆ ಅಂತ ಖಾತ್ರಿ ಇರುವಾಗ ಅಂತಹ ಶಿಕ್ಷೆ ನೀಡಲಿಕ್ಕೆ ಏನಡ್ಡಿ? ಎಲ್ಲವನ್ನೂ ಬಾಲಾಪರಾಧದ ನೆಲೆಯಲ್ಲಿ ನೋಡುವುದು ಎಷ್ಟು ಸಮಂಜಸ?(ಮತ್ತೊಂದು ಮಾತು. ಶಿಕ್ಷೆ ಆಗೋದು ಮಾತ್ರ ಮುಖ್ಯ ಅಲ್ಲ. ಅದು ಎಷ್ಟು ಶೀಘ್ರವಾಗಿ ಆಗುತ್ತದೆ ಅನ್ನೋದು ಕೂಡ ಅಷ್ಟೇ ಮುಖ್ಯ. )ನಿಜಕ್ಕೂ ನನಗೆ ಅರ್ಥವಾಗದ ಸಂಗತಿಯೆಂದರೆ ಆರೋಪಿಗಳು ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬಳಿಕವೂ ಅವರಿಗೆ ಕೊಡುವ ಶಿಕ್ಷೆಯನ್ನು ನಿರ್ಧರಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆ ತಿಂಗಳುಗಳು, ವರುಷಗಳನ್ನು ತೆಗೆದುಕೊಳ್ಳುವುದು ಯಾಕೆ ಅನ್ನುವುದು!"
       "ಹೌದು ಅತ್ಯಾಚಾರ ಪ್ರಕರಣಗಳು ನಡೆದದ್ದು ಇದೇ ಮೊದಲಲ್ಲ. ಮತ್ತಿದು ಕೊನೆಯೂ ಅಲ್ಲ ಅನ್ನೋದು ವಾಸ್ತವ. ತಲೆ ತಗ್ಗಿಸಬೇಕಾದ ಸಂಗತಿಯೆಂದರೆ ನಿಮಿಷಗಳ ಲೆಕ್ಕದಲ್ಲಿ ಭಾರತದಲ್ಲಿ ಅತ್ಯಾಚಾರಗಳು ನಡೆಯುತ್ತಿರುತ್ತವೆ. ವಿಶೇಷವೆಂದರೆ ಆಗೊಮ್ಮೆ ಈಗೊಮ್ಮೆ ನಾವುಗಳು ದೆಹಲಿಯ ತೆರನಾದ ಪ್ರತಿಭಟನೆಗಳನ್ನು ನಡೆಸಿದ್ದೇವೆ. ಗಲಾಟೆ ಮಾಡಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗೆ ಅಗ್ರಹಿಸಿದ್ದೇವೆ. ಅದರೆ ಫಲಿತಾಂಶ!! ಪ್ರತೀ ಬಾರಿ ಕೂಡ ರಾಜಕೀಯದ ಬೇಳೇ ಬೇಯತೊಡಗುತ್ತದೆ. ಒಂದಿಷ್ಟು ಮಾತಿನ ಬಲೂನುಗಳು ಬೆಳೆದು ಒಡೆದುಹೋಗುತ್ತವೆ. ಮತ್ತೆ ನಮ್ಮ ಆಡಳತಾಧಿಕಾರಿಗಳ ನಿದ್ದೆ ಮುಂದುವರೆಯುತ್ತದೆ. ಒ0ದಂಷ್ಟು ಕ್ಷಿಪ್ರಗತಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರವಾಗಿಬಿಡುತ್ತವೆಯೇ? ದೆಹಲಿ ವಿಷಯದಲ್ಲಿ  ಶಿಕ್ಷೆ ಘೋಷಣೆ ಆಗಿದೆ. ಜಾರಿ ಯಾವಾಗ?  ಗೊತ್ತಿಲ್ಲ. ಆಗುತ್ತಾ ಅದೂ ಗೊತ್ತಿಲ್ಲ.! ಒಂದು ಹಂತಕ್ಕೆ ನ್ಯಾಯ ಸಿಕ್ಕಿರುವುದಂತೂ ಸತ್ಯ. ದೆಹಲಿ ಹುಡುಗಿಗೆ ಸಿಕ್ಕಿತು  ಆದರೆ ಉಳಿದವರಿಗೆ..!!! ನಿಜಕ್ಕೂ ನಮ್ಮ ಕಾನೂನಿನಲ್ಲಿ ಆಗಬೇಕಾದ ಬದಲಾವಣೆಗಳೇನು?ಯಾವೆಲ್ಲಾ ಪ್ರಯತ್ನಗಳಿಂದ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು? ಎನ್ನುವುದರ ಕುರಿತ0ತೆ ಒಂದು ವಿಶೇಷ ಅಧಿವೇಶನವನ್ನು ಕರೆದು ಚರ್ಚೆ ನಡೆಸಿ ವಿಶೇಷ ಕಾನೂನು ಕಾಯಿದೆಗಳನ್ನು ಜಾರಿಗೆ ತರುವ ಕೆಲಸ ಯಾವಾಗಲೋ ಆಗಿಹೋಗಬೇಕಿತ್ತು. ಆದರೆ...!!!"
         "ಪ್ರಾಯಶಃ ನನಗನ್ನಿಸುವುದು ಈ ಗದ್ದುಗೆಯಲ್ಲಿ ಕುಳಿತವರ ಮಕ್ಕಳೋ ಅಥವಾ ನ್ಯಾಯದಾನ ಪ್ರಕ್ರಿಯೆಯಲ್ಲಿರುವವರ ಮಕ್ಕಳ ಮೇಲೋ ಇಂತಹ ಅತ್ಯಾಚಾರಗಳು ನಡೆದಿದ್ದಲ್ಲಿ ಆಗ ಬಹುಶಃ ಅದರ ನೋವು ಎಂತಾದ್ದು ಎನ್ನುವುದು ಅವರಿಗೆ ಅರ್ಥವಾಗುತ್ತಿತ್ತೋ ಏನೋ! ಹಾಗಾಗಲಿ ಅಂತ ಬಯಸೋದು ದ್ರೋಹವಾದೀತು. ಇನ್ ಫ್ಯಾಕ್ಟ್ ಇನ್ನೊಂದಷ್ಟು ದಿನ ಕಳೆಯಲಿ. ನಾವುಗಳು ನಮ್ಮದೇ ಜೀವನದ ಜಂಜಾಟಗಳಲ್ಲಿ ಮುಳುಗಿಹೋಗುತ್ತೇವೆ. ಅಪರೂಪಕ್ಕೆ ಒಂದೊಂದು ಪ್ರಕರಣಗಳಲ್ಲಿ  ನಮ್ಮ ಕಾನೂನಿನ ಕ್ಷಿಪ್ರ ನ್ಯಾಯದಾನ ಪ್ರಕ್ರಿಯೆ ನಡೆದು ಅಪರಾಧಿಗಳಿಗೆ ಗಲ್ಲಾದರೆ ಒಂದಿಷ್ಟು ಪಟಾಕಿ(ಯಾವ ಸಂಭ್ರಮಕ್ಕೋ!!). ಆಮೇಲೆ ಮತ್ತೆ ನಾವು ಕಳೆದು ಹೋಗುತ್ತೇವೆ. ಮತ್ತೆ ನಾವು ಎಚ್ಚರಗೊಳ್ಳಬೇಕಾದರೆ ಮತ್ತೊಂದು ಈ ತೆರನಾದ.........ಐ ಯಾಮ್ ಸಾರಿ."
      "ಅಂದಹಾಗೆ ನಾವು ಗಮನಿಸಲೇ ಬೇಕಾದ ಸಂಗತಿಯೊಂದಿದೆ. ಅತ್ಯಾಚಾರಗಳು ನಡೆದಾಗೆಲ್ಲಾ ಕೆಲವರು ಅಪರಾಧಿಗಳನ್ನು ಬೆಂಬಲಿಸಿಕೊಳ್ಳುತ್ತಿರುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅದಂತೂ ತೀರಾ ಅಪಾಯಕಾರಿ ಸಂಕೇತ. ಮಾಡ್ ಡ್ರೆಸ್ ಹಾಕಿದ್ದಕ್ಕೆ ಹಾಗಾಯಿತು. ಫ್ಯಾಶನ್ ಹೆಚ್ಚಾಯಿತು....ನೋ ಹಾಗೆಲ್ಲಾ ಕಮೆಂಟ್ ಮಾಡುವ ಮೊದಲು ಖಂಡಿತಾ ಯೋಚಿಸಬೇಕಿದೆ. ಸೀರೆ ಚೂಡಿಧಾರ ಧರಿಸಿಧವರ ಮೇಲೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಒಂದು ವರದಿಯ ಪ್ರಕಾರ ಗ್ರಾಮೀನ ಭಾರತದಲ್ಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುವಂತಾದ್ದು. ಗ್ರಾಮೀಣ ಮಹಿಳೆಯರು ಅದ್ಯಾವ ಫ್ಯಾಶನ್ ಮಾಡುತ್ತಾರೆ ಹೇಳಿ? ಕಾಮುಕರು ನೂರು ಸೀರೆಯ ಒಳಗಿನಿಂದಲೂ ನಗ್ನತೆಯನ್ನು ಆಲೋಚಿಸಬಲ್ಲರು. ಎಲ್ಲೋ ಒಂದು ಕಡೆ ಮಾಡ್ ಡ್ರೆಸ್ ಪ್ರೇರೆಪಣೆ ಆಗಿತ್ತು ಅಂತಂದುಕೊಂಡರೂ ಅದೇ ಕಾರಣಕ್ಕೆ ಎಲ್ಲಾ ಆರೋಪಿಗಳನ್ನು ಬೆಂಬಲಿಸಿಕೊಂಡು ಮಾತನಾಡುವುದು ಖ0ಡಿತಾ ತಪ್ಪು. ಅಲ್ಟಿಮೇಟ್ಲಿ ಅತ್ಯಾಚಾರಕ್ಕೆ ಕಾರಣವಾಗುವಂತಾದ್ದು ಗಂಡಸರ ಮನಸ್ಸಿನ ವಿಕೃತಿಯೇ ಹೊರತು ಬೇರೇನೂ ಅಲ್ಲ. ಇದನ್ನು ಪ್ರತಿಯೊಬ್ಬರೂ  ಅರ್ಥಮಾಡಿಕೊಳ್ಳಬೇಕಾಗಿದೆ."

ಮುಗಿಸುವ ಮುನ್ನ: "ವ್ಯವಸ್ಥೆ ಬದಲಾವಣೆಗೊಳ್ಳುತ್ತದೋ ಇಲ್ಲವೋ ಗೊತ್ತಿಲ್ಲ. ಅತ್ಯಾಚಾರದಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುತ್ತಿರುವುದು ತುಂಬಾ ವಿರಳವಾಗಿ ಬಿಟ್ಟಿದೆ ಅನ್ನೋದಂತೂ ಸತ್ಯ. ಅತ್ಯಾಚಾರಗಳು ನಡೆಯುತ್ತಲೇ ಇವೆ ಮತ್ತು ಇರುತ್ತವೆ ಅನ್ನೋದು ಕಹಿ ಸತ್ಯ. ನ್ಯಾಯ ಸಾಕ್ಷಿ ಕೇಳುತ್ತಲೇ ಇರುತ್ತದೆ. ಅತೃಪ್ತ ಆತ್ಮಗಳು ಸದ್ದಿಲ್ಲದೇ ಮರುಗುತ್ತಿರುತ್ತವೆ. ಅತ್ಯಾಚಾರಗಳು ನಡೆದಾಗೆಲ್ಲ ಅಥವಾ ನಮ್ಮ ಮನಸ್ಸಿಗೆ ಕಾಣಿಸಿದಾಗೆಲ್ಲಾ ನಾವುಗಳು ಪ್ರತಿಭಟಿಸುತ್ತೇವೆ. ಬೇಸರಿಸುತ್ತೇವೆ. ಅದೇ ಸಮಯಕ್ಕೆ ನಮ್ಮನ್ನು ನಾವು ಮತ್ತೊಂದು ದಿಸೆಯಲ್ಲಿ ಆಲೋಚನೆಗೆ ತೊಡಗಿಸಿಕೊಳ್ಳಬೇಕು ಅನ್ನೋದನ್ನ ಮರೆಯುತ್ತೇವೆ. ಹೌದು ನಾವು ಆಲೋಚಿಸಬೇಕಿದೆ. ಲೈಸೆನ್ಸ್ ಇಲ್ಲದ ಮಗನಿಗೆ ಬೈಕ್ ಕೊಡಿಸುವ, ಓದು ಅಂತ ಹೇಳಿ ಮಕ್ಕಳಿಗೆ ಇಂಟರ್ ನೆಟ್ ಕಂಪ್ಯೂಟರ್ ಕೊಟ್ಟು ಬಾಗಿಲನ್ನು ಎಳೆದುಕೊಳ್ಳುವ, ತೀರಾ ಆರು ಏಳನೇ ತರಗತಿಯ ಮಕ್ಕಳ ಕೈಗೆ ಮೊಬೈಲ್ ಕೊಡಿಸುವ, ಅಗತ್ಯವೇ ಇಲ್ಲದಿದ್ದರೂ ಮಕ್ಕಳ ಕೈಗೆ ನೂರಾರು ರೂಪಾಯಿಗಳ ಪಾಕೆಟ್ ಮನಿ ನೀಡುವ , ಹದಿಹರೆಯದ ಮಕ್ಕಳಿಗೆ ಫ್ಯಾಶನ್ ಹೆಸರಿನಲ್ಲಿ ಬಿಗ್ಗಾಬಿಗ್ಗಿ ಉಡುಪುಗಳನ್ನು ಧರಿಸಿ ಬೀಗುವ, ಅನೈತಿಕ ಸಂಬಂಧಗಳನ್ನು ವೈಭವೀಕರಿಸಿ ಅದರಲ್ಲೇ ತೇಲಾಡುತ್ತಿರುವ ಧಾರಾವಾಹಿಗಳನ್ನು ಮಕ್ಕಳೊಂದಿಗೆ ಕುಳಿತು ನೋಡುವ, ಆಸ್ವಾದಿಸುವ, ಅವರೊಡನೆಯೇ ಅದರ ಬಗೆಗೆ ಚರ್ಚಿಸುವ, ಮಕ್ಕಳಿ ಲೇಟಾಗಿ ಮನೆಗೆ ಬರುವುದನ್ನು ಯಾವತ್ತೂ ಪ್ರಶ್ನಿಸದ ....... ಎಲ್ಲಾ ಮಹನೀಯರುಗಳು ಒಮ್ಮೆ ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದ ತುರ್ತು ಅಗತ್ಯ ಈಗಿನದ್ದು. ಆಗಲಾದರೂ ತಪ್ಪುಗಳ ಅಪರಾಧಗಳ ಮೂಲ ಎಲ್ಲಿರುತ್ತದೆ ಅನ್ನುವುದರ ಸಣ್ಣ ಅರಿವಾದರೂ ಆದೀತು. ಅದರೆ ಎಲ್ಲರಲ್ಲೂ ಈ ಅರಿವು ಮೂಡೀತೆ ಅನ್ನೋದು ಪ್ರಶ್ನೆ.

          ಅದರೆ ಒಂದು ಮಾತು. ಮೂಲಗಳೇನೇ ಇರಲಿ ಅಪರಾಧ ಅಪರಾಧವೇ. ಅದಕ್ಕೆ ಸರಿಯಾದ ಶಿಕ್ಷೆ ಆಗಲೇ ಬೇಕಿದೆ. ನಮ್ಮ ಹೋರಾಟದ ದನಿ ಸತತವಾಗಿ ಕೇಳಿಸಬೇಕಿದೆ. ಇಲ್ಲವಾದಲ್ಲಿ ಅರುಣ, ಸೌಜನ್ಯ, ಮಮತಾ.... ನೆನಪುಗಳ ಸಾಲು ಮುಂದುವರೆಯುತ್ತದೆ ಅಷ್ಟೆ. ನಮ್ಮ ಕಾನೂನು ನಮ್ಮ ಅಸಹಾಯಕತೆಯನ್ನೆ ಅಣಕಿಸಿ ನಗುತ್ತಿರುವಂತೆ ಅನ್ನಿಸುತ್ತಿದೆ."

ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಇವರು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿದ್ದಾರೆ.
ಸಂಪರ್ಕ:nsgangolli@yahoo.com
                                                             
ಕುಂದಾಪ್ರ ಡಾಟ್ ಕಾಂ- editor@kundapra.com