ನಾಟಕ ವಿಮರ್ಶೆ: ವರದಕ್ಷಿಣೆಯ ಕ್ರೂರತೆ ಬಿಂಬಿಸಿದ ‘ತಾಳಿ ಅಲ್ಲ; ನೇಣು ಪಾಶಾ’


ನಾಟಕಗಳು  ಜೀವನ ಸಂದೇಶ ನೀಡುವುದರ ಮೂಲಕ ಸಮಾಕಾಲೀನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಪ್ರಸ್ತುತ ಸಮಾಜದ ಭಯಂಕರ ಸಾಮಾಜಿಕ ಅನಿಷ್ಠವಾದ ವರದಕ್ಷಿಣೆಯ ಮಾರಕ ಪರಿಣಾಮಗಳನ್ನು ಬಿಂಬಿಸುವ, ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಕಷ್ಟು ರಂಗ ನಾಟಕಗಳು ಬಂದಿವೆಯಾದರೂ, ಒಂದು ಗಟ್ಟಿ ಕಥೆಯನ್ನು ಹೊಂದಿರುವ ತಾಳಿಯಲ್ಲ ನೇಣು ಪಾಶಾ ಅರ್ಥಾತ್ ತಾಳಿ ಕಟ್ಲಿಕ್ಕೂ ಕೂಲಿ ಎನ್ನುವ ನಾಟಕ ಒಂದು ಅರ್ಥ ಪೂರ್ಣ ರಂಗಾಭಿವ್ಯಕ್ತಿಗೆ ಉದಾಹರಣೆ.

ಈ ನಾಟಕ ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ನೂರಾರು ಪ್ರಯೋಗಗಳನ್ನು ಕಂಡಿವೆ. ಎಷ್ಟು ಪ್ರಯೋಗಳಾದರೂ ಕೂಡಾ ನಿತ್ಯ ನೂತನವೆನ್ನುವಂತೆ  ರಂಗದಲ್ಲಿ ಕಾಣುವ ತಾಳಿ ಅಲ್ಲ ನೇಣು ಪಾಶಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನ ದಾಷ್ಟ್ಯ, ಬಡವನ ಬದುಕನ್ನು ಆಟದ ದಾಳವನ್ನಾಗಿ ಬಳಸಿಕೊಳ್ಳುವುದನ್ನು ಯಥಾವತ್ತಾಗಿ ತಿಳಿಸುತ್ತದೆ. ಮಗನ ಮಾನವೀಯ ಕಾರ್ಯವನ್ನು ಪ್ರೋತ್ಸಾಹಿಸದ ತಂದೆ, ಸೊಸೆಯನ್ನೆ ಮುಗಿಸಲು ಸುಪಾರಿ ನೀಡುವುದು, ಬಡವನ ಬದುಕಿನಲ್ಲಿ ಕ್ಷಣಕ್ಷಣಕ್ಕೂ ಕಾಡುವ ವರದಕ್ಷಿಣೆಯ ಕ್ರೂರತೆ ನಾಟಕವನ್ನು ಗಂಭೀರತೆಯತ್ತ ಕೊಂಡ್ಯೊದರೂ, ಇಡೀ ನಾಟಕದ ಉದ್ದಕ್ಕೂ ಗಂಭೀರತೆಗಿಂತ ನವಿರು ಹಾಸ್ಯ ಜೋಡಣೆಯಿಂದ ನಾಟಕ ಪ್ರೇಕ್ಷಕರನ್ನು ಕುತೂಹಲದ ತುದಿಯಲ್ಲಿ ನಿಲ್ಲಿಸುತ್ತದೆ.
ಈ ನಾಟಕವನ್ನು ಗಣೇಶೋತ್ಸವದ ಪ್ರಯುಕ್ತ ಇತ್ತಿಚಿಗೆ ವಂಡ್ಸೆಯಲ್ಲಿ ಸ್ಥಳೀಯ ಯುವಕರು ಯಶಸ್ವಿಯಾಗಿ ಪ್ರದರ್ಶಿಸಿದರು. ದುಬಾರಿ ಸಂಭಾವನೆ ನೀಡಿ, ದೂರ ದೂರದ ಕಲಾವಿದರನ್ನು ಕರೆಸಿ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ತಾಳ್ಮೆಯಿಂದ ಅಭಿನಯ ಕಲಿತು ನಾಟಕವನ್ನುಸಮರ್ಥವಾಗಿ ಅಭ್ಯವ್ಯಕ್ತಿ ಪಡಿಸಿದ ಸ್ಥಳೀಯ ಯುವಕರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.
ಗಟ್ಟಿ ಕಥೆ, ಕಠಿಣವಾದ ಸಂಭಾಷಣೆಗಳು, ಕ್ಲೀಷ್ಟವಾದ ಸನ್ನಿವೇಶಗಳು, ಪಾತ್ರಗಳ ಒಟ್ಟು ಔಚಿತ್ಯವನ್ನು ಬದಲಾಯಿಸುವ ದೃಶ್ಯಗಳಿಂದ ಈ ನಾಟಕ ಕಲಾವಿದರಿಗೆ ತುಸು ಕಷ್ಟವೆನಿಸಿದರೂ, ಆಸಕ್ತಿಯಿದ್ದರೆ, ನೀರು ಕುಡಿದಷ್ಟು ನೀರಾಳವಾಗಿ ಪ್ರದರ್ಶನ ನೀಡಲು ಸಾಧ್ಯ ಎನ್ನುವುದಕ್ಕೆ ಇದು ಒಂದು ಉದಾರಣೆ ಅಷ್ಟೆ. ಕಥೆಯ ಖಳನಾಯಕ ಕಾರ್ತಿಕ್ ಪಾತ್ರದಲ್ಲಿ ಹವ್ಯಾಸಿ ಕಲಾವಿದ ಮಧುಕರ ಗಾಣಿಗ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥಾ ನಾಯಕಿ ಪೂಜಾಳ ಪಾತ್ರದಲ್ಲಿ ವಿಜೇತ್ ನಾಯ್ಕ್ ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಕಥೆಯ ಜೀವಾಳವಾದ  ಉಮೇಶನ ಪಾತ್ರದಲ್ಲಿ ಮಂಜುನಾಥ ಗಾಣಿಗ,  ಅಮಿತನಾಗಿ ವಿಜಯ್, ಸೂರಜ್ ಪಾತ್ರದಲ್ಲಿ ಸಂದೇಶ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಮೂರು ಪಾತ್ರಗಳಲ್ಲಿ ದುಃಖ, ಗಂಬೀರತೆ, ತ್ಯಾಗ, ಅಸಹನೆ, ಕೋಪ ಎಲ್ಲವೂ ಇದೆ. ಅದರ ಅಭಿವ್ಯಕ್ತಿ ಉತ್ತಮ.
ನಾಟಕದಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿದ್ದು ಹಾಸ್ಯ ಪಾತ್ರಗಳು. ಶಂಭು ಶಾಸ್ತ್ರೀಯಾಗಿ ಸಭೆಯ ಮಧ್ಯದಿಂದ ಪ್ರವೇಶ ಮಾಡಿದ ಎಲ್.ಎನ್. ಆಚಾರ್ಯ ತನ್ನ ಮಾಗಿದ ಅಭಿನಯದಿಂದ ಶಹಬ್ಬಾಸ್ ಗಿರಿ ಪಡೆದರೆ, ಶಾಸ್ತ್ರಿ ಮಕ್ಕಳಾದ ಅಣ್ಣಯ್ಯ ಹಾಗೂ ರಾಮಾಚಾರಿ ಪಾತ್ರದಾರಿಗಳು ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪಟ್ಮಂಜನಾಗಿ ಗಿರೀಶ್ ಎನ್.ನಾಯ್ಕ್ ತನ್ನ ಚುರುಕು ಅಭಿನಯದಿಂದ ಗಮನ ಸಳೆದರೆ, ಪುಟ್ಮಲ್ಲಿಯ ಪಾತ್ರದಲ್ಲಿ ಚೇತನ್, ಶ್ರೀಮಂತನ ಪಾತ್ರದಲ್ಲಿ ವಿಠಲ ಆಚಾರ್ಯ, ರಾಘವೇಂದ್ರ ಬಿಟಿ, ಸೌಮ್ಯಳ ಪಾತ್ರದಲ್ಲಿ ಪ್ರಭಾಕರ ಗಾಣಿಗ ಮೊದಲಾದ ಸಹಕಲಾವಿದರ ಪ್ರಾಮಾಣಿಕ ಪಾತ್ರ ಪೋಷಣೆ ಗಮನೀಯ. ಶಿಕ್ಷಕ ಗಣೇಶ ದೇವಾಡಿಗರ ವೃದ್ಧನ ಪಾತ್ರ, ಶಿಕ್ಷಕ ಮಂಜುನಾಥ್ ಚಂದನ್‍ರ ಅಣ್ಣಯ್ಯ ಶಾಸ್ತ್ರಿಯ ಪಾತ್ರ ನೆನಪಲ್ಲಿ ಉಳಿಯುತ್ತದೆ.
ವಾಸು ಜಿ.ನಾಯ್ಕ್ ಹಾಗೂ ದಾಮೋದರ್ ಅವರ ನಿರ್ದೆಶನ,  ದಯಾನಂದ ಆಚಾರ್ಯರ ಹಿನ್ನೆಲೆ ಸಂಗೀತ ನಾಟಕಕ್ಕೆ ಮೆರುಗು ತಂದರೆ, ಸ್ಥಳೀಯ ಹುಡುಗರ ಪ್ರಯತ್ನ ಭವಿಷ್ಯದ ರಂಗ ಸಾಧನೆಯ ಮುನ್ಸೂಚನೆ.
-ನಾಗರಾಜ್ ವಂಡ್ಸೆ
ಪತ್ರಕರ್ತರು


ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com