ಗಣಪನಿಗೆ ಮೂರ್ತರೂಪ ಕೊಡುವ ಕಲೆಗಾರ ವಸಂತ ಗುಡಿಗಾರ್

ಸಾರ್ವಜನಿಕ ಹಬ್ಬ ಗಣೇಶ ಚತುರ್ಥಿ ಬಂದೇಬಿಡ್ತು.  ಪ್ರತಿ ಬೀದಿಯಲ್ಲೂ ಹಬ್ಬದ ಸಂಭ್ರಮ ಮನೆಮಾಡುತ್ತಿದೆ. ನಾನಾ ಬಗೆಯ ವಿಗ್ರಹಗಳು ಕಲಾವಿದರುಗಳ ಕೈಯಲ್ಲರಳಿ ಅಂತಿಮ ಸ್ಪರ್ಶ ಪಡೆದು ಪೂಜಿಸಲ್ಪಡುತ್ತಿದೆ. ಈ ಸಂಭ್ರಮದ ನಡುವೆ ಕಳೆದ 28-29 ವರ್ಷಗಳಿಂದ ಮೋದಕ ಪ್ರಿಯನಿಗೆ ಮೂರ್ತರೂಪ ಕೊಡುವಲ್ಲಿ ತನ್ನನ್ನು ತೋಡಗಿಕೊಂಡಿರುವ ಕುಂದಾಪುರದ ಶಿಲ್ಪಿ ವಸಂತ ಗುಡಿಗಾರ ಕಲಾ ಪ್ರಪಂಚದ ಕಥೆಯನ್ನೊಮ್ಮೆ ಕೇಳೋಣ ಬನ್ನಿ.

ಮೂರ್ತಿ ನಿರ್ಮಾಲ್ಲಿ ತೊಡಗಿರುವ ವಸಂತ ಗುಡಿಗಾರ ಮತ್ತು ಸಹ ಶಿಲ್ಪಿಗಳು
ಕುಂದಾಪುರ: ತಾಲೂಕಿನ ಹಲವೆಡೆ ನಡೆಯುವ ಗಣೇಶೋತ್ಸವಗಳಿಗೆ ಗಣಪತಿ ವಿಗ್ರಹಗಳನ್ನು ನಿರ್ಮಿಸಿಕೊಡುವಲ್ಲಿ ತೊಡಗಿಕೊಂಡಿರುವ ವಸಂತ ಗುಡಿಗಾರ್, ಶಿಲ್ಪ ಕಲೆಯನ್ನೇ ತಮ್ಮ ಕಸುಬನ್ನಾಗಿಸಿಕೊಂಡಿದ್ದು ಚೌತಿ ಸಮಯದಲ್ಲಿ ಗಣೇಶನ ವಿಗ್ರಹಗಳ, ಇನ್ನುಳಿದ ಸಮಯದಲ್ಲಿ ಮರ ಹಾಗೂ ಕಲ್ಲಿನ ಶಿಲ್ಪಗಳ ತಯಾರಿಕೆಯಲ್ಲಿ ತೋಡಗಿಕೊಳ್ಳುತ್ತಾರೆ. ತಮ್ಮ 17 ನೇ ವಯಸ್ಸಿನಿಂದಲೇ ಶ್ರದ್ಧೆ ಭಕ್ತಿಯಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು ಕುಂದಾಪುರ ಕರ್ನಾಟಕ ಬ್ಯಾಂಕ್ ಸಮೀಪದ ತಮ್ಮ ಕಾರ್ಯಗಾರದಲ್ಲಿ ವರ್ಷಂಪ್ರತಿ ಸಮಾರು 80 ಕ್ಕೂ ಹೆಚ್ಚು ವಿಗ್ರಹಗಳನ್ನು ಬೇಡಿಕೆಗನುಸಾರವಾಗಿ ತಯಾರಿಸುತ್ತಿದ್ದಾರೆ. 

ನಾಗರಪಂಚಮಿಯಿಂದ ಆರಂಭ:  ನಾಗರಪಂಚಮಿಯಂದು ಆನೆಗುಡ್ಡೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಚೌತಿ ವಿಗ್ರಹಗಳ ತಯಾರಿಕೆಗೆ ಅಧಿಕೃತವಾಗಿ ತೊಡಗಿಸಿಕೊಳ್ಳುತ್ತಾರೆ. ಈ ದಿನದಂದು ಆಗಮಿಸುವ ಭಕ್ತರು ತೆಂಗಿನ ಕಾಯಿ, ಅಕ್ಕಿ, ಕಾಣಿಕೆ ಹಾಗೂ ಗಣಪತಿ ಪೀಠವನ್ನು ಗುಡಿಗಾರರಿಗೆ ನೀಡಿ ಮೂರ್ತಿ ನಿರ್ಮಿಸಿಕೊಡುವ ಬಗ್ಗೆ ಬೇಡಿಕೆಯಿಡುತ್ತಾರೆ. ಅಂದಿನಿಂದ ಆರಂಭಗೊಳ್ಳುವ  ಮೂರ್ತಿ  ತಯಾರಿಕೆಯ ಕೆಲಸ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಪ್ರಮಾಣಕ್ಕೆ ತಕ್ಕಂತೆ  ನಿರ್ಮಾಣಗೊಳ್ಳುತ್ತದೆ. ವಾಡಿಕೆಯಂತೆ ಮೂರ್ತಿ ನಿರ್ಮಿಸುವಾಗ ವರ್ಷ ವರ್ಷವೂ ಒದೊಂದು ಇಂಚು ಹೆಚ್ಚಿಸುತ್ತಾರೆ.

ಉತ್ಪಾದನಾ ವೆಚ್ಚ ಜಾಸ್ಥಿ:  ವಸಂತ ಗುಡಿಗಾರರು ದಶಕಗಳ ಹಿಂದೆ  ಗದ್ದೆ ಮಣ್ಣು ತಂದು ಕುಟ್ಟಿ ಪುಡಿ ಮಾಡಿ ಮೂರ್ತಿ ನಿರ್ಮಿಸುತ್ತಿದ್ದರು. ಕ್ರಮೇಣ ಅದು ಬದಲಾಗಿ ಆವೆ ಮಣ್ಣಿನಿಂದ ಮೂರ್ತಿ ನಿರ್ಮಾಣದ ದಾರಿ ಕಂಡುಕೊಂಡರು. ಸಮರ್ಪಕ ಆವೆ ಮಣ್ಣಿನ ಪೂರೈಕೆ ಇಲ್ಲದಿರುವುದು ಮತ್ತು ಈಗ ಆಯಿಲ್ ಪೇಂಟ್ನ್ನು ಸರಕಾರ ನಿಷೇದಿಸಿರುವುದರಿಂದ ಜಲವರ್ಣವನ್ನೇ ಬಳಸಬೇಕಾಗುತ್ತಿರುವುದರಿಂದ  ಮೂರ್ತಿ  ತಯಾರಿಕ ವೆಚ್ಚ ಅಧಿಕವಾಗಿದೆ.
        
ವರ್ಣ ಹಾಗೂ ಅಂತಿಮ ಸ್ಪರ್ಶ ಪಡೆಯಲು ಸಜ್ಜುಗೊಂಡಿದ್ದ ವಿಗ್ರಹಗಳು. 
 12 ಇಂಚಿನಿಂದ ಆರಂಭಗೊಂಡು ಐದು ಅಡಿವರೆಗೂ ಗಣೇಶ ಮೂರ್ತಿಗಳನ್ನು   ನಿರ್ಮಿಸುವ ಇವರು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆಗನುಸಾರವಾಗಿ  ಮೂರ್ತಿ   ನಿರ್ಮಿಸುತ್ತಾರೆ. ಹಲವು ಬಾರಿ ವಿವಿಧ ವಿನ್ಯಾಸದಲ್ಲಿ  ಮೂರ್ತಿ ನಿರ್ಮಿಸಿಕೊಡುವ ಬಗ್ಗೆ ಬೇಡಿಕೆ ಬಂದರೂ ಕೂಡ ಸಮಯದ ಅಭಾವದಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗುಡಿಗಾರ್
.          ತಿಂಗಳುಗಳಿಂದ ಬೇಡಿಕೆಗನುಸಾರವಾಗಿ  ನಿರ್ಮಾಣಗೊಳ್ಳುವ  ಮೂರ್ತಿಗಳಿಗೆ ಹಬ್ಬಕ್ಕೆ ಒಂದು ವಾರ ಇರುವಾಗ ಬಣ್ಣ ನೀಡುತ್ತಾರೆ. ಅಲ್ಲದೇ ಗಣೇಶ ಚತುರ್ಥಿ ದಿನ ವಿಗ್ರಹಕ್ಕೆ ದೃಷ್ಟಿ ಬಿಡಿಸಿ  ಮೂರ್ತಿಗೆ ಕಲೆ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಸಂಬಂಧಿಸಿದವರಿಗೆ ನಿಡಲಾಗುತ್ತದೆ. ಗಣೇಶನಿಗೆ ಮೂರ್ತರೂಪ ಕೊಡುವ ವಸಂತ ಗುಡಿಗಾರರಿಗೆ ಶುಭವಾಗಲಿ. 

ಚಿತ್ರ-ವರದಿ: ಯೋಗೀಶ್ ಕುಂಭಾಸಿ
2012-ಸಂಪಾದಿಸಲ್ಪಟ್ಟಿದೆ.