ಕುಂದಾಪುರ ಪುರಸಭೆ: ಅಧ್ಯಕ್ಷೆ-ಉಪಾಧ್ಯಕ್ಷರ ಅಯ್ಕೆ

 ಅಧ್ಯಕ್ಷೆಯಾಗಿ ಕಲಾವತಿ, ಉಪಾಧ್ಯಕ್ಷರಾಗಿ ನಾಗರಾಜ್ ಕಾಮಧೇನು ಆಯ್ಕೆಗೊಂಡಿದ್ದಾರೆ.

ಕುಂದಾಪುರ: ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.16 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸಿಪಿಎಂನ ಕಲಾವತಿ ಮತ್ತು ಉಪಾಧ್ಯಕ್ಷರಾಗಿ  ಬಿಜೆಪಿಯ ನಾಗರಾಜ್‌ ಕಾಮಧೇನು ಆಯ್ಕೆಯಾಗಿದ್ದಾರೆ.
      ಪುರಸಭೆಯ 23 ಸ್ಥಾನಗಳ ಪೈಕಿ 12 ಸ್ಥಾನಗಳೊಂದಿಗೆ ಬಿಜೆಪಿ ಬಹುಮತ ಹೊಂದಿದ್ದು, ಕಾಂಗ್ರೆಸ್‌ ಹಾಗೂ ಸಿಪಿಎಂ ಮೈತ್ರಿಕೂಟ 11 ಸ್ಥಾನಗಳನ್ನು ಹೊಂದಿತ್ತು. ಸರಕಾರದ ನಿಗದಿಯಾದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ಆಯ್ಕೆ ಇಲ್ಲದೇ ಇದ್ದುದರಿಂದ ಸಿಪಿಎಂನ ಅಭ್ಯರ್ಥಿ ಕಲಾವತಿ ಆಯ್ಕೆಯಾದರು.
      ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಪದನಿಮಿತ್ತ ಸದಸ್ಯರಾಗಿರುವ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ ಚಲಾಯಿಸಿದರು.  ಹಿಂದುಳಿದ ವರ್ಗ ಎ. ಗೆ ಮೀಸಲಾಗಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಾದ ಬಿಜೆಪಿಯಲ್ಲಿನ ಗೊಂದಲಗಳು ಮುಂದುವರಿದ್ದಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸಿಗರ ಪಾಲಾಗಬಹುದು ಎನ್ನುವ ಕುತೂಹಲಗಳಿತ್ತು. ಆದರೆ ಸಂಸದ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದರೇ, ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಗೆಲುವಿನ ನಗು ಮೂಡಿಸಿದರು.
      ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ನಾಗರಾಜ ಕಾಮಧೇನು ಹಾಗೂ ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ನಾಗರಾಜ ಕಾಮಧೇನು 13 ಮತಗಳನ್ನು ಹಾಗೂ ಚಂದ್ರಶೇಖರ ಖಾರ್ವಿ 12 ಮತಗಳನ್ನು ಪಡೆದರು. ಕುಂದಾಪುರ ತ‌ಹಶೀಲ್ದಾರ್‌ ಗಾಯತ್ರಿ ನಾಯಕ್‌ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
      ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರುಗಾರ್, ಪುರಸಭೆ ಮುಖ್ಯಾಧಿಕಾರಿ ಸದಾನಂದ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com