ಮೋಂತಿ ಫೆಸ್ಟ್‌: - -:ಮೇರಿ ಮಾತೆಯ ಜನ್ಮೋತ್ಸವ

ಸೆ. 8ರಂದು ಪರಂಪರಾಗತವಾಗಿ ನಡೆಯುವ ಕ್ರೈಸ್ತರ ಕೊಯ್ಲು ಹಬ್ಬ "ಮೋಂತಿ ಫೆಸ್ಟ್‌'  - ಪ್ರೇಮಮಯಿ ಮೇರಿ ಮಾತೆಯ ಜನ್ಮೋತ್ಸವ!

ಮನುಷ್ಯನು ಅನಾದಿ ಕಾಲದಿಂದಲೂ ಪ್ರಕೃತಿ ಮಾತೆಯ ಆರಾಧಕ. ಭೂಮಿ ತಾಯಿಯು ಅವನಿಗೆ ಅನ್ನವನ್ನು ನೀಡುವ ವರ ದೇವತೆಯೂ ಹೌದು. ತಾನು ಬೆವರಿಳಿಸಿ ದುಡಿದ ಫಲವಾಗಿ ಪ್ರಕೃತಿಯು ನೀಡುವ ನಳನಳಿಸುವ ಬೆಳೆಗಳನ್ನು ಕಾಣುವಾಗ ಅವನು ಅನುಭವಿಸುವ ಆಂತರಿಕ ಸಂತಸವು ಅವರ್ಣನೀಯವಾದುದು. ತನಗೆ ಕರುಣಿಸಿದ ವರದಾನಗಳಿಗಾಗಿ ಪ್ರಕೃತಿ ಮಾತೆಯನ್ನು ಕೃತಜ್ಞಾಪೂರ್ವಕ ಸ್ಮರಿಸಿ ಗೌರವಿಸುತ್ತಾನೆ.

ಬೆಳೆ ಕಟಾವು ಮಾಡಿ ಹೊಸ ಧಾನ್ಯವನ್ನು ಸ್ವಾಗತಿಸಿ, ಮನೆ ತುಂಬಿಸುವ ಉತ್ಸವವನ್ನು ಆಚರಿಸುತ್ತಾನೆ. ಇದುವೇ ದೇಶಾದ್ಯಂತ ವಿವಿಧ ಹೆಸರಿನಲ್ಲಿ ಆಚರಿಸುವ ಕೊಯ್ಲು ಹಬ್ಬದ ಆಶಯವಾಗಿದೆ.

ಕೇರಳದ ಕಾಸರಗೋಡಿನಲ್ಲಿರುವ ಕೊಂಕಣಿ ಕ್ರೈಸ್ತರು ಅಲ್ಪಧಿಸಂಖ್ಯಾಕರಾದರೂ ಕಾಸರಗೋಡು ಕ್ರೈಸ್ತ ಧರ್ಮ ವಲಯದ ಪ್ರಧಾನ ಪುಣ್ಯಕ್ಷೇತ್ರವಾದ ಬೇಳದ ಶೋಕಮಾತಾ ದೇವಾಲಯವೂ ಸೇರಿದಂತೆ ಅವರ ಹದಿಮೂರು ಕ್ರೈಸ್ತ ಧರ್ಮಕ್ಷೇತ್ರಗಳಲ್ಲಿಯೂ ಕರ್ನಾಧಿಟಕದ ಕರಾವಳಿಧಿಯಲ್ಲಿರುವಂತೆಯೇ ಸೆ. 8ರಂದು ಪರಂಪಧಿರಾಗತಧಿವಾಗಿ ಕೊಯ್ಲು ಹಬ್ಬವೊಂದು ನಡೆಯುತ್ತದೆ. ಅದುವೇ "ಮೋಂತಿ ಫೆಸ್ಟ್‌' ಅಥವಾ "ತೆನೆ ಹಬ್ಬ'. ತುಳುವಿನ "ಕುರಲ್‌ ಪರ್ಬ'! ಮಾತ್ರವಲ್ಲ ಪ್ರೇಮಮಯಿ ಮೇರಿ ಮಾತೆಯ ಜನ್ಮೋತ್ಸವ!

ಹಬ್ಬದ ಐತಿಹ್ಯ:  ಈ ಹಬ್ಬದ ಐತಿಹ್ಯವು ಇಂತಿದೆ. ಶತಮಾನಗಳ ಹಿಂದೆ ಗೋವದಿಂದ ವಲಸೆ ಬಂದ ಕೊಂಕಣಿ ಕ್ರೈಸ್ತರು ಕೆನರಾದ ಕಾಸರಗೋಡು ವರೆಗೂ ಬಂದು ನೆಲೆಸಿದರು. ಉತ್ತಮ ಕೃಷಿಕರಾದ ಇವರು ಪ್ರಕೃತಿ ಪ್ರಿಯರು. ಇವರಲ್ಲಿ ಹಲವು ಕುಟುಂಬಗಳು ದಾರಿ ಮಧ್ಯೆ ಅಲ್ಲಲ್ಲಿರುವ ಪ್ರಕೃತಿ ರಮಣೀಯ ಬೆಟ್ಟಗಳಲ್ಲಿ ಮೇರಿ ಮಾತೆಯ ಮಂದಿರಗಳನ್ನು ನಿರ್ಮಿಸಿ ಅಲ್ಲಿಯೇ ನೆಲೆಸಿದರು. ಮಾತ್ರವಲ್ಲ ಸೆ. 8ರ ಮಾತೆಯ ಜನ್ಮೋತ್ಸವವನ್ನು "ಮೋಂತಿ ಫೆಸ್ಟ್‌' ಎಂದು ಆಚರಿಸಲಾರಂಭಿಸಿದರು.

ಮೋಂತಿ ಎಂಬುದು ಮೌಂಟ್‌ ಎಂಬ ಶಬ್ದದಿಂದ ಉದ್ಭವಿಸಿ ಉತ್ಸವವು "ಮೋಂತಿ ಫೆಸ್ಟ್‌' ಎಂಬುದಾಗಿ ಪ್ರಸಿದ್ಧವಾಯಿತು. ಮುಂಬಯಿಯ ಬಾಂದ್ರಾಧಿದಲ್ಲಿರುವ "ಮೌಂಟ್‌ ಮೇರಿ' ಎಂಬ ಪ್ರಸಿದ್ಧ ಪುಣ್ಯ ಕ್ಷೇತ್ರದ ಉತ್ಸವದ ದಿನವೂ ಸೆ. 8. ಆದರೆ ದ.ಕ.ಜಿಲ್ಲೆ ಮತ್ತು ಕಾಸರಗೋಡುಗಳಲ್ಲಿ ನೆಲೆಸಿರುವ ಕೊಂಕಣಿ ಕ್ರೈಸ್ತರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಸೆ. 8 ರಂದು ಮೋಂತಿ ಫೆಸ್ಟ್‌ ಎಂಬ ಮಾತೆಯ ಜನ್ಮೋತ್ಸವವನ್ನು "ತೆನೆ ಹಬ್ಬ' ಅಥವಾ ಕೊಯ್ಲು ಹಬ್ಬ ಎಂಬ ಆಚರಣೆಯನ್ನೇ ನೆಚ್ಚಿ ಕೊಂಡರು.

ಪುಷ್ಪಾರ್ಚನೆಗೆ ಪ್ರಾಮುಖ್ಯ: ತೆನೆ ಹಬ್ಬದ ಮುಂಚಿನ ನವ ದಿನಗಳು "ನೊವೇನಾ' ಎಂಬ ಶಿಶು ಮೇರಿಗೆ ಪುಷ್ಪಾರ್ಚನೆ. ಪರ್ವ ದಿನಗಳು ಹಿತ್ತಲುಗಳಿಂದ ಸಂಗ್ರಹಿಸಿದ ಹೂಗಳಿಂದ ತುಂಬಿದ ತಟ್ಟೆಗಳನ್ನು ಹಿಡಿದು ಮಾತೆಯ ತೊಟ್ಟಿಲಿನ ಸುತ್ತೂ ನಿಂತು ಮಕ್ಕಳು, ಹಿರಿಯ - ಕಿರಿಯರು ಗೀತೆ ಹಾಡುಗಳಿಂದ ಹಾಡಿ ಸ್ತುತಿಸಿ ಪುಷ್ಪಾರ್ಚನೆಗೈಯುವಾಗ ಕಂಡು ಬರುವ ಸಂತೋಷ, ಭಾವುಕರಾದ ಭಕ್ತರ ಸಂಗಮದ ದೃಶ್ಯವು ಅತಿ ಸುಂದರ.

ಹತ್ತನೇ ದಿನ ಸೆ. 8 ಭತ್ತದ ತೆನೆಗಳು ಮತ್ತು ತರಕಾರಿ ಫಲಪುಷ್ಪಗಳೊಂದಿಗೆ ದೇವಾಲಯಕ್ಕೆ ಭಕ್ತರು ಆಗಮಿಸಿದಾಗ ಭೂ ಮಾತೆ ನೀಡುವ ಪ್ರಕೃತಿಯ ವರದಾನಗಳಿಗೆ ಸ್ವಾಗತ. ಪುಷ್ಪ - ಸಿಂಚನ, ಕೃತಜ್ಞತಾ ಭಾವದ ಪ್ರಾರ್ಥನೆ ವಿಶೇಷ ಪೂಜಾದಿ ವಿಧಿವಿಧಾನಗಳು ನಡೆಯುತ್ತವೆ. ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಪ್ರಸಾದ ರೂಪವಾಗಿ ವಿತರಣೆ, ಕಬ್ಬು-ಸಿಹಿತಿಂಡಿಗಳ ಹಂಚುವಿಕೆಯು ಸೇರಿ ಇಗರ್ಜಿಯಲ್ಲಿ ಉತ್ಸವದ ಮುಕ್ತಾಯದೊಂದಿಗೆ ಪ್ರಕೃತಿ ಮಾತೆಗೆ ಗೌರವ ನಮನಗಳ ಅರ್ಪಣೆ.

ಪ್ರಕೃತಿ ಮಾತೆಗೆ ಸಲ್ಲುವ ನಮನ

ಕೊಂಕಣಿ ಕ್ರೈಸ್ತರು ಮಾತ್ರ ಆಚರಿಸುವ (ಇತರ ಕ್ರೈಸ್ತರಲ್ಲಿ ಆಚರಣೆಯಿಲ್ಲ) ಈ ತೆನೆ ಹಬ್ಬವು ಪ್ರಕೃತಿ ಮಾತೆಗೆ ಸಲ್ಲುವ ನಮನಗಳು. ಉಪಸ್ಮರಣೆಗಳು, ಭಾವೈಕ್ಯ ಅಲ್ಲದೆ ಇನ್ನೇನು? ಆದರೆ ಕ್ರಿಸ್ಮಸ್‌, ಸಾಂತುಮಾರಿಗಳಂತೆ ತೆನೆ ಹಬ್ಬದಲ್ಲಿ ಬಾಹ್ಯಾಡಂಬರ ಅಬ್ಬರಗಳು ಇಲ್ಲವೇ ಇಲ್ಲ ! ಇದೊಂದು ಸರಳ, ನಿರಾಡಂಬರ, ಭಾವೈಕ್ಯದ ಸಮಾಗಮ!

ಇಂದು ಕಾಲವು ಬದಲಾಗಿದೆ. ನಮ್ಮ ನೆಲದಲ್ಲಿ ಭತ್ತ, ತರಕಾರಿಗಳು ಬೆಳೆಯುವುದಿಲ್ಲ. ಬಯಲು ಗದ್ದೆಗಳು ಮಾಯವಾಗಿವೆ. ಅದರ ಬದಲು ಭೂಮಿ ತಾಯಿಯನ್ನು ಮೆಟ್ಟಿನಿಂತು ಮಹಡಿ ಸೌಧಗಳನ್ನು ಕಟ್ಟುತ್ತಿದ್ದೇವೆ. ಇಂದು ತೆನೆಗಳನ್ನು ಎಲ್ಲಿಂದಲೋ ತರುತ್ತೇವೆ. ತರಕಾರಿಗಳು ಇನ್ನೆಲ್ಲಿಂದಲೋ ಆಮದಾಗುತ್ತಿದೆ. ಹಬ್ಬಗಳ ಪ್ರಸಕ್ತಿಯು ಹಿಂದಿನಂತಿಲ್ಲ. ಕುಟುಂಬದಲ್ಲಿ ಸೌಹಾರ್ದತೆ, ಸಹಭೋಜನದ ಸಂಭ್ರಮವು ಮರೆಯಾಗುತ್ತಿದೆ. ಎಂತಿದ್ದರೂ ಹಬ್ಬಗಳು ಬರುತ್ತವೆ. ಬದಿಗೆ ಸರಿಯುತ್ತವೆ. ಒಂದಂತೂ ನೆನಪಿರಲಿ. ಪ್ರಕೃತಿಯ ಮುನಿಸು ಮನುಕುಲಕ್ಕೆ ಮಾರಕವಾಗಬಲ್ಲುದು!

ನವೆಂ'(ಹೊಸತು) ಪ್ರಸಾದ ರೂಪದಲ್ಲಿ  ಸೇವನೆ

ಹಿಂದೂ ಸಮುದಾಯಗಳಲ್ಲಿರುವಂತೆ ಕೊಂಕಣಿ ಕ್ರೈಸ್ತರ ಕುಟುಂಬದ ಎಲ್ಲ ಸದಸ್ಯರೂ ಹಿರಿಯರ ಮನೆಗಳಲ್ಲಿ ಬಂದು ಸೇರುತ್ತಾರೆ. ಹಬ್ಬದ ಶುದ್ಧ ಸಸ್ಯಾಹಾರಿ ಪಾಯಸದೂಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಬಂಧ, ಭಾವೈಕ್ಯವನ್ನು ನೆಲೆಗೊಳ್ಳಲು ಸಹಭಾಗಿಯಾಗುತ್ತಾರೆ. ಬೆಸ ಸಂಖ್ಯೆಯ ಪಲ್ಯಗಳು ತಯಾರಾಗುತ್ತವೆ. ತೆನೆಯಿಂದ ಬೆಸ ಸಂಖ್ಯೆಯ ಅಕ್ಕಿ ಕಾಳುಗಳನ್ನು ಬೇರ್ಪಡಿಸಿ ಹುಡಿಮಾಡಿ ಹಾಲು ಅಥವಾ ಪಾಯಸದೊಂದಿಗೆ ಬೆರೆಸಿ "ನವೆಂ'(ಹೊಸತು) ಪ್ರಸಾದ ರೂಪದಲ್ಲಿ  ಸೇವಿಸುತ್ತಾರೆ. 

ಸದ್ಗತಿಗಾಗಿ ಪ್ರಾರ್ಥನೆ

ಭೋಜನದ ಮೊದಲು ಅಂತರ್ದಾನಗೊಂಡ ಸದಸ್ಯರ ಸದ್ಗತಿಗಾಗಿ ಪ್ರಾರ್ಥನೆ, ಬಂದು ಸೇರಲು ಸಾಧ್ಯವಾಗದ ಸದಸ್ಯರಿಗಾಗಿ ಶುಭಹಾರೈಕೆ ಇವೆಲ್ಲ  ಸಂಪ್ರದಾಯಬದ್ಧವಾಗಿ ನಡೆಯುಧಿತ್ತದೆ. ಜನಿಸಿದ ಮಗುವಿಗೆ ಪ್ರಥಮವಾಗಿ "ನವೆಂ' ಕೊಡುವುದು. ಮದುವೆ ಮಾಡಿಕೊಟ್ಟ ಮಗಳು ಅಳಿಯಧಿನೊಂದಿಗೆ ಬಂದು "ನವೆಂ' ಸೇವನೆ ಮಾಡುವ ಸಂತಸದ ಭೋಜನದಲ್ಲಿ ಭಾಗಿಯಾಗುವ ಸಂಭ್ರಮವು ಹಬ್ಬಕ್ಕೆ ವಿಶೇಷ ಕಳೆ ನೀಡುತ್ತದೆ.
-ಸ್ಟಾನಿ ಕ್ರಾಸ್ತ ಬೇಳ 

ಕುಂದಾಪ್ರ ಡಾಟ್ ಕಾಂ- editor@kundapra.com