ಮರವಂತೆ ಗ್ರಾ.ಪಂ.ಗೆ ರಾಜಸ್ಥಾನ ತಂಡ ಭೇಟಿ

ರಾಜಸ್ಥಾನದ ಪಂಚಾಯತ್ ರಾಜ್ ಪ್ರತಿನಿಧಿ ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಮರವಂತೆ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಅಧ್ಯಯನ ನಡೆಸಿತು. 
ಮರವಂತೆ: ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸಂಸ್ಥೆಗಳ ಕಾರ್ಯವೈಖರಿ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿರುವ ರಾಜಸ್ಥಾನ ಪಂಚಾಯತ್ ರಾಜ್ ಪ್ರತಿನಿಧಿ ಮತ್ತು ಅಧಿಕಾರಿಗಳಿರುವ ತಂಡ ಶುಕ್ರವಾರ ಮರವಂತೆ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿತು. 
     ಅಧ್ಯಕ್ಷೆ ಕೆ. ಎ. ಸುಗುಣಾ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ ಮತ್ತು ಸಿಬ್ಬಂದಿ ಅವರಿಗೆ ಸ್ವಾಗತ ಕೋರಿದರು. ಆ ಬಳಿಕ ನಡೆದ ವಿಚಾರ ವಿನಿಮಯದಲ್ಲಿ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಗ್ರಾಮ ಪಂಚಾಯತ್‍ನಲ್ಲಿ  ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನ, ಮೂಲ ಸೌಲಭ್ಯ ಸೃಷ್ಟಿಯ ಜತೆಯಲ್ಲಿ ಮಾನವ ಅಭಿವೃದ್ಧಿಗೆ ನೀಡಿದ ಒತ್ತು ಕುರಿತು ವಿವರವಾದ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ 4 ಲಕ್ಷ ರೂಪಾಯಿ ಬಹುಮಾನವನ್ನೊಳಗೊಂಡ ನಿರ್ಮಲ ಗ್ರಾಮ ರಾಷ್ಟ್ರ ಪ್ರಶಸ್ತಿ, 2 ಲಕ್ಷ ರೂಪಾಯಿ ಬಹುಮಾನವನ್ನೊಳಗೊಂಡ ರಜತ ನೈರ್ಮಲ್ಯ ರಾಜ್ಯ ಪ್ರಶಸ್ತಿ, 14 ಲಕ್ಷ ರೂಪಾಯಿ ಬಹುಮಾನವನ್ನೊಳಗೊಂಡ ಪಂಚಾಯತ್ ರಾಜ್ ಸಬಲೀಕರಣ ಮತ್ತು ಉತ್ತರದಾಯಿತ್ವ ರಾಷ್ಟ್ರೀಯ ಪುರಸ್ಕಾರ ಗಳಿಸಲು ಕಾರಣವಾದ ಅಂಶಗಳನ್ನು ವಿವರಿಸಿದರು. ತಂಡದ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಅನುಭವ ವಿನಿಮಯ ಮಾಡಿಕೊಂಡರು. 
     ಮರವಂತೆ ಪಂಚಾಯತ್ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ, ಜನತಾ ಜೀವ ವೈವಿಧ್ಯ ದಾಖಲಾತಿ, ಸಾಮಾಜಿಕ ನ್ಯಾಯ ಪರ ಕಾರ್ಯಕ್ರಮ, ಪಾರದರ್ಶಕತೆಗೆ ನೀಡಿದ ಒತ್ತು, ಮಕ್ಕಳ ಭಾಗವಹಿಸುವಿಕೆಗೆ ಕಲ್ಪಿಸಿದ ಅವಕಾಶ ತಂಡದ ಗಮನ ಸೆಳೆದು, ಶ್ಲಾಘನೆಗೆ ಪಾತ್ರವಾಯಿತು. ಸದಸ್ಯೆ ಅನಿತಾ ವಂದಿಸಿದರು. 
     ತಂಡದಲ್ಲಿ ಸಿಕಾರ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೀಟಾ ಸಿಂಗ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಎಸ್. ಮೀನ ಐಎಎಸ್, ಪಂಚಾಯತ್ ರಾಜ್ ಇಲಾಖೆಯ ಉಪ ಆಯುಕ್ತ ಎಸ್. ಕೆ. ಬಂಕಾರ್, ಸಹಾಯಕ ನಿರ್ದೇಶಕರಾದ ಕೆ. ಸಿ. ಮೀನ, ಧನಪಾಲ್ ಬಂಗಾರ್,  ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಾಯಕ ನಿರ್ದೇಶಕಿ ಡಾ. ಸುಮನ್, ಕಾರ್ಯನಿರ್ವಾಹಕ ಅಧಿಕಾರಿ ರಾಮ್ ನಿವಾಸ್, ಯೋಜನಾಧಿಕಾರಿಗಳಾದ ಹರ್‍ಲಾಲ್ ಸಿಂಗ್, ಬಿ. ಎಲ್. ರೆಸೀನ್, ರಾಜ್ಯ ಜಲ ಸಂಪನ್ಮೂಲ ಯೋಜನಾಧಿಕಾರಿ ಹೇಮಂತ್ ಮಿಶಾಲ್, ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲ್ ಶರ್ಮ, ಸಹಾಯಕ ಇಂಜಿನಿಯರ್‍ಗಳಾದ ಕೈಲಾಶ್ ತನ್ಯಾರ್, ಪ್ರೇರಣಾ, ಮನೀಶ್ ಪೂನ್ಯಾ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಥುರ್ ರಾಮ್, ಬಿ. ಆರ್. ಸಾತ್ನಿ, ರಾಮ್‍ಚಂದ್, ಭಾಗುರಾಮ್, ಸ್ಯೂಧನ್ ರಾಮ್ ಇದ್ದರು. ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾದ ಎಂ. ನರಸಿಂಹ ಶೆಟ್ಟಿ, ಗ್ರೇಶನ್ ಕ್ರಾಸ್ತಾ, ರೋಹಿಣಿ ದೇವಾಡಿಗ, ಸುಗುಣಾ, ಆನಂದ ಪೂಜಾರಿ, ರಾಮಕೃಷ್ಣ ಖಾರ್ವಿ, ಮನ್ಸೂರ್ ಇಬ್ರಾಹಿಂ, ಸಿಬ್ಬಂದಿಗಳಾದ ಗುರುರಾಜ್, ಶೇಖರ್ ಮರವಂತೆ, ಪ್ರಭಾಕರ ಇದ್ದರು. ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬೋಧಕ ಮನೋಜ್‍ಕುಮಾರ್ ತಂಡದ ಮಾರ್ಗದರ್ಶಿಗಳಾಗಿದ್ದರು.

ಮರವಂತೆ ಗ್ರಾಮ ಪಂಚಾಯತ್‍ಗೆ ಶುಕ್ರವಾರ ಭೇಟಿ ನೀಡಿದ ರಾಜಸ್ಥಾನ ಪಂಚಾಯತ್ ರಾಜ್ ಪ್ರತಿನಿಧಿ ಮತ್ತು ಅಧಿಕಾರಿಗಳ ತಂಡಕ್ಕೆ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮಾಹಿತಿ ನೀಡಿದರು. 

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com