ಮೋದಕ ಪ್ರಿಯನ ವೈವಿಧ್ಯಮಯ ವಿನಾಯಕ ಲೋಕ

ಸುನಿಲ್ ಹೆಚ್. ಜಿ | ಕುಂದಾಪ್ರ ಡಾಟ್ ಕಾಂ 
     ವಿಘ್ನ ನಿವಾರಕನಾದ ಗಣಪತಿಗೆ ನೂರಾರು ನಾಮಗಳು, ಸಹಸ್ರಾರು ರೂಪಗಳು. ಚೌತಿ ಬಂತೆಂದರೆ ಸಾಕು ಎಲ್ಲೆಲ್ಲೂ ಆತನದೇ ಸ್ತೂತಿ. ಭಾದ್ರಪದ ಶುಕ್ಲ ಚೌತಿಯಂದು ಹಲವು ರೂಪದ ಗಣೇಶ ವಿಗ್ರಹಗಳು ಪೂಜಿಸಲ್ಪಟ್ಟು, ಧಾರ್ಮಿಕ ವಿಧಿ-ವಿಧಾನಗಳಂತೆ ವಿಸರ್ಜಿಸಲ್ಪಡುತ್ತದೆ. ಮತ್ತೆ ಅವುಗಳ ದರ್ಶನವಾಗಬೇಕಾದರೆ, ಮತ್ತೊಂದು ಚೌತಿಯ ತನಕ ಕಾಯಬೇಕು. ಆದರೆ ಇಂತಹ ವ್ಯೆವಿಧ್ಯಮಯ ಗಣೇಶ ಮೂರ್ತಿಗಳು ಒಂದೆಡೆ ಸಂಗ್ರಹಗೊಂಡು ಅವುಗಳನ್ನು ಒಟ್ಟಿಗೆ ನೋಡುವ ಅವಕಾಶ ಸದಾ ದೊರೆತರೆ ಹೇಗಿರುತೆ? ಇಂಥಹದೊಂದು ಪ್ರಶ್ನೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಕೆ. ಎಸ್. ವಿನಾಯಕ ಅವರ ನಿವಾಸದಲ್ಲಿನ 'ವಿನಾಯಕ ಲೋಕ' ಉತ್ತರ ನೀಡುತ್ತದೆ. ಕುತೂಹಲಿಗರ ಮನ ತಣಿಸುತ್ತದೆ. ಭಕ್ತಿ, ಕಲೆ, ಸಂಸ್ಕ್ರತಿ, ಸೇವಾಭಾವಗಳ ಅಪೂರ್ವ ಸಂಗಮ ಈ 'ವಿನಾಯಕ ಲೋಕ'. ದೇಶದ ನಾನಾ ಭಾಗಗಳಿಂದ ಸಂಗ್ರಹಿಸಲ್ಪಟ್ಟ ವಿಭಿನ್ನ ಹಾಗೂ ವೈವಿಧ್ಯಮಯ ವಿನಾಯಕ ಮೂರ್ತಿ-ಕಲಾಕೃತಿಗಳನ್ನು ಒಂದೆಡೆ ಕಾಣಬಹುದಾದ ಅವಕಾಶ ಕಲ್ಪಿಸುವ ಲೋಕವಿದು. ನೂರೈವತ್ತು ವರ್ಷಗಳಷ್ಟು ಹಳೆಯದಾದ ಗಣಪನಿಂದ ಹಿಡಿದು ಇತ್ತಿಚಿನ ಸಾಮಾಜಿಕ ಸ್ಥಿತಿಗಳನ್ನು ಬಿಂಬಿಸುವ ಗಣಪತಿಯ ಮೂರ್ತಿಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಕಲಾವಿದರು ಪ್ರಕೃತಿಯಲ್ಲಿನ ಯಾವ ವಸ್ತುವಿಗೆ ಬೇಕಾದರೂ ಜೀವತುಂಬಬಲ್ಲರೆಂಬುದಕ್ಕೆ 'ವಿನಾಯಕ ಲೋಕ'ದಲ್ಲಿನ ಗಣಪತಿಗಳೇ ಸಾಕ್ಷಿ. ಕಲಾವಿದರುಗಳ ಈ ಕೈಚಳಕ ಹತ್ತಾರು ವೈಶಿಷ್ಟ್ಯಗಳೊಂದಿಗೆ ಮೂಡಿ ಬಂದಿರುವುದೇ ಇಲ್ಲಿನ ವಿಶೇಷ.

ನೂರು ವರ್ಷಗಳಷ್ಟು ಹಳೆಯದಾದ ಮಣಿಯ ಗಣಪತಿ, ನೂರೈವತ್ತು ವರ್ಷಗಳಷ್ಟು ಹಳೆಯದಾದ ನೇಪಾಳದ ಗಣಪತಿ ಮುಂತಾದವುಗಳು ಚಾರಿತ್ರಿಕ ಹಿನ್ನೆಲೆಯುಳ್ಳವುಗಳಾದರೆ, ಸೊರೆಕಾಯಿ, ಬದನೆಕಾಯಿ, ಕುಂಬಳಕಾಯಿ, ಕಳಲೆ ಮುಂತಾದ ತರಕಾರಿಗಳಿಂದ ಹಲವು ರಚಿಸಲ್ಪಟ್ಟಿದೆ. ತೆಂಗಿನಕಾಯಿ ಮತ್ತು ಅದರ ಚಿಪ್ಪು, ಬೆಳ್ಳುಳ್ಳಿ, ಹುಣಸೆಬೀಜ, ಲವಂಚದ ಬೇರು, ಕಾಫಿ ಬೇರು, ಬಿದಿರಿನ ಬೇರು, ಜೂಟ್, ಹತ್ತಿ, ಅಡಿಕೆ, ನವಧಾನ್ಯ, ಈಳಿಗೆ ಮಣೆಯ ಕತ್ತಿ, ಹಿತ್ತಾಳೆ, ಬಳಪ, ನಾಣ್ಯ, ಖರ್ಜಿಕಾಯಿ, ಸೋಪು, ನವರತ್ನ, ತೊಗಲು ಗೊಂಬೆ ಹೀಗೆ ಹತ್ತಾರು ವಸ್ತುಗಳಿಂದಲ್ಲದೇ, ಚಿಕ್ಕ ಬಾಟಲಿಗಳೊಳಗೂ ಗಣಪ ಹೊಕ್ಕಿ ಕುಳಿತಿದ್ದಾನೆ. ಕುಂದಾಪ್ರ ಡಾಟ್ ಕಾಂ.
 
ಇಷ್ಟೇ ಅಲ್ಲದೇ ಏಕಮುಖ, ದ್ವಿಮುಖ, ತ್ರಿಮುಖ, ಪಂಚಮುಖ ಗಣಪರು, ವಾಮನವತಾರ, ಮತ್ಸ್ಯಾತಾರ ತಾಳಿರುವ ಗಣಪರು, ಅಪರೂಪದ ಗಂಡಾನೆ-ಹೆಣ್ಣಾನೆ ಗಣಪ ನವ್ಯಶೈಲಿ ಗಣಪ, ಮಹಾರಾಷ್ಟ್ರದ ಅಷ್ಟ ಗಣಪ, ಕಲ್ಕತ್ತಾದ ಉಗ್ರಗಣಪರು ವಿನಾಯಕ ಲೋಕದ ವೈಶಿಷ್ಟ್ಯವನ್ನು ಹೆಚ್ಚಿಸಿದರೆ, ಗಣಪತಿಯರ ಕ್ರಿಕೆಟ್ ಟೀಮ್, ಸಂಗೀತಾ ತಂಡ, ಸುಖಾಸನ ಗಣಪತಿ, ವಾದ್ಯಗಣಪತಿ ಮುಂತಾದವುಗಳು ಸಾಂಸ್ಕ್ರತಿಕ ಆಯಾಮಕ್ಕೊಂದಿಷ್ಟು ಇಂಬು ನೀಡುತ್ತವೆ. ರಾಷ್ಟ್ರನಾಯಕರ ರೂಪ ಪಡೆದಿರುವ ಗಣಪತಿಗಳು ಮಾತ್ರವಲ್ಲದೇ 'ಅಣ್ಣಾ ಹಜಾರೆ'ಯವರ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಬೆಂಬಲಿಸಿ ನಿಂತ ಹಲವಾರು ಗಣಪರು 'ವಿನಾಯಕ ಲೋಕ'ದ ಸಂಗ್ರಹದಲ್ಲಿದೆ.
     
ಸಂಗ್ರಾಹಕಾರ ಕೆ.ಎಸ್. ವಿನಾಯಕನವರ ಹವ್ಯಾಸ ಗಣೇಶ ಮೂರ್ತಿಗಳನ್ನು ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗಿರದೇ, ಗಣಪತಿಯ ಚಿತ್ತವಿರುವ 500 ಕ್ಕೂ ಅಧಿಕ ಬಗೆಯ ಕೀ ಗೊಂಚಲುಗಳನ್ನು, ಅಂಚೆ ಚೀಟಿ, ಕ್ಯಾಲೆಂಡರ್, ಆಟದ ಗೊಂಬೆ, ಹಸೆ, ಆಭರಣ, ಬಾಗಿಲ ತೋರಣ, ಚಿತ್ತಪಟ, ಪೋಟೋಗಳನ್ನು ಸಂಗ್ರಹಿಸಿದ್ದಾರೆ. ಇವರ ಸಂಗ್ರಹದಲ್ಲಿ ಒಟ್ಟಾರೆ 4000 (ನಾಲ್ಕು ಸಾವಿರಕ್ಕೂ) ಕ್ಕೂ ಅಧಿಕ ಗಣಪತಿ ಕಲಾಕೃತಿಗಳು, ಮೂರ್ತಿಗಳು ಇವೆ. ಮಾತ್ರವಲ್ಲದೇ ಕವನಗಳು, ಜನಪದ ಗೀತೆಗಳು, ಶಿಶುಪ್ರಾಸಗಳು, ಮುಖವಾಡ, ಪೌರಾಣಿಕ ಕಥೆಗಳು, ಗಗನಯಾತ್ರಿ ಸುನಿತಾ ವಿಲಿಯಮ್ಸ್ ಜೊತೆಗೆ ಅಂತರಿಕ್ಷ ಯಾನ ಮಾಡಿದ ಗಣಪತಿಯ ಬಗೆಗಿನ ಮಾಹಿತಿಯೂ ಸೇರಿದಂತೆ ಗಣಪತಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳು ಇವರ ಸಂಗ್ರಹದಲ್ಲಿದೆ.

ನಾದ, ನಾಟ್ಯ ಗಣಪರ ಗ್ಯಾಲರಿ
ವಿನಾಯಕ ಲೋಕದ ಈ ಬಾರಿಯ ವಿಶೇಷ- ನಾದ, ನಾಟ್ಯ ಗಣಪರ ಗ್ಯಾಲರಿ. ವಿವಿಧ ಸಂಗೀತ ಸಾಧನಗಳನ್ನು ನುಡಿಸುತ್ತಿರುವ ಹಾಗೂ ವಿವಿಧ ನಾಟ್ಯ ಭಂಗಿಗಳಲ್ಲಿರುವ 150 ಅಧಿಕ ಬಗೆಯ ಗಣಪರನ್ನು ಈ ಭಾರಿ ಒಂದೆಡೆ ಸೇರಿಸಿ ಪ್ರದಶರ್ಶಿಸಲಾಗಿತ್ತಿದೆ. ಒಟ್ಟಿನಲ್ಲಿ ವಿನಾಯಕ ಲೋಕ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಲೇ ಇದೆ.

ಸಂಗ್ರಹಕಾರ ಕೆ. ಎಸ್. ವಿನಾಯಕ
ಕೆ.ಎಸ್. ವಿನಾಯಕ ಬಿ.ಕಾಂ ಪದವಿದರರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಗಣಪತಿ ವಿಗ್ರಹ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುವುದು ಪ್ರವೃತ್ತಿ. ಗಣಪತಿಯಲ್ಲಿ ಹರಕೆ ಹೊತ್ತ ಫಲವಾಗಿ ಇವರು ಜನಿಸಿದ್ದರಿಂದ ಹೆತ್ತವರು ಇಟ್ಟ ಹೆಸರು ವಿನಾಯಕ. ಇವರ ತಂದೆಯಲ್ಲಿನ ಗೊಂಬೆ ಸಂಗ್ರಹದ ಹವ್ಯಾಸ ಹಾಗೂ ಅಜ್ಜಿ ಹಣಿದಿದ್ದ ಮಣಿ ಗಣಪತಿಯೇ ಇವರ ಹವ್ಯಾಸಕ್ಕೆ ಸ್ಥೂರ್ತಿ. ಮೊದಲಿನಿಂದಲೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿ, ಕಾಮಿಕ್ಸ್ ಮುಂತಾದವುಗಳನ್ನು ಸಂಗ್ರಹಿಸುತ್ತಿದ್ದ ಇವರು ವಿನಾಯಕನ ಆರಾಧಕರಾದ್ದರಿಂದ ಸಹಜವಾಗಿ ಇದರತ್ತ ಒಲವು ಮೂಡಿತ್ತು. ಜೊತೆಗೆ ಪತ್ನಿ ಗೀತಾ, ಮಗ ದೀಪಕ್, ಮಗಳು ದೀಪ್ತಿ, ಅಳಿಯ ವಿಠಲರ ಬೆಂಬಲವೂ ಹವ್ಯಾಸಕ್ಕೊಂದು ಇಂಬು ನೀಡಿತು. ಮಗ ದೀಪಕ್ನಲ್ಲಿಯೂ ಸಂಗ್ರಹದ ಅಭಿರುಚಿ ಇದ್ದು, ಅವರು ಆಟದ ಕಾರುಗಳ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕೆ.ಎಸ್.ವಿನಾಯಕನವರ ವಿನಾಯಕ ಲೋಕ ಹಲವೆಡೆ ಪ್ರದರ್ಶನಗೊಂಡಿದೆ ಹಾಗೂ ನಾಡಿನ ಗಣ್ಯರುಗಳಿಂದ ಅಪಾರ ಮೆಚ್ಚಿಗೆ ಪಡೆದಿದೆ. ಫಲವಾಗಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಕುಂದಾಪ್ರ ಡಾಟ್ ಕಾಂ.

ಸುಮಾರು 20-22 ವರ್ಷಗಳಿಂದಲೂ ಗಣೇಶನ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿರುವ ಇವರು ವಿನಾಯಕ ಲೋಕವನ್ನು ಮತ್ತಷ್ಟು ವಿಸ್ತರಿಸಬೇಕೆಂದು ಉತ್ಸಾಹದಿಂದಲೇ ನುಡಿಯುತ್ತಾರೆ. ಜೊತೆಗೆ ಹೊಸನಗರದ ಗಣಪತಿ ದೇವಾಲಯದ ಕುರಿತಾಗಿ ಪುಸ್ತಕ ಬರೆಯುವ ಇಂಗಿತ ಇವರದ್ದು.

ಕಲಾ ಪ್ರಪಂಚದಲ್ಲಿ ಕೆಲಹೊತ್ತು ಮುಳುಗಿ ಹೋಗುವಂತೆ ಮಾಡುವ 'ವಿನಾಯಕ ಲೋಕ'ದಲ್ಲಿ ಮತ್ತಷ್ಟು ಗಣಪರು ಕಾಣಸಿಗುವಂತಾಗಲಿ ಅದರೊಂದಿಗೆ ಈ ಅಪರೂಪದ ವಿನಾಯಕ ಲೋಕ ಪ್ರಸಿದ್ಧಿಯನ್ನು ಪಡೆಯಲಿ ಎಂಬುದು ಕಲಾ ಪ್ರೀಯರ ಹಾರೈಕೆ. ಅಂದ ಹಾಗೇ ತಾವು ಓಮ್ಮೆ ಇಲ್ಲಿಗೆ ಬೇಟಿ ಕೊಟ್ಟು ವಿನಾಯಕನ ದರುಶನ ಪಡೆದುಕೊಳ್ಳಿ. ಪ್ರತಿ ವರ್ಷದಂತೆ ಈ ಭಾರಿ ಚೌತಿಗೆ ಅವರ ಮನೆಯಲ್ಲಿಯೆ 10 ದಿನಗಳವರೆಗೆ ವಿನಾಯಕ ಲೋಕದ ವಿನೋಧಾವಳಿಗಳು ಅನಾವರಣಗೊಳ್ಳಲಿದೆ.

ಮತ್ತಷ್ಟು ಚಿತ್ರಗಳು- Click Here

 ಕೆ.ಎಸ್.ವಿನಾಯಕ ಅವರೊಂದಿಗೆ ಮಾತನಾಡಲು ಮೊ- 9900902347
*********
ಕುಂದಾಪ್ರ ಡಾಟ್ ಕಾಂ ನ ಸಮಸ್ತ ಓದುಗರಿಗೆ ಗಣೇಶ ಚತುರ್ಥಿಯ ಶುಭಾಶಯಗಳು.                    *********
                                                                                    
ಅಭಿಪ್ರಾಯ ಬರೆಯಿರಿ
editor@kundapra.com

www.kundapraa.com