ಕುಂದಾಪುರದಲ್ಲಿ ಪವಾಡ ರಹಸ್ಯ ಬಯಲು

    ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಗತ ಜನ್ಮಕ್ಕೆ ಹೋಗುತ್ತಾಳೆ, ಕಬ್ಬಿಣದ ಮೊಳೆಯ ಮಂಚದ ಮೇಲೆ ಮಲಗುತ್ತಾರೆ. ತಲೆಯ ಮೇಲೆ ಒಂದಲ್ಲ ನಾಲ್ಕಾರು ತೆಂಗಿನ ಕಾಯಿಗಳನ್ನು ಒಂದರ ಹಿಂದೊಂದರಂತೆ ಒಡೆಯಲಾಗುತ್ತದೆ, ತೆಂಗಿನ ಕಾಯಿ ಜುಟ್ಟಿಗೆ ನೀರು ಬಿದ್ದಾಕ್ಷಣ ಬೆಂಕಿ ಹೊರ ಹೊಮ್ಮುತ್ತೆ, ಕುದಿಯುವ ಎಣ್ಣೆಗೆ ಕೈ ಹಾಕಿದರೆ ಕೈ ಸುಡಲ್ಲ, ತಲೆಗೆ ಹಿಗ್ಗಾಮುಗ್ಗಾ ಚಾಕು ಹಾಕಿದರೂ ವ್ಯಕ್ತಿಗೆ ಏನೂ ಆಗಲ್ಲ.... ನಿಜ ಇದೆಲ್ಲಾ  ಕುಂದಾಪುರದಲ್ಲಿ ನಡೆದೇ ಹೋಯ್ತು.
ಸ್ಥಳೀಯರೆ ಇಂಥಹ ಪವಾಡಗಳಿಗೆ ವಸ್ತುವಾದರು. ಸ್ವತಃ ಅನುಭವಿಸಿದರು. ಹಣ ಹಾಕಿದರೆ  ಹೂ ಬರುವುದು, ತಲೆ ಮೇಲೆ ಕರ್ಪೂರ ಉರಿವುದು ಹೀಗೆ ಹತ್ತಾರು ಪವಾಡಗಳು ಕುಂದಾಪುರದ ಜನರ ಮುಂದೆಯೇ ಸಾಕ್ಷಾತ್ಕಾರವಾಯಿತು. ಮಾಟ, ಮಂತ್ರ ,ವಾಮಾಚಾರ ಅಂತ ಇರುವ ಜನರಿಗೆ ವೈಚಾರಿಕತೆ ಬಿತ್ತುವಲ್ಲಿ ಇದನ್ನು ಬಿತ್ತರ ಪಡಿಸಿದ್ದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್.
ಸಮುದಾಯ ಕುಂದಾಪುರ ಇತ್ತಿಚೆಗೆ ಇಲ್ಲಿನ ಗಾಂಧಿ ಪಾರ್ಕ್‍ನ ಸಮುದಾಯ ಭವನದಲ್ಲಿ ಡಾ.ನರೇಂದ್ರ ದಾಬೊಲ್ಕರ್‍ಗೆ ಶೃದ್ಧಾಂಜಲಿಯಾಗಿ ಹಮ್ಮಿಕೊಂಡ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ ಪವಾಡಗಳ ಬಯಲು ಮಾಡಿ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು.
‘ಪವಾಡದ ಹೆಸರಲ್ಲಿ ಅಮಾಯಕ ಜನರನ್ನು ವಂಚಿಸುವ ಡೋಂಗಿ ಪವಾಡ ಪುರುಷರೇ ಈ ದೇಶದ ಭಯೋತ್ಪಾದರು. ಭಯವನ್ನು ಉಂಟು ಮಾಡಿ,  ಲಕ್ಷಗಟ್ಟಲೇ ದೋಚುವ ಇಂಥಹ ವಾಮಾಚಾರಿಗಳಿಂದ ಸಮಾಜ ಇನ್ನೂ ಹಿಂದಕ್ಕೆ ಹೋಗುತ್ತಿದೆ. ಡೋಂಗಿ ಪವಾಡಗಳನ್ನು ಇವತ್ತಿನ ವಿಜ್ಞಾನ ಹಾಗೂ ಮನಸ್ಸಿನ ದೌರ್ಬಲ್ಯಗಳನ್ನು ಬಳಸಿಕೊಂಡು ವಂಚಿಸುವ ವಂಚಕರಿಂದ ನಾವು ದೂರ ಇರಬೇಕು. ಪವಾಡ ಎನ್ನುವುದು ಸುಳ್ಳು, ಪವಾಡವೇ ಮಾಡುವವರು ಇದ್ದರೆ ಈ ದೇಶದಲ್ಲಿ ವಿದ್ವಾಸಂಕ ಕೃತ್ಯಗಳನ್ನು ಉಂಟು ಮಾಡುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಿ’ ಎಂದು ಹುಲಿಕಲ್ ನಟರಾಜ್ ಬಹಿರಂಗ ಸವಾಲು ಹಾಕಿದರು.
ಡಾ|ಭಾಸ್ಕರ ಮಯ್ಯ ಕಾರ್ಯಕ್ರಮದಲ್ಲಿ ಡಾ|ನರೇಂದ್ರ ದಾಬೊಲ್ಕರ್ ಬಗ್ಗೆ ಮಾತನಾಡಿದರು. ಜಾತಿ ಮುಕ್ತ ವೇದಿಕೆಯ ಹಯವದನ ಮೂಡುಸಗ್ರೆ ವೈಚಾರಿಕ ಜಾಗೃತಿಯ ಬಗ್ಗೆ ಮಾತನಾಡುತ್ತ, ಪವಾಡಗಳು ನಾಶವಾಗಬೇಕು, ವೈಚಾರಿಕತೆ ಬರಬೇಕು ಎನ್ನುವ ಎಡಪಂಥೀಯ ವಿಚಾರಧಾರೆಗಳು ಬಂಡವಾಳ ಶಾಹಿಗಳಿಗೆ ಅನುಕೂಲವಾಯಿತು.  ಶೋಷಣೆ, ಬಡತನ, ನೋವುಗಳೇ ಮೂಢನಂಬಿಕೆಯ ಹಿನ್ನೆಲೆ ಶಕ್ತಿ. ಹಸಿವಿಲ್ಲದ ನಾಡು ಬೇಕು. ಶೋಷಣೆಗಳು ಅಳಿಯಬೇಕು. ಸಹಭಾತೃತ್ವ, ಸಮಾನತೆ, ಸ್ವಾತಂತ್ರ್ಯದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಆದಾಗ ಪವಾಡಗಳೇ ಬೇಡವಾಗುತ್ತವೆ ಎಂದರು.
ಸಮುದಾಯದ ಸಂಘಟನಾ ಕಾರ್ಯದರ್ಶಿ ಜಿ.ವಿ.ಕಾರಂತ ದಿ|ಮುಕುಂದನ್‍ಗೆ ನುಡಿ ನಮನ ಸಲ್ಲಿಸಿದರು. ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್ ಸ್ವಾಗತಿಸಿದರು. ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಜನಾರ್ದನ್, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಚಂದ್ರಶೇಖರ, ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ನಾಗೇಶ, ಲಯನ್ಸ್ ಮಣಿಪಾಲ ಅಧ್ಯಕ್ಷ ನಾಗರಾಜ್, ಹಿರಿಯಡಕ ಲಯನ್ಸ್ ಅಧ್ಯಕ್ಷ ಜಯೇಂದ್ರ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್ ಮೊದಲಾದ ಗಣ್ಯರು ಹಾಜರಿದ್ದರು. ಡಾ.ನರೇಂದ್ರ ದಾಬೊಲ್ಕರ್ ಸ್ಮರಣೆಯಲ್ಲಿ ಕುಂದಾಪುರಕ್ಕೊಂದು ವೈಚಾರಿಕತೆಯನ್ನು ಬಡಿದೆªಬ್ಬಿಸುವ ಕಾರ್ಯಕ್ರಮ ನೀಡಿದೆ ಎನ್ನುವುದರಲ್ಲಿ ಅತಿಶಯವಿಲ್ಲ.

ಕುದಿಯುವ ಎಣ್ಣೆಗೆ ಕೈ ಹಾಕಿದರೆ ಎನೂ ಆಗಲ್ಲ!
ನಿಜ. ಸ್ಟವ್ ಮೇಲೆ ಕೊತ ಕೊತನೆ ಕುದಿಯುವ ಎಣ್ಣೆಗೆ ಕೈಹಾಕಿದರೆ ಎನೂ ಆಗಲ್ಲ. ಜ್ಯೋತಿಷಿಗಳು, ಪವಾಡ ಪುರುಷರು ಕುದಿಯುವ ಎಣ್ಣೆಯಿಂದ ವಡೆ, ಬೋಂಡಾಗಳನ್ನು ತಗೆದಾಗ ವಿಸ್ಮಯ ಎಂದುಕೊಳ್ಳುವ ಜನರ ಮುಂದೆ ನಾವು ಕೂಡಾ ಪವಾಡ ಮಾಡಬಹುದು ಎನ್ನುವುದನ್ನು ನಟರಾಜ್ ಪ್ರಾತ್ಯಕ್ಷಿಕೆಯಾಗಿ ತೋರಿಸಿದರು. ಪ್ರೇಕ್ಷಕರಿಂದಲೇ ಕುದಿಯುವ ಎಣ್ಣೆಗೆ ಕೈ ಹಾಕಿಸಿ, ಯಾವುದೇ ಸುಟ್ಟ ಅನುಭವವಾಗದಿರುವುದನ್ನು ದೃಢ ಪಡಿಸಿದರು. ಇದ್ಯಾಗೆ ಸಾಧ್ಯ? ಅದಕ್ಕೂ ಉತ್ತರ ಹುಲಿಕಲ್ ಬಳಿ ಇದೆ. ಅದೇನಂತೀರಾ?  ತಣ್ಣನೆಯ ಎಣ್ಣೆಗೆ ನಿಂಬೆಯ ರಸ ಹಾಕಿ, ಆ ದ್ರಾವಣದಲ್ಲಿ ಕೈಯನ್ನು ಅದ್ದಿದಾಗ ನಿಂಬೆಯಲ್ಲಿನ ಸಿಟ್ರಿಕ್ ಆಮ್ಲ ತನ್ನ ಪ್ರಭಾವ ತೋರಿಸುತ್ತದೆ. ಆಗ 3-4ಬಾರಿ ಕೈಯನ್ನು ಕುದಿಯುವ ಎಣ್ಣೆಗೆ ಅದ್ದಿದರೂ ಎನೂ ಆಗುದಿಲ್ಲ.

ಕಾಯಿ ತಿರುಗಿದಾಗ ನೀರು ಬರಲ್ಲ...,
ತೆಂಗಿನ ಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು, ಅದು ತಿರುಗಿದರೆ, ನೇರ ನಿಂತರೆ ಆ ಸ್ಥಳದಲ್ಲಿ ನೀರು ಬರುತ್ತದೆ ಎನ್ನುವುದು ಶುದ್ಧ ಸುಳ್ಳು. ಇಂಥಹ ಕಪಟಿಗರು, ಅಂಗೈಯಲ್ಲಿಯೇ ಕಾಯಿಯನ್ನು ಚಮತ್ಕಾರಿಕವಾಗಿ ನಿಧಾನವಾಗಿ ನೇರಾ ಸ್ಥಿತಿಗೆ ತರುತ್ತಾರೆ. ಬೆರಳನ್ನು ನಿಧಾನವಾಗಿ ಮಡಚುತ್ತಾ, ಜನರನ್ನು ಕುರಿಗಳನ್ನಾಗಿ ಮಾಡುತ್ತಾರೆ ಎನ್ನುವುದಕ್ಕೆ ಜಲ ಪರೀಕ್ಷೆ ಪ್ರಯೋಗ ಉದಾಹರಣೆ. ಹೀಗೆಯೇ ವಿಜ್ಞಾನ, ತಾಂತ್ರಿಕ ಕೌಶಲ್ಯವನ್ನು ಬಳಸಿಕೊಳ್ಳುವ ಡೋಂಗಿ ಪವಾಡ ಪುರುಷರು ಯಾವ ರೀತಿ ಜನರನ್ನು ವಂಚಿಸುತ್ತಾರೆ ಎನ್ನುವುದನ್ನು ಮಾರ್ಮಿಕವಾಗಿ ವಿವರಿಸಿದರು.

ನಡೆದೇ ಹೋಯ್ತು ಜನ್ಮಾಂತರ ಪ್ರಯೋಗ
  ದುರ್ಬಲ ಮನಸ್ಸಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ, ಮನಸ್ಸಿನ ನಿಯಂತ್ರಣವನ್ನು ತನ್ನ ಸುಪರ್ದಿಗೆ ತಗೆದುಕೊಂಡು ಜನರನ್ನು ವಂಚಿಸುವವ ಜಾಲವೇ ನಡೆಯುತ್ತಿದ್ದು, ಜನ್ಮಾಂತರ ಬಗ್ಗೆ ರಹಸ್ಯವನ್ನು ಬಯಲು ಮಾಡಿದ್ದು ಹೀಗೆ. ಜನ್ಮಾಂತರ ಕುತೂಹಲಕ್ಕೆ ಧೈರ್ಯದಿಂದ ಬಂದ ಯುವತಿಯನ್ನು ನಿಧಾನವಾಗಿ ಒಂದೊಂದೇ ಅಂಗವನ್ನು ತನ್ನ ನಿಯಂತ್ರಣಕ್ಕೆ ತಗೆದುಕೊಳ್ಳುತ್ತ ಹೋದ ನಟರಾಜ್, ಕೆಲವೇ ನಿಮಿಷದಲ್ಲಿ ಹುಡುಗಿಯನ್ನು ಇನ್ನೊಂದು ಜನ್ಮಕ್ಕೆ ಕರೆದೊಯ್ದು, ಮೊಳೆಯ ಮಂಚದ ಮೇಲೆ ಮಲಗಿಸಿದರು. ಇಡೀ ಸಭಾಂಗಣವೇ ಸ್ತಬ್ದವಾಗಿತ್ತು. ಎನಾಗುತ್ತದೋ ಎನ್ನುವ ದಿಗಿಲು, ಆತಂಕ, ಹುಡುಗಿಯ ಪೋಷಕರ ಮುಖದಲ್ಲಿ ಭಯದ ಗೆರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಮನುಷ್ಯ ಒಳ ಮನಸ್ಸು, ಹೊರ ಮನಸ್ಸುಗಳನ್ನು ಪ್ರಾತ್ಯಕ್ಷಿಕೆಯಾಗಿ ವಿವರಿಸುತ್ತ, ಜನ್ಮಾಂತರದ ರಹಶ್ಯ ತಿಳಿಯುವುದು ದೊಡ್ಡ ಸುಳ್ಳು. ಮನಸ್ಸು ಮೆಸ್ಪರಿಜಮ್ ಹಂತಕ್ಕೆ ತಲುಪಿದಾಗ, ನಾವೇ ಕಲ್ಪಿಸಿಕೊಂಡ ಕಥೆಯನ್ನು ವ್ಯಕ್ತಿಯ ಮುಂದಿಡುತ್ತೇವೆ. ಉದಾ: ನೀನು ಸಣ್ಣ ಮಗುವಾಗಿದ್ದೆ, ಆಗ ಎನು ಮಾಡುತ್ತಿದ್ದೇ? ಎಂದಾಗ ಜನ್ಮಾಂತರಕ್ಕೆ ಒಳಗಾದ ವ್ಯಕ್ತಿ ಹಾಲು ಕುಡಿಯುತ್ತಿದ್ದೆ ಎನ್ನುವಂತಹ ಡೈಲಾಗ್‍ಗಳನ್ನು ಹೇಳಿದಾಗ, ಅದಕ್ಕೆ ಬಿಲ್ಡಪ್ ಕೊಡುತ್ತಾ ಹೋಗುತ್ತಾನೆ. ಇದೊಂದು ದೊಡ್ಡ ಡೋಂಗಿ ಪ್ರಕ್ರಿಯೆ. ಮನಸ್ಸಿನ ನಿಯಂತ್ರಣವನ್ನು ತನ್ನ ಹತೋಟಿಗೆ ತಗೆದುಕೊಂಡು ವಂಚಿಸುವ ದೊಡ್ಡ ವಂಚನೆಯೇ ಜನ್ಮಾಂತರ ಎನ್ನುವುದನ್ನು ತೋರಿಸಿಕೊಟ್ಟರು.

ತಲೆ ಮೇಲೆ ಒಡೆಯಿತು ಕಾಯಿ ಸರಣಿ
ತಲೆ ಮೇಲೆ ಕರ್ಪೂರ ಉರಿಸುವುದು, ಜಾಲಿ ಮುಳ್ಳಿನ ಮೇಲೆ ಕುಳಿತುಕೊಳ್ಳುವುದು, ಹಣ ಹಾಕಿ ಹೂ ಹೊರ ತರುವುದು ಮೊದಲಾದ ಚಮತ್ಕಾರಿಕ ಪವಾಡಗಳನ್ನು ಮಾಡಿ ತೋರಿಸಿದ ನಟರಾಜ್, ಮುಂದೊಂದು ಪವಾಡ ಬಯಲಿಗೆ ಕರೆದಿದ್ದು ಪಡುಕೋಣೆಯ ದೀಪಕ್ ಅವರನ್ನು. ಕುರ್ಚಿಯ ಮೇಲೆ ಕುಳಿಸಿ, ತಲೆಯ ಮೇಲೆ ಸಣ್ಣ ಕಲ್ಲನ್ನು ಇಟ್ಟರು. ಕೆಲವಷ್ಟು ಸಮಯ ಅವರ ಗಮನ ಬೇರೆಡೆಗೆ ಸಳೆದು, ನಡುವೆ ಇದ್ದಕ್ಕಿದ್ದಂತೆ ಟಪ ಟಪ ಅಂತ ತಲೆ ಮೇಲೆ ಒಂದರ ಹಿಂದೊಂದರಂತೆ ತೆಂಗಿನ ಕಾಯಿ ಒಡೆದೆ ಬಿಟ್ಟರು. ಎಲ್ಲರಿಗೂ ಅಚ್ಛರಿ, ಆಶ್ಚರ್ಯ.  ಕಾಯಿ ಒಡೆದು ನೀರು ಸುರಿಯುತ್ತಿದೆ. ತಲೆಗೆ...? ಏನೂ ಆಗಿಲ್ಲ. ಹೇಗೆ ಸಾಧ್ಯ.ಕಾಯಿ ಒಡೆಯುವಾಗ ಕಾಯಿ ಜುಟ್ಟನ್ನು ಮಿ.ಮಿ.ಅಂತರದಲ್ಲಿ ಹಿಡಿದಿಡುತ್ತಾನೆ ಎನ್ನುವುದು ವಾಸ್ತಾವಂಶ.

ವರದಿ-ನಾಗರಾಜ್ ವಂಡ್ಸೆ