ಗಿಜಗನ ಗೂಡು: ತಾಳೆಮರದಲ್ಲಿ ನೂರಾರು ಗೀಜಗ ಸಂಸಾರ !

  ನಾಡಾಗುಡ್ಡೆಅಂಗಡಿ ಪೇಟೆಯಿಂದ ದಕ್ಷಿಣಾಭಿಮುಖವಾಗಿ ನಾಡಾ-ಬಂಟ್ವಾಡಿ ಸಂಪರ್ಕ ಮಾರ್ಗದಲ್ಲಿನ ಭತ್ತದ ಗದ್ದೆ ಬಯಲಿನಲ್ಲಿರುವ ಎತ್ತರದ ತಾಳೆ ಮರವೊಂದು ಗೀಜಗ ಹಕ್ಕಿಗಳ ಗೂಡುಗಳಿಂದ ದಾರಿಹೋಕರ ಗಮನ ಸೆಳೆಯುತ್ತಿದೆ. ಇಲ್ಲಿನ ಮರದಲ್ಲಿ ಎಲ್ಲೆಂದರಲ್ಲಿ ನೇತು ಹಾಕಿದಂತಿರುವ ಗೀಜಗನ ಗೂಡುಗಳು ತಾಳೆಮರಕ್ಕೆ ವಿಶೇಷವಾದ ಕಳೆಯನ್ನು ಮೂಡಿಸಿವೆ. ಗೀಜಗ ಹಕ್ಕಿಯ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಗೂಡುಗಳು ಈ ಮರದಲ್ಲಿ ತೂಗುತ್ತಿವೆ. ಈ ವರ್ಷ ಇಲ್ಲಿನ ತಾಳೆಮರದಲ್ಲಿ ಎಲ್ಲಿಂದಲೋ ಬಂದು ನೆಲೆಸಿದ ಗೀಜಗ ಹಕ್ಕಿಗಳು ಹಾಯಾಗಿ ಸಂಸಾರ ಹೂಡಿವೆ. 
   ಸೇನಾಪುರ ಸುತ್ತಮುತ್ತಲಿನ ಬಯಲು ಪ್ರದೇಶದ ಭೌತಿಕ ಪರಿಸರ ಹಾಗೂ ಇಲ್ಲಿನ ಎತ್ತರದ ತಾಳೆ ಮರ ಗೀಜಗ ಹಕ್ಕಿಗಳಿಗೆ ವಾಸಕ್ಕೆ ಅನುಕೂಲಕಾರಿಯಾಗಿದ್ದು, ಬಂಟ್ವಾಡಿಯ ಸೌಪರ್ಣಿಕಾ ನದಿಯನ್ನು ಸೇರುವ ಇಲ್ಲಿನ ಪುಟ್ಟ ತೊರೆ ಗೀಜಕ ಹಕ್ಕಿಗಳಿಗೆ ನೀರಿನಾಶ್ರಯವನ್ನು ಒದಗಿಸಿದೆ. ಸುತ್ತಮುತ್ತಲ ಪ್ರದೇಶದಲ್ಲಿ ತೆಂಗಿನ ತೋಟವಿದ್ದು, ಈ ಹಕ್ಕಿಗಳಿಗೆ ಗೂಡುಗಳನ್ನು ಕಟ್ಟಲು ಅಗತ್ಯವಾದ ಹುಲ್ಲು ಮತ್ತು ತೆಂಗಿನ ನಾರು ಹೇರಳವಾಗಿ ದೊರಕುತ್ತದೆ. ಗೀಜಗ ಪಕ್ಷಿಗಳಿಗೆ ಇಲ್ಲಿ ಆಹಾರಕ್ಕೂ ಯಾವುದೇ ರೀತಿಯಲ್ಲಿ ಕೊರತೆಯುಂಟಾಗಿಲ್ಲ. ಭತ್ತದ ತೆನೆ ಕಟ್ಟುವ ಸಮಯದಲ್ಲಿ ಬೆಳೆಗೆ ಬಾಧೆಯನ್ನು ನೀಡುವ ಹುಳು-ಹುಪ್ಪಟೆಗಳನ್ನು ಗೀಜಗ ಹಕ್ಕಿಗಳು ತಿನ್ನುವುದರಿಂದ ರೈತರಿಗೂ ಉಪಕಾರಿಗಳಾಗಿವೆ. 
   ಸೇನಾಪುರ ಬಯಲಿನ ತಾಳೆಮರದಲ್ಲಿ ಇದೀಗ ಹಾಯಾಗಿ ನೆಲೆಯನ್ನು ಕಂಡಿಕೊಂಡಿರುವ ಈ ಗೀಜಗ ಸಂಸಾರ ಸ್ಥಳೀಯರಿಗೂ ಖುಶಿ ನೀಡಿದೆ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಈ ಹಕ್ಕಿಗಳ ಚಿಲಿಪಿಲಿ ಕಲರವವನ್ನು ಕೇಳಲು ಬಲು ಇಂಪು, ಸುಳಿಗಾಳಿಗೆ ಅತ್ತಿಂದಿತ್ತ ಇತ್ತಿಂದತ್ತ ಓಲಾಡುವ ಗೂಡುಗಳನ್ನು ನೋಡುವುದೇ ಚೆಂದ. ನಾಡಾ-ಬಂಟ್ವಾಡಿ ಮಾರ್ಗದಲ್ಲಿ ನಿತ್ಯಸಂಚರಿಸುವವರು ಬಯಲಿನಲ್ಲಿ ಕಾಣುವ ಗೀಜಗ ಹಕ್ಕಿಗಳ ಈ ಅನನ್ಯ ಸಂಸಾರವನ್ನು ವೀಕ್ಷಿಸಿ ಆನಂದಿಸಬಹುದು.
     ಗುಬ್ಬಿಯನ್ನು ಹೋಲುವ ಪುಟ್ಟ ಹಕ್ಕಿ ಗೀಜಗವು ಗೂಡು ಕಟ್ಟುವ ತನ್ನ ನೈಪುಣ್ಯದಿಂದ ಪಕ್ಷಿಪ್ರಿಯರ ಮನಸೆಳೆದಿದೆ. ಗೂಡು ಕಟ್ಟಲು ಸಾಮಾನ್ಯವಾಗಿ ಎತ್ತರದ ಪ್ರದೇಶಗಳನ್ನು, ಕಂದರ-ಕಣಿವೆ, ಎತ್ತರದಲ್ಲಿ ಬಾಗಿದ ರೆಂಬೆ-ಕೊಂಬೆಗಳಂತಹ ಜಾಗವನ್ನು ಈ ಹಕ್ಕಿ ಆರಿಸಿಕೊಳ್ಳುತ್ತದೆ. ಆಹಾರ ಸಿಗುವಂತಹ ಜಾಗದಲ್ಲಿ ವರ್ಷವಿಡೀ ವಾಸಿಸಲು ಹಾಗೂ ತನ್ನ ನೆಲೆಯನ್ನು ಕಂಡುಕೊಳ್ಳುವುದಕ್ಕಾಗಿ ಸುರಕ್ಷಿತ ಸ್ಥಳವನ್ನು ಆರಿಸಿಕೊಳ್ಳುವ ಗೀಜಗ ಪಕ್ಷಿಗಳು ಹಾವು, ಬೆಕ್ಕು, ಇನ್ನಿತರ ದೊಡ್ಡ ಪ್ರಾಣಿ-ಪಕ್ಷಿಗಳು ಮತ್ತು ಮನುಷ್ಯರ ಹಾವಳಿಯಿಂದ ರಕ್ಷಣೆಗಾಗಿ ಎತ್ತರದ ಜಾಗದಲ್ಲಿ ತನ್ನ ಗೂಡು ನಿರ್ಮಿಸಿಕೊಳ್ಳುವ ಬಲುಜಾಣ ಹಕ್ಕಿ. ಸೇನಾಪುರದ ತಾಳೆಮರದಲ್ಲಿ ಗೀಜಗ ಕಟ್ಟಿದ ಕಲಾತ್ಮಕ ಗೂಡುಗಳ ಸೊಗಸು ಕಣ್ತುಂಬಿಕೊಳ್ಳುವಂತಿದೆ.
ಚಿತ್ರ-ಲೇಖನ: ಚಂದ್ರ ಕೆ. ಹೆಮ್ಮಾಡಿ



ಸೇನಾಪುರ ತಾಳೆಮರದಲ್ಲಿ ಬೀಡುಬಿಟ್ಟ ಗೀಜಗ ಹಕ್ಕಿಗಳ ಸಂಸಾರ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com